ADVERTISEMENT

ಏನಾದ್ರೂ ಕೇಳ್ಬೋದು: ನಿರಂತರ ಕಾಡುವ ಯೋಚನೆ ಆತಂಕದ ಸೂಚನೆ ಮಾತ್ರ

ನಡಹಳ್ಳಿ ವಂಸತ್‌
Published 14 ಏಪ್ರಿಲ್ 2023, 19:30 IST
Last Updated 14 ಏಪ್ರಿಲ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಶ್ನೆ: 21ರ ಯುವಕ. ನನಗೆ ತಲೆಯಲ್ಲಿ ಪದೇಪದೇ ಅಶ್ಲೀಲ ಆಲೋಚನೆಗಳು ಬರುತ್ತವೆ. ಯಾರಾದರೂ ಮಹಿಳೆ ಹಾಗೂ ಪುರುಷರ ಜೊತೆ ಮಾತನಾಡುವಾಗ ಅಥವಾ ಕಂಡಾಗ ಅವರ ಬಗೆಗೆ ಕೂಡ ಅಶ್ಲೀಲ ಆಲೋಚನೆಗಳು ಬರುತ್ತದೆ. ಯಾವುದೋ ಒಂದು ವಿಚಾರದ ಬಗ್ಗೆ ಆಲೋಚಿಸುವಾಗ ಕೂಡ ಲೈಂಗಿಕ ಆಲೋಚನೆಗಳು ಬಂದು ನನ್ನ ಸಕಾರಾತ್ಮಕ ಆಲೋಚನೆಗಳು ಕುಸಿಯುವಂತೆ ಮಾಡುತ್ತದೆ. ಇದರಿಂದ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ. ಇದಕ್ಕೆ ಪರಿಹಾರ ಮಾರ್ಗವಾಗಿ ನಾನು ಧ್ಯಾನ ಮಾಡಲು ಪ್ರಾರಂಭಿಸಿದೆ. ಅಲ್ಲಿಯೂ ಕೂಡ ಗೊಂದಲ ಮನಸ್ಥಿತಿ ನನ್ನನ್ನು ಕಾಡುವುದು ಬಿಡಲಿಲ್ಲ. ಇದರಿಂದಾಗಿ ನನಗೆ ನಿತ್ಯದ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ. ದಯವಿಟ್ಟು ಪರಿಹಾರವನ್ನು ತಿಳಿಸಿ.
–ಹೆಸರು ಊರು ತಿಳಿಸಿಲ್ಲ.

ಉತ್ತರ: ಪತ್ರದ ಧಾಟಿಯನ್ನು ನೋಡಿದರೆ ನೀವು ತೀವ್ರವಾದ ಆತಂಕದಲ್ಲಿರುವಂತೆ ಕಾಣಿಸುತ್ತದೆ. ನಿರಂತರವಾಗಿ ಕಾಡುವ ಲೈಂಗಿಕ ಯೋಚನೆಗಳು ಅಥವಾ ಇನ್ನಾವುದೇ ಯೋಚನೆಗಳು ಆತಂಕದ ಸೂಚನೆ ಮಾತ್ರ. ನಿಮ್ಮ ಆತಂಕದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದೆ ಕೇವಲ ಸೂಚನೆಯನ್ನು ಮಾತ್ರ ಬದಲಾಯಿಸುವ ಪ್ರಯತ್ನದಲ್ಲಿ ಮತ್ತೆಮತ್ತೆ ವಿಫಲರಾಗಿ ಹೆಚ್ಚಿನ ಆತಂಕವನ್ನು ತುಂಬಿಕೊಳ್ಳುತ್ತಿದ್ದೀರಲ್ಲವೇ?

