ADVERTISEMENT

ದೀಪಾವಳಿ: ಮೇಲು ಕೀಳೆಂಬ ಭೇದ ಅಳಿಸುವ ‘ಆಣೀ–ಪೀಣಿ’

ಕಲಾವತಿ ಬೈಚಬಾಳ
Published 20 ಅಕ್ಟೋಬರ್ 2025, 9:52 IST
Last Updated 20 ಅಕ್ಟೋಬರ್ 2025, 9:52 IST
   

ಜನಪದ ಎಂಬುದು ಜನರ ಉಸಿರು, ಜೀವನಾಡಿ, ಅನುಭವಾಮೃತ. ನಮ್ಮ ಜನಪದ ಕಲೆ ಮತ್ತು ಸಂಸ್ಕೃತಿ ಆರಾಧನಾ ಮನೋಭಾವದ ಪ್ರತೀಕವೇ ಈ ದೀಪಗಳ ಹಬ್ಬ. ಸೂರ್ಯ, ಚಂದ್ರ, ಭೂಮಿ, ಆಕಾಶ, ಮಣ್ಣು ಗಿಡ–ಮರ ಹಾಗೂ ಪ್ರಾಣಿ–ಪಕ್ಷಿಗಳಲ್ಲಿ ದೇವರನ್ನು ಕಾಣುವ ಜನಪದರು ಕಾಲಕ್ಕೆ ಅನುಗುಣವಾಗಿ ಎಲ್ಲ ಆಚರಣೆಗಳನ್ನು ಪರಂಪರೆಯಿಂದಲೂ ವಿಧಿವತ್ತಾಗಿ ಆಚರಿಸಿಕೊಂಡು ಬಂದಿದ್ದಾರೆ. ದೀಪ ಜನಪದರ ತಿಳಿವಳಿಕೆಯಲ್ಲಿ ಮಹತ್ವದ್ದಾಗಿದೆ. ಇದು ಸಾರ್ಥಕ ಬದುಕಿನ ಜೀವಂತಿಕೆಯ ಸಂಕೇತ.

ಹಣತೆಗಳ ಹಬ್ಬ ದೀಪಾವಳಿಯು ದೀಪಗಳಿಗಷ್ಟೇ ಪ್ರಾಮುಖ್ಯತೆ ಪಡೆದಿಲ್ಲ. ರೈತರ ಒಡನಾಡಿಗಳಾಗಿ ನಿತ್ಯದ ಬದುಕಿನೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆ ಹಾಕುವ ದನಕರುಗಳನ್ನು ಪೂಜಿಸುವ ಹಬ್ಬವೂ ಆಗಿದೆ. ಬಂಧು ಬಾಂಧವರೊಂದಿಗೆ ಸಹಬಾಳ್ವೆ ನಡೆಸುವುದನ್ನೂ ಸಾರುತ್ತದೆ. ಜನಪದರು ಹಬ್ಬದ ಆಚರಣೆಗಳನ್ನು ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದು, ಸಾಂಪ್ರದಾಯಿಕ ಆಚರಣೆಗಳನ್ನು ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಕಾಣಬಹುದು. 

ದೀಪಾವಳಿಯ ನಾಲ್ಕೈದು ದಿನ ವಿವಿಧ ಉಪ ಆಚರಣೆಗಳನ್ನು ಮಾಡುವ ವೇಳೆಯಲ್ಲಿ ‘ಆಣೀ–ಪೀಣಿ’ಯೂ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದು ಬಂದಿದೆ. ರೈತನ ಒಡನಾಡಿಗಳಾದ ದನಕರುಗಳಿಗೆ ರೋಗ, ರುಜಿನಗಳು ಬಾಧಿಸದಿರಲಿ, ಪಶು ಸಂತಾನ ಬೆಳೆಯಲಿ ಎಂಬುದೇ ಈ ಆಚರಣೆಯ ಮುಖ್ಯ ಉದ್ದೇಶ.

ADVERTISEMENT

ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಈ ಆಚರಣೆ ಹೆಚ್ಚಾಗಿದೆ. ಆಣೀ-ಪೀಣಿ ಆಚರಣೆ ಮಲೆನಾಡಿನ ಅಂಟಿಕೆ-ಪಂಟಿಕೆ ಸಂಪ್ರದಾಯಕ್ಕಿಂತ ಭಿನ್ನವಾಗಿದೆ. ಆಣೀ-ಪೀಣಿಯನ್ನು ಕೆಲವು ಕಡೆ ‘ಅವಂಟಿಗೋ–ಪವಂಟಿಗೋ’, ‘ಆಡಿ–ಪಿಡೀ’, ‘ಅಂಟಿ–ಸುಂಟಿ’ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ಆಣೀ–ಪೀಣಿ ದೀಪ:

