ಕಡಲನ್ನು ಚುಂಬಿಸುತ್ತಿದ್ದ ಸೂರ್ಯ. ಹೊಂಬಣ್ಣದಿಂದ ಹೊಳೆಯುತ್ತಿದ್ದ ಜಲರಾಶಿಯನ್ನು ಸೀಳಿಕೊಂಡು ಬಂದರಿನತ್ತ ಧಾವಿಸುತ್ತಿದ್ದ ಹಡಗು. ಅಲೆಗಳಿಗೆ ತಕ್ಕಂತೆ ಬಳಕುತ್ತಿದ್ದ ಪುಟ್ಟ ಪುಟ್ಟ ದೋಣಿಗಳು. ಮೀನು ಸಿಕ್ಕೀತೆಂದು ಹೊಂಚು ಹಾಕುತ್ತ ಆಗಸದಲ್ಲಿ ಹಾರಾಡುತ್ತಿದ್ದ ಬಾನಾಡಿಗಳು…
ಕೇರಳದ ಪೋರ್ಟ್ ಕೊಚ್ಚಿಯ ಕಡಲ ತೀರದಲ್ಲಿ ಮುಸ್ಸಂಜೆ ಕಂಡುಬಂದ ಇಂತಹ ನಯನಮನೋಹರ ದೃಶ್ಯಾವಳಿಗಳನ್ನು ದೇಶ–ವಿದೇಶಗಳ ಪ್ರವಾಸಿಗರು ಕಣ್ಣು, ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದರು. ಮೊಬೈಲ್‌ನಲ್ಲಿ ‘ಸೆಲ್ಫಿ’ ತೆಗೆದುಕೊಂಡು ಸಂಭ್ರಮಿಸುತ್ತಿದ್ದರು.
ಮಟ್ಟಾಂಚೇರಿ ಪ್ಯಾಲೆಸ್ (ಡಚ್ ಪ್ಯಾಲೆಸ್)ನಲ್ಲಿ ಕೇರಳದ ಪ್ರಾಚೀನ ಕಲಾ ಶ್ರೀಮಂತಿಕೆಯನ್ನು ಕೆಲ ಹೊತ್ತಿನ ಹಿಂದಷ್ಟೇ ಕಣ್ತುಂಬಿಕೊಂಡು ಬಂದಿದ್ದ ನಾವು ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿದ್ದೆವು. ಕೇರಳದಲ್ಲಿ ಬೆಳೆಯುತ್ತಿದ್ದ ಮಸಾಲೆ ಪದಾರ್ಥಗಳು ಹದಿನಾರನೇ ಶತಮಾನದಲ್ಲೇ ಪಾಶ್ಚಿಮಾತ್ಯ ದೇಶಗಳ ವ್ಯಾಪಾರಿಗಳನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇಲ್ಲಿನ ಕಡಲ ತೀರದ ಮೂಲಕವೇ ಪೋರ್ಚುಗೀಸರು ಮೊದಲು ಭಾರತಕ್ಕೆ ಬಂದು ವ್ಯಾಪಾರ ಆರಂಭಿಸಿದ್ದು, ನಂತರ ಡಚ್ಚರು, ಬ್ರಿಟಿಷರು ಸಹ ಭಾರತಕ್ಕೆ ಬಂದು ವಸಾಹತು ಸಾಮ್ರಾಜ್ಯ ಸ್ಥಾಪಿಸಿದ್ದ ನೆನಪಿನ ಹಾಯಿದೋಣಿ ಮನದಲ್ಲಿ ಹಾದುಹೋಯಿತು.
ಎರ್ನಾಕುಲಂ ಜಿಲ್ಲೆಯ ಮಟ್ಟಾಂಚೇರಿಯಲ್ಲಿ ಪೋರ್ಚುಗೀಸರು ವ್ಯಾಪಾರಕ್ಕಾಗಿ ಬಂದಾಗ ಕೇರಳದ ರಾಜನನ್ನು ಓಲೈಸಲು ಅರಮನೆ ನಿರ್ಮಿಸಿಕೊಟ್ಟಿದ್ದರು. ಬಳಿಕ ಅವರು ಇಲ್ಲಿನ ರಾಜರನ್ನೇ ಸಾಮಂತರನ್ನಾಗಿ ಮಾಡಿಕೊಂಡಿದ್ದರು. ಪೋರ್ಚುಗೀಸರೊಂದಿಗೆ ಯುದ್ಧ ಮಾಡಿ ಗೆದ್ದ ಡಚ್ಚರು, ಕೇರಳದ ರಾಜನಿಗೆ ಉಡುಗೊರೆಯಾಗಿ ಈ ಅರಮನೆಯನ್ನು ನೀಡಿದ್ದರು. ಈ ಅರಮನೆಯ ಒಳಗೆ ಕೇರಳದ ಹಲವು ರಾಜರ ಬೃಹತ್ ಭಾವಚಿತ್ರಗಳು (ಪೋರ್ಟ್‌ರೇಟ್), ಗೋಡೆಗಳ ಮೇಲೆ ಬಿಡಿಸಿರುವ ರಾಮಾಯಣ, ಮಹಾಭಾರತದ ಕಥೆಗಳ ಕುರಿತ ವರ್ಣಚಿತ್ರಗಳು, ಮರದಲ್ಲಿ ಕೆತ್ತಿದ ಕಲಾಕೃತಿಗಳು ಗಮನ ಸೆಳೆದವು. ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿರುವ ಪ್ರಾಚೀನ ವಸ್ತುಗಳು ಗತವೈಭವವನ್ನು ಸಾರಿ ಹೇಳಿದವು. ಅರಮನೆಯ ಆವರಣದಲ್ಲಿರುವ ಭಗವತಿ, ಕೃಷ್ಣ ಹಾಗೂ ಶಿವನ ಪ್ರಾಚೀನ ಮಂದಿರಗಳು ರಾಜರಿಗೆ ಇದ್ದ ಧಾರ್ಮಿಕ ಶ್ರದ್ಧೆಯ ಮೇಲೆ ಬೆಳಕು ಚೆಲ್ಲಿದವು.