ಲೈಂಗಿಕತೆ ವಯೋಸಹಜ ಆಕರ್ಷಣೆ. ಇಂತಹ ಆಕರ್ಷಣೆಯನ್ನು ಮೂಡಿಸುವುದರಲ್ಲಿ ಹಾರ್ಮೋನ್‌ಗಳ ಪಾತ್ರವೂ ಇರುವುದರಿಂದ ಆಲೋಚನೆಗಳನ್ನು ಸಂಪೂರ್ಣ ಹಿಡಿತದಲ್ಲಿಡುವುದು ಸಾಧ್ಯವಿಲ್ಲ. ಆದರೆ ನಿಮ್ಮ ವರ್ತನೆಯನ್ನು ಹಿಡಿತದಲ್ಲಿಡಲು ಸಾಧ್ಯವಿದೆ. ಲೈಂಗಿಕ ಆಲೋಚನೆಗಳು ಬರುವುದೇ ದೊಡ್ಡ ಅಪರಾಧ ಅಥವಾ ಮಾನಸಿಕ ತೊಂದರೆ ಎಂದು ನೀವು ತಿಳಿದುಕೊಂಡಂತೆ ಕಾಣಿಸುತ್ತಿದೆ. ಹಾಗಾಗಿ ಆಂತಹ ಆಲೋಚನೆಗಳನ್ನು ಬರದಂತೆ ತಡೆಯುವ ಮತ್ತು ಬಂದ ಕೂಡಲೇ ಹೊರಹಾಕುವ ಪ್ರಯತ್ನದಲ್ಲಿರುತ್ತೀರಿ. ಇದು ನಿಮ್ಮೊಳಗೆ ಅಗಾಧವಾದ ಒತ್ತಡವನ್ನು ಸೃಷ್ಟಿಸುತ್ತಿದೆ.

ADVERTISEMENT

ನಮ್ಮ ಮಿದುಳು ಒಂದು ಸಾಮಾನ್ಯ ಯಂತ್ರ. ಸುಮಾರಾಗಿ ಒಂದು ಹಿಟ್ಟಿನ ಗಿರಣಿಯಂತೆ ಎಂದುಕೊಳ್ಳಿ. ಹಿಟ್ಟಿನ ಗಿರಣಿಗೆ ಅಕ್ಕಿ, ಗೋಧಿ, ಮೆಣಸಿನಕಾಯಿ, ಮಸಾಲೆ ಎಲ್ಲವನ್ನೂ ಅರೆದು ಪುಡಿ ಮಾಡುವುದು ಮಾತ್ರ ಗೊತ್ತು. ಮೆಣಸಿನಕಾಯಿ ಖಾರವೆಂದು ಅದು ತಿರಸ್ಕರಿಸು ವುದಿಲ್ಲ. ನಮ್ಮ ಮಿದುಳಿನಲ್ಲಿಯೂ ಬೇಡವೆಂದುಕೊಳ್ಳುವ ಆಲೋಚನೆಗಳನ್ನು ತಿರಸ್ಕರಿಸುವ ವ್ಯವಸ್ಥೆಯಿಲ್ಲ. ಆದರೆ ನಿಮ್ಮ ದೇಹ ಮನಸ್ಸುಗಳನ್ನು ಶಾಂತಗೊಳಿಸಿ ನಿಮ್ಮ ಆಲೋಚನೆಯನ್ನು ಬೇಕಾದ ದಿಕ್ಕಿಗೆ ಹರಿಸುವ ಶಕ್ತಿ ಕೂಡ ನಿಮ್ಮೊಳಗೇ ಇದೆ. ಅದನ್ನು ವಿವೇಕ ಎನ್ನುತ್ತಾರೆ.