ದನ ಕಾಯುವ ಅಥವಾ ಕುರಿ ಕಾಯುವ ಹುಡುಗರು ದೀಪಾವಳಿಯ ಪಾಡ್ಯದಂದು ಬೆಳಗಿನ ಜಾವ ಅಕ್ಕ–ತಂಗಿಯರಿಂದ ಆರತಿ ಬೆಳಗಿಸಿಕೊಂಡು ಹಳ್ಳ/ ಅಡವಿಗೆ ಹೋಗಿ ಆಣೀ–ಪೀಣಿ ದೀಪ ಸಿದ್ಧಗೊಳಿಸುವಲ್ಲಿ ನಿರತರಾಗುತ್ತಾರೆ. ಹಳ್ಳದ ದಂಡೆಯಲ್ಲಿ ಬೆಳೆದ ಹುಲ್ಲಿನಿಂದ ಐದು, ಏಳು ಅಥವಾ ಹನ್ನೊಂದು ನಾಗರಹಾವಿನ ಹೆಡೆಗಳ ಮಾದರಿಯಲ್ಲಿ ಗೂಡು/ ಬುಟ್ಟಿ ರೂಪಿಸುತ್ತಾರೆ. ಅದರಲ್ಲಿಯೇ ಹಣತೆ ಇಟ್ಟು, ಹೆಡೆಗಳ ಕೆಳಗುಳಿದ ಹುಲ್ಲನ್ನು ಒಟ್ಟಿಗೆ ಕಟ್ಟಿ, ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಸಿಂಬಿ ಕಟ್ಟುತ್ತಾರೆ. ಇದೇ ಆಣೀ–ಪೀಣಿ ದೀಪ.

ಸಂಜೆ ಮನೆಗೆ ಬರುವಾಗ ಕೈಯಲ್ಲಿ ದೀಪ ಹಿಡಿದುಕೊಂಡು ಬರುವ ಯುವಕರ ಗುಂಪು, ಗ್ರಾಮದಲ್ಲಿ ದನಕರುಗಳಿರುವವರ ಮನೆಗೆ ತೆರಳಿ ಜಾನುವಾರುಗಳಿಗೆ ಆರತಿ ಬೆಳಗಲಾಗುತ್ತದೆ.

ಹೋರಿ ಹೋರಿ ಹ್ಯಾಂಗಿರಬೇಕು
ನಾರಿನ ಮುಗುಡ ಹಾಕಿರಬೇಕು,
ಗೆಜ್ಜೆ ಕಟ್ಟಿ ಘೋಳಾಡಿಸಬೇಕು
ಗಳಾ ಕಟ್ಟಿ ಉಡಾಸ ಬೇಕೊ
ಆಣಿ ಪೀಣಿ ಜಾಂದೇ,
ಸೇರು ಕೊಬ್ಬರಿ ಫಿರಾಂದೆ..

ಹಂಡಾಕಳಾ ಬಂಡಾಕಳಾ
ಕನಕಪ್ಪನ ಕರಿ ಆಕಳಾ
ಗುಡ್ಡಾವೇರಿ ಬರುವಾಗ ಕಳ್ಳಾರು ಕಂಡಾರೂ
ಕಳ್ಳರ ಕೈಯಾಗ ಬೆಳ್ಳಿಯ ಕುಡಗೋಲು
ಬೆಳ್ಳಿಯ ಕುಡಗೋಲು ಮಾರ ಮಾರ ಹುಲ್ಲು
ಮಾರ ಮಾರ ಹುಲ್ಲಿಗೆ ಬೋರ ಬೋರ ಹಾಲು
ಬೋರ ಬೋರ ಹಾಲಿಗೆ ಕಣ್ಣಿ ಕಣ್ಣಿ ಮೊಸರು
ಕಣ್ಣಿ ಕಣ್ಣಿ ಮೊಸರಿಗಿ, ಕಳಕಳ ತುಪ್ಪ
ಕಳಕಳ ತುಪ್ಪಕ್ಕ ಬಳಾಬಳಾ ರೊಕ್ಕ
ಆಣೀಪೀಣಿ ಜಾಣೆಗೊ ನಿಮ್ಮ ಎತ್ತಿನ ಪೀಡಾ ಹೊಳೆಯಾಚಕೊ… ಎಂದು ಹಾಡುತ್ತಾರೆ. ಆ ಮನೆಯ ದನ, ಕರು, ಬೆಳೆ, ಬೇಸಾಯಕ್ಕೆ ಒಳಿತಾಗಲೆಂದು ಹಾರೈಸಿ ಮುಂದಿನ ಮನೆಗೆ ತೆರಳುತ್ತಾರೆ.

