ನಾನು ಎರಡು ಬಾರಿ ಯೂರೋಪ್ ಪ್ರವಾಸ ಕೈಗೊಂಡಿದ್ದೆ. ಆಗ ಅಲ್ಲಿ ಗಮನಿಸಿದ ಮುಖ್ಯ ಅಂಶ ಅಲ್ಲಿನ ಬಹಳಷ್ಟು ದೇಶಗಳಲ್ಲಿ ಜನ ಹೆಚ್ಚಾಗಿ ಸೈಕಲ್ ಬಳಸುತ್ತಾರೆ. ಅದರಲ್ಲೂ ಡೆನ್ಮಾರ್ಕ್ ಹಾಗೂ ನೆದರ್‌ಲ್ಯಾಂಡ್ಸ್ ಸೈಕಲ್ ಬಳಕೆಯಲ್ಲಿ ಮುಂಚೂಣಿಯಲ್ಲಿವೆ. ಇಲ್ಲಿರುವಷ್ಟು ಸೈಕಲ್ ಬೇರಾವ ದೇಶಗಳಲ್ಲಿಯೂ ಕಾಣಸಿಗುವುದಿಲ್ಲ.
ಯೂರೋಪಿನ ಯಾವುದೇ ನಗರಗಳಿಗೆ ಹೋದರೂ ಇಷ್ಟವಾಗುವುದು ಅಲ್ಲಿನ ರಸ್ತೆಗಳು! ದೂಳುರಹಿತ ಈ ರಸ್ತೆಗಳಲ್ಲಿ ಓಡಾಡುವುದೇ ಖುಷಿ. 1960ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್‌ನಲ್ಲಿ ಆದ ಏರುಪೇರು ಹಾಗೂ ಪರಿಸರದ ಮೇಲಾಗುತ್ತಿರುವ ಕೆಟ್ಟ ಪರಿಣಾಮದಿಂದ ಅಲ್ಲಿನ ಜನ ಸೈಕಲ್ ಉಪಯೋಗಕ್ಕೆ ಹೆಚ್ಚು ಒತ್ತು ಕೊಡಲಾರಂಭಿಸಿದರು. ಇದರಿಂದಾಗಿ ಅತಿ ಹೆಚ್ಚು ಸೈಕಲ್ ಉಪಯೋಗಿಸುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕಾರಣವಾಯಿತು. ಪರಿಸರ ಮಾಲಿನ್ಯ ಇಲ್ಲಿ ಇಲ್ಲವೆಂದೇ ಹೇಳಬೇಕು. ಯಾಕೆಂದರೆ ಡ್ಯಾನಿಷಿಗರು, ನೆದರ್‌ಲ್ಯಾಂಡ್ಸ್ ಜನ ಹೆಚ್ಚಾಗಿ ಸೈಕಲ್ ಅನ್ನೇ ಅವಲಂಬಿಸಿದ್ದಾರೆ.
ಪ್ರಪಂಚದಲ್ಲೇ ಸೈಕಲ್‌ಗಳಿಗೋಸ್ಕರವಾಗಿ ಅತಿ ಹೆಚ್ಚು ನಿರ್ಮಾಣವಾದ ಪಥ ಇರುವುದು ಡೆನ್ಮಾರ್ಕ್‌ನಲ್ಲಿ. ಇಲ್ಲಿ ಬಹಳ ಮಂದಿ ಕಚೇರಿಗಳಿಗೂ ಸೈಕಲ್‌ನಲ್ಲಿಯೇ ತೆರಳುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ಸೈಕಲ್ ಪಥ ಇದೆ.
