ಹೃದಯಾಘಾತ
ಬೆಂಗಳೂರು: ಒಂದು ಕಾಲದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿದ್ದ ಹೃದಯಾಘಾತ ಪ್ರಕರಣಗಳು, ಈಗೀಗ 30 ಹಾಗೂ 40 ವರ್ಷ ವಯಸ್ಸಿನವರಲ್ಲೂ ಕಂಡು ಬರುತ್ತಿದೆ. ಅಷ್ಟೇ ಯಾಕೆ ಕೆಲವರಲ್ಲಿ ಇದು 20 ವರ್ಷಕ್ಕೆ ಕಾಣಿಸಿಕೊಳ್ಳುತ್ತಿದೆ. ಇದು ಕಳೆದ 5 ವರ್ಷದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಅನಾರೋಗ್ಯಕರ ಜೀವನಶೈಲಿ, ನಿದ್ರಾ ಹೀನತೆ, ಧೂಮಪಾನ ಹಾಗೂ ಅತಿಯಾದ ವಾಯುಮಾಲಿನ್ಯವೇ ಕಾರಣ ಎಂಬುದು ಹೃದ್ರೋಗ ತಜ್ಞರ ಅಭಿಪ್ರಾಯ.
ಹೃದಯಾಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಹೃದ್ರೋಗ ತಜ್ಞ ಡಾ. ಎನ್.ಸಿ. ಜ್ಞಾನದೇವ್, ‘ನನ್ನ ಬಳಿ ಬರುವ ರೋಗಿಗಳ ಪೈಕಿ ಸುಮಾರು ಶೇ 40 ರಿಂದ 50 ರಷ್ಟು ಜನರು 30 ರಿಂದ 45 ವಯಸ್ಸಿನ ಒಳಗಿನವರಾಗಿದ್ದಾರೆ. ಈ ಪ್ರಮಾಣ ಕಳೆದ 5 ವರ್ಷಗಳಲ್ಲಿ ಶೇ 10 ರಷ್ಟು ಹೆಚ್ಚಳವಾಗಿರುವುದನ್ನು ನಾನು ಗಮನಿಸಿದ್ದೇನೆ’ ಎಂದರು.
ನಮ್ಮ ಬಳಿಗೆ ಬರುವ ಹೃದಯಾಘಾತ ಪ್ರಕರಣಗಳಲ್ಲಿ ಶೇ 20 ರಷ್ಟು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಪ್ರಮಾಣ 20ರ ಹರೆಯದವರಲ್ಲೂ ಕಾಣಿಸಿಕೊಳ್ಳುವುದನ್ನು ನೋಡಲು ನಾವು ಹೆಚ್ಚು ದಿನ ಕಾಯಬೇಕಾಗಿಲ್ಲ. ‘ನನ್ನ ಅನುಭವದಲ್ಲಿ 40 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಕರಣಗಳು ಶೇ 40 ರಿಂದ 50ರಷ್ಟು ಹೆಚ್ಚಾಗಿದೆ’ ಎಂದು ಹೃದ್ರೋಗ ತಜ್ಞ ಡಾ. ಆರ್. ಅಮಿತ್ ತಿಳಿಸಿದರು.
ಅವರು ಇತ್ತೀಚೆಗೆ ಚಿಕಿತ್ಸೆ ನೀಡಿದವರಲ್ಲಿ, ಒಬ್ಬ 27 ವರ್ಷದ ಧೂಮಪಾನಿ, ಇನ್ನೊಬ್ಬ 24 ವರ್ಷದ ಟೈಪ್–1 ಮಧುಮೇಹಕ್ಕೆ ಒಳಗಾದವರು ಹಾಗೂ ಮತ್ತೊಬ್ಬರು ಪರೀಕ್ಷೆಗಳಿಂದ ಒತ್ತಡಕ್ಕೆ ಒಳಗಾದ 16 ವರ್ಷದ ಯುವಕನಾಗಿದ್ದಾನೆ. ಹಾಗಾಗಿ ಒತ್ತಡದಿಂದ ಹೃದಯಾಘಾತಗಳು ಎಲ್ಲಾ ವಯಸ್ಸಿನವರಲ್ಲೂ ಹೆಚ್ಚುತ್ತಿವೆ ಎಂದು ಅವರು ಎಚ್ಚರಿಸಿದರು.
ಜಡ ಜೀವನ ಶೈಲಿ ಹಾಗೂ ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ಜನರಲ್ಲಿ ಶೇ 30 ರಿಂದ 40ರಷ್ಟು ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಲಹೆಗಾರ ಮತ್ತು ಹೃದ್ರೋಗ ತಜ್ಞರಾಗಿರುವ ಡಾ. ಡಿ. ಚಿರಾಗ್ ತಿಳಿಸಿದರು. ಅನೇಕ ಯುವ ರೋಗಿಗಳಲ್ಲಿ ಕೇವಲ 4 ರಿಂದ 5 ಗಂಟೆಗಳ ಕಾಲ ನಿದ್ರಿಸುವುದರಿಂದ ಇದು ಹೆಚ್ಚಾಗಿ ಕಂಡು ಬಂದಿದೆ ಎಂದು ಡಾ. ಅಮಿತ್ ಹೇಳಿದರು.
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಧೂಮಪಾನದ ಜೊತೆಗೆ ನಿದ್ರಾ ಹೀನತೆ ಹೃದಯಾಘಾತಕ್ಕೆ ಪ್ರಮುಖ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಪಟ್ಟಿ ಮಾಡಿದೆ ಎಂದು ಮಾರತಹಳ್ಳಿ ಆಸ್ಪತ್ರೆಯ ಹೃದ್ರೋಗ ಶಾಸ್ತ್ರದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಶ್ರೀಕಾಂತ್ ಶೆಟ್ಟಿ ತಿಳಿಸಿದರು.