ಸಮೀಪದಲ್ಲೇ ಇರುವ ಜ್ಯೂವ್ ಟೌನ್‌ನ ಬೀದಿಗಳಲ್ಲಿರುವ ಇಂಡೋ ಯುರೋಪಿಯನ್ ಶೈಲಿಯ ಕಟ್ಟಡದಲ್ಲಿರುವ ಮಳಿಗೆಗಳಲ್ಲಿರುವ ಪ್ರಾಚೀನ ಮಾದರಿಯ ಕಲಾಕೃತಿಗಳು, ವೈವಿಧ್ಯಮಯ ಹವಳಗಳ ಒಡವೆಗಳು, ವರ್ಣಚಿತ್ರಗಳು, ಬಗೆ ಬಗೆಯ ಸುಗಂಧ ದ್ರವ್ಯಗಳು, ಮಸಾಲೆ ಪದಾರ್ಥಗಳು ಹದಿನಾರನೇ ಶತಮಾನದಲ್ಲೇ ಹೆಸರುವಾಸಿಯಾಗಿದ್ದ ವ್ಯಾಪಾರಿ ಕೇಂದ್ರದ ದೃಶ್ಯವನ್ನು ಕಣ್ಣಮುಂದೆ ತಂದು ನಿಲ್ಲಿಸಿದಂತೆ ಭಾಸವಾಯಿತು. ಜರುಸಲೇಂನಿಂದ ವ್ಯಾಪಾರಕ್ಕಾಗಿ ಬಂದು ಇಲ್ಲಿಯೇ ನೆಲೆಸಿದ್ದ ಯಹೂದಿಗಳು (ಜ್ಯೂವಿಶ್ ಕಮ್ಯುನಿಟಿ) ನಿರ್ಮಿಸಿದ್ದ ಸಿನಗಾಗ್ (ಪ್ರಾರ್ಥನಾ ಮಂದಿರ) ಒಳಗಿನ ಕಲಾಕೃತಿಗಳು ಹಾಗೂ ಪಕ್ಕದ ಕಟ್ಟಡದ ಗೋಪುರದ ಮೇಲೆ ‘ಹಿಬ್ರೂ’ ಲಿಪಿಯ ಸಂಖ್ಯೆಗಳಿರುವ ಬೃಹತ್ ಗಡಿಯಾರ ಜ್ಯೂವ್ ಟೌನ್‌ನ ಕಥೆ ಹೇಳಿದವು.
ಕೇರಳದ ಪೋರ್ಟ್ ಕೊಚ್ಚಿಯ ಕಡಲ ತೀರದಲ್ಲಿ ಸೂರ್ಯಾಸ್ತವನ್ನು ವಿದೇಶಿ ಪ್ರವಾಸಿಗರು ಕಣ್ತುಂಬಿಕೊಂಡರು
ವಾಟರ್ ಮೆಟ್ರೊ:
ಮುಸ್ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ನಾವು ಪೋರ್ಟ್ ಕೊಚ್ಚಿ ವಾಟರ್ ಮೆಟ್ರೊ ಸ್ಟೇಷನ್‌ಗೆ ಬಂದಾಗ ಕೇರಳ ಸರ್ಕಾರವು ಜಲಸಾರಿಗೆಯನ್ನೂ ಒಂದು ಪ್ರವಾಸಿ ತಾಣವನ್ನಾಗಿ ರೂಪಿಸಿದ ಕಥೆ ತೆರೆದುಕೊಂಡಿತು.
ದ್ವೀಪಗಳ ನಡುವೆ ಜಲ ಸಂಪರ್ಕ ಸಾಧಿಸಲು 2023ರಲ್ಲಿ ವಾಟರ್ ಮೆಟ್ರೊ ಸೇವೆ ಆರಂಭಿಸಲಾಗಿದೆ. ಬ್ಯಾಟರಿ ಚಾಲಿತ ಪರಿಸರ ಸ್ನೇಹಿ ವಾಟರ್ ಮೆಟ್ರೊದಲ್ಲಿ ಇದುವರೆಗೆ 3.98 ಕೋಟಿ ಜನ ಸಂಚರಿಸಿದ್ದಾರೆ. ‘ಸದ್ಯ ಎಂಟು ಕಡೆ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. 2035ರ ವೇಳೆಗೆ 70 ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಜಲಮಾರ್ಗದ ಮೂಲಕ ಸಂಚರಿಸುವುದರಿಂದ ದ್ವೀಪದ ಜನರಿಗೆ ಸಮಯ ಹಾಗೂ ಹಣ ಉಳಿಯುತ್ತಿದೆ. ದೇಶ–ವಿದೇಶಗಳ ಪ್ರವಾಸಿಗರು ವಾಟರ್ ಮೆಟ್ರೊದಲ್ಲಿ ಸಂಚರಿಸಿ ಕಡಲ ತೀರದ ಪೃಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ’ ಎಂದು ನಮ್ಮ ಜೊತೆಗೆ ಬಂದಿದ್ದ ಎರ್ನಾಕುಲಂ ಡಿಸ್ಟ್ರಿಕ್ಟ್ ಟೂರಿಸಂ ಪ್ರೊಮೋಷನ್ ಕೌನ್ಸಿಲ್‌ನ ಕಾರ್ಯದರ್ಶಿ ಲಿಜೊ ಜೋಸೆಫ್ ಮಾಹಿತಿ ನೀಡಿದರು.
ಹವಾನಿಯಂತ್ರಿತ ವಾಟರ್ ಮೆಟ್ರೊದಲ್ಲಿ ಕುಳಿತು ನಾವು ಹೋಗುತ್ತಿದ್ದರೆ, ಕೊಚ್ಚಿ ಬಂದರಿಗೆ ಬಂದ ಬೃಹತ್ ಹಡಗು ಪಕ್ಕದಲ್ಲೇ ನಿಂತಿತ್ತು. 48 ಜನರಿಗೆ ಆಸನ ಹಾಗೂ 48 ಜನರಿಗೆ ನಿಂತುಕೊಂಡು ಹೋಗುವ ಸೌಲಭ್ಯವಿರುವ, ಸಿಸಿಟಿವಿ ಕ್ಯಾಮೆರಾ ಇರುವ ಮೆಟ್ರೊ ಬೋಟ್ ಮುಂದೆ ಸಾಗುತ್ತಿದ್ದರೆ ಮೀನು ಹಿಡಿಯಲು ಹಾಕಿದ್ದ ಚೀನಾ ಮಾದರಿಯ ಮೀನಿನ ಬೃಹತ್ ಬಲೆಗಳು (ಚೈನಿಸ್ ಫಿಷಿಂಗ್ ನೆಟ್) ಕಡಲ ಕಿನಾರೆಯುದ್ದಕ್ಕೂ ನಮ್ಮನ್ನು ಸ್ವಾಗತಿಸುತ್ತಿತ್ತು. ನಗರದ ಬಣ್ಣ ಬಣ್ಣದ ದೀಪಗಳು ಜಲರಾಶಿಯ ಮೇಲೆ ಪ್ರತಿಫಲಿಸುವ ಮೂಲಕ ಮಾಯಾಲೋಕ ಸೃಷ್ಟಿಸಿತ್ತು. ಇನ್ನೊಂದೆಡೆ ಖಾಸಗಿ ಬೋಟ್‌ಗಳೂ ಪ್ರವಾಸಿಗರನ್ನು ಹೊತ್ತು ವಿವಿಧ ತಾಣಗಳ ದರ್ಶನ ಮಾಡಿಸುತ್ತಿತ್ತು. ಹೈಕೋರ್ಟ್ ನಿಲ್ದಾಣಕ್ಕೆ ನಾವು ಬಂದಿಳಿದಾಗ, ನದಿ, ದ್ವೀಪಗಳನ್ನೂ ಕೇರಳ ಸರ್ಕಾರವು ಜಲಸಾರಿಗೆಯನ್ನೂ ಪ್ರವಾಸೋದ್ಯಮಕ್ಕೆ ಹೇಗೆ ಸದ್ಬಳಕೆ ಮಾಡಿಕೊಂಡಿದೆ ಎಂಬುದು ಅರಿವಿಗೆ ಬಂತು.
