ADVERTISEMENT

ದೇಹ ತೂಕ ಕಡಿಮೆಯಾಗುತ್ತಿಲ್ಲವೇ?ಹಾಗಾದರೆ ನಿಮ್ಮ ಊಟದ ತಟ್ಟೆ ಹೀಗಿದೆಯಾ,ನೋಡಿಕೊಳ್ಳಿ

ಶಾಂತಿ ಸ್ಯಾಮ್ಯುಯಲ್
Published 13 ಫೆಬ್ರುವರಿ 2026, 11:09 IST
Last Updated 13 ಫೆಬ್ರುವರಿ 2026, 11:09 IST
   

‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂದು ದಾಸರೇ ಹೇಳಿಬಿಟ್ಟಿದ್ದಾರಲ್ಲ. ನಮಗೆ ಹೊಟ್ಟೆ ಒಂದು ಇಲ್ಲದೇ ಹೋಗಿದ್ದರೆ, ಈ ಜಗತ್ತಿನಲ್ಲಿ ಇಷ್ಟೆಲ್ಲ ಹೋರಾಟಗಳೇ ಇರುತ್ತಿರಲಿಲ್ಲವೇನೋ. ಬಿಡಿ, ಅದು ಬೇರೆಯದೇ ಚರ್ಚೆ. ಆದರೆ, ನಾವು ಇಷ್ಟೆಲ್ಲ ಮಾಡಿಯೂ ಹೊಟ್ಟೆಗೆ ನಿಜವಾಗಿ ನ್ಯಾಯ ಕೊಡುತ್ತಿದ್ದೇವೆಯೇ?

ಖಂಡಿತಾ ಇಲ್ಲ. ನಮ್ಮ ಹೊಟ್ಟೆ ಏನು ಕೇಳುತ್ತದೆ ಅದನ್ನು ನಾವು ಬಹುತೇಕರು ಕೊಡುತ್ತಲೇ ಇಲ್ಲ. ನಾವು ತಿಂದದ್ದು ಹೋಗುವುದು, ಅದು ಜೀರ್ಣವಾಗುವುದು, ಅದರಿಂದ ಬದುಕುವ ಶಕ್ತಿ ಬರುವುದು ಎಲ್ಲವೂ ಹೊಟ್ಟೆಯಿಂದಲೇ ಆದರೂ ನಾವು ಹೊಟ್ಟೆಗೆ ಹಿತವಾಗುವುದನ್ನು ಕೊಡುವ ಬದಲಿಗೆ ನಾಲಗೆ–ಕಣ್ಣುಗಳು ಕೇಳಿದ್ದಕ್ಕೇ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ಹೀಗಾಗಿಯೇ ನಮ್ಮ ದೇಹ ನಮಗೆ ಬೇಕಾದ ಹಾಗೆ ಇರುವ ಬದಲು, ಯಾವ್ಯಾವುದೋ ಭಾಗ, ಎಷ್ಟೆಷ್ಟೋ ಊದಿಕೊಂಡು ಹೇಗ್ಹೇಗೋ ಕಾಣುತ್ತಿದೆ. ನಾನು ಇದೇ ಅಂಕಣದಲ್ಲೇ ಹಿಂದೆ ಹೇಳಿದ್ದೆ, ನಾವು ದಪ್ಪಗಾಗಿದ್ದು ತಿಂದದ್ದರಿಂದ ಅಲ್ಲ, ಬದಲಿಗೆ ಹೇಗೆ ತಿನ್ನ ಬೇಕು, ಯಾವುದನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಎಂಬುದು ಗೊತ್ತಿಲ್ಲದೇ ಆದದ್ದು ಎಂದು.

