ADVERTISEMENT

ಏನಾದ್ರು ಕೇಳ್ಬೋದು: ಪ್ರೀತಿ– ಆಕರ್ಷಣೆಗಳ ನಡುವಿನ ಗೆರೆ ಎಲ್ಲಿದೆ?

ನಡಹಳ್ಳಿ ವಂಸತ್‌
Published 12 ನವೆಂಬರ್ 2021, 19:30 IST
Last Updated 12 ನವೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

* ಪ್ರೀತಿ– ಪ್ರೇಮ ಮತ್ತು ಆಕರ್ಷಣೆಗಳಿಗೆ ಇರುವ ವ್ಯತ್ಯಾಸವೇನು? ಬದಲಾವಣೆಗಳೇನು? ಇದು ನನ್ನೊಬ್ಬನ ಪ್ರಶ್ನೆಯಲ್ಲ ಎಂದುಕೊಂಡಿದ್ದೇನೆ! ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

- ಮಿಥುನ್‌, ಶಿವಮೊಗ್ಗ.

ಪ್ರೇಮ, ಆಕರ್ಷಣೆಗಳ ಕುರಿತು ತಿಳಿದುಕೊಳ್ಳಬೇಕೆನ್ನುವ ನಿಮ್ಮ ಕುತೂಹಲ ಶ್ಲಾಘನೀಯ. ಗಂಡು– ಹೆಣ್ಣಿನ ದೇಹಗಳು ಸಂತಾನಾಭಿವೃದ್ಧಿಗೆ ಸಿದ್ಧವಾಗುತ್ತಿದ್ದಂತೆ ಪ್ರಕೃತಿ ದೇಹದಲ್ಲಿ ಸೃಜನೆಯಾಗುವ ಹಾರ್ಮೋನ್‌ಗಳ ಮೂಲಕ ಇಬ್ಬರಲ್ಲಿಯೂ ಆಕರ್ಷಣೆಯನ್ನು ಮೂಡಿಸುತ್ತದೆ. ಆಕರ್ಷಣೆ ಮೂಡಿಸಲು ಪ್ರಕೃತಿಗೆ ತನ್ನದೇ ಆದ ತರ್ಕ, ಸಮೀಕರಣಗಳಿವೆ. ಅದು ಜಾತಿ, ವಿದ್ಯೆ, ಬಣ್ಣ, ಆಕಾರಗಳನ್ನು ನೋಡುವುದಿಲ್ಲ. ಆಕರ್ಷಣೆ ಸಹಜವಾಗಿ ದೈಹಿಕವಾಗಿದ್ದರೂ ಮುಂದಿನ ಸಂತಾನವನ್ನು ಒಟ್ಟಾಗಿ ಪೋಷಿಸಲು ಪ್ರೇರೇಪಿಸುವ ಇದನ್ನು ಕೀಳೆಂದುಕೊಳ್ಳುವಂತಿಲ್ಲ. ಹಾಗಾಗಿ ಆಕರ್ಷಣೆ, ಪ್ರೇಮ– ಪ್ರೀತಿಗಳ ಮೊದಲ ಮೆಟ್ಟಿಲು. ಪ್ರೀತಿಯಲ್ಲಿ ಆಕರ್ಷಣೆ ಇರಲೇಬೇಕು, ಆದರೆ ಆಕರ್ಷಣೆಯೇ ಪ್ರೀತಿಯಲ್ಲ. ಆಕರ್ಷಣೆಯನ್ನು ದೀರ್ಘಕಾಲ ಉಳಿಯಬಲ್ಲ ಪ್ರೀತಿಯಾಗಿ ಬದಲಾಯಿಸಲು ಪರಸ್ಪರ ಹೆಚ್ಚಿನ ಪರಿಚಯ, ಒಡನಾಟ ಮತ್ತು ಸಮಯದ ಅಗತ್ಯವಿರುತ್ತದೆ. ಪ್ರೀತಿಯಲ್ಲಿ ಭಿನ್ನಾಭಿಪ್ರಾಯಗಳಿದ್ದೇ ಇರುತ್ತದೆ. ಆದರೆ ಪರಸ್ಪರ ನಂಬಿಕೆ ಮತ್ತು ಗೌರವವಿರುವುದಿಂದ ಅವುಗಳ ಪರಿಹಾರ ಸುಲಭವಾಗುತ್ತದೆ ಅಥವಾ ಭಿನ್ನಾಭಿಪ್ರಾಯಗಳ ನಡುವೆಯೂ ಬದುಕು ಹಸನಾಗಿರುತ್ತದೆ.