ಕೇರಳದ ಜಲ ಸಾರಿಗೆ ವಾಟರ್ ಮೆಟ್ರೊ ಹೊರನೋಟ
ಮುಜಿರಿ ಪಾರಂಪರಿಕ ಪ್ರವಾಸ:
ಪಾರಂಪರಿಕ ತಾಣಗಳ ಸಂರಕ್ಷಣೆಗೆ ಮುಂದಾಗಿರುವ ಕೇರಳ ಸರ್ಕಾರ, ‘ಮುಜಿರಿಸ್ ಹೆರಿಟೇಜ್ ಪ್ರಾಜೆಕ್ಟ್’ ಕೈಗೆತ್ತಿಕೊಂಡಿದೆ. ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಉತ್ಖನನ ಮಾಡಿ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಟ್ಟಿದೆ. ಮುಜಿರಿಸ್ ಹೆರಿಟೇಜ್ ಪ್ರಾಜೆಕ್ಟ್ ಮೂಲಕವೂ ಪ್ರವಾಸಿಗರನ್ನೂ ಸೆಳೆಯಲಾಗುತ್ತಿದೆ. ಈ ಯೋಜನೆಗಾಗಿ ಸರ್ಕಾರ ₹140 ಕೋಟಿ ಅನುದಾನ ನೀಡಿದ್ದು, 150 ಕಿ.ಮೀ ವ್ಯಾಪ್ತಿಯಲ್ಲಿನ ಹಲವು ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
ಎರಡನೇ ದಿನ ನಮ್ಮ ಪ್ರವಾಸ ಪಾರಂಪರಿಕ ತಾಣಗಳತ್ತ ಹೊರಳಿತ್ತು. ಎರ್ನಾಕುಲಂ ಜಿಲ್ಲೆಯ ಪಟ್ಟಣಂ ಹಳ್ಳಿಯಲ್ಲಿ ಉತ್ಖನನ ಮಾಡಿದ್ದ ಪುರಾತತ್ವ ಸ್ಥಳಕ್ಕೆ ಬಂದಾಗ ಅಲ್ಲಿನ ವಸ್ತುಸಂಗ್ರಹಾಲಯವು ಕ್ರಿ.ಪೂ. 300ರಲ್ಲೇ ಈ ಹಳ್ಳಿ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಕಥನವನ್ನು ಹೇಳತೊಡಗಿತು. ಈ ಭಾಗದಲ್ಲಿ ಬೆಳೆಯುತ್ತಿದ್ದ ಕಾಳುಮೆಣಸು, ಏಲಕ್ಕಿ ಸೇರಿ ಮಸಾಲೆ ಪದಾರ್ಥಗಳು, ವಿವಿಧ ಬಗೆಯ ಹವಳದ ಆಭರಣಗಳನ್ನು ಖರೀದಿಸಲು ಪಾಶ್ಚಿಮಾತ್ಯ ವಾಪಾರಿಗಳು ಇಲ್ಲಿಗೆ ಬರುತ್ತಿದ್ದರು. ಮಸಾಲೆ ಪದಾರ್ಥಗಳಿಗೆ ಬದಲಾಗಿ ವೈನ್, ಆಲಿವ್ ಆಯಿಲ್‌ಗಳನ್ನು ಕೊಡುತ್ತಿದ್ದ ಬಗ್ಗೆ ಉತ್ಖನನದ ವೇಳೆ ಸಿಕ್ಕ ಕುರುಹುಗಳನ್ನು ಮ್ಯೂಸಿಯಂ ಅಧಿಕಾರಿಗಳು ತೋರಿಸಿದರು.
ತ್ರಿಶೂರ್ ಜಿಲ್ಲೆಯಲ್ಲಿ ಪೆರಿಯಾರ್ ನದಿ ತಟದಲ್ಲಿರುವ ಕೋಟ್ಟಪ್ಪುರಂ ಕೋಟೆಗೆ ಬಂದಾಗ ಇಲ್ಲಿರುವ ಕೋಟೆಯ ಅವಶೇಷಗಳು ವಸಾಹತುಶಾಹಿ ವಿಸ್ತರಣೆಗಾಗಿ ನಡೆದ ಯುದ್ಧದ ಭೀಕರತೆಗೆ ಕನ್ನಡಿ ಹಿಡಿಯಿತು. 1523ರಲ್ಲಿ ಪೋರ್ಚುಗೀಸರು ಕೆಂಪು ಕಲ್ಲಿನಿಂದ ಕಟ್ಟಿದ್ದ ಸುಭದ್ರ ಕೋಟೆಯನ್ನು ಡಚ್ಚರು 1662ರಲ್ಲಿ ವಶಪಡಿಸಿಕೊಂಡಿದ್ದರು. ಬಳಿಕ ಈಸ್ಟ್ ಇಂಡಿಯಾ ಕಂಪನಿಯಿಂದ ತ್ರಾವಣಕೋರ್ ರಾಜ್ಯವು ಈ ಕೋಟೆಯನ್ನು ಖರೀದಿಸಿತ್ತು. 1789ರಲ್ಲಿ ಟಿಪ್ಪು ಸುಲ್ತಾನ್ ಯುದ್ಧ ಮಾಡಿ ಈ ಕೋಟೆಯನ್ನು ಧ್ವಂಸಗೊಳಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಯುದ್ಧದಲ್ಲಿ ಮಡಿದ ಸೈನಿಕರೊಬ್ಬರ ಅಸ್ತಿಪಂಜರವನ್ನು ಇಲ್ಲಿ ಈಗಲೂ ಸಂರಕ್ಷಿಸಿಡಲಾಗಿದೆ.
