
ಕೀಲುಗಳ ನೋವು
ವಾತಾವರಣದಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ ಅರ್ಥ್ರೈಟಿಸ್ ಇರುವವರು ಕೀಲು ನೋವು, ಬಿಗಿತ ಮತ್ತು ತೊಂದರೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಬಹಳಷ್ಟು ಮಂದಿ ಚಳಿಗಾಲದಲ್ಲಿ ಆರ್ಥ್ರೈಟಿಸ್ ಸಮಸ್ಯೆ ಇನ್ನಷ್ಟು ಹದಗೆಡುತ್ತವೆ ಎಂದು ಹೇಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ಅವರು ದೈನಂದಿನ ಚಟುವಟಿಕೆಗಳನ್ನು ಮಾಡುವುದು ಕಷ್ಟವಾಗುತ್ತದೆ. ಜಗತ್ತಿನಾದ್ಯಂತ ಆರ್ಥ್ರೈಟಿಸ್ ಬಹಳ ಸಾಮಾನ್ಯ ಸಮಸ್ಯೆಯಾಗಿದ್ದು, 300 ಮಿಲಿಯನ್‌ಗಿಂತ ಹೆಚ್ಚು ಜನರು ಯಾವುದೋ ಒಂದು ರೀತಿಯ ಆರ್ಥ್ರೈಟಿಸ್‌ನಿಂದ ಬಳಲುತ್ತಿದ್ದಾರೆ.
ಇದರಲ್ಲಿ ಆಸ್ಟಿಯೋಆರ್ಥ್ರೈಟಿಸ್ ಮತ್ತು ರುಮಟಾಯ್ಡ್ ಆರ್ಥ್ರೈಟಿಸ್ ಅತ್ಯಂತ ಸಾಮಾನ್ಯ ಪ್ರಕಾರಗಳು ಆಗಿವೆ. 2025ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕಮ್ಯುನಿಟಿ ಓರಿಯೆಂಟೆಡ್ ಪ್ರೋಗ್ರಾಂ ಫಾರ್ ಕಂಟ್ರೋಲ್ ಆಫ್ ರುಮ್ಯಾಟಿಕ್ ಡಿಸೀಸಸ್ (ಸಿಓಪಿಸಿಓಆರ್ಡಿ) ನಡೆಸಿದ ಸಂಯುಕ್ತ ಸಮೀಕ್ಷೆಯ ಪ್ರಕಾರ, 195 ಮಿಲಿಯನ್‌ಗಿಂತ ಹೆಚ್ಚು ಭಾರತೀಯರು ಆಸ್ಟಿಯೋಆರ್ಥ್ರೈಟಿಸ್ (ಓಎ), ರುಮಟಾಯ್ಡ್ ಆರ್ಥ್ರೈಟಿಸ್ (ಆರ್ ಎ) ಮತ್ತು ಇತರ ಕೀಲು ತೊಂದರೆಗಳು ಒಳಗೊಂಡಂತೆ ಆರ್ಥ್ರೈಟಿಸ್ ಸಂಬಂಧಿತ ನೋವುಗಳಿಂದ ಬಳಲುತ್ತಿದ್ದಾರೆ.
ಕೀಲುಗಳ ನೋವು
ಆರ್ಥ್ರೈಟಿಸ್ ಎಂಬುದು ಒಂದು ಅಥವಾ ಹೆಚ್ಚಿನ ಕೀಲುಗಳು ಉರಿಯೂತಕ್ಕೊಳಗಾಗುವುದು ಅಥವಾ ಹಾನಿ ಉಂಟಾದ ಸ್ಥಿತಿಯಾಗಿದ್ದು, ಈ ಸಂದರ್ಭದಲ್ಲಿ ನೋವು, ಬಿಗಿತ, ಊತ ಉಂಟಾಗುತ್ತದೆ ಮತ್ತು ಚಲಿಸುವುದೇ ಕಷ್ಟವಾಗುತ್ತದೆ. ಆರ್ಥ್ರೈಟಿಸ್ ಸಾಮಾನ್ಯವಾಗಿ ಯಾವ ವಯಸ್ಸಿನಲ್ಲಾದರೂ ಆರಂಭವಾಗಬಹುದು. ಆದರೆ ಅದು ವಯಸ್ಸಾದಂತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಕೀಲುಗಳು ಮೊಣಕಾಲು, ಸೊಂಟ, ಕೈಗಳು, ಮಣಿಕಟ್ಟು, ಭುಜಗಳು, ಪಾದಗಳು, ಗಂಟುಗಳು ಮತ್ತು ಕೆಳ ಬೆನ್ನು ಸಾಮಾನ್ಯವಾಗಿ ಇದರಿಂದ ತೊಂದರೆಗೊಳಗಾಗುತ್ತವೆ.
