ADVERTISEMENT

ಕಣಿವೆ ದಾರಿಯಲ್ಲಿ ಸೈಕಲ್‌ ಸವಾರಿ...

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:30 IST
Last Updated 20 ನವೆಂಬರ್ 2019, 19:30 IST
ಖಾರ್ ದುಂಗ್ಲಾ ಪರ್ವತದ ತುದಿ ತಲುಪಿದಾಗ
ಖಾರ್ ದುಂಗ್ಲಾ ಪರ್ವತದ ತುದಿ ತಲುಪಿದಾಗ   

ಬೆಂಗಳೂರಿನಿಂದ ವಿಮಾನದಲ್ಲಿ ಸೈಕಲ್‌ಗಳನ್ನು ಒಯ್ದು, 520 ಕಿ.ಮೀ ಹಿಮ ಪರ್ವತಗಳ ಕಣಿವೆಗಳಲ್ಲಿ ಸೈಕಲ್ ಯಾನ ಮಾಡಿ ಬಂದ ತಂಡದ ಅನುಭವ ಕಥನ ಇಲ್ಲಿದೆ.

ಹಿಮಾಚಲ ಪ್ರದೇಶದ ಮನಾಲಿಯಿಂದ ಲೇಹ್‌ ಮೂಲಕ ಖಾರ್‌ದುಂಗ್ಲಾ ಪರ್ವತದವರೆಗೂ ಸೈಕಲ್‌ನಲ್ಲಿ 520 ಕಿ.ಮೀ ದೂರ ಪ್ರಯಾಣ ಮಾಡಬೇಕೆಂದು ನಿರ್ಧರಿಸಿದ್ದೆವು. ಅದಕ್ಕೆ ಮುಹೂರ್ತ ಕೂಡಿಬಂದಿದ್ದು, ಈ ವರ್ಷದ ಜುಲೈ 25ರಂದು.

ನಾವು ಐವರು ಸ್ನೇಹಿತರು ಬೆಂಗಳೂರಿನಿಂದ ದೆಹಲಿಗೆ ಸೈಕಲ್‌ಗಳ ಸಹಿತ ಹೊರಟೆವು. ವಿಮಾನದಿಂದ ಸೈಕಲ್‌ ಬಿಡಿ ಭಾಗಗಳನ್ನು ತುಂಬಿದ್ದ ‘ಬ್ಯಾಂಗ್‌’ಗಳನ್ನು ಇಳಿಸಿಕೊಂಡೆವು. ಮುಂದೆ, ದೆಹಲಿಯಿಂದ ಹಿಮಾಚಲ ಪ್ರದೇಶದ ಮನಾಲಿಗೆ ವೊಲ್ವೊ ಬಸ್‌ನಲ್ಲಿ 15 ಗಂಟೆಗಳ ಪ್ರಯಾಣ. ಶುಕ್ರವಾರ ಬೆಳಿಗ್ಗೆ ಮನಾಲಿ ತಲುಪಿದೆವು. ಬಸ್‌ನಿಂದ ಬ್ಯಾಂಗ್‌ಗಳನ್ನು ಇಳಿಸಿಕೊಂಡು, ಅಲ್ಲೇ ಮರುಜೋಡಣೆ ಮಾಡಿಕೊಂಡು, ಮಾರನೆಯ ದಿನದ ‘ಸವಾರಿ’ಗೆ ಸಜ್ಜಾದೆವು.

ADVERTISEMENT

ಜುಲೈ 27, ಶನಿವಾರ ಮೊದಲ ದಿನದ ಕಣಿವೆಯಲ್ಲಿ ಸೈಕಲ್ ಸವಾರಿ ಆರಂಭ. ಹಿಂದಿನ ದಿನ ರಾತ್ರಿ ಮಳೆ ಬಂತು. ಹಾಗಾಗಿ, ಬೆಳಿಗ್ಗೆ ನಿಗದಿತ ಅವಧಿಗಿಂತ 2 ತಾಸು ವಿಳಂಬವಾಗಿ (ಬೆಳಿಗ್ಗೆ 8.30ಕ್ಕೆ) ಯಾನ ಶುರುವಾಯಿತು. ದಾರಿಯುದ್ದಕ್ಕೂ ಮಳೆ. ಮಳೆಯಲ್ಲೇ ತೋಯುತ್ತಾ ರೋಥಾಂಗ್‌ ಪಾಸ್‌ ಏರಿ, ಇನ್ನೊಂದು ಕಡೆಯಿಂದ ಇಳಿದು ರಾತ್ರಿ 7ರ ಹೊತ್ತಿಗೆ ಕೋಕ್ಸಾರ್ ಎಂಬ ಜಾಗ ತಲುಪಿದೆವು. ಅಲ್ಲಿ ಉಳಿದುಕೊಳ್ಳಲು ಹೋಟೆಲ್‌ಗಳಿರಲಿಲ್ಲ. ಹಾಗಾಗಿ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸ್ತವ್ಯ.

