
ಮಹಾರಾಷ್ಟ್ರದ ಚರಣಂದ್ರಿ ಬೆಟ್ಟಗಳ ಹೃದಯಭಾಗದಲ್ಲಿ, ಡೆಕ್ಕನ್ ಬಯಲಿನತ್ತ ಪಶ್ಚಿಮಮುಖವಾಗಿ ನಿಂತಿರುವ ಬೃಹತ್ ಶಿಲಾಸಮೂಹಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಮೌನವಾಗಿ ನಿವೇದಿಸುತ್ತಿವೆ. ಆ ಮೌನದ ಒಳಗೆ ಕಾಲದ ಶಿಲ್ಪಗಳ ಉಸಿರಾಟ ಕೇಳಿಸಿಕೊಳ್ಳುವ ಸ್ಥಳವೇ ಎಲ್ಲೋರಾ ಗುಹೆಗಳು. ಇವು ಬಂಡೆಗಳನ್ನು ಹೊರಗಿನಿಂದ ಕಟ್ಟಿ ನಿರ್ಮಿಸಿದ ದೇವಾಲಯಗಳಲ್ಲ; ಬೆಟ್ಟವನ್ನೇ ಒಳಗಿನಿಂದ ಕೊರೆದು ಸೃಷ್ಟಿಸಿದ ದಿವ್ಯ ಲೋಕ. ಸುಮಾರು 350 ವರ್ಷಗಳ ಅವಧಿಯಲ್ಲಿ–ಕ್ರಿ.ಶ. 6ನೇ ಶತಮಾನದಿಂದ 10ನೇ ಶತಮಾನದವರೆಗೆ ಈ ಅದ್ಭುತ ಗುಹಾಲಯ ಸಂಕೀರ್ಣ ರೂಪುಗೊಂಡಿದೆ.
ಒಟ್ಟು 34 ಗುಹೆಗಳು ಇಲ್ಲಿವೆ. ಅವುಗಳಲ್ಲಿ 12 ಬೌದ್ಧ (ಕ್ರಿ.ಶ. 550–750), 17 ಹಿಂದೂ (ಕ್ರಿ.ಶ. 600–975) ಮತ್ತು 5 ಜೈನ (ಕ್ರಿ.ಶ. 800–1000) ಪರಂಪರೆಗೆ ಸೇರಿವೆ. ಈ ವೈವಿಧ್ಯವೇ ಎಲ್ಲೋರಾದ ವಿಶೇಷ. ಒಂದೇ ಬೆಟ್ಟದ ಒಳಗೆ ಮೂರು ಧರ್ಮಗಳ ಕಲಾತ್ಮಕ ಅಭಿವ್ಯಕ್ತಿ–ಸಹಬಾಳ್ವೆಯ ಶಿಲಾ ಸಾಕ್ಷ್ಯ.
ಎಲ್ಲೋರಾದಲ್ಲಿ ಪ್ರವಾಸಿಗರು ಹೆಚ್ಚಾಗಿ ಹೆಜ್ಜೆಗಳನ್ನು ಹಾಕುವುದು ಸಂಖ್ಯೆ 16 ರ ಗುಹೆಯತ್ತ. ಇದು ಶಿವನ ವಾಸಸ್ಥಾನವಾದ ಕೈಲಾಸವನ್ನು ಪ್ರತಿನಿಧಿಸುವ ದೇವಾಲಯ. ಜಗತ್ಪ್ರಸಿದ್ಧವಾದ ಕೈಲಾಸ ದೇವಾಲಯ ವಿಶ್ವದ ಅತ್ಯಂತ ಶ್ರೇಷ್ಠ ಏಕಶಿಲಾ ನಿರ್ಮಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮೇಲಿನಿಂದ ಕೆಳಗೆ ಕೊರೆದು ರೂಪಿಸಿದ ಈ ಮಹಾಕಾರ್ಯ ಶಿಲ್ಪಿಗಳ ತಾಳ್ಮೆ ಮತ್ತು ತಾಂತ್ರಿಕ ನಿಪುಣತೆಯ ಪರಾಕಾಷ್ಠೆ. ರಾಷ್ಟ್ರಕೂಟ ರಾಜರ ಆಶ್ರಯದಲ್ಲಿ ಏಳು ತಲೆಮಾರುಗಳ ಶಿಲ್ಪಿಗಳು ಈ ಕಾರ್ಯದಲ್ಲಿ ತೊಡಗಿಕೊಂಡರೆಂದು ಹೇಳಲಾಗುತ್ತದೆ.