ಇಲ್ಲಿ ಹೆಚ್ಚಿನವರು ಸೈಕಲ್ ಅನ್ನೇ ಅವಲಂಬಿಸಿರುವುದರಿಂದ ಸರ್ಕಾರ ಸೈಕಲ್ ಸ್ಟ್ಯಾಂಡ್‌ಗಳನ್ನು ನಿರ್ಮಿಸಿದೆ. ಬಳಕೆದಾರರು ನಿಗದಿತ ಹಣ ಹಾಕಿದರೆ ಅದರ ಬೀಗ ತೆರೆದುಕೊಳ್ಳುತ್ತದೆ. ಸೈಕಲ್ ಅನ್ನು ತೆಗೆದುಕೊಂಡು ಓಡಾಡಬಹುದು. ಮತ್ತೆ ಇದೇ ರೀತಿ ಇರುವ ಸೈಕಲ್ ನಿಲ್ದಾಣಗಳಲ್ಲಿ ಅದನ್ನು ಬಿಟ್ಟು ಹೋಗಬಹುದು. ಸೈಕಲ್ ಚಕ್ರದಲ್ಲಿ ಗಾಳಿ ಕಡಿಮೆ ಇದೆಯೇ? ಚಿಂತೆ ಬೇಡ. ಅಲ್ಲಲ್ಲಿ ಸಿಗ್ನಲ್ ದೀಪದ ಕೆಳಗೆ ಇರುವ ಏರ್‌ಪೈಪ್‌ಗಳಿಂದ ಗಾಳಿಯನ್ನು ತುಂಬಿಸಿಕೊಳ್ಳಬಹುದು. ಡೆನ್ಮಾರ್ಕ್ ರಸ್ತೆಗಳಲ್ಲಿ ನಿಮಗೆ ಹೆಚ್ಚಾಗಿ ಕಾಣುವುದು ಒಂದೋ ಕಾರು ಅಥವಾ ಸೈಕಲ್. ಸರ್ಕಾರ ಕೂಡ ಪರಿಸರದ ಬಗ್ಗೆ ಕಾಳಜಿ ಹೊಂದಿರುವುದರಿಂದ ಈ ರೀತಿಯ ಸೈಕಲ್ ನಿಲ್ದಾಣಗಳನ್ನು ಮಾಡಿ ಸೈಕಲ್ ಬಳಕೆಯನ್ನು ಉತ್ತೇಜಿಸುತ್ತದೆ.
ಡೆನ್ಮಾರ್ಕ್‌ನಂತೆ ಆಮ್‌ಸ್ಟರ್‌ಡ್ಯಾಮ್ ಕೂಡ ಮುಂದುವರಿದ ದೇಶವಾಗಿದ್ದರೂ ಇವರು ಸೈಕಲ್ ತುಳಿಯುವುದನ್ನು ಬಿಟ್ಟಿಲ್ಲ. ನಗರದ ತುಂಬಾ ಸೈಕಲ್‌ಗಳಿಗಾಗಿಯೇ ಪ್ರತ್ಯೇಕ ಸಿಗ್ನಲ್ ದೀಪಗಳಿರುವ ರಸ್ತೆಗಳಿವೆ. ಸೈಕಲ್ ಪಥದಲ್ಲಿ ಬೇರೆ ಯಾರೂ ಹೋಗುವಂತಿಲ್ಲ. ಇಲ್ಲಿನ ಜನಸಂಖ್ಯೆಯಷ್ಟೇ ಸೈಕಲ್‌ಗಳು ಇದೆಯೆಂದರೆ ಆಶ್ಚರ್ಯವಾಗಬಹುದು. ನಮ್ಮಲ್ಲಿ ಕಾರು ಪಾರ್ಕಿಂಗ್ ಇರುವಂತೆ ಇಲ್ಲಿ ಸೈಕಲ್ ಪಾರ್ಕಿಂಗ್‌ಗಾಗಿಯೇ ಬಹುಮಹಡಿ ಕಟ್ಟಡಗಳಿವೆ. ಸೈಕಲ್ ಸವಾರರಿಗೆ ಉತ್ತೇಜನ ಕೊಡುವ ಮೂಲಕ ಒಂದು ಕಡೆ ಪೆಟ್ರೋಲ್ ಅವಲಂಬನೆ ಕಡಿಮೆ ಮಾಡುವುದರೊಂದಿಗೆ ಪರಿಸರ ಮಾಲಿನ್ಯವನ್ನೂ ತಡೆಯುತ್ತಿರುವ ಯೂರೋಪ್ ದೇಶಗಳ ಸರ್ಕಾರದ ಕ್ರಮವನ್ನು ಮೆಚ್ಚಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.