ಐಸ್ಟೋಕ್ ಪ್ರಾತಿನಿಧಿಕ ಚಿತ್ರ
ಹೆಣ್ಣುಮಕ್ಕಳು ಶಿಕ್ಷಣ, ಉದ್ಯೋಗ, ಮದುವೆ, ಮಕ್ಕಳು, ಮನೆ ನಿರ್ವಹಣೆ ಸೇರಿದಂತೆ ಬದುಕಿನ ನಾನಾ ಹಂತಗಳಲ್ಲಿ ಹಲವು ಬಗೆಯ ಒತ್ತಡಗಳನ್ನು ಎದುರಿಸುತ್ತಲೇ ಇರುತ್ತಾರೆ. ಪ್ರತಿಬಾರಿಯೂ ತನ್ನ ಸಾಮರ್ಥ್ಯವನ್ನು ನಿರೂಪಿಸಲೇಬೇಕಾದ ಧಾವಂತದ ಬದುಕು ಆಕೆಯದು. ಅಲ್ಲಿ ತನಗೆ ತಾನೇ ಹಾಕಿಕೊಂಡ ಸಿದ್ಧಸೂತ್ರ ಒಂದಿಷ್ಟು ಆಚೆ ಈಚೆಯಾದರೂ ಆಕೆ ತನ್ನನ್ನು ತಾನೇ ಹಳಿದುಕೊಂಡು ಖಿನ್ನತೆಗೆ ಜಾರುವ ಅಪಾಯ ಇದ್ದೇ ಇರುತ್ತದೆ. ಹಾಗಾಗದಂತೆ, ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಅಗತ್ಯವಾದ ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ‘ಭೂಮಿಕಾ’ ನಡೆಸಿದ ಸಂದರ್ಶನದಲ್ಲಿ ಮನದಟ್ಟು ಮಾಡಿಕೊಟ್ಟಿದ್ದಾರೆ ‘ನಿಮ್ಹಾನ್ಸ್’ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ. ಶ್ರೀದೇವಿ.
ದೈಹಿಕ ಕಾಳಜಿಯಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಈ ಬಗ್ಗೆ ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸುವುದು ಹೇಗೆ?
ಮೊದಲಿಗೆ, ತನಗೆ ಏನಾಗುತ್ತಿದೆ ಎನ್ನುವುದರ ಬಗ್ಗೆ ಹೆಣ್ಣುಮಕ್ಕಳು ಮುಕ್ತವಾಗಿ ಮಾತನಾಡುವ ವಾತಾವರಣವನ್ನು ಕಲ್ಪಿಸಬೇಕು. ಆ ವಾತಾವರಣ ಇಲ್ಲದೇ ಇದ್ದಾಗಲೂ ತಮಗೆ ಏನು ಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳುವ ಮತ್ತು ಸಹಾಯವನ್ನು ಪಡೆದುಕೊಳ್ಳಲು ಮುಂದಾಗುವ ಛಾತಿಯನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು. ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮಾಹಿತಿಯ ಆಗರವೇ ನಮ್ಮ ಮುಂದೆ ಇದೆ. ಆದರೆ, ಈ ಕ್ಷೇತ್ರದಲ್ಲಿರುವ ತಜ್ಞರು ಇದರ ಬಗ್ಗೆ ನಿಖರವಾದ ಮಾಹಿತಿಯನ್ನು ಕೊಟ್ಟು, ಮನದಟ್ಟು ಮಾಡಿಸಬೇಕು. ಅಸಂಘಟಿತ ಕಾರ್ಮಿಕ ವಲಯ ಹಾಗೂ ಸಂಸ್ಥೆಗಳು ಮಾನಸಿಕ ಆರೋಗ್ಯ ಕಾಳಜಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸ್ಪಂದಿಸಬೇಕು. ಶಾಲಾ ಕಾಲೇಜುಗಳಲ್ಲಿ ನಡೆಯುವ ಪೋಷಕರು ಮತ್ತು ಶಿಕ್ಷಕರ ಸಭೆಗಳಲ್ಲಿ ಮಾಹಿತಿ ಕೊಡುವ ಅಭಿಯಾನ ಆಗಬೇಕು. ಇದರಿಂದ ಭಾವನೆಗಳನ್ನು ಗೌರವಿಸುವ ಹಾಗೂ ನಿರ್ವಹಿಸುವ ಕಲೆಯನ್ನು ಕಲಿಯಲು ಸಹಾಯವಾಗುತ್ತದೆ.
ಮಾನಸಿಕ ಆರೋಗ್ಯಕ್ಕೆ ಆಪತ್ತು ಒದಗಿದೆ ಎಂಬುದನ್ನು ಸೂಚಿಸುವ ನಡವಳಿಕೆಗಳು ಯಾವುವು?