ಮುಂದಿನ ಸವಾರಿ ಜಿಸ್ಪಾ ಎಂಬಲ್ಲಿಂದ 90 ಕಿ.ಮೀ. ದೂರದ ಸರ್ಚುನತ್ತ. ದಾರಿಯಲ್ಲಿ ಜಿಂಗ್‌ಜಿಂಗ್‌ಬಾರ್ ಮತ್ತು ಬಾರಲಾಚಪಾಸ್ ಎಂಬ ಎರಡು ಪರ್ವತ ಶ್ರೇಣಿಯನ್ನು ದಾಟಬೇಕಿತ್ತು. ಇದು ಎರಡನೇ ದಿನದ ಸವಾರಿಗಿಂತ ಕ್ಲಿಷ್ಟಕರವಾಗಿತ್ತು. ಸೈಕಲ್‌ ತುಳಿಯುತ್ತಾ ಪರ್ವತವನ್ನು ಏರುವಾಗ ಸವಾರರಿಗೆ ಎರಡು ಬಗೆಯ ಸವಾಲುಗಳೆದುರಾಗುತ್ತವೆ. ಮೊದಲನೆಯದು, ಸಮುದ್ರ ಮಟ್ಟದಿಂದ 8 ಸಾವಿರ ಅಡಿಗಳಷ್ಟು ಮೇಲೇರುತ್ತಿದ್ದಂತೆಯೇ ವಾತಾವರಣದಲ್ಲಿ ಆಮ್ಲಜನಕದ ಕೊರತೆಯುಂಟಾಗುತ್ತದೆ. ಇದಕ್ಕೆ ಅಕ್ಯೂಟ್ ಮೌಂಟೇನ್ ಸಿಕ್‌ನೆಸ್ ಎನ್ನುತ್ತಾರೆ. ಎರಡನೆಯದು ಅತ್ಯಂತ ಕಡಿದಾದ ದಾರಿಗಳು. ಈ ದಾರಿಗಳಲ್ಲಿ ಒಂದು ಬದಿ ಪರ್ವತ, ಮತ್ತೊಂದು ಬದಿ ನೂರಾರು ಅಡಿಗಳಷ್ಟು ಆಳವಾದ ಕಣಿವೆ. ಆ ಕಣಿವೆಯ ಆಳದಲ್ಲಿ ಬೋರ್ಗರೆಯುವ ನದಿ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತವೇ ಗತಿ. ಇಂಥದ್ದೇ ಕಠಿಣ ಹಾದಿಯಲ್ಲಿ ನಾವು ಯಶಸ್ವಿಯಾಗಿ ಪಯಣಿಸಿದೆವು.

