ಕೊಪ್ಪಳ: ಪ್ರಸ್ತುತ ದಿನಗಳಲ್ಲಿ ಒತ್ತಡದ ಓಟದ ನಡುವೆಯೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎನ್ನುವ ಹಂಬಲ ಹಲವರದ್ದಾದರೆ, ಆರೋಗ್ಯ ಕೆಟ್ಟ ಬಳಿಕ ಅದರತ್ತ ಗಮನ ಹರಿಸುವ ಪರಿಪಾಠ ಇನ್ನೂ ಕೆಲವರದ್ದು. ಈಗಿನ ಓಟದ ಬದುಕು ಕ್ರೀಡೆಯ ವ್ಯಾಖ್ಯಾನವನ್ನೇ ಬದಲಿಸಿದ್ದು, ಸಾಮಾನ್ಯ ಜನರಲ್ಲಿ ವಾಕಿಂಗ್ ಕೂಡ ಕ್ರೀಡೆಯ ಭಾಗವೇ ಆಗಿದೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ನಡಿಗೆ ಸ್ಪರ್ಧೆಯಾಗಿದೆ. ವೃತ್ತಿಪರ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಆದರೆ ಜನಸಾಮಾನ್ಯರಲ್ಲಿ ಹಲವರು ನಡೆಯುವುದನ್ನು ನಿತ್ಯದ ಭಾಗವಾಗಿರಿಸಿಕೊಂಡಿದ್ದಾರೆ. ಅನೇಕರು ಮಧುಮೇಹ, ಅತಿಯಾದ ಒತ್ತಡ, ಬೊಜ್ಜು, ಬಿ.ಪಿ., ಅಸ್ತಮಾ ಹಾಗೂ ಇನ್ನಿತರ ಕಾಯಿಲೆಗಳು ಆರಂಭವಾದ ಬಳಿಕ ವೈದ್ಯರ ಬಳಿ ಚಿಕಿತ್ಸೆಗೆ ಹೋದಾಗ ’ನಿತ್ಯ ವಾಕಿಂಗ್ ಮಾಡಿ’ ಎನ್ನುವ ಸಲಹೆ ನಿಶ್ಚಿತವಾಗಿಯೂ ಸಿಗುತ್ತದೆ. ವೈದ್ಯರ ಸೂಚನೆ ಬಳಿಕ ನಡಿಗೆಯನ್ನು ಆರಂಭಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಅದರಲ್ಲಿಯೂ ಕೋವಿಡ್ ಬಳಿಕ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗುತ್ತಿದ್ದು, ಇಲ್ಲಿನ ಜಿಲ್ಲಾ ಕ್ರೀಡಾಂಗಣ, ತಾಲ್ಲೂಕು ಕ್ರೀಡಾಂಗಣ, ಗವಿಮಠದ ರಸ್ತೆ, ಮಳೆ ಮಲ್ಲೇಶ್ವರ ದೇವಸ್ಥಾನದ ಹೋಗುವ ಮಾರ್ಗ, ಕಿನ್ನಾಳ ರಸ್ತೆ ಹೀಗೆ ವಿವಿಧ ಕಡೆ ಜನ ನಿತ್ಯ ವಾಕಿಂಗ್ ಮಾಡುತ್ತಿದ್ದಾರೆ. ನಡುಗೆ ಜೊತೆಗೆ ಸುತ್ತಲೂ ಹಸಿರುಮಯ ಪರಿಸರ ಇದ್ದರೆ ಅದು ಜನರ ಅಚ್ಚುಮೆಚ್ಚಿನ ತಾಣವಾಗುತ್ತಿದೆ.
ಚಿಕ್ಕಮಕ್ಕಳು ವಿವಿಧ ಕ್ರೀಡೆಗಳಲ್ಲಿ ತೊಡಗಿದ್ದರೆ, ಹಿರಿಯರು ವಾಕಿಂಗ್ ಪಥದಲ್ಲಿ ನಡೆಯುತ್ತಿದ್ದಾರೆ. ಯುವಜನತೆ ಜಿಮ್‌ಗಳ ಮೊರೆ ಹೋಗಿದ್ದಾರೆ. ಜಿಲ್ಲಾಕೇಂದ್ರದಲ್ಲಿ ಎಂಟು ಜಿಮ್‌ಗಳು ಇದ್ದು ಅಲ್ಲಿಯೂ ನಿತ್ಯ ನೂರಾರು ಯುವಜನತೆ ದೈಹಿಕ ಕಸರತ್ತು ಮಾಡುವುದು, ಆರೋಗ್ಯ ಸಲಹೆಗಳನ್ನು ಪಡೆಯುವುದು ಸಾಮಾನ್ಯವಾಗಿದೆ.
