ADVERTISEMENT

ರಾಜನಂತೆ ಹಬ್ಬದೂಟ ಮಾಡಿ, ದೇಹದ ತೂಕ ಅನಾಯಾಸ ಕಡಿಮೆ ಮಾಡಿಕೊಳ್ಳಿ!

‘ತಿಂದುಂಡು ಸುಖವಾಗಿ’ ಅಂಕಣ

ಶಾಂತಿ ಸ್ಯಾಮ್ಯುಯಲ್
Published 18 ಫೆಬ್ರುವರಿ 2026, 14:58 IST
Last Updated 18 ಫೆಬ್ರುವರಿ 2026, 14:58 IST
   

ಕಳೆದ ಲೇಖನದಲ್ಲಿ ನಮ್ಮ ಊಟದ ತಟ್ಟೆ ವರ್ಣರಂಜಿತವಾಗಿದ್ದಷ್ಟೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭ ಎಂಬುದನ್ನು ಹೇಳಿದ್ದೆ, ಅದಕ್ಕೆ ಕಾರಣವನ್ನೇ ಹೇಳಿರಲಿಲ್ಲ. ಈ ಬಗ್ಗೆ ಸಾಕಷ್ಟು ಮಂದಿ ಪ್ರಶ್ನೆ ಮಾಡಿದ್ದಾರೆ. ‘ಊಟದ ತಟ್ಟೆಯಲ್ಲಿ ಬಣ್ಣಬಣ್ಣದ ಆಹಾರ ಇರುವುದಕ್ಕೂ, ತೂಕಕ್ಕೂ ಏನು ಸಂಬಂಧ? ಬಹಳಷ್ಟು ಬಾರಿ ಬೇರೇ ಬೇರೆ ಡಯಟಿಂಗ್ ಪದ್ಧತಿಗಳಲ್ಲಿ ಒಂದೇ ರೀತಿಯ ತರಕಾರಿ, ಕಾಳುಗಳು ಅಥವಾ ಬರೀ ಚಪಾತಿ... ಹೀಗೆ ತಿನ್ನಿಸಿ ತೂಕ ಕಡಿಮೆ ಮಾಡಿಸುತ್ತಾರಲ್ಲಾ? ತಿಂಗಳುಗಟ್ಟಲೇ ಇದನ್ನೇ ತಿಂದು ವೇಟ್‌ಲಾಸ್‌ ಮಾಡಿದವರಿದ್ದಾರೆ. ನೀವು ಇದೇನು ಕಲರ್‌ ಥೆರೆಪಿಯನ್ನು ಮಾಡಿಸುತ್ತಿದ್ದೀರಾ?’ ಎಂಬುದು ಬಹುತೇಕರ ಪ್ರಶ್ನೆಗಳ ಸಾರಾಂಶ.