ADVERTISEMENT

* 8 ವರ್ಷದಿಂದ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದೆ. ಮನೆಯಲ್ಲಿ ಹೇಳಲಾಗಿರಲಿಲ್ಲ. 21 ವರ್ಷದ ನನ್ನನ್ನು 40 ವರ್ಷದ ಮಾವನ ಜೊತೆ ಮದುವೆ ಮಾಡಿದರು. ನಮ್ಮಿಬ್ಬರ ನಡುವೆ ಹೊಂದಾಣಿಕೆಯಿಲ್ಲ. ನನಗೆ ಸಂಸಾರ ಮಾಡಲು ಇಷ್ಟವಿಲ್ಲ. ಪ್ರೀತಿಸಿದವನೊಂದಿಗೆ ಮದುವೆಯಾಗಲು ಅವರ ಮನೆಯವರು ಒಪ್ಪುತ್ತಿಲ್ಲ. ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟು ಬದುಕುವ ಆಸೆಯಿಲ್ಲ. ಪರಿಹಾರವೇನು?

- ಹೆಸರು, ಊರು ತಿಳಿಸಿಲ್ಲ

ಮದುವೆಗೆ ಮೊದಲೇ ನಿಮ್ಮ ಪ್ರೀತಿಯನ್ನು ಮನೆಯಲ್ಲಿ ಹೇಳಿಕೊಳ್ಳಲಾಗದ ಹಿಂಜರಿಕೆ ಏನಿತ್ತು? ಅಂತಹ ಹಿಂಜರಿಕೆಗಳನ್ನು ಮೀರದೆ ನಿಮ್ಮ ಬದುಕನ್ನು ನಿಮ್ಮ ಹಿಡಿತಕ್ಕೆ ಹೇಗೆ ತೆಗೆದುಕೊಳ್ಳುತ್ತೀರಿ? ನಿಮಗೆ ಈಗಾಗಲೇ ಮದುವೆಯಾಗಿರುವುದರಿಂದ ಮೊದಲು ಕಾನೂನು ಪ್ರಕಾರ ವಿಚ್ಚೇದನ ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ನಿಮ್ಮ ಪತಿಯ ಒಪ್ಪಿಗೆಯೂ ಬೇಕು. ಅಷ್ಟು ಸಮಯ ಕಾಯ್ದು ನಿಮ್ಮನ್ನು ಮರುಮದುವೆಯಾಗಲು ಪ್ರಿಯಕರ ಸಿದ್ಧನಿದ್ದಾನೆಯೇ? ಅವನಿಗೂ ಮನೆಯವರನ್ನು ಒಪ್ಪಿಸಲಾಗದಿದ್ದರೆ ನಿಮ್ಮ ಬದುಕಿನ ದಾರಿಯೇನು? ಸದ್ಯದ ಮದುವೆಯಲ್ಲಿ ಹೊಂದಾಣಿಕೆಯಿಲ್ಲವೆಂದಾದರೆ ವಿಚ್ಚೇದನ ಪಡೆದು ನಿಮ್ಮದೇ ಬದುಕನ್ನು ಕಟ್ಟಿಕೊಳ್ಳುವ ಆರ್ಥಿಕಶಕ್ತಿ ನಿಮಗಿದೆಯೇ? ಇಲ್ಲವೆಂದಾದರೆ ಮೊದಲು ಆರ್ಥಿಕವಾಗಿ ಸ್ವತಂತ್ರಳಾಗುವುದು ಹೇಗೆಂದು ಯೋಚಿಸಿ. ನಿಧಾನವಾಗಿ ಮುಂದಿನ ದಾರಿಗಳು ತೆರೆದುಕೊಳ್ಳುತ್ತಾ ಹೋಗಬಹುದು.

