ADVERTISEMENT

ಎರಡು ತಿಂಗಳಲ್ಲಿ 2ನೇ ಬಾರಿಗೆ ಸೋಂಕುಗೊಂಡ ವ್ಯಕ್ತಿಯಲ್ಲಿ ಕೊರೊನಾದ ವಿಭಿನ್ನ ತಳಿ

ಏಜೆನ್ಸೀಸ್
Published 13 ಅಕ್ಟೋಬರ್ 2020, 13:16 IST
Last Updated 13 ಅಕ್ಟೋಬರ್ 2020, 13:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್‌: ಪಶ್ಚಿಮ ಅಮೆರಿಕದ ನೆವಾಡ ಎಂಬಲ್ಲಿನ 25 ವರ್ಷದ ಯುವಕನಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದ ಕೊರೊನಾ ವೈರಸ್‌ ಸೋಂಕು ಹಲವು ಮಹತ್ವದ ಅಂಶಗಳ ಮೇಲೆ ಬೆಳಕು ಚೆಲ್ಲಲು ಕಾರಣವಾಗಿದೆ.

ಈ ವಿಷಯವನ್ನು ‘ಲ್ಯಾನ್ಸೆಟ್‌’ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಏಪ್ರಿಲ್‌ ತಿಂಗಳಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ನ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಯುವಕ, ಮೇ ತಿಂಗಳಲ್ಲಿ ಮತ್ತೊಮ್ಮೆ ಸೋಂಕಿಗೀಡಾಗಿದ್ದ ಎಂದು ನಿಯತಕಾಲಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಎರಡನೇ ಬಾರಿಗೆ ಯುವಕನ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟು ಆತ ಆಸ್ಪತ್ರೆಯಲ್ಲಿ ಉಸಿರಾಟದ ವ್ಯವಸ್ಥೆಯೊಂದಿಗೆ ಚಿಕಿತ್ಸೆ ಪಡೆಯಬೇಕಾಯಿತು. ಈ ಪ್ರಕರಣದ ಆಳ ಸಂಶೋಧನೆ ನಡೆಸಿರುವ ತಜ್ಞರಿಗೆ, ಯುವಕ ಕೊರೊನಾ ವೈರಸ್‌ನ ಮೊತ್ತೊಂದು ತಳಿಯ ಸೋಂಕಿಗೆ ಒಳಗಾಗಿದ್ದ ಎಂಬುದು ಗೊತ್ತಾಗಿದೆ.

ADVERTISEMENT

ಅದರೆ, ಎರಡನೇ ಬಾರಿಗೆ ಸೋಂಕುಗೊಂಡಾಗ ಯುವಕನ ಪರಿಸ್ಥಿತಿ ಏಕೆ ಚಿಂತಾಜನಕವಾಯಿತು ಎಂಬುದರ ಬಗ್ಗೆ ಸಂಶೋಧಕರಲ್ಲೂ ನಿಖರ ಮಾಹಿತಿ ಇಲ್ಲ. ‘ಬೇರೆಯ ತಳಿಯ ಕೊರೊನಾ ವೈರಸ್‌ ಹೆಚ್ಚಿನ ಪ್ರಮಾಣದಲ್ಲಿ ದೇಹ ಹೊಕ್ಕಿರುವ ಪರಿಣಾಮ ಇದಾಗಿರಬಹುದು. ಅದರ ಶಕ್ತಿ ಗಮನಾರ್ಹವಾಗಿ ಹೆಚ್ಚಾಗಿರಬಹುದು. ಅಲ್ಲದೆ, ಮೊದಲ ಸೋಂಕಿನಿಂದ ದೇಹದಲ್ಲಿ ಉಂಟಾದ ಪ್ರತಿರೋಧ ಶಕ್ತಿಯು ಹೊಸ ತಳಿಯ ವೈರಸ್‌ ಅನ್ನು ತಡೆಯುವಲ್ಲಿ ವಿಫಲವಾಗಿರಬಹುದು,’ ಎಂದು ಸಂಶೋಧಕರು ಹೇಳಿದ್ದಾರೆ.

ಭವಿಷ್ಯದಲ್ಲಿ ಆಗಬಹುದಾದ ಸೋಂಕುಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಾರ್ಸ್‌ ಕೊರೊನಾ ವೈರಸ್‌–2 (SARS-CoV-2 )ನಿಂದ ಸಹಾಯವಾಗದು ಎಂದು ನಮ್ಮ ಅಧ್ಯಯನದಿಂದ ಗೊತ್ತಾಗುತ್ತಿದೆ. ಕೊರೊನಾ ವೈರಸ್‌ಗೆ ಸದ್ಯ ಲಿಸಿಕೆ ಇಲ್ಲದೇ ಇರುವ ಈ ಹೊತ್ತಿನಲ್ಲಿ, ಕೋವಿಡ್‌–19 ವಿರುದ್ಧದ ಪ್ರತಿರೋಧಕತನವನ್ನು ಅರ್ಥ ಮಾಡಿಕೊಳ್ಳಲು ಮರು ಸೋಂಕು ಪ್ರಕರಣಗಳ ಪರಿಣಾಮಗಳು ಖಚಿತವಾಗಿಯೂ ಅಗತ್ಯ,’ ಎಂದು ನೆವಾಡ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಮುಖ್ಯಸ್ಥ ಮಾರ್ಕ್‌ ಪ್ಯಾಂಡೋರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.