ಕೇರಳದ ಮುಜಿರಿ ಹೆರಿಟೇಜ್ ಯೋಜನೆಯಡಿ ಸಂರಕ್ಷಣೆ ಮಾಡಿರುವ ಕೋಟ್ಟಪ್ಪುರಂ ಕೋಟೆಯ ಸ್ಥಳ
ಚೇರಮಾನ್ ಜಾಮಾ ಮಸೀದಿ:
ಚೆರಾ ರಾಜಮನೆತನದ ಕೊನೆಯ ದೊರೆ ಚೇರಮಾನ್ ಪೆರುಮಾಳ್ ಇಸ್ಲಾಂ ಧರ್ಮದ ಸಂದೇಶದಿಂದ ಪ್ರಭಾವಿತನಾಗಿ ಇಸ್ಲಾಂಗೆ ಮತಾಂತರಗೊಂಡು ಮೆಕ್ಕಾಕ್ಕೆ ತೆರಳಿದ್ದ. ಅನಾರೋಗ್ಯ ಪೀಡಿತ ಚೇರಮಾನ್, ಮಸೀದಿ ನಿರ್ಮಿಸಲು ಸಹಕಾರ ನೀಡುವಂತೆ ಸೂಚಿಸಿದ ಪತ್ರವನ್ನು ಮಲಿಕ್ ಬಿನ್ ದಿನಾರ್ ಮೂಲಕ ಕೇರಳಕ್ಕೆ ಕಳುಹಿಸಿಕೊಟ್ಟಿದ್ದ. ಬಳಿಕ ಕೊಡಂಗಲ್ಲೂರ್‌ನಲ್ಲಿ ಮಲಿಕ್ ಮಸೀದಿಯನ್ನು ನಿರ್ಮಿಸಿದ್ದು, ಇದು ಭಾರತದ ಮೊದಲ ಮಸೀದಿ ಎಂಬ ಖ್ಯಾತಿ ಪಡೆದಿದೆ.
ಕೇರಳ ಮುಸ್ಲಿಂ ಪರಂಪರೆಯನ್ನು ಪ್ರತಿನಿಧಿಸುತ್ತಿರುವ ಚೇರಮಾನ್ ಜಾಮಾ ಮಸೀದಿಯೊಳಗೆ ಬಂದು ನಾವು ಕುಳಿತಾಗ ಅಲ್ಲಿನ ಪ್ರಶಾಂತ ವಾತಾವರಣ ಭಕ್ತಿಯ ಚಿಲುಮೆಯನ್ನು ಹೊತ್ತಿಸಿತು. ಸುಂದರ ಕೆತ್ತನೆಗಳಿರುವ ಧರ್ಮಪೀಠ, ಚಾವಣಿ ಮೇಲಿನ ಕುಸುರಿ ಕಲಾಕೃತಿಗಳು, ಗೋಡೆ ಮೇಲೆ ಅರೇಬಿಕ್ ಲಿಪಿಯಲ್ಲಿ ಬರೆದ ಅಕ್ಷರಗಳು, ಉಕ್ಕಿನಲ್ಲಿ ನಿರ್ಮಿಸಿರುವ ಬೃಹತ್ ತೂಗು ದೀಪ, ಅದರ ಮೇಲೆ ಹಳೆಯ ಮಲಯಾಳಂ ಭಾಷೆಯಲ್ಲಿ ಬರೆದ ಅಕ್ಷರಗಳು ಗಮನ ಸೆಳೆದವು.
ಅಲ್ಲಿಂದ ಹೊರಟು ಪಾಲಿಯಂ ಅರಮನೆ ಮ್ಯೂಸಿಯಂಗೆ ಬಂದಾಗ ಕೇರಳ ಹಾಗೂ ಡಚ್ ಮಿಶ್ರಿತ ವಾಸ್ತುಶಿಲ್ಪ ವಿನ್ಯಾಸದ ಸುಂದರ ಭವನ ಎದುರುಗೊಂಡಿತು. ಪೋರ್ಚುಗೀಸರನ್ನು ಸೋಲಿಸಲು ಸಹಕಾರ ನೀಡಿದ್ದಕ್ಕೆ ಕೇರಳದ ರಾಜನ ಪ್ರಧಾನಮಂತ್ರಿ ಪಾಲಿಯತ್ ಅಚನ್ ಅವರಿಗೆ ಡಚ್ಚರು ನಿರ್ಮಿಸಿಕೊಟ್ಟ ಅರಮನೆಯು ರಾಜ ವೈಭೋಗದ ದರ್ಶನ ಮಾಡಿಸಿತು.
ಪರವುರಿನಲ್ಲಿರುವ ದೇಶದ ಮೊದಲ ಜ್ಯೂವಿಶ್ ಸಿನಗಾಗ್ ಮ್ಯೂಸಿಯಂಗೆ ಬಂದಾಗ, ಯಹೂದಿಗಳ ಧಾರ್ಮಿಕ ಆಚರಣೆ, ಪ್ರಾರ್ಥನಾಲಯದ ವಿಶೇಷತೆಯ ಬಗ್ಗೆ ಗೈಡ್ ಎಳೆ ಎಳೆಯಾಗಿ ವಿವರಿಸಿದರು. ಇದೀಗ ಯಹೂದಿಗಳು ಜರುಸಲೇಂಗೆ ಮರಳಿ ಹೋಗಿದ್ದು, ಇಂದು ಅವರ ಪ್ರಾರ್ಥನಾ ಮಂದಿರವು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ತಾಣವಾಗಷ್ಟೇ ಉಳಿದಿದೆ.
ಕೇರಳದ ಚೇರಮಾನ್ ಜಾಮಾ ಮಸೀದಿ ಹೊರನೋಟ
ಜವಾಬ್ದಾರಿಯುತ ಪ್ರವಾಸೋದ್ಯಮ:
ಕೇರಳ ಸರ್ಕಾರವು ಸ್ಥಳೀಯರ ಸಹಭಾಗಿತ್ವದಲ್ಲಿ ಪರಿಸರ ಸ್ನೇಹಿಯಾಗಿರುವ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೂ ಒತ್ತು ನೀಡಿದೆ. ಹಳ್ಳಿಗಳಲ್ಲಿನ ಉತ್ಪಾದನಾ ಘಟಕದವರು, ಕೃಷಿಕರು, ಸೇವಾ ವಲಯದವರು, ಆತಿಥ್ಯ ವಹಿಸಿಕೊಳ್ಳುವಂತವರು ರೆಸ್ಪಾನ್ಸಿಬಲ್ ಟೂರಿಸಂ (ಆರ್.ಟಿ) ಮಿಷನ್‌ನಡಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸುವುದು ಹಾಗೂ ಪ್ರವಾಸಿಗರಿಗೆ ದೇಸಿ ಅನುಭವ ಕೊಡುವುದು ಇದರ ಉದ್ದೇಶವಾಗಿದೆ.
ಮೂರನೇ ದಿನ ನಾವು ಕೊಟ್ಟಾಯಂ ಜಿಲ್ಲೆಯ ಮರವನ್‌ತುರುತ್ತ್ ಹಳ್ಳಿಗೆ ಬಂದಾಗ ಮನೆಗಳ ಆವರಣ ಗೋಡೆಗಳ ಮೇಲಿನ ಸುಂದರ ಪೇಟಿಂಗ್‌ಗಳು ಸ್ವಾಗತಿಸಿದವು. ಕಲಾವಿದರು ಬಂದು ಈ ಹಳ್ಳಿಯ ಒಂದು ಬೀದಿಯಲ್ಲಿನ ಗೋಡೆಗಳ ಮೇಲೆ ಬಿಡಿಸಿರುವ ಸುಂದರ ಚಿತ್ರಗಳು, ಇಲ್ಲಿನ ಗ್ರಂಥಾಲಯದ ಗೋಡೆಗಳ ಮೇಲೆ ಜೀವ ಪಡೆದ ಕಲಾಕೃತಿಗಳು ಈ ಕಲಾ ಬೀದಿಯನ್ನೂ ಪ್ರವಾಸಿ ತಾಣವನ್ನಾಗಿಸಿದೆ.