ಊಟ, ನಿದ್ರೆ, ದೈಹಿಕ ಚಟುವಟಿಕೆಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗದೇ ಇರುವುದು, ಯಾವುದೇ ಪ್ರಕರಣವಿರಲಿ ಅತಿಯಾಗಿ ಸ್ಪಂದಿಸುವುದು ಅಥವಾ ಸ್ಪಂದಿಸದೇ ಇರುವುದು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ತನ್ನ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವುದು. ಉದಾಹರಣೆಗೆ, ಹೆಚ್ಚು ಮಾತನಾಡದೇ ಇರುವ ವ್ಯಕ್ತಿತ್ವ ಹೊಂದಿರುವವರು ಪದೇ ಪದೇ ಅತಿಯಾಗಿ ಪ್ರತಿಕ್ರಿಯಿಸಿ, ಕೋಪದ ನಡವಳಿಕೆಯನ್ನು ತೋರಿಸಬಹುದು.
ಹೆಣ್ಣುಮಕ್ಕಳೆಲ್ಲ ಭಾವನಾಜೀವಿಗಳು ಎನ್ನುವ ಮಾತಿದೆ. ಇದು ನಿಜವೇ ಅಥವಾ ತಪ್ಪುಕಲ್ಪನೆಯೇ?
ಇಂತಹದ್ದೊಂದು ಅಭಿಪ್ರಾಯವನ್ನು ನಂಬಿರುವ ವ್ಯವಸ್ಥೆಗೆ ಹೆಣ್ಣುಮಕ್ಕಳು ಒಳಪಟ್ಟಿದ್ದಾರೆಯೇ ವಿನಾ ಅವರು ಭಾವನಾತ್ಮಕವಾಗಿ ದುರ್ಬಲರಲ್ಲ. ಹಾಗೆ ನೋಡಿದರೆ, ಹೆಣ್ಣುಮಕ್ಕಳು ನಿಜವಾಗಿಯೂ ಭಾವನಾತ್ಮಕವಾಗಿ ಬಹಳ ಶಕ್ತಿಶಾಲಿಗಳು. ಅವರ ದೇಹದಲ್ಲಿ ಆಗುವ ಹಾರ್ಮೋನ್‌ಗಳ ವ್ಯತ್ಯಾಸದಿಂದ ಮಾನಸಿಕ ಆರೋಗ್ಯಕ್ಕೂ ತೊಂದರೆಯಾಗುವುದು ಸಹಜ. ಎಂಥ ಸವಾಲುಗಳಿದ್ದರೂ ಹೆಣ್ಣುಮಕ್ಕಳು ಸರಿಯಾದ ರೀತಿಯಲ್ಲಿ ಅವನ್ನು ನಿಭಾಯಿಸಬಲ್ಲರು. ಅವರಿಗೆ ಬೇಕಿರುವುದು ತಮ್ಮವರಿಂದ ಸಂಪೂರ್ಣ ಸಹಕಾರ ಅಷ್ಟೆ.
ಭಾವನೆಗಳ ತಾಕಲಾಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಭಾವನಾತ್ಮಕವಾಗಿ ಸದೃಢರಾಗುವುದು ಹೇಗೆ?
ತನಗೆ ಏನು ಬೇಕು ಎಂಬುದರ ಬಗ್ಗೆ ಹೆಣ್ಣುಮಕ್ಕಳಲ್ಲಿ ಸ್ಪಷ್ಟತೆ ಇರಬೇಕು. ಇಂತಹ ಸ್ಪಷ್ಟತೆ ಹೊಂದುವುದನ್ನು ಚಿಕ್ಕಂದಿನಿಂದಲೇ ಕಲಿಸಿಕೊಡುವ ಕೆಲಸ ಆಗಬೇಕು. ಇತರರೇ ಅರ್ಥ ಮಾಡಿಕೊಳ್ಳಲಿ ಎಂಬ ನಿರೀಕ್ಷೆ ಬಿಟ್ಟು, ತನ್ನ ಭಾವನೆಗಳು, ಅಭಿಪ್ರಾಯಗಳನ್ನು ಇತರರಿಗೆ ಸ್ಪಷ್ಟವಾಗಿ ಹೇಳುವುದನ್ನು ರೂಢಿಸಿಕೊಳ್ಳಬೇಕು. ಭಾವನಾತ್ಮಕವಾಗಿ ಸದೃಢರಾಗಲು ಒಂದಷ್ಟು ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು. ತಮಗೆ ಸಾಧ್ಯವೇ ಆಗುತ್ತಿಲ್ಲ ಎಂದಾದಾಗ ‘ಆಗಲ್ಲ’, ‘ಬೇಡ’ ಎಂದು ಹೇಳುವುದನ್ನು ಕಲಿಯಬೇಕು. ಇದರಿಂದ ಅತಿಯಾದ ಹೊರೆ ಹೊರುವುದು ತಪ್ಪುತ್ತದೆ. ಎಲ್ಲವನ್ನೂ ಗಲಾಟೆಯಿಂದಲೇ ನಿರ್ವಹಿಸಬೇಕಾಗಿಲ್ಲ. ಬಹಳ ಶಾಂತವಾಗಿ ಇದ್ದುಕೊಂಡು ಸಂಬಂಧಗಳು, ಭಾವನೆಗಳನ್ನು ನಿರ್ವಹಿಸುವ ಕಲೆಯನ್ನು ಕಲಿಯಬೇಕು.
