ADVERTISEMENT

ಪಾಸ್‌ಪೋರ್ಟ್‌ ಜೋಪಾನ

ಆದರ್ಶ್ ಅಗರ್‌ವಾಲ್
Published 21 ನವೆಂಬರ್ 2018, 20:00 IST
Last Updated 21 ನವೆಂಬರ್ 2018, 20:00 IST

ವಿದೇಶ ಪ್ರವಾಸದಲ್ಲಿ ಪಾಸ್‌ಪೋರ್ಟ್‌ ನಮ್ಮ ಪ್ರಾಣ. ಅದಕ್ಕಿಂತ ಮಹತ್ವದ ಪ್ರಯಾಣ ದಾಖಲೆ ಬೇರೊಂದಿಲ್ಲ. ಪ್ರಾಣ ಕ್ಕಿಂತಲೂ ಹೆಚ್ಚು ಪಾಸ್‌ಪೋರ್ಟ್ ಅನ್ನು ಜೋಪಾನವಾಗಿಟ್ಟುಕೊಳ್ಳಬೇಕು.

ವಿದೇಶಗಳಲ್ಲಿ ನಮ್ಮ ಅಸ್ತಿತ್ವ ಸಾಬೀತು ಪಡಿಸಲಿರುವ ಈ ಏಕೈಕ ದಾಖಲೆ ದುರದೃಷ್ಟವಶಾತ್‌ ಕಳೆದು ಹೋದರೆ ಇಲ್ಲವೇ ಕಳ್ಳತನವಾದರೆ ಏನು ಗತಿ? ಹಾಗೆಂದು ಗಾಬರಿಪಡುವ ಅಗತ್ಯವಿಲ್ಲ. ಅದಕ್ಕೆ ಪರ್ಯಾಯ ಮಾರ್ಗ ಗಳಿವೆ. ಅಂಥ ದಾರಿಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.

ಇವೆಲ್ಲ ಕಡ್ಡಾಯ
* ವಿದೇಶಗಳಿಗೆ ಪ್ರವಾಸ ಹೊರಡುವ ಮೊದಲು ಪಾಸ್‌ಪೋರ್ಟ್ ಮತ್ತು ವೀಸಾ ಜೆರಾಕ್ಸ್‌ ಪ್ರತಿಗಳನ್ನು ಪಡೆದುಕೊಳ್ಳಿ. ಅವನ್ನು ಮೂಲ ಪ್ರತಿಗಳಿರುವ ಜಾಗದಿಂದ ಪ್ರತ್ಯೇಕವಾಗಿ ಬೇರೆ ಕಡೆ ತೆಗೆದಿಡಿ.

ADVERTISEMENT

*ಸ್ಮಾರ್ಟ್‌ಫೋನ್‌ನಲ್ಲಿ ಫೋಟೊ ಅಥವಾ ಸ್ಕ್ಯಾನ್‌ ಮಾಡಿಟ್ಟುಕೊಂಡು ನಿಮ್ಮ ಮೇಲ್‌ಗೆ ಹಾಕಿಕೊಳ್ಳಿ. ಒಂದು ವೇಳೆ ಪಾಸ್‌ಪೋರ್ಟ್, ವೀಸಾ ಜತೆ ಮೊಬೈಲ್‌ ಕಳೆದು ಹೋದ ಸಂದರ್ಭದಲ್ಲಿ ಮೇಲ್‌ನಲ್ಲಿ ಸುರಕ್ಷಿತವಾಗಿರುವ ದಾಖಲೆಗಳು ನೆರವಿಗೆ ಬರುತ್ತವೆ.

*ನೀವು ಭೇಟಿ ನೀಡಲಿರುವ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿ, ರಾಜತಾಂತ್ರಿಕ ಕಚೇರಿಗಳ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಿ. ಕಷ್ಟಕಾಲದಲ್ಲಿ ಕೈ ಹಿಡಿಯುತ್ತವೆ.

