ADVERTISEMENT

World Health Day: ನಿಜವಾದ ಆರೋಗ್ಯದ ಲಕ್ಷಣಗಳೇನು? ಶ್ರೀ ಶ್ರೀ ರವಿ ಶಂಕರ್ ಲೇಖನ

ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ. ಈ ಕುರಿತು ಶ್ರೀ ಶ್ರೀ ರವಿ ಶಂಕರ ಅವರ ಲೇಖನ

ಶ್ರೀ ಶ್ರೀ ರವಿಶಂಕರ್
Published 7 ಏಪ್ರಿಲ್ 2025, 9:56 IST
Last Updated 7 ಏಪ್ರಿಲ್ 2025, 9:56 IST
<div class="paragraphs"><p>World Health Day </p></div>

World Health Day

   

ಬೆಂಗಳೂರು: ಆರೋಗ್ಯಕರ ಮೊಗ್ಗು ಮಾತ್ರ ಪೂರ್ಣ ಅರಳಲು ಸಾಧ್ಯ. ಅದೇ ರೀತಿ, ಆರೋಗ್ಯವಂತ ವ್ಯಕ್ತಿ ಮಾತ್ರ ಪೂರ್ಣ ಯಶಸ್ವಿಯಾಗಲು ಸಾಧ್ಯ. ನಿಜವಾದ ಆರೋಗ್ಯವೆಂದರೆ, ಕೇವಲ ದೈಹಿಕ ರೋಗಗಳಿಂದ ಮುಕ್ತವಾಗುವುದಲ್ಲದೆ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಶಾಂತವಾಗಿರುವ ಸ್ಥಿತಿಯನ್ನು ಕಂಡುಕೊಳ್ಳುವುದಾಗಿದೆ. ಮನಸ್ಸು ಕಠೋರ ಹಾಗೂ ಅಸ್ಥಿರವಾಗಿದ್ದರೆ, ಆ ವ್ಯಕ್ತಿಯು ಮಾನಸಿಕ ಆರೋಗ್ಯವನ್ನು ಹೊಂದಿರುವುದಿಲ್ಲ. ಭಾವನೆಗಳಲ್ಲಿ ಏರುಪೇರು ಉಂಟಾದಾಗ, ಆ ವ್ಯಕ್ತಿ ಭಾವನಾತ್ಮಕವಾಗಿ ಆರೋಗ್ಯವಾಗಿರುವುದಿಲ್ಲ.

ಸಂಸ್ಕೃತದಲ್ಲಿ ಉತ್ತಮ ಆರೋಗ್ಯದ ಸ್ಥಿತಿಯನ್ನು "ಸ್ವಸ್ಥ" ಎಂದು ಕರೆಯಲಾಗುತ್ತದೆ. ಅಂದರೆ, ಉತ್ತಮ ಆರೋಗ್ಯವು ಕೇವಲ ದೇಹ ಅಥವಾ ಮನಸ್ಸಿಗೆ ಸೀಮಿತವಾಗಿಲ್ಲ, ಆರೋಗ್ಯವೆಂದರೆ ತನ್ನೊಳಗೆ ತಾನು ಸ್ಥಿರವಾಗಿರುವ ಅಂತರ್ಮುಖ ಸ್ಥಿತಿ. ಉತ್ತಮ ಆರೋಗ್ಯವು ನಮಗೆ ದೇವರಿಂದ ಸಿಕ್ಕಿರುವ ಕೊಡುಗೆ, ಅದರಿಂದ ನಮ್ಮ ದೇಹ ಮತ್ತು ಮನಸ್ಸುಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತವೆ. ದೃಢವಾದ ಮನಸ್ಸು ದುರ್ಬಲ ದೇಹವನ್ನು ಕೂಡ ನಿರ್ವಹಿಸಬಲ್ಲದು, ಆದರೆ ದುರ್ಬಲವಾದ ಮನಸ್ಸು ಬಲಿಷ್ಠವಾದ ದೇಹವನ್ನು ಸಹ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಮನಸ್ಸಿನ ಸ್ಥಿತಿಯನ್ನು ಕಾಪಾಡುವುದೇ ಆರೋಗ್ಯದಲ್ಲಿ ಪ್ರಾರಂಭ ಹಂತ, ಇದು ಒಂದು ಸೂಕ್ಷ್ಮ ಅಂಶವಾಗಿದೆ. ಮನಸ್ಸು ಶಾಂತವಾಗಿ, ಸ್ಪಷ್ಟವಾಗಿ ಮತ್ತು ಸಂತೋಷವಾಗಿದ್ದಾಗ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ, ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸಬಹುದು ಮತ್ತು ಸ್ಥಿರವಾಗಿಸಬಹುದು, ಇದು ದೇಹಕ್ಕೆ ಕೂಡ ಪ್ರಯೋಜನವನ್ನು ನೀಡುತ್ತದೆ.