ತಪ್ಪಲ್ಲ, ನನ್ನ ಬಳಿ ತೂಕ ಕಡಿಮೆ ಮಾಡಿಕೊಳ್ಳಲು ಬರುವ ಬಹುತೇಕರಿಗೆ ಮೊದಲ ಬಾರಿಗೆ ಇದನ್ನು ಹೇಳಿದಾಗಲೂ ಇದು ಅವರಿಗೆ ಸಖೇದಾಶ್ಚರ್ಯ ತಂದಿರುತ್ತದೆ. ಆಗೆಲ್ಲ ಅವರಿಗೆ ನಾನು ಕೇಳುವ ಮರು ಪ್ರಶ್ನೆ ಒಂದೇ–‘ನಿಮಗೆ ಆರೋಗ್ಯಕರವಾಗಿ ಇದ್ದು, ಮತ್ತೆಂದೂ ವಾಪಸು ಬಾರದ ರೀತಿಯಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೇ ಅಥವಾ ಒಮ್ಮೆಲೆ ಹತ್ತು–ಹದಿನೈದು ಕೆಜಿ ತೂಕ ಕಡಿಮೆ ಮಾಡಿಕೊಂಡು, ಅಶಕ್ತತೆ, ಮಂಡಿ–ಬೆನ್ನು ನೋವುಗಳನ್ನು ಅನುಭವಿಸುತ್ತಾ, ನಿಯಮಗಳೆಲ್ಲವನ್ನೂ ಬಿಟ್ಟ ನಂತರ ಮತ್ತೆ ಬೊಜ್ಜು ಬರಬೇಕೆ?’ ಎಂದು. ನಿಜವಾಗಿ ದೇಹಾರೋಗ್ಯ ನಿಂತಿರುವುದೇ ನಮ್ಮ ಎತ್ತರ : ತೂಕದ ಅನುಪಾತದಲ್ಲಿ. ಈ ಅನುಪಾತದಂತೆ ನಮ್ಮ ತೂಕವಿರಬೇಕೆಂದರೆ ಅದನ್ನು ಕೃತಕವಾಗಿ ಯಾವುದೇ ಚಿಕಿತ್ಸೆ–ಶಸ್ತ್ರಕ್ರಿಯೆಯಿಂದಾಗಲೀ, ಅವೈಜ್ಞಾನಿಕ ಬಲವಂತದ ಪದ್ಧತಿಗಳಿಂದಾಗಲೀ ಸಿದ್ಧಿಸಿಕೊಳ್ಳಲು ಅಸಾಧ್ಯ. ನೆನಪಿಡಿ, ಇಂಥವೆಲ್ಲ ರೀತಿಗಳಿಂದ ದಿಢೀರನೆ ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಲಾಭಕ್ಕಿಂತ ಅಪಾಯಗಳೇ ಹೆಚ್ಚು. ಹೀಗೆ ಮಾಡುವುದರಿಂದ ಅತ್ತ ಕಳೆದುಕೊಂಡ ಬೊಜ್ಜೂ ಮರಳಿ ಬರುತ್ತದೆ, ಇತ್ತ ಶಾಶ್ವತ ಅನಾರೋಗ್ಯ ಸಮಸ್ಯೆಗಳೂ ಅಂಟಿಕೊಳ್ಳುತ್ತವೆ.