ಸಮೀಪದಲ್ಲೇ ಮೂವಾಟ್ಟುಪುಳ ನದಿಗೆ ನಿರ್ಮಿಸಿರುವ ತೂಗು ಸೇತುವೆಯ ಮೇಲೆ ನಡೆದಾಡಿ ಪೃಕೃತಿಯ ವಿಹಂಗಮ ನೋಟವನ್ನು ಕಣ್ತುಂಬಿಕೊಂಡೆವು. ಬಳಿಕ ಹಿನ್ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಯಾಕಿಂಗ್ ಮಾಡಿ ದಣಿದಿದ್ದೆವು. ಪುಲರಿ ಭಾಗ್ಯ ಆರ್‌ಟಿ ಯೂನಿಟ್‌ನ ಅಂಬಿಲಿ ಅವರ ಮನೆಗೆ ತೆರಳಿದಾಗ ನೀಡಿದ ಆತ್ಮೀಯ ಸ್ವಾಗತ, ಕೇರಳ ಶೈಲಿಯ ಭೋಜನ ನಮಗೆ ಚೈತನ್ಯ ನೀಡಿತು. ಕೇರಳ ಶೈಲಿಯ ದೇಸಿ ಆಹಾರ ಸಿದ್ಧಪಡಿಸುವ ಪ್ರಾತ್ಯಕ್ಷಿಕೆ ವೀಕ್ಷಣೆ, ಭೋಜನ ಸವಿಯುವುದನ್ನೂ ಇಲ್ಲಿ ಪ್ರವಾಸೋದ್ಯಮದ ಭಾಗವಾಗಿ ಯೋಜನೆ ರೂಪಿಸಲಾಗಿದೆ.
ಕುಮಾರಗಂ ಹಾಗೂ ಐಮನಂ ಹಳ್ಳಿಯ ನಡುವಿನ ಹಿನ್ನೀರಿನಲ್ಲಿ ನಮ್ಮ ಬೋಟ್ ಸಾಗುತ್ತಿದ್ದರೆ ಹಳ್ಳಿಯ ಜೀವನ ತೆರೆದುಕೊಳ್ಳುತ್ತಿತ್ತು. ಪ್ರತಿ ಮನೆಯ ಮುಂದೆಯೂ ಪುಟ್ಟ ಪುಟ್ಟ ದೋಣಿ, ಅಲ್ಲಲ್ಲಿ ಮಹಿಳೆಯರು ಗಾಳ ಹಾಕಿ ಮೀನು ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ‘ಕವನಾರ್ (ಮೀನಚಿಲ್) ನದಿಯ ಹಿನ್ನೀರಿನ ಈ ಪ್ರದೇಶದಲ್ಲೇ ಕೇರಳದ ಪ್ರಸಿದ್ಧ ಸ್ನೇಕ್ ಬೋಟ್ ರೇಸ್ ಪ್ರತಿ ವರ್ಷ ಆಗಸ್ಟ್ ಎರಡನೇ ಶನಿವಾರ ನಡೆಯುತ್ತದೆ. ಇದನ್ನು ನೋಡಲು ದೇಶ–ವಿದೇಶದ ಪ್ರವಾಸಿಗರೂ ಬಂದು ದಂಡೆಯುದ್ದಕೂ ನಿಂತಿರುತ್ತಾರೆ’ ಎಂದು ಮಾಹಿತಿ ನೀಡಿದ ಸ್ಥಳೀಯ ಗೈಡ್ ಸಾಬು, ತಾವೂ ಸಹ ಸ್ನೇಕ್ ಬೋಟ್ ರೇಸ್‌ನಲ್ಲಿ ಪಾಲ್ಗೊಂಡು ಬಹುಮಾನ ಗೆದ್ದ ಸಾಧನೆಯ ಮೆಲುಕು ಹಾಕಿದರು.
ಮಹಿಳೆಯರು ತೆಂಗಿನ ನಾರಿನಿಂದ ಹಗ್ಗ ತಯಾರಿಸುವುದು, ಯೋಗ ಮ್ಯಾಟ್ ನೇಯುವುದು, ತೆಂಗಿನ ಮರ ಏರುವುದು, ತೆಂಗಿನ ಮರದಿಂದ ನೀರಾ ಇಳಿಸುವ ಪ್ರಾತ್ಯಕ್ಷಿಕೆಯನ್ನು ನೋಡಿಕೊಂಡು ಕುಮಾರಗಂನತ್ತ ದೋಣಿಯಲ್ಲಿ ಹೊರಟಾಗ ಮುಸ್ಸಂಜೆಯಲ್ಲಿ ಹೊಂಬೆಳಕು ಸೂಸುತ್ತಿದ್ದ ಸೂರ್ಯ ಹಿನ್ನೀರಿನಲ್ಲಿ ಪ್ರತಿಫಲಿಸುತ್ತಿದ್ದ. ಈ ಭಾಗದ ಹಿನ್ನೀರಿನಲ್ಲಿ ಸಂಚರಿಸುವ 35 ದೋಣಿಗಳು ದಿನಾಲೂ ಸಾವಿರಾರು ಪ್ರವಾಸಿಗರಿಗೆ ದ್ವೀಪದ ಹಳ್ಳಿಯ ಸೊಬಗನ್ನು ತೋರಿಸುತ್ತಿವೆ. ದೇಶ–ವಿದೇಶಗಳ ಪ್ರವಾಸಿಗರು ಇಲ್ಲಿ ಬೋಟ್‌ಗಳಲ್ಲಿ ಸಂಚರಿಸಿ ಗ್ರಾಮೀಣ ಜೀವನದ ಅನುಭವ ಪಡೆದು ಹೋಗುವುದು ಸಾಮಾನ್ಯವಾಗಿದೆ. ಹಿನ್ನೀರಿನಲ್ಲಿರುವ ತೆಂಗಿನ ಮರಗಳ ನಡುವೆ ಸೂರ್ಯ ಮರೆಯಾಗುತ್ತಿದ್ದಂತೆ ನಮ್ಮ ದಿನದ ಪ್ರವಾಸಕ್ಕೂ ತೆರೆ ಬಿತ್ತು.