ಅರಸನ ಕೈಯಾಗ, ಬೆಳ್ಳಿಯ ಕುಡಗೋಲ
ಬೆಳ್ಳಿಯ ಕುಡಗೋಲಿಗಿ ಮಾರ ಮಾರ ಹುಲ್ಲ
ಮಾರ ಮಾರ ಹುಲ್ಲಿಗಿ ಗೆಜ್ಜಿ ಕಟ್ಟಿದೆಮ್ಮಿ
ಗೆಜ್ಜಿ ಕಟ್ಟಿದೆಮ್ಮಿಗಿ ಸರ್ ಬುರ್ ಹಾಲು
ಸರ್ ಬುರ್ ಹಾಲಿಗೆ ಕೆನಿ ಕೆನಿ ಮೊಸರು
ಕೆನಿ ಕೆನಿ ಮೊಸರಿಗಿ ಗಮ್ ಗಮ್ ತುಪ್ಪ
ಗಮ್ ಗಮ್ ತುಪ್ಪಕ್ಕ ಬಳಕೊ ರೊಕ್ಕ.. ಎಂದು ಹರಸುತ್ತಾರೆ.  

ಇಂಥ ಹಲವಾರು ಆಣಿ-ಪೀಣಿ ಹಾಡುಗಳಲ್ಲಿ ದೇವಸ್ತುತಿ, ಕರುವಿನ ಹಾಡು, ಆಕಳ ಪದಗಳು, ಎಮ್ಮೆ, ಹೋರಿ, ಎತ್ತಿನ, ಗೂಳಿಯ ಪದಗಳು, ಆಡು, ಕುದುರೆ, ಕೋಣದ ಪದಗಳು, ವಿಚಾರಣೆ ಹಾಗೂ ಸ್ವಾಭಿಮಾನದ ಪದಗಳೆಂಬ ಹಲವಾರು ಪ್ರಭೇದಗಳಿವೆ.

ಮೂರು ದಿನಗಳ ಕಾಲ ನಡೆಯುವ ಈ ಜಾನಪದ ಉತ್ಸವದ ಕೊನೆಯ ದಿನ ದೀಪ ಬೆಳಗಿದ ಎಲ್ಲ ಮನೆಗೂ ಹೋಗಿ ಕೊಬ್ಬರಿ, ವಸ್ತ್ರ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಪಡೆದು ದೀಪವನ್ನು ಹೊಳೆಯಲ್ಲಿ ಹರಿಬಿಡುತ್ತಾರೆ.

ಇಂಥ ಮಹತ್ವದ ಸಾಂಪ್ರದಾಯಿಕ ಆಚರಣೆಯೊಂದು ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿದ್ದು, ಕೆಲವೇ ಕೆಲವು ಹಳ್ಳಿಗಳಲ್ಲಿ ರೂಢಿಯಲ್ಲಿರುವುದು ಈ ಹೊತ್ತಿನ ಸಾಂಸ್ಕೃತಿಕ ದುರಂತವೇ ಸರಿ. ಆದ್ದರಿಂದ ಈ ಆಚರಣೆ ಕುರಿತ ವಿಸ್ತೃತ ಅಧ್ಯಯನ ಹಾಗೂ ದಾಖಲೀಕರಣದ ಕೆಲಸವಾಗಬೇಕಿದೆ.

ಇದು ದನಗಳ ಹಾಡು, ಬೆಳಗುವ ಹಬ್ಬ. ದನಗಳಿಗೂ ಮನುಷ್ಯರಂತೆ ಗೌರವಿಸುವ ಸದ್ಭಾವದ ಪ್ರತೀಕ. ಭಕ್ತಿ ಕೇಂದ್ರವಾದ ಈ ಸಂಪ್ರದಾಯ ರೂಢಿಗತವಾಗಿದ್ದರೂ ಎಲ್ಲ ಪರಂಪರಾಗತ ಆಚರಣೆಗಳು ಮರೆಯಾಗುತ್ತಿರುವಂತೆ ಆಣಿ-ಪೀಣಿ ಕೂಡಾ ಮರೆಯಾಗುತ್ತಿರುವುದು ವಿಷಾದದ ಸಂಗತಿ.

ಈ ಆಚರಣೆ ಸಹಬಾಳ್ವೆ, ಸಾಮರಸ್ಯ ಸಾರುವುದರ ಜೊತೆಗೆ ಮೇಲು, ಕೀಳೆಂಬ ಭೇದವನ್ನು ತೊಡೆದು ಹಾಕುವುದರ ಸಂಕೇತವೂ ಆಗಿದೆ. ಇಂದಿನ ಮಕ್ಕಳಿಗೂ ನಮ್ಮ ಜನಪದರ ಆಚರಣೆ, ಸಂಪ್ರದಾಯಗಳ ಬಗ್ಗೆ ತಿಳಿ ಮೂಡಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಜನಪದವನ್ನು ಉಳಿಸಿ, ಬೆಳೆಸೋಣ ಎನ್ನುವ ಮಾತು ವಿಜಯಪುರದ ಜನಪದ ವಿದ್ವಾಂಸ ಹಾಗೂ ಪಶು ವೈದ್ಯಾಧಿಕಾರಿಯೂ ಆಗಿರುವ ಡಾ.ಶಂಕರ ಬಿ. ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.