ಎಲ್ಲಕ್ಕಿಂತ ಮೂಲಭೂತ ಪ್ರಶ್ನೆಯೊಂದನ್ನು ನಿಮಗೆ ಕೇಳುತ್ತೇನೆ; ನಿಮ್ಮ ದೇಹದ ತೂಕ ದಿಢೀರನೆ ಒಂದು ತಿಂಗಳು, ಎರಡು ತಿಂಗಳು ಅಥವಾ ಆರು ತಿಂಗಳಲ್ಲಿ ಹೆಚ್ಚಾಯಿತೇನು? ಹಾಗೊಂದೊಮ್ಮೆ ಆಗಿದ್ದರೆ ಒಂದೋ ನೀವು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೀರಿ, ಇಲ್ಲವೇ ಸ್ಟೆರಾಯ್ಡ್‌ನಂಥ ಯಾವುದೋ ರಾಸಾಯನಿಕಯುಕ್ತ ಔಷಧ, ಆಹಾರಗಳನ್ನು ಸೇವಿಸಿದ್ದೀರಿ ಎಂದೇ ಅರ್ಥ. ಇವೆರಡಕ್ಕೂ ಪರಿಹಾರ ಮೊದಲು ನೀವು ತಜ್ಞ ವೈದ್ಯರನ್ನು ಸಂಪರ್ಕಿಸುವುದೇ ಆಗಿರುತ್ತದೆ. ಹಾಗಿಲ್ಲದಿದ್ದರೆ, ನೀವು ವರ್ಷಗಳವರೆಗೆ ತುಸು–ತುಸುವೇ ದಪ್ಪಗಾಗುತ್ತ ಬಂದು ಈಗಿನ ನಿಮ್ಮ ದಢೂತಿ ಸ್ಥಿತಿಯನ್ನು ತಲುಪಿರುತ್ತೀರಿ. ಅಂದ ಮೇಲೆ ತಿಂಗಳಲ್ಲಿ, ಎರಡು ತಿಂಗಳಲ್ಲಿ, ಆರು ತಿಂಗಳಲ್ಲಿ ಬಾಡಿ ನಂಬರ್‌ ಅನ್ನು ಐಡಿಯಲ್‌ ಮಾಡಿಕೊಳ್ಳಲು ಸಾಧ್ಯವೂ ಇಲ್ಲ, ಹಾಗೆ ನೀವು ಬಯಸಲೂ ಬಾರದು. ನೆನಪಿಡಿ, ನಿಮಗೆ ಅಂಥ ಆಮಿಷಗಳನ್ನು ಒಡ್ಡುವ ಯಾವುದೇ ಪದ್ಧತಿ, ಖಾಸಗಿ ಕಂಪನಿಗಳನ್ನು ನಂಬಿ ಮೋಸ ಹೋಗಬೇಡಿ. ವೇಟ್‌ ಲಾಸ್‌ ಪ್ರಕ್ರಿಯೆ ಎಂಬುದು ಬಹುದೊಡ್ಡ ತಪಸ್ಸು. ಅದನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸಿದಾಗಲೇ ಅಂಥದ್ದೊಂದು ಸಮತೂಕವನ್ನು ಕಾಪಾಡಿಕೊಂಡು, ಆರೋಗ್ಯಕರವಾಗಿರುವ ತಂತ್ರವಿದ್ಯೆ ನಮಗೆ ಸಿದ್ಧಿಸುವುದು. ಒಂದು ತಿಂಗಳಲ್ಲಿ ಗರಿಷ್ಠವೆಂದರೆ 2–3 ಕೆಜಿಗಿಂತ ಹೆಚ್ಚು ತೂಕ ನಷ್ಟವಾಗುವ ಯಾವುದೇ ಪದ್ಧತಿಯನ್ನೂ ಅನುಸರಿಸಬೇಡಿ. ಅದು ಅನಾರೋಗ್ಯ ಸಮಸ್ಯೆಯನ್ನು ಮಾತ್ರವೇ ಅಲ್ಲ, ಜೀವಕ್ಕೂ ಅಪಾಯ ತರಬಲ್ಲುದು.