ದೈಹಿಕ ಬದಲಾವಣೆಗಳಿಂದಲೂ ಮಾನಸಿಕ ಆರೋಗ್ಯ ಹದಗೆಡುತ್ತದೆ. ಅಂಥ ಸಂದರ್ಭಗಳು ಯಾವುವು, ಪರಿಹಾರವೇನು?
ಮಾಸಿಕ ಋತುಚಕ್ರದ ಸಮಯ, ಗರ್ಭಧಾರಣೆಗೆ ಮೊದಲು ಮತ್ತು ನಂತರ ಹಾರ್ಮೋನ್‌ಗಳ ಏರಿಳಿತದಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಆಗುವುದು ಸಹಜ. ತಮ್ಮ ಮಾನಸಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡರೆ ಏನಾಗುವುದೋ ಎಂಬ ಭಯದಿಂದ ಮೊದಲು ಹೊರಬರಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಸಹಾಯ ಪಡೆಯಬೇಕು. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯ.
ಸದಾ ಒತ್ತಡದಿಂದಲೇ ಬದುಕುವ ಹೆಣ್ಣುಮಕ್ಕಳು ಅದರಿಂದ ಹೊರಬರುವುದು ಹೇಗೆ?
ಒತ್ತಡದಲ್ಲಿ ಯಾಕೆ ಇರುತ್ತಾರೆ ಎನ್ನುವುದು ಮುಖ್ಯ. ಕೆಲವು ಬಗೆಯ ಒತ್ತಡಗಳನ್ನು ತಪ್ಪಿಸಬಹುದು. ಹಸಿ ಬಾಣಂತಿಗೆ ಒಂದು ಬಗೆಯ ಒತ್ತಡವಿದ್ದರೆ, 40 ವರ್ಷದ ಮಹಿಳೆಗೆ ಇನ್ನೊಂದು ಬಗೆಯ ಒತ್ತಡ ಇರುತ್ತದೆ. ಇಂತಹ ಸಂದರ್ಭಗಳನ್ನು ನಿಯಂತ್ರಿಸುವುದನ್ನು ಹಂತ ಹಂತವಾಗಿ ಕಲಿಯಬೇಕು. ಆದಷ್ಟೂ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ಹೆಜ್ಜೆ ಇಡುವುದು ಬಹಳ ಮುಖ್ಯ. ಹೆಣ್ಣುಮಕ್ಕಳು ತಮಗೆ ಲಭ್ಯವಿರುವ ಸಹಕಾರ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕು. ಈ ಸಹಕಾರ ಮನೆಯಿಂದಲೂ ಸಿಗಬಹುದು, ಸ್ನೇಹಿತರಿಂದಲೂ ಪಡೆದುಕೊಳ್ಳಬಹುದು.
ಪರಿಪೂರ್ಣತೆಯ ಗೀಳು ಆಕೆಯ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಪರಿಪೂರ್ಣತೆ ಸಾಧಿಸಬೇಕು ಎಂದುಕೊಂಡಿರುವುದು ಇಷ್ಟದ ಸಂಗತಿಯಾಗಿದ್ದರೆ, ಆ ಗೀಳಿನಿಂದ ಹೆಚ್ಚಿನ ಸಮಸ್ಯೆಯಾಗದು. ಆದರೆ, ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಂಡು, ತಾವು ಸಹ ಅವರಂತೆ ಪರಿಪೂರ್ಣರಾಗಬೇಕು ಎಂದು ಯೋಚಿಸಿದಾಗ ಅನವಶ್ಯಕ ಒತ್ತಡ ಉಂಟಾಗುತ್ತದೆ. ನಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸಾಮರ್ಥ್ಯ ಹಾಗೂ ಸಹಕಾರ ಇದ್ದಾಗಷ್ಟೇ ಚಲನಶೀಲರಾಗಿ ಇರಲು ಸಾಧ್ಯ. ಅವೆರಡನ್ನೂ ಪ್ರಜ್ಞಾಪೂರ್ವಕವಾಗಿ ಹೊಂದುವುದು ಮುಖ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.