ಹಾಗಾದರೆ ಹೇಗೆ, ನೀವು ಹೇಗೆ ಊಟ ಮಾಡಬೇಕು ಎನ್ನುವುದನ್ನು ಇವತ್ತು ಹೇಳಿಕೊಡುತ್ತೇನೆ. ಇದನ್ನು ಪಾಲಿಸಿದರೆ ನಿಮ್ಮ ದೇಹ ತೂಕದ ಸಮಸ್ಯೆ ಅರ್ಧಕ್ಕರ್ಧ ನಿವಾರಣೆ ಆದಂತೆಯೇ ಸರಿ. ‘ಅದೇನೋ ಸರಿ. ಆದರೆ ಇವತ್ತಿನ ಯಾಂತ್ರಿಕ ಯುಗದಲ್ಲಿ ಏನೋ ಒಂದಷ್ಟು ಹೊಟ್ಟೆಗೆ ಹಾಕ್ಹೊಂಡು ಓಡಿದರೆ ಸಾಕಾಗಿರುತ್ತೆ. ಅಂಥದ್ದರಲ್ಲಿ ನೀವು ಹೇಳುವ ಡಯಟ್‌ ಪಾಲಿಸೋದು ಹೇಗೆ ಸಾಧ್ಯ?’– ಇದು ಬಹುತೇಕರ ಪ್ರಶ್ನೆಯಾಗಿರುತ್ತೆ. ಇದಕ್ಕೆ ಉತ್ತರ ಬಹಳ ಸಿಂಪಲ್‌. ನೀವು ನಿತ್ಯ ಏನು ತಿಂತಾ ಇದೀರೋ ಅಥವಾ ಊಟ ಮಾಡ್ತಾ ಇದೀರೋ ಅದನ್ನೇ ತಿನ್ನಿ. ಆದರೆ ಅದರಲ್ಲಿ ಪ್ರಮಾಣವನ್ನು ಮತ್ತು ರೀತಿಯನ್ನು ಸೊಲ್ಪ ಬದಲಿಸಿಕೊಳ್ಳಿ. ಇಷ್ಟು ಮಾಡಿದರೆ ಖಂಡಿತಾ ನಿಮ್ಮ ವೇಟ್‌ ಲಾಸ್‌ ಪ್ರೋಸೆಸ್‌ ಯಶಸ್ವಿಯಾಗಿ ಆರಂಭವಾದಂತೆಯೇ ಸರಿ. ಇದನ್ನೇ ಅಭ್ಯಾಸ ಮಾಡಿಕೊಂಡರೆ ಜೀವನದಲ್ಲಿ ಮತ್ತೆ ಯಾವತ್ತೂ ತೂಕ ಹೆಚ್ಚಳದ ಸಮಸ್ಯೆ ನಿಮಗೆ ಇರೋದೇ ಇಲ್ಲ.