ADVERTISEMENT

ಯಾವುದೇ ಸಮಸ್ಯೆ ಇಲ್ಲದೇ, ದೇಹದ ಹೊಳಪು, ಮುಖದ ಕಾಂತಿ, ಚರ್ಮದ ಬಿಗುತನ ಇತ್ಯಾದಿಗಳನ್ನು ಕಳೆದುಕೊಳ್ಳದೇ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ನಾವು ಮೊಟ್ಟ ಮೊದಲಿಗೆ ಮಾಡಬೇಕಾದುದು ನಮ್ಮ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಬೇಕು. ತುಂಬ ಜನ ತಪ್ಪು ತಿಳಿದುಕೊಳ್ಳುವುದೇ ಇಲ್ಲಿ, ಆಹಾರ ಪದ್ಧತಿಯನ್ನು ಬದಲಿಸುವ ಬದಲು ಆಹಾರವನ್ನು ಬದಲಿಸಿಬಿಡುತ್ತಾರೆ. ಅನ್ನ ಬಿಟ್ಟು ಚಪಾತಿ ತಿನ್ನುವುದು, ತಿಂಡಿ–ಊಟದ ಬದಲು ಕೇವಲ ಸೌತೆಕಾಯಿ, ಓಟ್ಸ್ ಇತ್ಯಾದಿಗಳನ್ನು ತಿಂದು ಹಸಿವನ್ನು ನಿಯಂತ್ರಿಸಿಕೊಳ್ಳುವುದು. ರುಚಿ ವೈವಿಧ್ಯಗಳನ್ನು ಬಿಟ್ಟು ಸಂನ್ಯಾಸಿಗಳ ರೀತಿ ಕೇವಲ ಕಾಳುಗಳು–ತರಕಾರಿಗಳನ್ನೇ ತಿಂದು ತಿಂಗಳುಗಟ್ಟಲೆ ಇರುವುದು, ಅಮ್ಮ–ಹೆಂಡತಿ ಮಾಡಿ ಹಾಕುವ ರುಚಿಕಟ್ಟಾದ ಮನೆಯೂಟದ ಬದಲು ಕೃತಕ ಜ್ಯೂಸು–ಪ್ರೋಟೀನ್‌ ಶೇಕ್‌ಗಳ ಮೊರೆ ಹೋಗುವುದು... ಇತ್ಯಾದಿಗಳಿಂದಾಗಿ ಒಮ್ಮೆಲೆ ನಿಮಗೆ ತೂಕ ಕಡಿಮೆಯಾದಂತೆ ಅನ್ನಿಸಬಹುದು. ಆದರೆ, ಅದು ಕೇವಲ ತಾತ್ಕಾಲಿಕ. ನೀವು ನಿಜವಾಗಿ ಬೊಜ್ಜನ್ನು ಕರಗಿಸಿಕೊಂಡು, ಮತ್ಯಾವತ್ತೂ ದಪ್ಪಗಾಗದೇ ಸಮತೂಕವನ್ನು ಕಾಪಾಡಿಕೊಳ್ಳಬೇಕೆಂದರೆ ನಾನು ಹೇಳುವುದು ಇಷ್ಟೆ, ನಿಮ್ಮ ಆಹಾರವನ್ನು ಬದಲಿಸಬೇಡಿ, ನಿಮ್ಮ ಆಹಾರ ಸೇವನೆಯ ರೀತಿಯನ್ನು ಬದಲಿಸಿ.

