ತಿಂದುಂಡು ಸಂಭ್ರಮಿಸುವುದಷ್ಟೇ ಅಲ್ಲ, ಬಂಧು ಬಾಂಧವರಿಗೆ, ನೆರೆಹೊರೆಯವರಿಗೆ ಫಳಾರ ಹಂಚುತ್ತ, ಜೀವನದ ಸವಿಯನ್ನೇ ನೀಡುವ ಹಬ್ಬ ಇದು ದೀಪಾವಳಿ.
ದಸರಾ ಮುಗಿದ ಕೂಡಲೇ ಒಂದೆರಡು ದಿನಗಳ ವಿರಾಮದ ನಂತರ ಆರಂಭವಾಗುತ್ತದೆ, ದೀಪಾವಳಿಯ ತಯಾರಿ. ದೀಪಾವಳಿಯ ಅತಿ ದೊಡ್ಡ ಸಂಭ್ರಮವೆಂದರೆ ಫಳಾರ ಬೀರುವುದು.
ಉತ್ತರ ಕರ್ನಾಟಕದಲ್ಲಿ ಇದನ್ನು ಫರಾಳವೆಂದೂ ಕರೆಯುತ್ತಾರೆ. ಫಲಾಹಾರದ ಅಪಭ್ರಂಶ ಈ ಫಳಾರ ಮತ್ತು ಫರಾಳ.
ಅವಲಕ್ಕಿ ಚೂಡಾ, ಚುರುಮುರಿ ಚೂಡಾ ಕಾಯಂ ಇರುತ್ತವೆ. ಜೊತೆಗೆ ಚಕ್ಕುಲಿ, ಕೋಡುಬಳೆ, ಎಳ್ಳುಂಡೆ, ಬೇಸನ್ ಉಂಡೆ, ಹೆಸರುಂಡೆ, ಶೇಂಗಾ ದುಂಡಿ, ಗೋದಿ ಹಿಟ್ಟಿನ ಉಂಡೆಗಳಿಗೂ ಕಾಯಂ ಜಾಗ.
ಈ ಫಳಾರ ಮಾಡಿ ತಿನ್ನುವುದಕ್ಕಿಂತಲೂ ಹಂಚುವುದರಲ್ಲಿಯೇ ಹೆಚ್ಚಿನ ಸುಖ ಕಾಣುತ್ತಾರೆ.
ಯಾರು ಎಷ್ಟು ಮನೆಗೆ ಫಳಾರ ಹಂಚಬೇಕು? ಯಾರು ಯಾರಿಗೆ ಎಷ್ಟೆಷ್ಟು ಹಂಚಬೇಕು ಎಂಬ ಲೆಕ್ಕದಲ್ಲಿಯೇ ಈ ತಿಂಗಳ ದಿನಸಿ ಬರೆಯಿಸಲಾಗಿರುತ್ತದೆ. ಬೆಲ್ಲ, ಶೇಂಗಾ, ಪುಠಾಣಿ, ಒಣಕೊಬ್ಬರಿಗಳದ್ದೇ ದಿನಸಿಪಟ್ಟಿಯಲ್ಲಿ ಪಾರಮ್ಯ.ಮೆರೆಯುತ್ತವೆ.
ಚಳಿಗಾಲದ ಆರಂಭಿಕ ದಿನಗಳಲ್ಲಿ ಅವಲಕ್ಕಿ ಗರಿಗರಿಯಾಗಿಸಲು ಸಾಕಷ್ಟು ತಯಾರಿ ಮಾಡಬೇಕಾಗುತ್ತದೆ. ತಾರಸಿ ಮೇಲೆ ಪೇಪರ್ ಹಾಸಿ, ಬಿಸಿಲಿಗೆ ಅವಲಕ್ಕಿ ಒಣಹಾಕಿ, ಮೇಲೊಂದು ತೆಳುವಾದ ದುಪಟ್ಟಾ ಅಥವಾ ಪಂಚೆಯನ್ನೋ ಮುಚ್ಚಿರುತ್ತಾರೆ. ಗಾಳಿಗೆ ದೂಳು ತಾಕದಿರಲಿ, ಹಕ್ಕಿ ಹಾರುವಾಗ ಪಿಕ್ಕೆ ಹಾಕದಿರಲಿ ಎಂದು. ಕೆಲವರಂತೂ ದೊಡ್ಡ ಬಾಣಲೆ ಇಟ್ಟು, ಸಣ್ಣ ಉರಿಯಲ್ಲಿ ಹುರಿದುಕೊಳ್ಳುತ್ತಾರೆ. ತಾರಸಿ ಇರದವರು, ಬಾಣಲೆ ಇಡುವಷ್ಟು ದೊಡ್ಡದಾದ ಅಡುಗೆ ಮನೆ ಇರದವರು ತಮ್ಮ ಮೈಕ್ರೊ ಓವನ್‌ನಲ್ಲಿ ಏರ್ ಫ್ರೈಯರ್‌ನಲ್ಲಿ ಅವಲಕ್ಕಿಯನ್ನು ಬಿಸಿ ಮಾಡಿಕೊಳ್ಳುತ್ತಿದ್ದಾರೆ.