ADVERTISEMENT

ಹಾಗಾದರೆ, ನಮ್ಮ ಊಟದ ತಟ್ಟೆ ಹೇಗಿರಬೇಕು? ಊಟ ಎಂದರೆ ನಿತ್ಯದ ದಿನಚರಿಯ ಒಂದು ಸರಳ ಮತ್ತು ಸುಂದರ ಕ್ರಿಯೆ. ಅದು ನಮ್ಮ ದೇಹಕ್ಕೆ, ಆ ಮೂಲಕ ಇಡೀ ಬದುಕಿಗೆ ನೀಡುವ ಅತ್ಯಂತ ಮೌಲಿಕವಾದ ಕಾಣಿಕೆ–ಉಡುಗೊರೆಯೂ ಹೌದು. ಉಡುಗೊರೆ ಅಂದ ಮೇಲೆ ಯಾರಾದರೂ ಕೆಟ್ಟದಾಗಿರೋದನ್ನು ಕೊಡುತ್ತಾರೆಯೇ? ಕಾಣಿಕೆಗಳು ಯಾರು ಯಾರಿಗೇ ಕೊಡಲಿ, ಅದನ್ನು ಸಾಧ್ಯವಾದಷ್ಟು ಸುಂದರವಾಗಿ ಶೃಂಗರಿಸಿ, ಚೆಂದಗೊಳಿಸಿ, ಆತ್ಯಾಕರ್ಷಕವಾಗಿಸಿ ಕೊಡುತ್ತಾರೆ. ಹಾಗೆಯೇ ಏನೇನನ್ನೋ ಉಡುಗೊರೆಯಾಗಿ ಕೊಡೋದಿಲ್ಲ. ಅಪರೂಪದಲ್ಲಿ ಅಪರೂಪವನ್ನು ಹುಡುಕಿ, ಉಪಯುಕ್ತವಾದುದನ್ನೇ ಆಯ್ದು ಉಡುಗೊರೆಯಾಗಿ ನೀಡುವುದು ಪದ್ಧತಿ. ನಮ್ಮ ದೇಹಕ್ಕೆ ನಾವು ನಿತ್ಯ ನೀಡುವ ಊಟ ಎಂಬ ಉಡುಗೊರೆಯೂ ಆಕರ್ಷಕವಾಗಿ, ಸುಂದರವಾಗಿ, ಮೌಲಿಕವಾಗಿ, ಉಪಯುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಯಾರಿಗಾದರೂ ಪ್ರಯೋಜನಕ್ಕೆ ಬಾರದ ವಸ್ತುಗಳನ್ನು ನಾವು ಕಾಣಿಕೆಯಾಗಿ ಕೊಟ್ಟರೆ, ಅವರು ಹೇಗೆ ಅದನ್ನು ಎಲ್ಲೋ ಮೂಲೆಗೆ ಬಿಸಾಡಿ ಮರೆತುಬಿಡುತ್ತಾರೋ ಹಾಗೆಯೇ, ದೇಹಕ್ಕೆ ಉಪಯುಕ್ತವಲ್ಲದ್ದನ್ನು ಕೊಟ್ಟರೆ ದೇಹವೂ ಅದನ್ನು ದೇಹದ ಯಾವುದೋ ಮೂಲೆಗೆ ತಳ್ಳಿಬಿಡುತ್ತದೆ. ಹಾಗೆ ಬೀಸಾಡೋದರ ಫಲವೇ ಕೊಬ್ಬು. ಯಾವ ಮೂಲೆಗೆ ಹೆಚ್ಚು ಹೆಚ್ಚು ಬೇಡದ್ದನ್ನು ಅಥವಾ ಹೆಚ್ಚಾಗಿದ್ದನ್ನು ತಳ್ಳುತ್ತದೆಯೋ ಆ ಭಾಗ ದಪ್ಪ ಆಗುತ್ತ ಹೋಗುತ್ತೆ.

ಈ ಹಂತದಲ್ಲಿ ಹೇಳಲೇಬೇಕಾದ ಮಾತೊಂದಿದೆ. ನಮ್ಮ ದೇಹ ಎಂಬುದು ಮಗುವಿದ್ದಂತೆ, ಅದು ಕಂಡಿದ್ದನ್ನೆಲ್ಲ ಆಸೆ ಪಡುತ್ತದೆ. ಮಕ್ಕಳು ಜಾತ್ರೆಯಲ್ಲಿ ಕಣ್ಣಗೆ ಚೆಂದ ಕಂಡಿದ್ದನ್ನೆಲ್ಲ ಕೇಳುತ್ತೆ ಎಂದು ಎಲ್ಲವನ್ನೂ ಕೊಡಿಸುತ್ತೇವೆಯೇ? ಅಥವಾ ಸಿಕ್ಕ–ಸಿಕ್ಕದ್ದನ್ನೆಲ್ಲ ತಿನ್ನಲು ಕೇಳುತ್ತೆ ಅಂತ ಎಲ್ಲವನ್ನೂ ಕೊಡಿಸಿದರೆ ಅದರ ಆರೋಗ್ಯದ ಕತೆಯೇನು? ಹಾಗೆಯೇ ದೇಹವೂ. ಅದು ಚೆಂದ ಕಂಡಿದ್ದನ್ನೆಲ್ಲ ತಿನ್ನಲು ಬಯಸುತ್ತೆ. ಹಾಗಂತ ಅದೆಲ್ಲವೂ ಅದಕ್ಕೆ ಹಿತ ನೀಡುವುದಿಲ್ಲ. ನಾವು ಮಕ್ಕಳಿಗೆ ಹೇಗೆ ತಿಳಿ ಹೇಳಿ, ಕೆಲವೊಮ್ಮೆ ಗದರಿಸಿ, ಇನ್ನು ಕೆಲವೊಮ್ಮೆ ಉತ್ತಮವಾದುದನ್ನು ಆಯ್ಕೆ ಮಾಡಿಕೊಟ್ಟು, ಮತ್ತೊಮ್ಮೆ ಅವರ ಗಮನವನ್ನು ಬೇರೆಡೆಗೆ ಸೆಳೆದು ಯಾಮಾರಿಸಿ...ಹೀಗೆ ಏನೆಲ್ಲ ಪ್ಲಾನ್‌ ಮಾಡಿ ಒಳ್ಳೆಯದನ್ನು ಮಾತ್ರವೇ ಕೊಡುತ್ತೇವೆಯೋ ದೇಹವೆಂಬ ಮಗುವಿಗೂ ಇಂಥ ಎಲ್ಲ ಸರ್ಕಸ್‌ ಮಾಡಿ, ಅದರ ಹಠವನ್ನು– ರಚ್ಚೆಯನ್ನು ಸಮಾಧಾನ ಪಡಿಸಿ, ಒಳ್ಳೆಯದನ್ನು ರೂಢಿಸಬೇಕು.

