
ಭಾರತೀಯ ಹವಾಗುಣದ ಪ್ರಕಾರ, ನವೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಹೇಮಂತ ಋತು ಎಂದೂ ಜನವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ ಶಿಶಿರ ಋತು ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ತಣ್ಣನೆಯ ಗಾಳಿ ಬೀಸಲು ಆರಂಭವಾಗುತ್ತದೆ ಮತ್ತು ವಾತಾವರಣವು ಚಳಿಯಿಂದ ಕೂಡಿರುತ್ತದೆ. ವಾತಾವರಣದ ಬದಲಾವಣೆಯಿಂದ ಕಫದಂತಹ ಸಮಸ್ಯೆಗಳು ಸಂಭವಿಸುತ್ತದೆ. ಹೊರಗಿನ ಚಳಿಯಿಂದ ದೇಹದಲ್ಲಿ ಅಗ್ನಿಯ ಕ್ರಿಯಾಶೀಲತೆ ಹೆಚ್ಚಾಗಿರುತ್ತದೆ.
ಕಫದ ಕಾರಣದಿಂದ ನೆಗಡಿ ಕೆಮ್ಮು ಮುಂತಾದ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುವ ಆಹಾರ ಪದಾರ್ಥಗಳನ್ನು ಸೇವಿಸುವುದು ಅತ್ಯಂತ ಮಹತ್ವಪೂರ್ಣವಾಗಿದೆ.
ಚಳಿಗಾಲದಲ್ಲಿ ಸ್ನಿಗ್ಧ, ಮಧುರ, ಅಮ್ಲ ಮತ್ತು ಲವಣ ರಸಗಳಿರುವ ಆಹಾರಗಳನ್ನು ಸೇವಿಸಬೇಕು. ಹೊಸದಾಗಿ ಕಟಾವು ಮಾಡಿದ ಅಕ್ಕಿ, ಗೋಧಿ, ಜೋಳ, ಹೆಸರು ಕಾಳು, ಹುರುಳಿ, ಉದ್ದಿನ ಬೇಳೆ ಮುಂತಾದವುಗಲಿಂದ ತಯಾರಿಸಿದ ಖಾದ್ಯಗಳನ್ನು ಬಿಸಿ ಇರುವಾಗಲೇ ಸೇವಿಸಬೇಕು. ಹಾಗೆಯೇ ನುಗ್ಗೆ ಸೊಪ್ಪು, ಕ್ಯಾರೆಟ್, ಮೂಲಂಗಿ, ಮೆಂತ್ಯ, ಬೆಟ್ಟದ ನೆಲ್ಲಿ, ನಿಂಬೆಯಂತಹ ಪದಾರ್ಥಗಳಿಂದ ತಯಾರಿಸಿದ ಆಹಾರಗಳಲ್ಲಿ ಹಿಂಗು, ಲವಂಗ, ಧನಿಯ, ಶುಂಠಿ, ಬೆಳ್ಳುಳ್ಳಿ, ಪಿಪ್ಪಲಿ ಹಾಗೂ ಕಾಳು ಮೆಣಸು, ಎಳ್ಳು ಮೊದಲಾದವುಗಳನ್ನು ಸೇರಿಸಿ ಸೇವಿಸುವುದು ಹಿತಕರ. ತುಳಸಿ ಬಳಕೆ ಕೂಡ ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.
ಕಬ್ಬಿನ ಉತ್ಪನ್ನಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ದಾಳಿಂಬೆ ಹಣ್ಣು ಸ್ನಿಗ್ಧ ಗುಣ ಹೊಂದಿದ್ದು ಅದನ್ನು ಸೇವಿಸುವುದರಿಂದ ವಾತ, ಪಿತ್ತ ಮತ್ತು ಕಫ ದೋಷ ಶಮನಕ್ಕೆ ಸಹಾಯ ಮಾಡುತ್ತದೆ.
ಕೆಲವೊಂದು ಉದಾಹರಣೆಗಳನ್ನು ನೋಡುವುದಾದರೆ..
ಗೋಧಿಯಿಂದ ಪಾಯಸ ಮಾಡಿಕೊಳ್ಳಬಹುದು. ಚಳಿಗಾಲದಲ್ಲಿ ಇದರ ಸೇವನೆ ಉತ್ತಮ.
ಮೂಸಂಬಿ ರಸಕ್ಕೆ ಸಕ್ಕರೆ, ತಾಜಾ ಶುಂಠಿಯ ರಸ ಮಿಶ್ರಣ ಮಾಡಿ ಪಾನಕವಾಗಿ ಉಪಯೋಗಿಸಬಹುದು. ಇದು ವಾತವನ್ನು ಶಮನಗೊಳಿಸುವುದು, ಸ್ನಿಗ್ಧ ಗುಣ ಹೊಂದಿರುವುದು ಮತ್ತು ಕಫ - ಪಿತ್ತವನ್ನು ಪರಿಣಾಮಕಾರಿಯಾಗಿ ಶಮನಗೊಳಿಸುತ್ತದೆ.
ಕರಿಬೇವಿನ ಎಲೆಗಳನ್ನು ಎಣ್ಣೆಯಲ್ಲಿ ಹುರಿದು ನಂತರ ಪ್ರತ್ಯೇಕವಾಗಿ ಹುರಿದ ಎಳ್ಳು ಮತ್ತು ಕೊಬ್ಬರಿ ಸೇರಿಸಿ ನಂತರ ಇದಕ್ಕೆ ಕೆಂಪು ಮೆಣಸಿನ ಪುಡಿ, ಸಕ್ಕರೆ ಪುಡಿ, ತೆಂಗಿನ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದು ವಾತ ಮತ್ತು ಕಫ ದೋಷಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಾಲಿಗೆ ಅರಿಶಿನ ಮತ್ತು ಕೆಂಪು ಕಲ್ಲುಸಕ್ಕರೆ ಸೇರಿಸಿ ಕುಡಿಯಬಹುದು.
ಎಳ್ಳು ಮತ್ತು ಬೆಲ ಸೇರಿಸಿ ಮಾಡಿದ ಉಂಡೆ ಈ ಸಮಯದಲ್ಲಿ ರುಚಿಯನ್ನು ನೀಡುವುದರೊಂದಿಗೆ ಆರೋಗ್ಯಕ್ಕೂ ಸಹ ಬಹಳ ಉಪಯುಕ್ತವಾಗಿದೆ.
ಸಂಕ್ರಾಂತಿಗೆ ಸೇವಿಸುವ ಎಳ್ಳು ಬೆಲ್ಲದ ಮಿಶ್ರಣ ಚಳಿಗಾಲದ ಋತುವಿಗೆ ಹೇಳಿ ಮಾಡಿಸಿದ ಆಹಾರವಾಗಿದ್ದು, ಇದರ ಸೇವನೆಯಿಂದ ಆರೋಗ್ಯದ ಸಮತೋಲನ ಸಾಧ್ಯ.
(ಲೇಖಕರು: ಡಾ.ಯಶಸ್.ಯು. ಸಹಾಯಕ ಪ್ರಾಧ್ಯಾಪಕರು. ಸ್ವಸ್ಥ ವೃತ್ತ ವಿಭಾಗ. ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹಾಸನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.