ಇಲ್ಲಿನ ವಿಶೇಷವೆಂದರೆ; ಹೊರಗಿನಿಂದ ತರಲಾದ ಯಾವುದೇ ಶಿಲ್ಪವನ್ನು ತಂದು ಸ್ಥಾಪಿಸಿಲ್ಲ. ಬೆಟ್ಟದ ಬಂಡೆಯನ್ನೇ ಮೃದುವಾಗಿ, ಶ್ರದ್ಧೆಯಿಂದ ಕೆತ್ತಿ ದೇವ–ದೇವತೆಗಳ ಅನೇಕ ಮೂರ್ತಿಗಳನ್ನು ರೂಪಿಸಲಾಗಿದೆ. ಕಲ್ಲು ಇಲ್ಲಿ ಕೇವಲ ದ್ರವ್ಯವಲ್ಲ; ಅದು ಭಾವ, ಅದು ಭಕ್ತಿ, ಅದು ಶಿಲ್ಪಿಯ ಉಸಿರು.
ಆದರೆ ಎಲ್ಲೋರಾದ ಆತ್ಮವನ್ನು ಅರಿಯಲು ಕೇವಲ ಕೈಲಾಸನಾಥ ದೇವಾಲಯ ಸಾಕಾಗುವುದಿಲ್ಲ. ಗುಹೆ ಸಂಖ್ಯೆ 10 ಬೌದ್ಧ ಧರ್ಮಕ್ಕೆ ಸೇರಿದ ಚೈತ್ಯ ಮಂಟಪ ಮತ್ತೊಂದು ಅನುಭವದ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ದೇವ ಶಿಲ್ಪಿ ವಿಶ್ವಕರ್ಮನ ಹೆಸರಿನಿಂದ ಕರೆಯಲಾಗುವ ಈ ಏಕಶಿಲಾ ಗುಹಾಲಯದ ಮುಂಭಾಗ ಕಲಾತ್ಮಕ ಕೆತ್ತನೆಗಳಿಂದ ಅಲಂಕರಿಸಲಾಗಿದೆ.
ಕ್ರಿ.ಶ. 7ನೇ ಶತಮಾನದಲ್ಲಿ ನಿರ್ಮಿತವಾದ ಈ ಚೈತ್ಯಾಲಯದಲ್ಲಿ ಧರ್ಮಚಕ್ರ ಮುದ್ರೆಯಲ್ಲಿ ಉಪದೇಶಿಸು
ತ್ತಿರುವ 15 ಅಡಿ ಎತ್ತರದ ಬುದ್ಧನ ವಿಗ್ರಹವಿದೆ. ಮೇಲಿನ ಮಹಡಿಯಲ್ಲಿ ‘ತಥಾಗತ’ನ ಉಲ್ಲೇಖವಿರುವ ಪಾಲಿ ಭಾಷೆಯ ಶಾಸನವೂ ಕಾಣಿಸುತ್ತದೆ. ಕುದುರೆಯ ಲಾಳದ ಆಕಾರದ ಕಿಟಕಿಯ ಮೂಲಕ ಒಳನುಗ್ಗುವ ಬೆಳಕು ನೇರವಾಗಿ ಬುದ್ಧನ ಮುಖದ ಮೇಲೆ ಬೀಳುತ್ತದೆ. ಆ ಮೃದುವಾದ ಅರೆಬೆಳಕಿನಲ್ಲಿ ಬುದ್ಧನ ಶಾಂತ ಮುಖಭಾವ ಮನಸ್ಸಿನೊಳಗಿನ ಗೊಂದಲವನ್ನೇ ಕರಗಿಸುವಂತೆ ಅನಿಸುತ್ತದೆ.
ಗುಹೆಯ ಒಳಗೆ 18 ಅಷ್ಟಭುಜಾಕೃತಿಯ ಕಂಬಗಳು. ಅವುಗಳ ಮೇಲೆ ಎರಡು ಹಂತಗಳಲ್ಲಿ ಕೆತ್ತಿದ ವಿವಿಧ ಮೂರ್ತಿಗಳು ಕಣ್ಣಿಗೆ ಹಬ್ಬ. ಮರದ ತುಂಡುಗಳನ್ನು ಜೋಡಿಸಿ ಮಾಡಿರುವಂತೆ ಕಾಣುವ ಚಾವಣಿಯ ವಿನ್ಯಾಸವು ಕಲ್ಲಿನಲ್ಲೇ ಮೂಡಿರುವ ಶಿಲ್ಪಕೌಶಲ್ಯಕ್ಕೆ ಸಾಕ್ಷಿ. ಒಳಗೆ ಮಾತನಾಡಿದರೆ ಅದು ಅನುರಣಿತವಾಗಿ ಹಲವು ಬಾರಿ ಮರಳಿ ಬರುತ್ತದೆ. ‘ಓಂ’ ಎಂಬ ಮಂತ್ರೋಚ್ಚಾರಣೆ ಇಲ್ಲಿ ಅಲೌಕಿಕ ಅನುಭೂತಿ ನೀಡುತ್ತದೆ.