ಕೇರಳದ ಕೊಟ್ಟಾಯಂ ಜಿಲ್ಲೆಯ ಮರವನ್‌ತುರುತ್ತ್ ಹಳ್ಳಿಯ ಆರ್ಟ್ ಸ್ಟ್ರೀಟ್ನಲ್ಲಿ ಮನೆಗಳ ಆವರಣ ಗೋಡೆಗಳ ಮೇಲಿನ ಸುಂದರ ಪೇಟಿಂಗ್‌ಗಳು
ಕೇರಳದ ಕೊಟ್ಟಾಯಂ ಜಿಲ್ಲೆಯ ಮೂವಾಟ್ಟುಪುಳ ನದಿಗೆ ನಿರ್ಮಿಸಿರುವ ತೂಗು ಸೇತುವೆಯ ನೋಟ
ಕೇರಳದ ಮುಜಿರಿ ಹೆರಿಟೇಜ್ ಯೋಜನೆಯಡಿ ಸಂರಕ್ಷಣೆ ಮಾಡಿರುವ ಕೋಟ್ಟಪ್ಪುರಂ ಕೋಟೆಯ ಅವಶೇಷ
ಕೇರಳದ ಮುಜಿರಿ ಹೆರಿಟೇಜ್ ಯೋಜನೆಯಡಿ ಸಂರಕ್ಷಣೆ ಮಾಡಿರುವ ಕೋಟ್ಟಪ್ಪುರಂ ಕೋಟೆಯ ಅವಶೇಷ
ಕೇರಳದ ಮುಜಿರಿ ಹೆರಿಟೇಜ್ ಯೋಜನೆಯಡಿ ಸಂರಕ್ಷಣೆ ಮಾಡಿರುವ ಕೋಟ್ಟಪ್ಪುರಂ ಕೋಟೆಯ ಸ್ಥಳ
ಕೇರಳದ ಕಡಲ ತೀರದಲ್ಲಿ ಮೀನುಗಾರರು ಹಾಕಿರುವ ಚೈನಿಸ್ ಫಿಶಿಂಗ್ ನೆಟ್ನ ಫೋಟೊವನ್ನು ಪ್ರವಾಸಿಗರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡರು
ಕೇರಳದ ಜಲ ಸಾರಿಗೆ ವಾಟರ್ ಮೆಟ್ರೊದಲ್ಲಿ ಪ್ರವಾಸಿಗರು ಪ್ರಯಾಣಿಸುತ್ತಿರುವುದು
ಕೇರಳದ ಜ್ಯೂವ್ ಟೌನ್‌ನ ಪ್ರಾರ್ಥನಾ ಮಂದಿರದ ಗ್ಯಾಲರಿಯಲ್ಲಿ ಯಹೂದಿಗಳು ಭಾರತಕ್ಕೆ ಬಂದ ಬಗೆಯನ್ನು ವಿವರಿಸುವ ಪೇಟಿಂಗ್ಗಳನ್ನು ಪ್ರವಾಸಿಗಳು ವೀಕ್ಷಿಸಿದರು
ಕೇರಳದ ಜ್ಯೂವ್ ಟೌನ್ನಲ್ಲಿರುವ ಯಹೂದಿಗಳ ಪ್ರಾರ್ಥನಾ ಮಂದಿರದ ಒಳನೋಟ
ಕೇರಳದ ಡಚ್ ಪ್ಯಾಲೇಸ್ನ ಹೊರನೋಟ
ಪರ್ವತದತ್ತ ಪಯಣ…
ಮೂರು ದಿನಗಳ ಕಾಲ ಕಡಲು, ನದಿ, ಹಿನ್ನೀರಿನ ತಾಣಗಳಲ್ಲಿ ಸುತ್ತಾಡಿ ಬೆವರು ಹರಿಸಿದ್ದ ನಮ್ಮ ಪ್ರಯಾಣವು ನಾಲ್ಕನೇ ದಿನ ಸಾಂಬಾರು ಪದಾರ್ಥಗಳನ್ನು ಬೆಳೆಯುತ್ತಿದ್ದ ಕಣಿವೆ, ಪರ್ವತ ಪ್ರದೇಶಗಳತ್ತ ಹೊರಳಿತ್ತು. ದೇಶದ ಮೊದಲ ‘ಸಂಪೂರ್ಣ ಸಾಕ್ಷರತಾ ನಗರ’ ಎನಿಸಿಕೊಂಡಿರುವ ಕೊಟ್ಟಾಯಂ ನಗರವನ್ನು ಹಾಯ್ದು ಇಡುಕ್ಕಿ ಜಿಲ್ಲೆಯ ವಾಗಮಣ್ ಹಳ್ಳಿಯತ್ತ ಹೋಗುತ್ತಿದ್ದಾಗ ಕಣಿವೆಯ ನಯನಮನೋಹರ ದೃಶ್ಯಗಳು ರೋಮಾಂಚನಗೊಳಿಸಿತು. ಇದುವರೆಗೂ ಬಿಸಿಲಿನ ಝಳದಲ್ಲಿ ಸುತ್ತಾಡಿದ್ದ ನಮಗೆ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕ ಅನುಭವವಾಯಿತು. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹಸಿರ ಹೊದಿಕೆ, ತೇಲಿ ಬರುತ್ತಿದ್ದ ತಂಗಾಳಿ ಉತ್ಸಾಹದ ಬುಗ್ಗೆಯನ್ನು ಚಿಮ್ಮಿಸಿತು.
ವಾಗಮಣ್ ಎಡ್ವಂಚರ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಪ್ಯಾರಾಗೈಡಿಂಗ್ ಫೆಸ್ಟಿವಲ್‌ನ ರೋಮಾಂಚನಕಾರಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕು ಎಂಬ ನಮ್ಮ ಆಸೆಗೆ ಬಿರುಸಿನಿಂದ ಸುರಿದ ಗುಡುಗು ಸಹಿತ ಮಳೆ ತಣ್ಣೀರೆರಚಿತು. ಸಮುದ್ರ ಮಟ್ಟದಿಂದ ಸುಮಾರು 1,100 ಮೀಟರ್ ಎತ್ತರದಲ್ಲಿರುವ ಪರ್ವತದ ತುತ್ತತುದಿಗೆ ಬರುವಷ್ಟರಲ್ಲಿ ಸಾಹಸ ಕ್ರೀಡಾಪಟುಗಳು ಆಗಷ್ಟೇ ಪ್ಯಾಕಪ್ ಮಾಡಿದ್ದರು. ಬಾನಲ್ಲಿ ಮೂಡಿಬರುತ್ತಿದ್ದ ಕೋಲ್ಮಿಂಚು, ಸುತ್ತಲೂ ಆವರಿಸಿದ್ದ ಕಾರ್ಮೋಡ ಕಣಿವೆಯ ಸೌಂದರ್ಯಕ್ಕೆ ಮುಸುಕು ಹಾಕಿತ್ತು. ಕ್ಷಣ ಮಾತ್ರದಲ್ಲೇ ತೇಲಿ ಬಂದ ದಟ್ಟ ಮೋಡ ನಮ್ಮನ್ನು ಆವರಿಸಿ, ಎದುರಿಗೆ ಇದ್ದವರೂ ಕೆಲ ಕಾಲ ಕಾಣದಂತೆ ಮಾಡಿತ್ತು.