ಗರಿಗರಿಯಾದಷ್ಟೂ ರುಚಿ ಹೆಚ್ಚು.ಇವುಗಳಿಗೆ ಶೇಂಗಾ, ಪುಠಾಣಿ, ಒಣಕೊಬ್ಬರಿ, ಬಿಳಿ ಎಳ್ಳು, ಆದಷ್ಟೂ ಎಣ್ಣೆಕಾಳುಗಳನ್ನು ಹಾಕಿ ಒಗ್ಗರಣೆ ಹಾಕುತ್ತಾರೆ. ಫಳಾರದ ತಟ್ಟೆಯಲ್ಲಿ ಅವಲಕ್ಕಿ ಮತ್ತು ಥರೇವಾರಿ ಉಂಡೆಗಳದ್ದೇ ಕಾರುಬಾರು. ಐದು ಖಾರದ ತಿಂಡಿಗಳೂ, ಐದು ಬಗೆಯ ಸಿಹಿ ತಿನಿಸುಗಳೂ ಇರಬೇಕು ಎನ್ನುವುದು ಸಂಪ್ರದಾಯ. ಅವಲಕ್ಕಿ, ಕರಜೀಕಾಯಿ ಕಾಯಂ ಖಾದ್ಯಗಳು. ಉಳಿದಂತೆ ಬೇಸನ್ ಲಾಡು, ಹೆಸರುಂಡೆ, ಕರದೊಡಿ, ಶಂಕರಪಾಳಿ ಇವುಗಳಲ್ಲಿ ತಮಗೆ ಹದವಾಗಿ ಮಾಡಲು ಬರುವ ತಿಂಡಿಗಳನ್ನೇ ಮಾಡುತ್ತಾರೆ. ಹಂಚುತ್ತಾರೆ. ಒಂದೇ ಊರಲ್ಲಿ ಸಹೋದರರ ಮನೆಗಳಿದ್ದರೆ, ಬಂಧು ಬಾಂಧವರ ಮನೆಗಳಿದ್ದರೆ ತಿಂಡಿಗಳನ್ನು ಹಂಚಿಕೊಳ್ಳುತ್ತಾರೆ. ಯಾರ ಮನೆಯಲ್ಲಿ ಯಾವ ತಿಂಡಿ ಆಗಬೇಕು, ಅದೆಷ್ಟು ವಿನಿಮಯವಾಗಬೇಕು ಎಂಬುದನ್ನು ಮೊದಲೇ ಮಾತಾಡಿಕೊಳ್ಳುತ್ತಾರೆ. ಶ್ರಮದ ತಿಂಡಿಗಳಾದರೆ ಒಂದೆರಡು ದಿನ ಒಂದೇ ಮೆನಯಲ್ಲಿ ಸೇರಿ ಎಲ್ಲ ಫಳಾರವನ್ನೂ ಮಾಡಿಕೊಳ್ಳುತ್ತಾರೆ.
ಮೊದಲೆಲ್ಲ ತಾಟುಗಳಲ್ಲಿ ತಿಂಡಿಗಳನ್ನು ಹೊಂದಿಸಿ, ಬೀರಲು ಕಳುಹಿಸುತ್ತಿದ್ದರು. ಬೀರುವುದೆಂದರೆ ಬಂಧು ಬಾಂಧವರ ಮನೆಗೆ ತಿಂಡಿಗಳಿರುವ ತಟ್ಟೆಗಳನ್ನು ಹಂಚಿಬರುವುದು. ಇದೀಗ ದೂರದ ಮನೆಗಳಿಗೆ ಕೊಡಲು ಹೋಗಬೇಕಾಗುವುದರಿಂದ ತಿಂಡಿಯ ತಟ್ಟೆಗಳ ಬದಲಿಗೆ ಪೌಚುಗಳು, ಪ್ಯಾಕಿಂಗ್ ಮಾಡುವ ಡಬ್ಬಿಗಳೂ ಬಂದಿವೆ. ಮನೆಯಲ್ಲಿರುವ ವಯಸ್ಸಿನ ಮಕ್ಕಳಿಗೆ ಇವನ್ನೆಲ್ಲ ಪ್ಯಾಕ್ ಮಾಡುವುದು ಮತ್ತು ಹಂಚಿ ಬರುವುದೇ ಕೆಲಸ.
ಹುಡುಗರಿಗಂತೂ ಬೈಕಿಗೆ ಪೆಟ್ರೋಲು ಹಾಕಿಸಬೇಕು ಎಂಬ ಕರಾರಿನೊಂದಿಗೆ, ಅಪ್ಪನ ಕಾರಿನ ಕೀಲಿಯನ್ನೂ ಇಸಿದುಕೊಳ್ಳುತ್ತ ಡ್ರೈವಿಂಗ್ ಮತ್ತು ರೈಡಿಂಗ್‌ನ ಪೂರ್ಣ ಸುಖ ಅನುಭವಿಸುತ್ತಾರೆ. ಮಗ ದೊಡ್ಡವನಾದ ಎಂಬ ಅಮ್ಮನ ಕಕ್ಕುಲಾತಿ, ಅಪ್ಪನ ಹೆಮ್ಮೆ ಎರಡನ್ನೂ ಅನುಭವಿಸುವ ಹಬ್ಬವಿದು.
ಹೆಣ್ಣುಮಕ್ಕಳಿರುವ ಮನೆಯಲ್ಲಿ ಲಕುಮಿ, ಅನ್ನಪೂರ್ಣೆಯರಂತೆ ಸಿಂಗರಿಸಿಕೊಂಡು ಸರಭರ ಸರಭರ ಅಡ್ಡಾಡುತ್ತಿದ್ದರೆ ಹಬ್ಬವೇ ಮೈದಳೆದಂತೆ ಕಾಣುತ್ತಾರೆ.
ಕೊಡುಕೊಳ್ಳುವ ಫಳಾರ ಹಂಚಿ ಉಣ್ಣುವುದರೊಂದಿಗೆ ಪ್ರೀತಿಯನ್ನೂ ಹಂಚುವುದು ಕಲಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.