ಎಲ್ಲೋರಾ ಕೇವಲ ಪುರಾತತ್ವ ತಾಣವಲ್ಲ; ಇದು ಜೀವಂತ ಭಕ್ತಿಯ ಕೇಂದ್ರವೂ ಹೌದು. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗ್ರೀಶ್ನೇಶ್ವರ ದೇವಾಲಯ ಇಲ್ಲಿಯೇ ನೆಲೆಗೊಂಡಿದೆ. ಮಹಾರಾಷ್ಟ್ರದ ಐದು ಜ್ಯೋತಿರ್ಲಿಂಗ
ಗಳಲ್ಲಿ ಒಂದಾಗಿರುವ ಈ ಕ್ಷೇತ್ರ ಅನೇಕ ಶತಮಾನಗಳಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. ಹಿಂದಿನ ದಿನಗಳಲ್ಲಿ ಕೆಲವು ಗುಹೆಗಳಲ್ಲಿ ಯೋಗಿಗಳು ತಪಸ್ಸು ಮಾಡುತ್ತಿದ್ದರೆಂದು ಸ್ಥಳೀಯ ಕತೆಗಳು ಹೇಳುತ್ತವೆ.
ಮಹಾರಾಷ್ಟ್ರದ ಔರಂಗಾಬಾದ್ ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಎಲ್ಲೋರಾ, ಪ್ರವಾಸಿಗರಿಗೆ ಕೇವಲ ವೀಕ್ಷಣೆಯ ಅನುಭವವನ್ನಲ್ಲ, ಒಳನೋಟದ ಪ್ರಯಾಣವನ್ನೂ ನೀಡುತ್ತದೆ. ಕೈಲಾಸನಾಥ ದೇವಾಲಯದ ವೈಭವಕ್ಕೆ ಮಾರುಹೋಗುವುದು ಸಹಜ. ಆದರೆ ಹತ್ತನೇ ಗುಹೆಯ ಚೈತ್ಯ ಮಂಟಪದಲ್ಲಿ ಕ್ಷಣಕಾಲ ಮೌನವಾಗಿ ನಿಂತು ಬುದ್ಧನ ಮುಖದ ಶಾಂತಿಯನ್ನು ನೋಡುವಾಗ ಮಾತ್ರ ಎಲ್ಲೋರಾದ ಆತ್ಮವನ್ನು ಸ್ಪರ್ಶಿಸಿದ ಅನುಭವ ಆಗುತ್ತದೆ.
ಕಲ್ಲಿನಲ್ಲಿ ಕೆತ್ತಿದ ದೇವಾಲಯಗಳಿಗಿಂತ ಹೆಚ್ಚಾಗಿ, ಇದು ಕಾಲದ ಧ್ಯಾನಸ್ಥಿತಿ. ಎಲ್ಲೋರಾ–ಇತಿಹಾಸವನ್ನು ನೋಡಲು ಮಾತ್ರವಲ್ಲ, ಅನುಭವಿಸಲು ಹೋಗಬೇಕಾದ ಸ್ಥಳ. ಇದನ್ನು 1983 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆ ತಾಣ ಎಂದು ಘೋಷಿಸಿದೆ.
ಎಲ್ಲಾ 34 ಗುಹೆಗಳನ್ನೂ ವಿವರವಾಗಿ ವೀಕ್ಷಿಸಲು ಒಂದು ದಿನ ಸಾಲದು. ಆದರೆ ಗುಹೆ ಸಂಖ್ಯೆ 5, 10, 15, 16, 21, 29 ಮತ್ತು 32 ಪ್ರಮುಖ ಗಮನಾರ್ಹ ಗುಹೆಗಳಾಗಿವೆ. ಇತಿಹಾಸ, ಧರ್ಮ ಮತ್ತು ಶಿಲ್ಪಕಲೆಯ ಮೇಳೈಸಿದ ಈ ಮಹಾಕಾವ್ಯವನ್ನು ಅರಿಯಲು ಹೆಚ್ಚು ಸಮಯಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.