*ಯಾವುದೇ ದೇಶಕ್ಕೆ ಪ್ರವಾಸ ಹೊರಡುವ ಮೊದಲು ತಪ್ಪದೆ ಪ್ರವಾಸ ವಿಮೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ. ಅನೇಕ ವಿಮಾ ಕಂಪನಿಗಳು ನಿಮ್ಮ ಮನೆಯ ಬಾಗಿಲಿಗೆ ವಿಮಾ ಸೌಲಭ್ಯಗಳನ್ನು ನೀಡುತ್ತವೆ.

ವಿಮೆ ನೆರವು

*ಬೆಲೆ ಬಾಳುವ ವಸ್ತುಗಳ ಜತೆಗೆ ಪಾಸ್‌ಪೋರ್ಟ್, ವೀಸಾಗಳಿಗೂ ಸಮಗ್ರ ಪ್ರವಾಸ ವಿಮೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

* ವಿಮೆ ಪಡೆಯುವ ಕಾಲಕ್ಕೆ ಎಸ್‌ಎಂಎಸ್‌, ಮಿಸ್ಡ್‌ ಕಾಲ್‌ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಒಂದು ಮಿಸ್ಡ್‌ ಕಾಲ್‌ ನೀಡಿದರೆ ಹತ್ತು ನಿಮಿಷಗಳಲ್ಲಿ ವಿಮಾ ಕಂಪನಿ ನಿಮ್ಮನ್ನು ಸಂಪರ್ಕಿಸುತ್ತದೆ. ವಿಮಾ ಕಂಪನಿಯ ಉಚಿತ ಸಹಾಯವಾಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

*ಪಾಸ್‌ಪೋರ್ಟ್ ಕಳೆದ ಸಂಗತಿ ಗಮನಕ್ಕೆ ಬಂದ ತಕ್ಷಣ ವಿಮಾ ಕಂಪನಿಯ ಉಚಿತ ಸಹಾಯವಾಣಿ ಸಂಪರ್ಕಿಸಿ. ತಾತ್ಕಾಲಿಕ ಪಾಸ್‌ಪೋರ್ಟ್ ಇಲ್ಲವೇ ತ್ವರಿತ ಪ್ರಯಾಣ ದಾಖಲೆ ಪಡೆಯಲು ಕಂಪನಿ ಅಗತ್ಯ ಮಾರ್ಗದರ್ಶನ ನೀಡುತ್ತದೆ. ಭಾರತೀಯ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ ವಿಳಾಸ ನೀಡುತ್ತದೆ.

*ನೀವಿರುವ ಸ್ಥಳದ ವ್ಯಾಪ್ತಿಗೆ ಒಳಪಡುವ ಪೊಲೀಸ್‌ ಠಾಣೆಯಲ್ಲಿ ತಕ್ಷಣ ದೂರು ನೀಡುವುದನ್ನು ಮರೆಯಬೇಡಿ. ಇದು ಕಡ್ಡಾಯ. ಪಾಸ್‌ಪೋರ್ಟ್ ಮತ್ತು ಇತರ ದಾಖಲೆ ಹುಡುಕಿ ಕೊಡುವಂತೆ ಪತ್ರ ಬರೆಯಿರಿ. ದೂರು ನೀಡಿದ ಹಿಂಬರಹದ ಪ್ರತಿಯನ್ನು ಜೋಪಾನವಾಗಿ ಕಾಯ್ದಿಟ್ಟು ಕೊಳ್ಳಿ. ಇದು ಮಹತ್ವದ ದಾಖಲೆ.

*ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಥವಾ ರಾಜತಾಂತ್ರಿಕ ಕಚೇರಿಯಿಂದ ಮತ್ತೊಂದು ತಾತ್ಕಾಲಿಕ ಅಥವಾ ದ್ವಿಪ್ರತಿ (ಡುಪ್ಲಿಕೆಟ್‌) ಪಾಸ್‌ಪೋರ್ಟ್ ಇಲ್ಲವೇ ತುರ್ತು ಪ್ರಯಾಣ ದಾಖಲೆ ಪಡೆಯಲು ದೂರಿನ ಪ್ರತಿ ಅಗತ್ಯವಾಗಿ ಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.