● ರುಮಟಾಯ್ಡ್ ಆರ್ಥ್ರೈಟಿಸ್ - ಆಟೋಇಮ್ಯೂನ್ ಡಿಸೀಸ್
● ಗೌಟ್ - ಯೂರಿಕ್ ಆಮ್ಲ ಕ್ರಿಸ್ಟಲ್‌ಗಳ ಸಂಗ್ರಹದಿಂದ ಉಂಟಾಗುವುದು
● ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ - ಕೆಳ ಬೆನ್ನಿನ ಕೀಲುಗಳನ್ನು ಪೀಡಿಸುತ್ತದೆ
● ಸೋರಿಯಾಟಿಕ್ ಆರ್ಥ್ರೈಟಿಸ್ - ಸೋರಿಯಾಸಿಸ್ ಗೆ ಸಂಬಂಧಿಸಿದೆ
● ಜುವೆನೈಲ್ ಆರ್ಥ್ರೈಟಿಸ್ - ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾಣುತ್ತದೆ
● ಮೊಣಕಾಲು ಆರ್ಥ್ರೈಟಿಸ್ - ದುರ್ಬಲಗೊಳಿಸುತ್ತದೆ ಮತ್ತು ತುಂಬಾ ಸಾಮಾನ್ಯವಾದ ವಿಧವಾಗಿದೆ.
ಆರ್ಥ್ರೈಟಿಸ್‌ಗೆ ಶಾಶ್ವತ ಚಿಕಿತ್ಸೆಗೆ ಶಾಶ್ವತ ಪರಿಹಾರವಿಲ್ಲ. ಆದರೆ ಅದರ ಹೆಚ್ಚಿನ ಲಕ್ಷಣಗಳನ್ನು ಕೆಲವು ಜೀವನಶೈಲಿ ಬದಲಾವಣೆಗಳು, ವೈದ್ಯರು ಸೂಚಿಸಿದ ಔಷಧಗಳು ಮತ್ತು ಸ್ವ-ಆರೈಕೆ ತಂತ್ರಗಳ ಮೂಲಕ ನಿರ್ವಹಿಸಬಹುದು.
ಚಳಿಗಾಲದಲ್ಲಿ ಆರ್ಥ್ರೈಟಿಸ್ ನೋವು ಏಕೆ ಹೆಚ್ಚಾಗುತ್ತದೆ?
ಚಳಿ ಹವಾಮಾನವೊಂದೇ ಆರ್ಥ್ರೈಟಿಸ್ ಉಲ್ಬಣಗೊಳ್ಳಲು ಕಾರಣವಲ್ಲ. ರೋಗದ ಲಕ್ಷಣಗಳನ್ನು ಹದಗೆಡಿಸುವುದಕ್ಕೆ ಸಾಕಷ್ಟು ಕಾರಣಗಳಿರುತ್ತದೆ. ಚಳಿಯಲ್ಲಿ ರಕ್ತನಾಳಗಳು ಸಂಕುಚಿತಗೊಳ್ಳಬಹುದು ಮತ್ತು ಅದರಿಂದ ರಕ್ತಪರಿಚಲನೆ ಕಡಿಮೆ ಆಗಬಹುದು. ಇದರಿಂದ ಕೀಲುಗಳ ಅಂಗಾಂಶಗಳಲ್ಲಿ ಬಿಗಿತ ಉಂಟಾಗಬಹುದು ಮತ್ತು ನೋವು ಸೃಷ್ಟಿಯಾಗಬಹುದು. ಕಡಿಮೆ ತಾಪಮಾನವು ಕೀಲುಗಳನ್ನು ನೋವಿಗೆ ಹೆಚ್ಚು ಸಂವೇದನಾಶೀಲಗೊಳಿಸುತ್ತದೆ. ಅಲ್ಲದೇ ಚಳಿಗಾಲದಲ್ಲಿ ಜನರು ಕಡಿಮೆ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಇದರಿಂದ ಕೀಲುಗಳು ಬಿಗಿಗೊಂಡು ಸುತ್ತಲಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ಚಳಿ ಹವಾಮಾನವು ಸ್ನಾಯುಗಳ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಕೀಲುಗಳಲ್ಲಿನ ಮೃದು ಅಂಗಾಂಶಗಳು ಊದುತ್ತವೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಜೊತೆಗೆ ನೋವಿನ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಅಲ್ಲದೇ ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ವಿಟಮಿನ್ ಡಿ ಮಟ್ಟ ಕಡಿಮೆಯಾಗುತ್ತದೆ. ವಿಟಮಿನ್ ಡಿ ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಅದರ ಕೊರತೆಯು ಆರ್ಥ್ರೈಟಿಸ್ ಸಂಬಂಧಿತ ತೊಂದರೆಯನ್ನು ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ಆರ್ಥ್ರೈಟಿಸ್ ನೋವನ್ನು ಹೇಗೆ ನಿರ್ವಹಿಸಬಹುದು?