ಮೊದಲಿಗೆ ನಿಮ್ಮ ಊಟದ ತಟ್ಟೆಯಲ್ಲಿ ಏನೇನಿರುತ್ತದೆ ಎಂಬುದನ್ನು ನೋಡಿ, ಪಟ್ಟಿ ಮಾಡಿ. ದಿನಂಪ್ರತಿ ಒಂದೇ ರೀತಿಯ ಆಹಾರ (ನಿತ್ಯವೂ ತಟ್ಟೆ ತುಂಬ ಅನ್ನದ ಗುಡ್ಡೆ, ಮೇಲಿಂದ ಸುರಿದುಕೊಳ್ಳುವ ಸಾಂಬಾರ್‌, ಇಲ್ಲವೇ ಸದಾ ಒಂದಿಲ್ಲೊಂದು ರೈಸ್‌ ಬಾತ್‌ಗಳು, ಪ್ರತಿ ರಾತ್ರಿ ಒಣ ಚಪಾತಿ...) ಇರುತ್ತದೆ ಎಂದರೆ ಖಂಡಿತಾ ನಿಮ್ಮ ದೇಹ ತೂಕ ಕಡಿಮೆ ಆಗಲು ಸಾಧ್ಯವೇ ಇಲ್ಲ. ಬದಲಿಗೆ ನೀವು ಅಶಕ್ತತೆಯಿಂದ ಬಳಲುತ್ತೀರಿ. ಏಕೆಂದರೆ ನಮ್ಮ ದೇಹಕ್ಕೆ ಅಗತ್ಯವಾಗಿ ಪ್ರತಿ ದಿನ ನಾವು ಹೊರಗಿನಿಂದ ಕನಿಷ್ಠ 21 ಪೋಷಕಾಂಶಗಳು ನೀಡಲೇಬೇಕು. ಅದರಲ್ಲಿ 13 ವಿಟಮಿನ್‌ಗಳು( ಎ, ಬಿ–ಕಾಂಪ್ಲೆಕ್ಸ್‌, ಸಿ, ಡಿ, ಇ, ಮತ್ತು ಕೆ ಸೇರಿ), 16 ಖನಿಜಾಂಶಗಳು (ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಅಯೋಡಿನ್‌, ಸೋಡಿಯಂ, ಸತು, ಅಯೋಡಿನ್, ಸೆಲೆನಿಯಮ್ ಇತ್ಯಾದಿ) ಹಾಗೂ ಎರಡು ಫ್ಯಾಟಿ ಆಸಿಡ್‌ (ಒಮೆಗಾ 3 ಮತ್ತು ಒಮೆಗಾ 6) ಸೇರಿರುತ್ತವೆ. ಇವಿಷ್ಟೂ ಒಂದೇ ರೀತಿಯ ಗುಡ್ಡದಷ್ಟು ಅನ್ನ, ಸಮುದ್ರದ ರೀತಿಯ ಸಾಂಬಾರ್‌, ಎರಡು ಒಣ ಚಪಾತಿ, ಒಂದೇ ರೀತಿಯ ಕಾಳು–ಸೌತೆಕಾಯಿ ಇಂಥವುಗಳಿಂದ ಸಿಗಲು ಸಾದ್ಯವೇ ಇಲ್ಲ. ಮೇಲೆ ಹೇಳಿದ ಎಲ್ಲ ಪೋಷಕಾಂಶಗಳೂ ನಿತ್ಯವೂ ಸಿಗಬೇಕೆಂದರೆ ಅವು ಒಂದೇ ಹಣ್ಣು–ಒಂದೇ ರೀತಿಯ ತರಕಾರಿ, ಒಂದೇ ರೀತಿಯ ಧಾನ್ಯ–ಬೇಳೆ–ಕಾಳುಗಳಿಂದ ಸಾಧ್ಯವೇ ಇಲ್ಲ. ಉದಾಹರಣೆಗೆ ಬಾಳಹಣ್ಣಿನಲ್ಲಿ ಪೊಟಾಷಿಯಂ ಹೆಚ್ಚಿರುತ್ತದೆ. ಸೊಪ್ಪಿನಲ್ಲಿ ಪೈಬರ್‌ ಮತ್ತು ಕಬ್ಬಿಣದ ಅಂಶ, ಕ್ಯಾರೇಟ್‌ನಲ್ಲಿ ವಿಟಮಿನ್‌ ಎ (ಬೀಟಾ-ಕ್ಯಾರೋಟಿನ್) ಹೀಗೆ ಒಂದೊಂದರಲ್ಲಿ ಒಂದೊಂದು ಸಿಗುತ್ತದೆ. ಹಾಗೆಂದು 21 ಪೋಷಕಾಂಶಗಳಿಗಾಗಿ 21 ರೀತಿಯ ಆಹಾರವನ್ನು ನಿತ್ಯವೂ ತಿನ್ನಲೂ ಆಗದು. ಅದಕ್ಕೆ ಬದಲಾಗಿ ಅಂಥವನ್ನು ಆಯ್ದು ಪ್ರತಿ ನಿತ್ಯ ಒಂದಷ್ಟನ್ನು ಸೇವಿಸಿದಾಗ ಮಾತ್ರ ಎಲ್ಲವೂ ದೇಹಕ್ಕೆ ಒದಗುತ್ತದೆ. ಅದಕ್ಕಿರುವ ಸುಲಭೋಪಾಯ ನಮ್ಮ ಊಟದ ತಟ್ಟೆಯನ್ನು ವರ್ಣಮಯವಾಗಿಸುವುದು.