ಇನ್ನೂ ಒಂದು, ಗುಟ್ಟನ್ನು ಹೇಳುತ್ತೇನೆ, ಏನೆಲ್ಲ ಬೇಕೋ ಅದೆಲ್ಲವೂ ಮಕ್ಕಳಿಗೆ ಮನೆಯಲ್ಲೇ ಸಿಗುತ್ತಿದ್ದಾಗ ಮಕ್ಕಳು ಬೇರೆಯದಕ್ಕೆ ಆಸೆ ಪಡುವುದು ಕಡಿಮೆ. ಹಾಗೆಯೇ ದೇಹಕ್ಕೆ ಏನು ಬೇಕೋ ಅದೆಲ್ಲವೂ ಸಮೃದ್ಧವಾಗಿ ಸಿಕ್ಕು ಸಂತೃಪ್ತಿ ಇದ್ದಾಗ ಮತ್ತೆ ಬೇರೆಯದನ್ನು ತಿನ್ನಲು ಆಸೆ ಪಡುವುದಿಲ್ಲ. ಬೇಕಿದ್ದರೆ ನೋಡಿ ನೀವು, ಹೊಟ್ಟೆ ಬಿರಿಯುವಷ್ಟು ಊಟ ಮಾಡಿದ್ದಾಗ, ಎದುರುಗಡೆ ಐಸ್‌ಕ್ರೀಮ್‌ ತಂದಿಟ್ಟರೂ ನಮ್ಮಿಂದ ತಿನ್ನಲಾಗುವುದಿಲ್ಲ. ಹಾಗೆ ಸಂತೃಪ್ತಿಯಾಗುವುದು ಅಥವಾ ಕ್ರೇವಿಂಗ್‌ ಅನ್ನು ತಡೆಯುವ ಕೆಲಸವನ್ನು ಮಾಡುವುದು ಪ್ರೋಟಿನ್‌ ಸೇವಿಸಿದಾಗ ಮಾತ್ರ. ಹಾಗಾಗಿ ನಮ್ಮ ಪ್ರತಿ ಹೊತ್ತಿನ ಆಹಾರದಲ್ಲಿ ಪ್ರೋಟೀನ್‌ ಸಾಕಷ್ಟು ಪ್ರಮಾಣದಲ್ಲಿ ದೊರೆಯುವಂತೆ ಮಾಡಿಕೊಳ್ಳುವುದು ಅತ್ಯಂತ ಅಗತ್ಯ.

