ADVERTISEMENT

ಕೇರಳ ಮಕ್ಕಳಿಗೆ ಕಾಡುತ್ತಿರುವ 'ಟೊಮೆಟೊ ಫ್ಲ್ಯೂ'; ಇದೆಂಥ ಕಾಯಿಲೆ, ಲಕ್ಷಣಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2022, 16:53 IST
Last Updated 11 ಮೇ 2022, 16:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನಿಗೂಢ ಕಾಯಿಲೆ ಕಾಣಿಸಿಕೊಂಡಿದೆ. ಮಕ್ಕಳ ಮೈಮೇಲೆ ಕೆಂಪು ಗುಳ್ಳೆ ಕಾಣಿಸಿಕೊಂಡಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. 80ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆಯನ್ನು 'ಟೊಮೆಟೊ ಜ್ವರ' (tomato flu) ಎಂದು ಕರೆಯಲಾಗಿದೆ. ಇದೀಗ ತಮಿಳುನಾಡು ಸರ್ಕಾರವು ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ಆರೋಗ್ಯ ತಪಾಸಣೆ ತೀವ್ರಗೊಳಿಸಿದೆ.

ತಮಿಳುನಾಡು–ಕೇರಳ ಗಡಿಯ ವಾಲಯಾರ್‌ ಮೂಲಕ ಕೊಯಮತ್ತೂರು ಪ್ರವೇಶಿಸುವ ಜನರನ್ನು ತಮಿಳುನಾಡಿನ ವೈದ್ಯಕೀಯ ತಂಡವು ಪರೀಕ್ಷೆಗೆ ಒಳಪಡಿಸುತ್ತಿದೆ. ಜ್ವರ, ಚರ್ಮದ ಮೇಲೆ ಗುಳ್ಳೆಗಳು ಎದ್ದಿರುವುದು ಹಾಗೂ ಇತರೆ ಅನಾರೋಗ್ಯದ ಬಗ್ಗೆ ಪರಿಶೀಲಿಸುತ್ತಿರುವುದಾಗಿ ವರದಿಯಾಗಿದೆ. ಕೋವಿಡ್‌ ನಡುವೆ ಮತ್ತೊಂದು ಆತಂಕಕ್ಕೆ ಕಾರಣವಾಗಿರುವ ಟೊಮೆಟೊ ಜ್ವರದ ಲಕ್ಷಣಗಳೇನು? ಅದರ ಚಿಕಿತ್ಸೆ ಹೇಗೆ? ಸೂಕ್ತ ಔಷಧ ಲಭ್ಯವಿದೆಯೇ? ರೋಗ ತಡೆಗಟ್ಟುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ.

ಈ ಜ್ವರದ ಲಕ್ಷಣಗಳು...

ADVERTISEMENT

ಹಲವು ವರ್ಷಗಳಿಂದ ದೇಶದಾದ್ಯಂತ ಆಗಾಗ್ಗೆ ಬಾಧಿಸುತ್ತಿರುವ 'ಚಿಕೂನ್‌ಗುನ್ಯಾ' ರೀತಿಯ ಕೆಲವು ಲಕ್ಷಣಗಳು ಟೊಮೆಟೊ ಜ್ವರದಲ್ಲೂ ಕಾಣಿಸಿಕೊಂಡಿದೆ. ತೀವ್ರ ಜ್ವರ, ಇಡೀ ದೇಹದಲ್ಲಿ ನೋವು, ಕೀಲುಗಳಲ್ಲಿ ಊತ, ಅತಿಯಾದ ಆಯಾಸದಂತಹ ಲಕ್ಷಣಗಳನ್ನು ಗಮನಿಸಲಾಗಿದೆ.

ಸೋಂಕಿಗೆ ಒಳಗಾಗಿರುವ ಮಕ್ಕಳ ಚರ್ಮದ ಮೇಲೆ ಗುಳ್ಳೆಗಳು ಎದ್ದಿರುವುದು, ಕೆರೆತ ಉಂಟಾಗಿದೆ. ಇದರೊಂದಿಗೆ ಕೆಮ್ಮು, ನೆಗಡಿ, ಹೊಟ್ಟೆ ನೋವು, ವಾಂತಿ ಅಥವಾ ಬೇಧಿ, ಹೊಟ್ಟೆ ತೊಳಸುವಿಕೆ, ಕೈಗಳು, ಮಂಡಿಗಳಲ್ಲಿ ಬಣ್ಣ ಬದಲಾವಣೆ ಉಂಟಾಗುವ ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ.

ಆದರೆ, ಈ ಟೊಮೆಟೊ ಜ್ವರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಆರೋಗ್ಯ ಅಧಿಕಾರಿಗಳು ಈ ಸೋಂಕಿನ ಕುರಿತು ತನಿಖೆ ಕೈಗೊಂಡಿದ್ದಾರೆ.

ಕೇರಳದ ಕೊಲ್ಲಂ ಸೇರಿದಂತೆ ಹಲವು ಭಾಗಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ.

ಇದನ್ನು ತಡೆಗಟ್ಟುವ ಬಗೆ?

ಸೋಂಕು ತಡೆಗಟ್ಟಲು ಶುಚಿತ್ವ ಮತ್ತು ಸ್ವಚ್ಚತೆ ಕಾಯ್ದುಕೊಳ್ಳುವುದು ಬಹು ಮುಖ್ಯವಾಗುತ್ತದೆ. ದೇಹಕ್ಕೆ ಅಗತ್ಯ ನೀರಿನ ಅಂಶ ಸೇರುವಂತೆ ಮಾಡಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ. ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದ ಕೂಡಲೇ ಮಕ್ಕಳ ಪಾಲಕರು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸೋಂಕಿಗೆ ಒಳಗಾಗಿರುವ ಮಕ್ಕಳಿಗೆ ತುರಿಕೆಯ ಲಕ್ಷಣಗಳು ಹಾಗೂ ಗುಳ್ಳೆಗಳು ಕಾಣಿಸಿಕೊಂಡರೆ, ಕೆರೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಇಲ್ಲವಾದರೆ, ಇನ್ನಷ್ಟು ತುರಿಕೆ ಹೆಚ್ಚಾಗಿ ವಿಪರೀತಕ್ಕೆ ಹೋಗುವ ಸಾಧ್ಯತೆ ಇರುತ್ತದೆ.

ಸೋಂಕಿತ ವ್ಯಕ್ತಿಯೊಂದಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಸೋಂಕು ಬಹುಬೇಗ ಹರಡುವುದರಿಂದ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡುವುದನ್ನು ಅನುಸರಿಸಲಾಗುತ್ತಿದೆ. ಜ್ವರದಿಂದಾಗುವ ಬಳಲಿಕೆಯ ಪರಿಣಾಮಗಳಿಂದ ಹೊರಬರಲು ರೋಗಿಗಳು ಅಗತ್ಯ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ.

ವರದಿಗಳ ಪ್ರಕಾರ, ಈ ಜ್ವರಕ್ಕೆ ನಿರ್ದಿಷ್ಟವಾದ ಔಷಧ ಇಲ್ಲ. ಸೂಕ್ತ ಆರೈಕೆ ಮತ್ತು ವಿಶ್ರಾಂತಿಯಿಂದ ರೋಗ ಗುಣಮುಖವಾಗುವುದಾಗಿ ತಿಳಿದು ಬಂದಿದೆ.

(ಮಾಹಿತಿ: ಇಂಡಿಯಾ ಟುಡೇ, ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವೆಬ್‌ಸೈಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.