ಜನ್ಮಜಾತವಾಗಿ ಬಂದಿರುವ ವಿವೇಕವನ್ನು ಎಚ್ಚರಗೊಳಿಸಿ ಬಳಸುವುದನ್ನು ಕಲಿಯಬೇಕು. ದಿನಕ್ಕೆ ಹದಿನೈದು ನಿಮಿಷದ ಏಕಾಂತವನ್ನು ಹುಡುಕಿಕೊಂಡು ಬೆನ್ನುಮೂಳೆಯನ್ನು ನೇರವಾಗಿ ಇಟ್ಟು ಕುಳಿತುಕೊಳ್ಳಿ. ದೀರ್ಘವಾಗಿ ಉಸಿರಾಡುತ್ತಾ ಲೈಂಗಿಕ ಆಲೋಚನೆಗಳಿಗೆ ಅವಕಾಶ ನೀಡಿ. ನಿಮ್ಮ ದೇಹದ ವಿವಿಧ ಅಂಗಾಗಗಳು ಬಿಗಿಯಾಗುವುದನ್ನು ಗಮನಿಸಿ. ಆಗ ಉಸಿರಾಟದ ಕಡೆ ಗಮನ ಹರಿಸಿ ದೇಹದ ಅಂಗಾಂಗಳನ್ನು ಸಡಿಲಬಿಡಿ. ಮತ್ತೆ ಲೈಂಗಿಕ ಆಲೋಚನೆಗಳನ್ನು ಆಹ್ವಾನಿಸಿ, ಹಾಗೆಯೇ ದೇಹವನ್ನು ಸಡಿಲಬಿಡಿ. ಇದೇ ಅಭ್ಯಾಸವನ್ನು ಹದಿನೈದು ನಿಮಿಷ ಮುಂದುವರೆಸಿ.

ಜೊತೆಗೆ ನಿಮ್ಮನ್ನು ಸಂತೈಸಿಕೊಳ್ಳಲು ‘ಲೈಂಗಿಕ ಆಲೋಚನೆಗಳು ಕಾಡುವುದು ಕಾಯಿಲೆಯಲ್ಲ. ಆದರೆ ನಾನು ಯಾವುದೋ ಆತಂಕದಿಂದ ಸಮಾಧಾನ ಪಡೆಯಲು ಇಂತಹ ಆಲೋಚನೆಗಳನ್ನು ಬಳಸುತ್ತಿದ್ದೇನೆ. ನನ್ನೊಳಗಿನ ಆತಂಕದ ಬೇರುಗಳನ್ನು ಹುಡುಕಿ ಪರಿಹಾರಗಳನ್ನು ಕಂಡುಕೊಳ್ಳಬೇಕು’ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಿ.

ಮುಂದಿನ ಹಂತದಲ್ಲಿ ನಿಮ್ಮ ಬದುಕಿನ ಪರಿಸ್ಥಿತಿಗಳ ಕುರಿತು ನೋಡಿ. ನಿಮ್ಮ ಕುರಿತು ನಿಮ್ಮೊಳಗಿರುವ ಹಿಂಜರಿಕೆ ಬೇಸರ ಕೀಳರಿಮೆಗಳೇನಿರಬಹುದು ಎಂದು ಹುಡುಕಾಡಿ. ಇಂತಹ ಮನಸ್ಥಿತಿಗೆ ಕಾರಣವಾಗಿರುವ ನನ್ನ ಜೀವನದ ಅನುಭವಗಳೇನಿರಬಹುದು ಎಂದು ಯೋಚಿಸಿ. ಅಂತಹ ಹಳೆಯ ಅನುಭವಗಳು ನಿಮ್ಮ ಇವತ್ತಿನ ಪ್ರತಿಕ್ಷಣದ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತಿರಬಹುದು ಎಂದು ವಿಶ್ಲೇಷಿಸಲು ಪ್ರಯತ್ನಿಸಿ. ‌ಇದು ಕಷ್ಟ ಅನ್ನಿಸಿದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ. ನಿಮಗೆ ಯಾವುದೇ ರೀತಿಯ ಔಷಧಗಳ ಅಗತ್ಯವಿಲ್ಲ. ನಾನೊಬ್ಬ ಮನೋರೋಗಿ ಎನ್ನುವ ಮನಸ್ಥಿತಿಯಿಂದ ಹೊರಬಂದು ನಿಮ್ಮನ್ನು ಸಂತೈಸಿಕೊಳ್ಳುವುದನ್ನು ಕಲಿಯಿರಿ. ಆತಂಕದಿಂದ ಬಿಡುಗಡೆ ಹೊಂದಲು ದೈಹಿಕ ವ್ಯಾಯಾಮದ ಮತ್ತು ಸ್ನೇಹಿತರ ಸಹಾಯವನ್ನು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.