ನೋವು ನಿರಂತರವಾಗಿದ್ದರೂ, ಆರ್ಥ್ರೈಟಿಸ್ ಇದ್ದರೂ ಚಳಿಗಾಲದಲ್ಲಿ ಸಕ್ರಿಯ ಜೀವನ ನಡೆಸಲು ಕೆಲವು ಸರಳ ತಂತ್ರಗಳನ್ನು ನಿರಂತರವಾಗಿ ಪಾಲಿಸಿದರೆ ಸಹಾಯವಾಗುತ್ತದೆ. ಆ ತಂತ್ರಗಳ ಕುರಿತು ತಿಳಿಯೋಣ. ಮೊದಲನೆಯದಾಗಿ, ಕೀಲುಗಳಿಗೆ ಸೂಕ್ತವಾದ ಆಹಾರ ಸೇವನೆ ಕಡೆಗೆ ಗಮನ ಕೊಡಿ. ನೀವು ಯಾವ ಆಹಾರ ಸೇವನೆ ಮಾಡುತ್ತೀರೋ ಅದು ನಿಮ್ಮಲ್ಲಿನ ಉರಿಯೂತ ಸಮಸ್ಯೆ ಮತ್ತು ಮೂಳೆ ಆರೋಗ್ಯದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಒಮೆಗಾ-3 ಸಮೃದ್ಧ ಆಹಾರಗಳಾದ ಸಾಲ್ಮನ್, ಟ್ಯೂನಾ, ಫ್ಲ್ಯಾಕ್ಸ್ ಸೀಡ್ ಮತ್ತು ವಾಲ್ ನಟ್‌ಗಳು, ಆಂಟಿ ಆಕ್ಸಿಡೆಂಟ್ ಸಮೃದ್ಧ ಹಣ್ಣುಗಳು ಮತ್ತು ಸೊಪ್ಪು ತರಕಾರಿಗಳು, ಧಾನ್ಯಗಳು ಮತ್ತು ಲೀನ್ ಪ್ರೋಟೀನ್‌ಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳು. ಹೆಚ್ಚು ಸಂಸ್ಕರಿತ, ಸಕ್ಕರೆಯುಕ್ತ ಮತ್ತು ಹುರಿದ ಆಹಾರಗಳನ್ನು ಕಡಿಮೆ ಮಾಡಿ. ಏಕೆಂದರೆ ಅವು ಉರಿಯೂತವನ್ನು ಹೆಚ್ಚಿಸಬಹುದು. ಅದರ ಜೊತೆಗೆ ದೈನಂದಿನ ಚಟುವಟಿಕೆಯಲ್ಲಿ ನಿರತರಾಗಿರುವುದು ಕೂಡ ಮುಖ್ಯ. ಕೀಲುಗಳು ಕಾರ್ಯನಿರತವಾಗುವಂತೆ ಮತ್ತು ಸ್ನಾಯುಗಳನ್ನು ಬಲಪಡಿಸುವಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಯೋಗ, ಸ್ಟ್ರೆಚಿಂಗ್, ಒಳಾಂಗಣ ನಡಿಗೆ, ಸೈಕ್ಲಿಂಗ್ ಮತ್ತು ಕಡಿಮೆ ಪರಿಣಾಮ ಬೀರುವ ಏರೋಬಿಕ್ಸ್ ಇತ್ಯಾದಿ ಚಳಿಗಾಲಕ್ಕೆ ಸೂಕ್ತ ವ್ಯಾಯಾಮಗಳು. ಆರೋಗ್ಯ ತಜ್ಞರು ವಾರಕ್ಕೆ 150 ನಿಮಿಷಗಳ ಮಧ್ಯಮ ಗತಿಯ ವ್ಯಾಯಾಮ ಮತ್ತು ಎರಡು ಸ್ಟ್ರೆಂಥ್ ಟ್ರೇನಿಂಗ್ ಸೆಷನ್‌ಗಳನ್ನು ಶಿಫಾರಸು ಮಾಡುತ್ತಾರೆ. ತೀವ್ರ ಆರ್ಥ್ರೈಟಿಸ್ ಇರುವವರು ಹೊಸ ವ್ಯಾಯಾಮ ಆರಂಭಿಸುವ ಮೊದಲು ಫಿಸಿಯೋಥೆರಪಿಸ್ಟ್ ಜೊತೆಗೆ ಸಮಾಲೋಚಿಸಬೇಕು.