ವಾಯುಮಾಲಿನ್ಯ
ವಾಯುಮಾಲಿನ್ಯವೇ ಹೃದಯಾಘಾತಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಅಪಾಯದಲ್ಲಿದ್ದಾರೆ ಎಂದು ಡಾ. ಶೆಟ್ಟಿ ತಿಳಿಸಿದರು. ‘ಧೂಳು ಹೃದಯ ಮತ್ತು ಮಿದುಳಿನ ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ. ಬೆಂಗಳೂರಿನಂತ ಟ್ರಾಫಿಕ್‌ನಲ್ಲಿ ಸಂಚರಿಸುವವರಿಗೆ ಇದು ದಿನಕ್ಕೆ ಹಲವು ಸಿಗರೇಟ್ ಸೇದುವಷ್ಟು ಹಾನಿಕಾರಕವಾಗಿದೆ’ ಎಂದರು.
ಕಳೆದ 2 ವರ್ಷಗಳಲ್ಲಿ 30 ರ ಹರೆಯದ 10 ರಿಂದ 15 ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಚಾಲಕರಿಗೆ ಚಿಕಿತ್ಸೆ ನೀಡಿರುವುದಾಗಿ ಡಾ. ಅಮಿತ್ ಅವರು ತಿಳಿಸಿದರು. ಇವರಲ್ಲಿ ಇತರೆ ಅಪಾಯಕಾರಿ ಅಂಶಗಳು ಕಡಿಮೆ ಇದ್ದರೂ ಮಾಲಿನ್ಯಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಂಡಿರುವುದರಿಂದ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಧೂಮಪಾನ
30 ಮತ್ತು 40 ರ ಹರೆಯದ ಸುಮಾರು ಶೇ. 70 ರಿಂದ 80 ರಷ್ಟು ರೋಗಿಗಳು ಧೂಮಪಾನದಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದು ಡಾ. ಜ್ಞಾನದೇವ್ ತಿಳಿಸಿದ್ದಾರೆ. ಪರೋಕ್ಷ ಧೂಮಪಾನ (Passive smoking) ಕೂಡ ಅಷ್ಟೇ ಅಪಾಯಕಾರಿಯಾಗಿದ್ದು, ತನ್ನ ರೂಮ್ ಮೇಟ್‌ಗಳು ಹೆಚ್ಚು ಧೂಮಪಾನ ಮಾಡಿದ್ದರಿಂದ ಹೃದಯಾಘಾತಕ್ಕೊಳಗಾದ 25 ವರ್ಷದ ಧೂಮಪಾನಿಯಲ್ಲದ ವ್ಯಕ್ತಿಯೊಬ್ಬರನ್ನು ಡಾ. ಶೆಟ್ಟಿ ನೆನಪಿಸಿಕೊಂಡರು.
ಇದರ ಜೊತೆಗೆ ಗಾಂಜಾ, ಕೊಕೇನ್ ಕೂಡ ಹೃದಯಾಘಾತವನ್ನು ಉಂಟುಮಾಡಬಹುದು, ಕೆಲವೊಮ್ಮೆ ಸಿಗರೇಟ್‌ಗಳಿಗಿಂತ ಹೆಚ್ಚು ಅಪಯಾಕಾರಿಯಾಗುತ್ತವೆ ಎಂದು ಡಾ. ಶೆಟ್ಟಿ ಎಚ್ಚರಿಸಿದ್ದಾರೆ.
ಹೃದಯಾಘಾತ ಬಾರದಂತೆ ತಡೆಯುವುದು ಹೇಗೆ?
ಪ್ರತಿನಿತ್ಯ 7ರಿಂದ 8 ಗಂಟೆಗಳ ಕಾಲ ನಿರಂತರ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಬೇಕು. ತಡರಾತ್ರಿಯ ವರೆಗೆ ಮೊಬೈಲ್ ಸ್ಕ್ರೀನ್ ನೋಡುವುದನ್ನು ತಪ್ಪಿಸಬೇಕು.
ಮಧ್ಯಾಹ್ನದ ನಂತರ ಕಾಫಿ–ಟೀ ಸೇವನೆ ಕಡಿಮೆ ಮಾಡುವುದು ಉತ್ತಮ.
ನಿಯಮಿತ ವ್ಯಾಯಾಮ: ವಾರದಲ್ಲಿ ಐದು ದಿನ 30 ನಿಮಿಷಗಳ ಯೋಗ ಅಥವಾ ಧ್ಯಾನ ಮಾಡುವುದು ಉತ್ತಮ.
ಆಹಾರ: ಸಮತೋಲಿತ, ಆರೋಗ್ಯಕರ ಊಟ ಸೇವಿಸುವುದು. ಸಂಸ್ಕರಿಸಿದ, ಕೊಬ್ಬಿನ ಮತ್ತು ಸಕ್ಕರೆ ಆಹಾರವನ್ನು ಕಡಿಮೆ ಮಾಡಬೇಕು.
ಉತ್ತಮ ಜೊತೆಗಾರರನ್ನು ಪಡೆಯುವುದರ ಮೂಲಕ ಪರೋಕ್ಷ ಧೂಮಪಾನದಿಂದ ದೂರ ಇರುವುದು.
ವಾಯುಮಾಲಿನ್ಯ ತಪ್ಪಿಸಲು N–95 ಮಾಸ್ಕ್ ಧರಿಸಿ.
ಆರೋಗ್ಯದ ಅಪಾಯವನ್ನು ಮೊದಲೇ ಪತ್ತೆ ಹಚ್ಚಲು ಆಗಾಗ ಆರೋಗ್ಯ ತಪಾಸಣೆ ಮಾಡಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.