ಮತ್ತೆ ಊಟವನ್ನು ಚೆಂದಗೊಳಿಸುವ ವಿಚಾರಕ್ಕೆ ಬರುವುದಾದರೆ, ನಮ್ಮಲ್ಲಿ ಬಹುತೇಕರು ಮಾಡುವ ತಪ್ಪು ಏನೆಂದರೆ ಒಂದೇ ರೀತಿಯ ಆಹಾರವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದು. ಇದರಿಂದಲೇ ನಮ್ಮ ತೂಕ ಹೆಚ್ಚುತ್ತಿರುವುದು. ಏಕೆಂದರೆ ಆ ’ಒಂದೇ ರೀತಿಯ ಆಹಾರ’ ಬಹುತೇಕ ಸಂದರ್ಭದಲ್ಲಿ ಕಾರ್ಬೋಹೈಡ್ರೇಟೇ ಆಗಿರುತ್ತದೆ. ಒಮ್ಮೆ ಯೋಚಿಸಿ ನೋಡಿ, ನಾವು ತಿಂಡಿ ಅಂದಾಕ್ಷಣ ತಿನ್ನುವುದು ದೋಸೆ, ಇಡ್ಲಿ, ಉಪ್ಪಿಟ್ಟು, ಪೂರಿ, ಇಲ್ಲವೇ ಏನಾದರೊಂದು ರೈಸ್‌ ಬಾತ್‌ಗಳನ್ನು ಅಷ್ಟೇ, ಅದರಿಂದ ಮುಂದಕ್ಕೆ ನಾವು ಹೋಗುವುದೇ ಇಲ್ಲ. ಇನ್ನು ಮಧ್ಯಾಹ್ನದ ಊಟವೆಂದರೆ ಅನ್ನ–ಸಾಂಬಾರ್‌ ಅಷ್ಟೇ, ಜತೆಗೆ ಸ್ವಲ್ಪ ಉಪ್ಪಿನಕಾಯಿಯೋ, ಮಜ್ಜಿಗೆಯೋ ಇದ್ದರೆ ಅದನ್ನೇ ಒಂದಷ್ಟು ಕಲೆಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇನ್ನು ರಾತ್ರಿಯ ವಿಚಾರಕ್ಕೆ ಬಂದರೆ ಬಹುತೇಕರು ಡಯಟ್‌ ಹೆಸರಿನಲ್ಲಿ ಚಪಾತಿ ತಿನ್ನುತ್ತಾರೆ. ಅನ್ನ ತಿನ್ನದೇ ಬಿಟ್ಟು ಬಿಟ್ಟರೆ ವೈಯ್ಟ್‌ ಲಾಸ್‌ ಆಗಿಬಿಡುತ್ತದೆ ಎಂಬ ಭ್ರಮೆ ನಮ್ಮದು. ಇವೆಲ್ಲವೂ ಕಾರ್ಬ್ಸ್‌ ಮಾತ್ರ. ಕಾರ್ಬೋ ಹೈಡ್ರೇಟ್‌ ಬೇಗ ಕರಗುತ್ತದೆ (ಹೈ ಗ್ಲೈಸೆಮಿಕ್‌ ಇಂಡೆಕ್ಸ್‌) ಮತ್ತು ರಕ್ತಕ್ಕೆ ಹೆಚ್ಚು ಹೆಚ್ಚು ಗ್ಲೂಕೋಸ್‌ ಅನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿಯೇ ನಮಗೆ ಸ್ವಲ್ಪ ಹೊತ್ತಲ್ಲೇ ಬೇರೇನಾದರೂ ತಿನ್ನಬೇಕು ಅನ್ನಿಸುವುದು. ಇದರಿಂದಲೇ ಮತ್ತೆ ಮತ್ತೆ ಅದನ್ನೇ ತಿನ್ನುತ್ತೇವೆ. ಮತ್ತೆ ಮತ್ತೆ ಹಸಿವಾಗುತ್ತೆ... ಹೀಗೆ ತಿಂದು ದಪ್ಪ ಆಗುತ್ತಿದ್ದೇವೆ.

