
ದುಬೈ ಟೂರ್ ಪ್ಯಾಕೇಜ್ (ಪ್ರಾತಿನಿಧಿಕ ಚಿತ್ರ)
ಚಿತ್ರ: ಮೆಟಾ ಎಐ
ಜೈಪುರ: ರೈಲ್ವೆ ಸಚಿವಾಲಯದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ವಿಶೇಷ ದುಬೈ ಟೂರ್ ಪ್ಯಾಕೇಜ್ ಅನ್ನು ಘೋಷಿಸಿದೆ.
ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿ ₹94,730 ಪಾವತಿಸಬೇಕು. 4 ರಾತ್ರಿ ಮತ್ತು ಐದು ದಿನಗಳ ಪ್ರವಾಸ ಇದಾಗಿದೆ.
ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್, ಮತ್ತು ಕೊಚ್ಚಿಯಲ್ಲಿರುವವರು ಪ್ರಯಾಣಿಸಬಹುದು. ಭಾರತೀಯರು ಒಂದು ಗುಂಪಾಗಿ ದುಬೈಗೆ ಪ್ರಯಾಣಿಸಿ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವುದು ಈ ಪ್ಯಾಕೇಜ್‌ನ ಉದ್ದೇಶವಾಗಿದೆ ಎಂದು ಐಆರ್‌ಸಿಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ಯಾಕೇಜ್‌ನಲ್ಲಿ, 3 ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯ, ವೀಸಾ ವೆಚ್ಚ, ಊಟ, ನಗರ ವೀಕ್ಷಣೆಗೆ ಎಸಿ ಬಸ್, ಮರುಭೂಮಿ ಸಫಾರಿ, ಪ್ರಯಾಣದ ವಿಮೆ ಮತ್ತು ದುಬೈನಿಂದ ಹಿಂದಿರುಗಲು ಬೇಕಾದ ವಿಮಾನ ಟಿಕೆಟ್ ಒಳಗೊಂಡಿರುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.
ಈ ಪ್ರವಾಸದಲ್ಲಿ ದುಬೈನ ಪ್ರಮುಖ ವೀಕ್ಷಣಾ ಸ್ಥಳಗಳಾದ ಪಾಮ್ ಜುಮೇರಾ, ಮಿರಾಕಲ್ ಗಾರ್ಡನ್, ಬುರ್ಜ್ ಅಲ್ ಅರಬ್, ಗೋಲ್ಡ್ ಮತ್ತು ಸ್ಪೈಸ್ ಸೂಕ್ಸ್, ಬುರ್ಜ್ ಖಲೀಫಾ ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು.
ಜೈಪುರದ ಐಆರ್‌ಸಿಟಿಸಿಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಯೊಗೇಂದ್ರ ಸಿಂಗ್ ಗುಜರ್, ‘ಈ ಟೂರ್‌ನಲ್ಲಿ ದುಬೈನ ಚಿನ್ನದ ಮಾರುಕಟ್ಟೆಯಲ್ಲಿ ಖರೀದಿಗೆ ಸಮಯ ನೀಡಲಾಗುತ್ತದೆ. ಒಂದು ದಿನ ಅಬುಧಾಬಿ ಭೇಟಿ ಇರುತ್ತದೆ. ಜತೆಗೆ ಶೇಖ್ ಜೈಯದ್ ಮಸೀದಿ ಮತ್ತು ದೇಗುಲಗಳ ಭೇಟಿ ಇರುತ್ತದೆ. ಜನವರಿ 6ರವರೆಗೆ ನೋಂದಣಿಗೆ ಅವಕಾಶವಿದೆ’ ಎಂದು ತಿಳಿಸಿದ್ದಾರೆ.
ಐಆರ್‌ಸಿಟಿಸಿ 13 ದಿನಗಳ ಯುರೋಪ್ ಪ್ರವಾಸವನ್ನೂ ಆಯೋಜಿಸಿದೆ. ಇದು ಏಪ್ರಿಲ್ ಮತ್ತು ಜೂನ್ ನಡುವೆ ಇರಲಿದೆ. ಜೈಪುರದಿಂದ ಈ ಪ್ರವಾಸ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.