ಪ್ಯಾರಾಗೈಡಿಂಗ್, ಟ್ರೆಕ್ಕಿಂಗ್, ಮೌಂಟೇನ್ ಬೈಕಿಂಗ್, ಸ್ಕೈ ಸೈಕ್ಲಿಂಗ್, ಜಿಪ್‌ಲೈನಿಂಗ್ ಸೇರಿ ಹಲವು ಸಾಹಸ ಕ್ರೀಡೆಗಳಿಗೆ ವಾಗಮಣ್ ಎಡ್ವಂಚರ್ ಪಾರ್ಕ್ ಹೆಸರುವಾಸಿಯಾಗಿದೆ. ಇಲ್ಲಿ ಕಣಿವೆಯತ್ತ ಚಾಚಿಕೊಂಡಿರುವ ಗಾಜಿನ ಸೇತುವೆ ಮೇಲೆ ನಡೆಯುವುದೇ ಒಂದು ರೋಮಾಂಚನಕಾರಿ ಅನುಭವ. ವಾಗಮಣ್ ಪರ್ವತದ ಸುತ್ತ ಕತ್ತಲು ಕವಿಯುತ್ತಿದ್ದಂತೆ ನಾವು ಸಹ ಹಕ್ಕಿಗಳಂತೆ ಗೂಡು ಸೇರಿದೆವು.
ಮುಂಜಾನೆಯ ಚುಮು ಚುಮು ಚಳಿಯ ನಡುವೆಯೇ ಐದನೇ ದಿನ ನಮ್ಮ ಸವಾರಿ ಟೀ ಎಸ್ಟೇಟ್‌ಗಳಿಂದಾಗಿ ಖ್ಯಾತಿ ಪಡೆದಿರುವ ಮುನ್ನಾರ್ ಕಡೆಗೆ ಹೊರಟಿತು. ಗುಡ್ಡಗಾಡಿನ ಪ್ರದೇಶದಲ್ಲಿ ಬೆಳೆದ ಕೋಕಾ, ಕಾಳುಮೆಣಸು, ಯಾಲಕ್ಕಿ, ದಾಲ್ಚಿನಿಯಂತಹ ಸಾಂಬಾರ ಪದಾರ್ಥಗಳ ಘಮಲಿನ ನಡುವೆಯೇ ಘಟ್ಟವನ್ನೇರಿ ಮುನ್ನಾರ್ ತಲುಪಿದಾಗ ಎತ್ತ ನೋಡಿದರೂ ಚಹಾದ ಗಿಡಗಳಿಂದ ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದ ವೈವಿಧ್ಯಮಯ ಲ್ಯಾಂಡ್‌ಸ್ಕೇಪ್ ಚಿತ್ರಣ ಕಾಣುತ್ತಿತ್ತು.
ನೆತ್ತಿ ಮೇಲೆ ಸೂರ್ಯ ಬಂದಾಗ ನಾವು ಲಾಕ್‌ಹಾರ್ಟ್ ಟೀ ಎಸ್ಟೇಟ್‌ಗೆ ಬಂದು ತಲುಪಿದೆವು. ತೇಲಿ ಬರುತ್ತಿದ್ದ ತಂಗಾಳಿಯ ನಡುವೆ ಎಸ್ಟೇಟ್‌ನೊಳಗೆ ‘ಚಹಾ ನಡಿಗೆ’ ಶುರು ಮಾಡುತ್ತಿದ್ದಂತೆ ಗೈಡ್ ರಾಜಾ ಅವರು, ಚಹಾ ಬೆಳೆಯ ವೈಶಿಷ್ಟ್ಯದ ಬಗ್ಗೆ ಕಥೆ ಹೇಳಲಾರಂಭಿಸಿದರು. ಮೋಡಗಳ ಮೆರವಣಿಗೆ ಸೂರ್ಯನ ಪ್ರಖರತೆಯನ್ನು ತಗ್ಗಿಸಿತ್ತು. ಹಚ್ಚಹಸಿರಿನ ನಡುವೆ ಹೆಜ್ಜೆ ಹಾಕುತ್ತಿದ್ದರೆ ಎತ್ತ ನೋಡಿದರೂ ಕಣ್ಣಿಗೆ ಹಬ್ಬ. ‘ಸೆಲ್ಫಿ’ ತೆಗೆದುಕೊಳ್ಳಲು ಜನ ಪೈಪೋಟಿಗೆ ಇಳಿದಂತೆ ಭಾಸವಾಗುತ್ತಿತ್ತು. ದೇಶ–ವಿದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಕಾಲ್ನಡಿಗೆಯಲ್ಲಿ ಸಾಗುತ್ತ ಮುನ್ನಾರ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಎಸ್ಟೇಟ್‌ನ ನಡುವೆ ಕುಳಿತು, ರಾಜಾ ತಂದಿದ್ದ ಬಿಸಿ ಬಿಸಿಯಾಗಿದ್ದ ‘ಮಸಾಲೆ ಬ್ಲ್ಯಾಕ್ ಟಿ’ ಹೀರಿದ ಬಳಿಕ ಲಾಕ್‌ಹಾರ್ಟ್ ಟಿ ಫ್ಯಾಕ್ಟರಿಯತ್ತ ಹೊರಟೆವು. ಬೆಟ್ಟಗಳ ಮಧ್ಯೆ ತಿರುವು–ಮುರುವು ರಸ್ತೆಯಲ್ಲಿ ಜೀಪು ಸಾಗುತ್ತಿದ್ದರೆ ಮುನ್ನಾರ್‌ನಲ್ಲಿ ಚಹಾ ಎಸ್ಟೇಟ್‌ಗಳು ರೂಪಿಸಿದ್ದ ಪ್ರಕೃತಿಯ ಸುಂದರ ವರ್ಣಚಿತ್ರಗಳನ್ನು ಕಣ್ಣು ಸೆರೆ ಹಿಡಿಯುತ್ತಿತ್ತು.
ಲಾಕ್‌ಹಾರ್ಟ್ ಟಿ ಫ್ಯಾಕ್ಟರಿಯೊಳಗೆ ಸುತ್ತಾಡಿ ಚಹಾ ಎಲೆಯನ್ನು ಸಂಸ್ಕರಿಸಿ, ಪ್ಯಾಕ್ ಮಾಡುವ ಪ್ರಕ್ರಿಯೆಯನ್ನು ನೋಡಿಕೊಂಡು ಹೊರ ಬರುವಷ್ಟರಲ್ಲಿ ತುಂತುರು ಮಳೆ ಶುರುವಾಗಿತ್ತು. ಮುಸ್ಸಂಜೆ ಹೊತ್ತಿಗೆ ಮುನ್ನಾರ್ ಪಟ್ಟಣಕ್ಕೆ ಮರಳಿ ಬರುತ್ತಿದ್ದಂತೆ ಮಸಾಲೆ ಪದಾರ್ಥಗಳು, ಬಗೆ ಬಗೆಯ ಹ್ಯಾಂಡ್ ಮೇಡ್ ಚಾಕೋಲೇಟ್, ಪರ್ಫ್ಯೂಮ್‌ಗಳನ್ನು ಅಂದವಾಗಿ ಜೋಡಿಸಿಟ್ಟ ಸಾಲು ಸಾಲು ಅಂಗಡಿಗಳು ಸ್ವಾಗತಿಸಿದವು. ಮುನ್ನಾರ್‌ನ ಮಾರ್ಕೆಟ್‌ನಲ್ಲಿ ಸುತ್ತಾಟ ನಡೆಸುವುದರೊಂದಿಗೆ ದಿನದ ಪ್ರಯಾಣಕ್ಕೂ ತೆರೆ ಎಳೆದೆವು.