ADVERTISEMENT

ಉತ್ತಮ ಆರೋಗ್ಯದಲ್ಲಿ ವಾಯು ತತ್ವ ಕೂಡ ಪ್ರಮುಖ ಪಾತ್ರವಹಿಸುತ್ತದೆ, ಅದು ನಮ್ಮ ಉಸಿರಾಟದೊಂದಿಗೆ ಸಂಬಂಧಪಟ್ಟಿದೆ ಹಾಗೂ ನಮ್ಮ ಉಸಿರಾಟದಲ್ಲಿ ಅನೇಕ ರಹಸ್ಯಗಳು ಅಡಗಿವೆ. ನೀವು ಕೋಪಗೊಂಡಾಗ, ನಿಮ್ಮ ಉಸಿರಾಟವು ತೀಕ್ಷ್ಣ ಮತ್ತು ಭಾರವಾಗುತ್ತದೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಹಾಗೆಯೇ ನೀವು ಅತೃಪ್ತರಾದಾಗ ನಿಮ್ಮ ಉಸಿರಾಟವು ನಿಧಾನವಾಗುತ್ತದೆ. ಪ್ರತಿಯೊಂದು ಭಾವನೆಯು ಉಸಿರಾಟದೊಂದಿಗೆ ಒಂದು ನಿರ್ದಿಷ್ಟ ಲಯವನ್ನು ಹೊಂದಿರುತ್ತದೆ. ಉಸಿರಾಟ ಮತ್ತು ಭಾವನೆಗಳ ನಡುವಿನ ಈ ಸಂಬಂಧವನ್ನು ನಾವು ಅರ್ಥಮಾಡಿಕೊಂಡಾಗ, ನಾವು ನಮ್ಮ ಜೀವನವನ್ನು ಹೆಚ್ಚು ಸಾಮರಸ್ಯದಿಂದ ನಡೆಸಬಹುದು. ನಾವು ನಮ್ಮ ಉಸಿರನ್ನು ನಿಯಂತ್ರಿಸಲು ಕಲಿತರೆ, ನಾವು ನಮ್ಮ ಮನಸ್ಸನ್ನು ಕೂಡ ನಿಯಂತ್ರಿಸಬಹುದು. ಆದ್ದರಿಂದ, ಆಳವಾದ ಉಸಿರಾಟದ ಪ್ರಕ್ರಿಯೆಗಳು ಹಾಗೂ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು.

ಹಾಗೆಯೇ, ನೀರು ಮತ್ತು ಆಹಾರ ಕೂಡ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ದೇಹದ ಶುದ್ಧೀಕರಣ ಮತ್ತು ಸಮತೋಲನಕ್ಕೆ ನೀರಿನ ಅಂಶ ಅತ್ಯಗತ್ಯ. ದೇಹಕ್ಕೆ ಹೊಸ ಶಕ್ತಿಯನ್ನು ನೀಡುವ ನೀರಿನಿಂದ ದೇಹವನ್ನು ಶುದ್ಧವಾಗಿಡಬಹುದು. ಅದೇ ರೀತಿ, ಆಹಾರವು ನಮ್ಮ ಆರೋಗ್ಯ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ. ನಮ್ಮ ಆಹಾರವು ಲಘುವಾಗಿರಬೇಕು ಮತ್ತು ಸುಲಭವಾಗಿ ಜೀರ್ಣವಾಗುವಂತೆ ಇರಬೇಕು. ಇದಕ್ಕಾಗಿ ಸಸ್ಯಾಹಾರ ಆಹಾರ ಪದ್ಧತಿ ಉತ್ತಮ.

ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ತರುವ ಮೂಲಕ ಹಾಗೂ ಪ್ರಕೃತಿಯ ಜೊತೆ ಸ್ವಲ್ಪ ಸಮಯ ಕಳೆಯುವ ಮೂಲಕ, ಕ್ರಮೇಣ ನಾವು ನಮ್ಮ ಆರೋಗ್ಯವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕು. ನಿಮಗಾಗಿ ಪ್ರತಿ ವರ್ಷ ಕನಿಷ್ಠ ಒಂದು ವಾರವನ್ನು ತೆಗೆದುಕೊಂಡು, ಸ್ವಲ್ಪ ಕಾಲ ಮೌನ ಶಿಬಿರದಲ್ಲಿ ಕಳೆಯಿರಿ ಮತ್ತು ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಆರಂಭಿಸಿ. ಇದರಿಂದ ನಾವು ನಮ್ಮನ್ನು ಮತ್ತೆ ಪುನಶ್ಚೇತನಗೊಳಿಸಬಹುದು. ಈ ಪ್ರಕ್ರಿಯೆಯು ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕ ಮತ್ತು ಭಾವನಾತ್ಮಕ ದೃಷ್ಟಿಕೋನದಿಂದ ಜೀವನವನ್ನು ಉತ್ತಮಗೊಳಿಸುತ್ತದೆ.

ಆರೋಗ್ಯವು ಔಷಧಿ ಮತ್ತು ವೈದ್ಯರ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಬದಲಾಗಿ, ನಿಮ್ಮ ಮನಸ್ಸು, ದೇಹ ಹಾಗೂ ಆತ್ಮದ ಸಮತೋಲನಕ್ಕೆ ಸಂಬಂಧಿಸಿದೆ. ನಾವು ನಮ್ಮೊಳಗೆ ಸ್ಥಿರತೆಯನ್ನು ಕಂಡಾಗ, ಇಡೀ ಜೀವನವು ಸಂತೋಷಭರಿತವಾಗಿ, ನಮ್ಮಲ್ಲಿ ಶಕ್ತಿಯು ಉದಯಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.