‘ಕೆಲ ವರ್ಷಗಳ ಹಿಂದೆ ಜಿಮ್‌ಗೆ ಬರುವ ಯುವಜನರ ಸಂಖ್ಯೆ ಕಡಿಮೆಯಿತ್ತು. ಈಗ ಸಾಕಷ್ಟು ಯುವಜನತೆ ಜಿಮ್‌ಗೆ ಬರುತ್ತಿದ್ದಾರೆ. ಯುವತಿಯರು ಕೂಡ ಆರೋಗ್ಯದತ್ತ ಗಮನ ಹರಿಸಿದ್ದು ಅವರ ಸಂಖ್ಯೆಯೂ ಹೆಚ್ಚಾಗುತ್ತಿದೆ’ ಎಂದು ಕೊಪ್ಪಳದ ಫಿಟ್‌ನೆಸ್ ಸೆಂಟರ್ ಮಾಲೀಕ ಸೈಯದ್ ಅನ್ಸರ್ ಹುಸೇನಿ ಹೇಳುತ್ತಾರೆ.
ಮನುಷ್ಯ ಆರೋಗ್ಯಕರವಾಗಿ ಜೀವಿಸಲು ಒಂದು ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ನಡೆಯಬೇಕು. ಇದರಿಂದ ಒತ್ತಡದ ಬದುಕು ಎದುರಿಸಲು ಸಾಧ್ಯ.ಉಮೇಶ ರಾಜೂರು ಫಿಜಿಷಿಯನ್ ವೈದ್ಯ
ಐದು ವರ್ಷಗಳಿಂದ ನಿತ್ಯ ಹತ್ತು ಸಾವಿರ ಹೆಜ್ಜೆಗಳನ್ನು ನಡೆಯುತ್ತೇನೆ. ಆರೋಗ್ಯವೂ ಉತ್ತಮವಾಗಿದೆ. ನಡಿಗೆಯೂ ಆಹ್ಲಾದಕರವೆನಿಸಿ ಮನಸ್ಸಿಗೆ ಖುಷಿ ಕೊಡುತ್ತದೆ.ನಾಗರಾಜ ನಾಯಕ ಗಂಗಾವತಿ
ಸುಸ್ಥಿತಿಯಲ್ಲಿಲ್ಲದ ಉದ್ಯಾನಗಳು ಜಿಲ್ಲಾಕೇಂದ್ರದಲ್ಲಿ ಎರಡು ಕ್ರೀಡಾಂಗಣಗಳು ಇದ್ದರೂ ನಡಿಗೆದಾರರಿಗೆ ಪ್ರತ್ಯೇಕವಾದ ಟ್ರ್ಯಾಕ್‌ಗಳು ಇಲ್ಲದಂತಾಗಿದೆ. ಉತ್ತಮ ಉದ್ಯಾನಗಳು ಕೂಡ ಇಲ್ಲ. ಹುಬ್ಬಳ್ಳಿ–ಧಾರವಾಡ ಬೆಂಗಳೂರು ಮೈಸೂರಿನಂಥ ಊರುಗಳಲ್ಲಿ ಕ್ರೀಡಾಂಗಣದಲ್ಲಿ ಟ್ರ್ಯಾಕ್‌ಗಳ ಜೊತೆಗೆ ಬಡಾವಣೆಗೊಂದು ಸುಂದರ ಉದ್ಯಾನ ನಿರ್ಮಿಸಿ ಅಲ್ಲಿ ನಡಿಗೆದಾರರಿಗೆ ಹಾಗೂ ವೃದ್ಧರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಒಂದಷ್ಟು ಸಮಾನ ಮನಸ್ಕ ಸ್ನೇಹಿತರು ಸೇರಿಕೊಂಡು ನಡಿಗೆದಾರರ ಸಂಘವನ್ನೂ ಕಟ್ಟಿಕೊಂಡು ದೈಹಿಕ ಸದೃಢತೆಗೆ ವ್ಯಾಯಾಮ ಮಾಡುತ್ತಿದ್ದಾರೆ. ಕೊಪ್ಪಳದಲ್ಲಿಯೂ ಅಂಥ ವಾತಾವರಣ ನಿರ್ಮಾಣವಾಗುವ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.