ಅದರಲ್ಲೂ ಮಧ್ಯಾಹ್ನದ ಊಟದ ತಟ್ಟೆಯಲ್ಲಿ ಕನಿಷ್ಠ 7 ಬಣ್ಣಗಳಿರುವಂತೆ ನೋಡಿಕೊಂಡರೆ ನಿಮ್ಮ ಅರ್ಧ ತೂಕ ಇಳಿಯಿತು ಎಂದೇ ಭಾವಿಸಿ. ಹಾಗೆ ಹೇಳಿದ ಮಾತ್ರ ನೀವು ತಿನ್ನುವ ಆಹಾರಕ್ಕೆ ಬೇರೆ ಬೇರೆ ರೀತಿಯ ಕೃತಕ ಬಣ್ಣಗಳನ್ನೋ, ರಾಸಾಯನಿಕ ರುಚಿವರ್ಧಕಗಳನ್ನೋ ಸುರಿದು ಅಡುಗೆ ತಯಾರಿಸಿಕೊಳ್ಳಬೇಡಿ, ಇದು ಇನ್ನಷ್ಟು ಅಪಾಯಕಾರಿ. ಅದರ ಬದಲು ನಿಮ್ಮ ಊಟದ ತಟ್ಟೆ (ಸಾಮಾನ್ಯಗಾತ್ರದ್ದು)ಯಲ್ಲಿ ಪ್ರತಿದಿನ ನಾಲ್ಕು ಬಣ್ಣದ ಹಸಿ ತರಕಾರಿಗಳು, ಮೂರು ಬಣ್ಣದ ಹಣ್ಣುಗಳ ತುಂಡನ್ನು ಮೊದಲು ಇಟ್ಟುಕೊಳ್ಳಿ. ಉಳಿದ ಭಾಗಕ್ಕೆ ಮಾತ್ರ ಕಾರ್ಬೋಹೈಡ್ರೇಡ್‌ (ಅನ್ನ, ಮುದ್ದೆ, ಚಪಾತಿ, ರೊಟ್ಟಿ...ಯಾವುದೇ ಒಂದು) ಹಾಗೂ ಪ್ರೋಟೀನ್‌ಯುಕ್ತ ಆಹಾರ ಹಾಕಿಕೊಳ್ಳಿ. ಹಣ್ಣು–ತರಕಾರಿಗಳು ಎಂದರೆ ಕೇವಲ ಕತ್ತರಿಸಿದ ನಿರ್ಜೀವ ತುಂಡುಗಳು ಅಲ್ಲ; ಅವು ಪ್ರಕೃತಿಯ ಜೀವಂತ ವರ್ಣಪಟ. ಹಸಿರಿನ ಸೊಪ್ಪು, ಕೆಂಪಿನ ಬೀಟ್‌ರೂಟ್‌, ಕೇಸರಿಯ ಕ್ಯಾರೆಟ್‌, ಬಿಳಿಯ ಮೂಲಂಗಿ, ಹಳದಿಯ ಪೈನಾಪಲ್‌, ಬಿಳಿಯ ಬಾಳೆ ಹಣ್ಣು — ಇವೆಲ್ಲವೂ ಬಣ್ಣಗಳಿಂದ ಬೇರೆ ಬೇರೆ, ಪೋಷಕಾಂಶಗಳಿಂದ ಒಂದೇ ಸಮೂಹ. ಆದ್ದರಿಂದ ತಟ್ಟೆಯ ಅರ್ಧ ಭಾಗವನ್ನು ಇಂಥವಕ್ಕೇ ಮೀಸಲಿಡಲು ಆಹಾರ ವಿಜ್ಞಾನ ಪ್ರತಿಪಾದಿಸುತ್ತದೆ. ಕಲ್ಪನೆ ಮಾಡಿಕೊಳ್ಳಿ ಅರ್ಧ ತಟ್ಟೆ ತರಕಾರಿ–ಹಣ್ಣುಗಳೆಂದರೆ — ಪ್ರಕೃತಿಯ ಒಂದು ಸುಂದರ ರಸಕಾವ್ಯವೇ ನಮ್ಮ ಊಟದ ಭಾಗವಾಗುತ್ತದೆ.

ಹೀಗೆ ಪ್ರತಿ ನಿತ್ಯ ನೀವು ಊಟ ಮಾಡಲಾರಂಭಿಸಿದರೆ ಬೇಡವೆಂದರೂ ನಿಮ್ಮತೂಕ ಕಡಿಮೆಯಾಗಲಾರಂಭಿಸುತ್ತದೆ. ಊಟದ ಶ್ರೀಮಂತಿಕೆಯೂ ಹೆಚ್ಚುತ್ತದೆ. ಪ್ರತಿ ದಿನ ಹೀಗೆ ರಾಜನಂತೆ ಹಬ್ಬದೂಟ ಮಾಡಿ, ದೇಹದ ತೂಕವನ್ನು ಅನಾಯಾಸವಾಗಿ ಕಡಿಮೆ ಮಾಡಿಕೊಳ್ಳಿ. ಇನ್ನು ಊಟದಲ್ಲಿ ಯಾವ್ಯಾವುದು ಎಷ್ಟೆಷ್ಟುಪಾಲಿರಬೇಕು ಎಂಬುದನ್ನು ಮುಂದಿನ ಲೇಖನದಲ್ಲಿ ತಿಳಿಸುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.