ಮುಂಜಾನೆ ಎತ್ತ ನೋಡಿದರೂ ದಟ್ಟ ಮಂಜು ಆವರಿಸಿತ್ತು. ಮಂಜು ಕವಿದ ರಸ್ತೆಯಲ್ಲಿ ಜೀಪು ಸಾಗುತ್ತಿದ್ದರೆ ಟಿ ಎಸ್ಟೇಟ್, ನೀಲಗಿರಿ ತೋಪಿನ ಮೂಲೆಯಿಂದ ಸೂರ್ಯನ ಎಳೆ ಕಿರಣ ಆಗಸ್ಟೇ ಇಣುಕುತ್ತಿತ್ತು. ಮುನ್ನಾರ್ ಸಮೀಪದ ಕುಂಡಲ ಸರೋವರದ ಬಳಿ ಬಂದಾಗ ಇಕೊ ಪಾಯಿಂಟ್ ಸ್ವಾಗತಿಸಿತು. ಸುತ್ತಲೂ ಪರ್ವತಗಳಿಂದ ಕೂಡಿರುವ ಈ ಪ್ರದೇಶದಲ್ಲಿ ನಾವು ಕೂಗುತ್ತಿದ್ದಂತೆ ಪ್ರತಿಧ್ವನಿ ಕೇಳಿಸುತ್ತಿತ್ತು.
ಕೇರಳ ಸರ್ಕಾರದ ಆಹ್ವಾನದ ಮೇರೆಗೆ ಸೆಂಟ್ರಲ್ ಕೇರಳ ಭಾಗದಲ್ಲಿ ಆರು ದಿನಗಳ ಕಾಲ ಪ್ರವಾಸ ಮುಗಿಸಿ ವಿಮಾನ ನಿಲ್ದಾಣದತ್ತ ಹೊರಟೆವು. ಪ್ರವಾಸಿ ತಾಣಗಳಲ್ಲಿ ಕಂಡುಬಂದ ಸ್ವಚ್ಛತೆಯು ಸಾಕ್ಷರತೆಗೆ ಹೆಸರಾಗಿರುವ ಕೇರಳದ ಜನರ ಬದ್ಧತೆಗೆ ಕನ್ನಡಿ ಹಿಡಿದಿತ್ತು. ವಿಮಾನ ಟೇಕ್‌ಆಫ್ ಆಗಿ ಮುಗಿಲೆತ್ತರಕ್ಕೆ ಹಾರುತ್ತಿದ್ದಂತೆ ಕೇರಳದ ಜನರ ಜೀವನಾಡಿ ಪೆರಿಯಾರ್ ನದಿ, ಕಾಲುವೆ– ದ್ವೀಪಗಳ ವಿಹಂಗಮ ರಮ್ಯನೋಟ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣತೊಡಗಿತು.
ನಗರದಿಂದ ಹಿಡಿದು ಕಣಿವೆಯ ಹಳ್ಳಿಗಳ ರಸ್ತೆಗಳ ಪಕ್ಕದಲ್ಲೂ ನಿಂತು ಹೊಟ್ಟೆಪಾಡಿಗಾಗಿ ಕೇರಳ ಸರ್ಕಾರದ ಲಾಟರಿ ಟಿಕೆಟ್‌ಗಳನ್ನು ಮಾರುತ್ತಿದ್ದ ಹಿರಿಯ ಜೀವಗಳು; ತಮ್ಮ ಬದುಕು ಬದಲಾಗುತ್ತದೆ ಎಂಬ ಕನಸಿನೊಂದಿಗೆ ದಿನಗೂಲಿ ಕಾರ್ಮಿಕರು ಲಾಟರಿ ಟಿಕೆಟ್‌ಗಳನ್ನು ಖರೀದಿಸಿ ತಮ್ಮನ್ನು ದಿನಾಲೂ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದ ದೃಶ್ಯಗಳು ಕಾಡತೊಡಗಿತು. ‘ದೇವರ ನಾಡು’ ಎನಿಸಿಕೊಂಡಿರುವ ಕೇರಳದಲ್ಲಿ ಸುತ್ತಾಡಿದಾಗ ಅಲ್ಲಿನ ಪ್ರಕೃತಿ ಮೂಡಿಸಿದ ದೃಶ್ಯಕಾವ್ಯಗಳು ಮನದಲ್ಲಿ ಅಚ್ಚಳಿಯದೇ ಉಳಿದವು…
ಕೇರಳ ಸರ್ಕಾರದ ಲಾಟರಿ ಟಿಕೆಟ್‌ಗಳನ್ನು ಸೈಕಲ್ನಲ್ಲಿ ತೆರಳಿ ಮಾರಾಟ ಮಾಡಿ ಬದುಕು ಸಾಗಿಸುತ್ತಿರುವ ವೃದ್ಧ
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನ ಟೀ ಎಸ್ಟೇಟ್‌ನ ವಿಹಂಗಮ ನೋಟ
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನ ಟೀ ಎಸ್ಟೇಟ್‌ನ ವಿಹಂಗಮ ನೋಟ
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನ ಟೀ ಎಸ್ಟೇಟ್‌ನ ವಿಹಂಗಮ ನೋಟ
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನ ಟೀ ಎಸ್ಟೇಟ್‌ನ ವಿಹಂಗಮ ನೋಟ
ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನ ಟೀ ಎಸ್ಟೇಟ್‌ನ ವಿಹಂಗಮ ನೋಟ
ಕೇರಳದ ವಾಗಮಣ್ ಎಡ್ವಂಚರ್ ಪಾರ್ಕ್‌ನಲ್ಲಿ ಪ್ಯಾರಾಗೈಡಿಂಗ್ ಮಾಡುವ ಕಣಿವೆ ಪ್ರದೇಶದ ವಿಹಂಗಮ ನೋಟ
ಕೇರಳದ ವಾಗಮಣ್ ಕಣಿವೆಯ ವಿಹಂಗಮ ನೋಟ
(ಲೇಖಕರು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಆಹ್ವಾನದ ಮೇರೆಗೆ ತೆರಳಿದ್ದರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.