ಮೊಟ್ಟ ಮೊದಲು ನಾವು ಪ್ರತಿ ಹೊತ್ತು ತಿನ್ನುವ ಆಹಾರದ ತಟ್ಟೆ ಬಣ್ಣಬಣ್ಣವಾಗಿರುವಂತೆ ನೋಡಿಕೊಳ್ಳೋಣ. ಅದರಲ್ಲೂ ಮಧ್ಯಾಹ್ನದ ಊಟದ ತಟ್ಟೆಯಲ್ಲಿ ಕನಿಷ್ಠ ಏಳು ಬಣ್ಣಗಳು ಇರಲೇಬೇಕು. ನಮ್ಮ ತಟ್ಟೆಯಲ್ಲಿ ಎಷ್ಟು ಹೆಚ್ಚು ವೈವಿಧ್ಯದ ಬಣ್ಣದ ಆಹಾರಗಳಿರುತ್ತವೋ ಅಷ್ಟು ಬೇಗ ನಮ್ಮ ತೂಕ ಕಡಿಮೆ ಆಗುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮ ಪ್ರತಿ ಊಟದ ತಟ್ಟೆಯ ಮೇಲೆ ಚೆಂದವಾದ ಬಣ್ಣಬಣ್ದದ, ಅತ್ಯಂತ ತಾಜಾ ಆಗಿರುವ ಒಂದಷ್ಟು ತರಕಾರಿ ತುಂಡುಗಳು, ಬಿಸಿ ಬಿಸಿ ಧಾನ್ಯಗಳು, ಹೊಳೆಯುವ ಹಸಿ ಕಾಳುಗಳು. ಜತೆಗೆ ಘಮಘಮಿಸುವ ಒಂದು ಸ್ಪೂನ್‌ ತುಪ್ಪ ಅಥವಾ ಬೆಣ್ಣೆ, ಪನ್ನೀರ್‌ ಇಲ್ಲವೇ ಬೇಯಿಸಿದ ಮೊಟ್ಟೆ, ಒಂದೆರಡು ಬಣ್ಣದ ಹಣ್ಣುಗಳು ಇವೆಲ್ಲವೂ ಒಟ್ಟಿಗೆ ಸೇರಿ ನಮ್ಮ ಹೊಟ್ಟೆಯ ತೃಷೆಯನ್ನು ತೀರಿಸುವಂತಾಗಲಿ. ಈ ರೀತಿಯ ಊಟದ ತಟ್ಟೆಯ ವಿನ್ಯಾಸವೇ, ದೇಹವನ್ನು ಗಮ್ಯಸ್ಥಾನ (ತೂಕ ಇಳಿಸುಕೊಳ್ಳುವ)ಕ್ಕೆ ತಲುಪಿಸುವ ನಿಜವಾದ ದಿಕ್ಸೂಚಿ ಮತ್ತು ರಹದಾರಿ. ಹಾಗೆಂದು ಇವೆಲ್ಲವನ್ನೂ ಊಟದ ನಂತರ ತಿನ್ನುವುದಲ್ಲ, ಊಟಕ್ಕೆ ಕುಳಿತ ತಕ್ಷಣ ಮೊದಲು ಇವೆಲ್ಲವನ್ನೂ ತಿಂದು ಆನಂತರ ಉಳಿದ ಜಾಗಕ್ಕೆ ಅನ್ನವನ್ನೋ, ಚಪಾತಿಯನ್ನೋ, ರಾಗಿ ಮುದ್ದೆಯನ್ನೋ ತಿನ್ನಿ.

ಒಂದು ವಾರ ಇದನ್ನು ಮಾಡಿ, ಆನಂತರ ನಿಮ್ಮ ದೇಹ ತೂಕ ನೋಡಿಕೊಂಡು ಹೇಳಿ. ಅಷ್ಟರಲ್ಲಿ ನಮ್ಮ ತಟ್ಟೆಯಲ್ಲಿ ಯಾವ್ಯಾವುದು ಎಷ್ಟೆಷ್ಟು, ಇರಬೇಕು ಯಾವುದನ್ನು ಮೊದಲು ತಿನ್ನಬೇಕು ಎಂಬುದನ್ನು ನಿಮಗೆ ಬಂದು ಹೇಳುತ್ತೇನೆ. ಆಲ್‌ ದಿ ವೆರಿ ಬೆಸ್ಟ್‌ !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.