ಕೀಲುಗಳ ನೋವು
ಕೀಲುಗಳನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ಅದರಿಂದ ಓಡಾಟ ನಿರಾಳವಾಗುತ್ತದೆ. ಬೆಚ್ಚಗೆ ಇದ್ದರೆ ಸ್ನಾಯುಗಳ ಒತ್ತಡ ಕಳೆದು ವಿಶ್ರಾಂತಿ ಹೊಂದಿ ಬಿಗಿತ ಕಡಿಮೆ ಆಗುತ್ತದೆ. ಅದಕ್ಕಾಗಿ ವಿವಿಧ ಪದರಗಳಲ್ಲಿ ಬಟ್ಟೆ ಧರಿಸುವುದು, ಗ್ಲೌಸ್‌ಗಳನ್ನು ಹಾಕಿಕೊಳ್ಳುವುದು, ಮೊಣಕಾಲು ಸ್ಲೀವ್‌ಗಳು ಮತ್ತು ಥರ್ಮಲ್ ಸಾಕ್ಸ್ ಬಳಸುವುದು, ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವುದ ಮತ್ತು ಹೀಟಿಂಗ್ ಪ್ಯಾಡ್‌ಗಳನ್ನು ಎಚ್ಚರಿಕೆಯಿಂದ ಬಳಸುವುದು ಮುಂತಾದ ಸರಳ ಕ್ರಮಗಳನ್ನು ಅನುಸರಿಸಬಹುದು. ತೂಕವನ್ನು ಮಿತಿಯಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಸ್ವಲ್ಪ ತೂಕ ಹೆಚ್ಚಳವಾದರೂ ಮೊಣಕಾಲು ಮತ್ತು ಸೊಂಟದ ಕೀಲುಗಳಂತಹ ತೂಕ ಹೊರುವ ಕೀಲುಗಳ ಮೇಲೆ ಒತ್ತಡ ಹೆಚ್ಚುತ್ತದೆ. ಅದರಿಂದ ಕೀಲುಗಳು ಮತ್ತಷ್ಟು ತೊಂದರೆಗೆ ಒಳಗಾಗಬಹುದು. ಚಳಿಗಾಲದಲ್ಲಿಯೂ ಸಾಕಷ್ಟು ನೀರು ಕುಡಿಯಬೇಕು. ನೀರು ಕೀಲುಗಳನ್ನು ಚೆನ್ನಾಗಿ ಲೂಬ್ರಿಕೇಟ್ ಮಾಡುತ್ತದೆ. ಜೊತೆಗೆ, ಧ್ಯಾನ ಮಾಡುವುದನ್ನು, ಶಾಂತಚಿತ್ತದಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಿಂದ ನಿರಂತರ ನೋವಿನ ಮಾನಸಿಕ ಒತ್ತಡವನ್ನು ನಿಭಾಯಿಸಲು ಸಹಾಯವಾಗುತ್ತದೆ. ವೈದ್ಯರು ಅನುಮತಿಸಿದರೆ ಅಕ್ಯುಪಂಕ್ಚರ್ ಪ್ರಯತ್ನಿಸಿ.