* 22ರ ಯುವಕ. ಅಕಸ್ಮಾತ್ತಾಗಿ ಒಮ್ಮೆ ವಿವಾಹಿತ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದೆ. ಇತ್ತೀಚೆಗೆ ಪ್ರತಿದಿನ ಹಸ್ತಮೈಥುನ ಮಾಡದಿದ್ದರೆ ನಿದ್ದೆ ಬರುವುದಿಲ್ಲ. ಹಸ್ತಮೈಥುನದಿಂದಾಗಿ ಸೊಂಟನೋವು ಬುರುವುದು, ಕೂದಲು ಉದುರುವುದಲ್ಲದೆ ನನ್ನ ಮೇಲೆ ನನಗೆ ಜಿಗುಪ್ಸೆ ಉಂಟಾಗುತ್ತದೆ. ಬೇಸರ, ನಿರುತ್ಸಾಹಗಳಿಂದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ. ಪರಿಹಾರವೇನು?

ನಿಮ್ಮ ಪತ್ರದಲ್ಲಿರುವ ಜಿಗುಪ್ಸೆ ಎನ್ನುವ ಶಬ್ದವೇ ನಿಮ್ಮ ಸಮಸ್ಯೆಗಳ ಮೂಲ. ನಿಮ್ಮ ಬಗ್ಗೆ ನಿಮಗೆ ಉಂಟಾಗಿರುವ ಜಿಗುಪ್ಸೆಯಿಂದಾಗಿಯೇ ದೈಹಿಕ ಸಮಸ್ಯೆಗಳು, ಬೇಸರ, ನಿರುತ್ಸಾಹಗಳು ಕಾಣಿಸಿಕೊಂಡಿವೆ. ಜಿಗುಪ್ಸೆಯ ಮೂಲ ಏನಿರಬಹುದು? ಒಂದು ಕಡೆ ವಿವಾಹಿತಳ ಕಡೆಗಿನ ಲೈಂಗಿಕ ಆಕರ್ಷಣೆ ಹಾಗೂ ಅದನ್ನು ಮತ್ತೆಮತ್ತೆ ಪಡೆಯಲಾಗದ ಅಸಹಾಯಕತೆ, ಮತ್ತೊಂದು ಕಡೆ ಹಸ್ತಮೈಥುನ ಬಗೆಗೆ ಇರುವ ತಪ್ಪು ತಿಳಿವಳಿಕೆಗಳಿಂದ ಮೂಡಿದ ಆತಂಕ- ಇವೆರೆಡೂ ನಿಮ್ಮನ್ನು ವಿರುದ್ಧ ದಿಕ್ಕಿನಲ್ಲಿ ಸೆಳೆಯುತ್ತಿವೆ. ಈ ಗೊಂದಲವೇ ಜಿಗುಪ್ಸೆಯ ಮೂಲ. ಲೈಂಗಿಕ ಆಕರ್ಷಣೆ ಸಹಜ ಮತ್ತು ಹಸ್ತಮೈಥುನದಿಂದ ಯಾವುದೇ ತೊಂದರೆಗಳಾಗುವುದಿಲ್ಲ. ವಿವಾಹಿತೆಯೊಡನೆ ಸಂಬಂಧವಾಗಿದ್ದು ಕೇವಲ ಆಕಸ್ಮಿಕ. ಅದರಲ್ಲಿ ಸಾಕಷ್ಟು ಅಪಾಯಗಳಿರುತ್ತವೆ. ಹಾಗಾಗಿ ಇನ್ನೊಮ್ಮೆ ಅಂತಹ ಸಂಬಂಧಗಳ ಸೆಳೆತವನ್ನು ನಿಲ್ಲಿಸುವುದು ಹೇಗೆಂದು ಯೋಚಿಸಿ. ನಿಮ್ಮ ಲೈಂಗಿಕ ಕಲ್ಪನೆಗಳಲ್ಲಿ ನಿಮ್ಮ ಮುಂದಿನ ಜೀವನ ಸಂಗಾತಿಯನ್ನು ಮೂಡಿಸಿಕೊಳ್ಳಿ. ನಿಧಾನವಾಗಿ ಹಳೆಯ ಸಂಬಂಧ ಆಕರ್ಷಣೆ ಕಳೆದುಕೊಳ್ಳುತ್ತದೆ.

* ನಾನೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಬೇರೆ ಜಾತಿಯವನಾದ್ದರಿಂದ ‘ಅವನನ್ನು ಬಿಟ್ಟುಬಿಡು’ ಎಂದು ತಾಯಿ ಹೇಳುತ್ತಿದ್ದಾಳೆ. ‘ನೀನು ನನ್ನನ್ನು ನಂಬಿ ಜೊತೆ ಬರಲು ಸಿದ್ಧಳಿದ್ದೀಯಾ’ ಎಂದು ಹುಡುಗ ಕೇಳುತ್ತಾನೆ. ಮದುವೆಗೆ ಪೋಷಕರ ಒಪ್ಪಿಗೆಯೂ ಬೇಕು ಎನ್ನಿಸುತ್ತಿದೆ. ಗೊಂದಲದಲ್ಲಿದ್ದೇನೆ. ಸಹಾಯಮಾಡಿ.

- ಹೆಸರು, ಊರು ತಿಳಿಸಿಲ್ಲ.

ನಿಮ್ಮ ಗೊಂದಲಗಳ ಮೂಲವೇನೆಂದು ಯೋಚಿಸಿದ್ದೀರಾ? ಅದು ನಿಮ್ಮ ಜೀವನದ ಬಗೆಗೆ ನಿಮಗೇ ಇರುವ ಅಸ್ಪಷ್ಟತೆಯಲ್ಲವೇ? ಪೋಷಕರ ಅಭಿಪ್ರಾಯವನ್ನು ಮೀರಿ ಹುಡುಗನ ಜೊತೆ ಹೋಗಬೇಕಾದರೆ ಅವನ ಕುರಿತಾದ ಪೂರ್ಣ ತಿಳಿವಳಿಕೆ ಇದ್ದು ಅವನಲ್ಲಿ ನಂಬಿಕೆ ಮೂಡಬೇಕಲ್ಲವೇ? ನಂಬಿಕೆ ಇಲ್ಲದೆ ಪ್ರೀತಿಸುವುದು ಹೇಗೆ ಸಾಧ್ಯ? ಇದರ ಅರ್ಥ ನಿಮ್ಮಿಬ್ಬರ ನಡುವೆ ಸದ್ಯಕ್ಕೆ ಇರುವುದು ಯೌವನದ ಆಕರ್ಷಣೆ ಮಾತ್ರ ಎಂದಲ್ಲವೇ? ಆಕರ್ಷಣೆ ಕೆಟ್ಟದ್ದಲ್ಲದಿದ್ದರೂ ಅದೇ ಪ್ರೀತಿಯಲ್ಲ. ಹುಡುಗನ ಜೊತೆ ನಿಮ್ಮಿಬ್ಬರ ಬದುಕಿನ ದಾರಿಗಳ ಕುರಿತು ಹೆಚ್ಚುಹೆಚ್ಚು ಮಾತನಾಡಿ. ಜೊತೆಜೊತೆಗೆ ನೀವೂ ಕೂಡ ಸ್ವಂತ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗುವುದು ಹೇಗೆ ಎಂದು ಯೋಚಿಸಿ. ನಿಧಾನವಾಗಿ ನಿಮ್ಮ ಜೀವನದ ಬಗೆಗೆ ನಿಮ್ಮೊಳಗೇ ಸ್ಪಷ್ಟತೆ ಮೂಡುತ್ತಾ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.