ನಿಮ್ಮ ಆರ್ಥೋಪೆಡಿಕ್ ವೈದ್ಯರು ಚಳಿಗಾಲದಲ್ಲಿ ಹೆಚ್ಚಿನ ನೋವು ಇದ್ದರೆ ಉರಿಯೂತ ನಿವಾರಕ ಔಷಧಗಳು, ನೋವು ನಿವಾರಕಗಳು, ಫಿಸಿಯೋಥೆರಪಿ ಅಥವಾ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸಪ್ಲಿಮೆಂಟ್‌ಗಳನ್ನು ಶಿಫಾರಸು ಮಾಡಬಹುದು. ಹೀಟ್ ಥೆರಪಿ, ಎಣ್ಣೆ ಮಸಾಜ್, ಕೀಲು ಚಲಿಸುವ ವ್ಯಾಯಾಮಗಳು ಮತ್ತು ಮಾರ್ಗದರ್ಶಿತ ಸ್ಟ್ರೆಚಿಂಗ್, ವ್ಯಾಯಾಮಗಳು ಚಳಿಗಾಲದಲ್ಲಿ ನಿಮ್ಮನ್ನು ಕ್ರಿಯಾಶೀಲರನ್ನಾಗಿಸಿ ಬಿಗಿತ ಕಡಿಮೆ ಮಾಡಲು ನೆರವಾಗಬಹುದು. ಏನಕ್ಕೂ ಚಳಿಗಾಲ ಉತ್ತುಂಗಕ್ಕೆ ಹೋಗುವ ಮೊದಲೇ ವೈದ್ಯರನ್ನು ಸಂಪರ್ಕಿಸಿ ಮತ್ತು ಚಳಿಯ ಅವಧಿಯಲ್ಲಿ ಆರ್ಥ್ರೈಟಿಸ್ ನಿರ್ವಹಿಸಲು ಸೂಕ್ತವಾದ ದೀರ್ಘಕಾಲೀನ ಯೋಜನೆ ರೂಪಿಸಿ. ಚಳಿಗಾಲವು ಆರ್ಥ್ರೈಟಿಸ್ ಇರುವವರಿಗೆ ನಿಜವಾದ ಸವಾಲಿನ ದಿನಗಳಾಗಿವೆ, ಹಾಗಂತ ದೈನಂದಿನ ಜೀವನವನ್ನು ಏರುಪೇರಾಗದಂತೆ ನೋಡಿಕೊಳ್ಳುವುದು ಕಷ್ಟವೇನಲ್ಲ. ಕ್ರಿಯಾಶೀಲರಾಗಿರಿ, ಕೀಲುಗಳನ್ನು ಬೆಚ್ಚಗಿರಿಸಿಕೊಳ್ಳಿ, ಆರ್ಥ್ರೈಟಿಸ್‌ಗೆ ಸೂಕ್ತವಾದ ಆಹಾರ ತೆಗೆದುಕೊಳ್ಳಿ ಮತ್ತು ಚೆನ್ನಾಗಿ ನೀರು ಕುಡಿಯಿರಿ. ಇವೆಲ್ಲಾ ಕ್ರಮಗಳನ್ನು ಕೈಗೊಳ್ಳುವುದರಿಂದ ಆರ್ಥ್ರೈಟಿಸ್ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಚಳಿಗಾಲದಲ್ಲಿಯೂ ಆರಾಮಾಗಿ ಇರಬಹುದು. ನಿರಂತರವಾಗಿ ಸಣ್ಣ ಸಣ್ಣ ಜೀವನಶೈಲಿ ಬದಲಾವಣೆಗಳನ್ನು ಮಾಡುತ್ತಾ ಬಂದರೆ ಎಷ್ಟೇ ಚಳಿ ಇದ್ದರೂ ಸ್ವಸ್ಥವಾಗಿರಬಹುದು ಮತ್ತು ಸಕ್ರಿಯವಾಗಿರಬಹುದು.
(ಲೇಖಕರು: ಡಾ. ಉಮೇಶ ಸಿ, ಕನ್ಸಲ್ಟೆಂಟ್, ಆರ್ಥೋಪೆಡಿಕ್ಸ್, ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಮೈಸೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.