ನಮ್ಮ ಪ್ರವಾಸದ ಮೂರನೇ ದಿನದಿಂದ ಏಳನೇ ದಿನದವರೆಗೂ ಯಾವುದೇ ಮೊಬೈಲ್ ಸಿಗ್ನಲ್‌ಗಳು ಸಿಗುತ್ತಿರ ಲಿಲ್ಲ. ಹಾಗಾಗಿ ಹೊರ ಪ್ರಪಂಚದ ಸಂಪರ್ಕವೇ ಕಡಿದು ಹೋಗಿತ್ತು. ಆ ದಿನ ನಮ್ಮ ಯೋಜನೆಯಂತೆ ಸರ್ಚು ಎಂಬ ಸ್ಥಳ ತಲುಪಬೇಕಾಗಿತ್ತು ಆದರೆ ಭರತ್‌ಪುರ ಎಂಬಲ್ಲಿ ರಸ್ತೆಯಲ್ಲಿ ಹರಿಯುತ್ತಿದ್ದ ನದಿಯಲ್ಲಿ ದಿಢೀರನೆ ನೀರಿನ ಮಟ್ಟ ಹೆಚ್ಚಿತು. ನದಿ ದಾಟುವಷ್ಟರಲ್ಲೇ ಸಂಜೆ 5.30 ಗಂಟೆಯಾಗಿತ್ತು. ಹಾಗಾಗಿ ಭರತ್‌ಪುರ್‌ದಲ್ಲಿರುವ ತಾತ್ಕಾಲಿಕ ಟೆಂಟ್‌ನಲ್ಲಿಯೇ ರಾತ್ರಿ ಕಳೆಯಲು ನಿರ್ಧರಿಸಿದೆವು. ಆ ಟೆಂಟ್‌ಗಳು ಬರಿ ಪ್ಲಾಸ್ಟಿಕ್ ಹೊದಿಕೆಯವು. ಮೈ ಕೊರೆಯುವ ಚಳಿಯಲ್ಲಿಯೇ ರಾತ್ರಿ ಕಳೆಯುವಂತಾಯಿತು.

ಮುಂದೆ ಭರತ್‌ಪುರದಿಂದ ಸರ್ಚುಗೆ 25 ಕಿ.ಮೀ. ಸರ್ಚು ತಲುಪಿ ವಿಶ್ರಾಂತಿ ಪಡೆದೆವು. ಆ ದಿನ ಸಂಜೆ ನಮ್ಮ ತಂಡದಲ್ಲಿದ್ದ ವಿನಯ್‌ಗೆ ಆಮ್ಲಜನಕದ ಕೊರತೆ ತೀವ್ರವಾಯಿತು. ಅಲ್ಲಿಯೇ ಇದ್ದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು. ಮುಂದೆ ಸರ್ಚುವಿನಿಂದ ಪಾಂಗ್ ಎಂಬ ಸ್ಥಳಕ್ಕೆ ಪ್ರಯಾಣ. ಸುಮಾರು 82 ಕಿ.ಮೀ ದೂರವಾಗುತ್ತದೆ. ಸರ್ಚು, ಹಿಮಾಚಲದ ಗಡಿ ಭಾಗದ ಊರು. ಇದಾದ ಮೇಲೆ ಜಮ್ಮು–ಕಾಶ್ಮೀರ ರಾಜ್ಯವನ್ನು ಪ್ರವೇಶಿಸಿದೆವು. ಆ ದಿನ ನಾವು ಗಾಟಾಲೂಪ್ಸ್ ಎಂಬ 21 ಹೇರ್‌ಪಿನ್ ತಿರುವುಗಳುಳ್ಳ ಕಡಿದಾದ ಬೆಟ್ಟವನ್ನು ದಾಟಿದೆವು.

ಮುಂದೆ ನಾವು ಏರಿಳಿದ ಪರ್ವತದ ಹೆಸರು ‘ಲಾಚುಂಗ್ಲಾ’ ಪಾಸ್. ಇದರ ಎತ್ತರ 16 ಸಾವಿರ ಅಡಿಗಳು. ಲಾಚುಂಗ್ಲಾ ಪಾಸ್‌ನ ತುದಿಯನ್ನು ತಲುಪಿದಾಗ ಸಂಜೆ 4 ಗಂಟೆ. ಅಷ್ಟರಲ್ಲೇ ಚಳಿಗಾಳಿ ಬೀಸುತ್ತಿತ್ತು. ಹಾಗಾಗಿ, ತುದಿಯಲ್ಲಿ ಹೆಚ್ಚು ಸಮಯ ನಿಲ್ಲಲಿಲ್ಲ.

ಮುಂದಿನ ಸವಾರಿಯ ವಿಶೇಷವೆಂದರೆ ‘ಮೋರೆ ಪ್ಲೇನ್ಸ್’ ಎಂಬ ಸ್ಥಳ. ಇದು ಈ ಹೆದ್ದಾರಿಯಲ್ಲಿ ಸಿಗುವ ಅತ್ಯಂತ ಸಮತಟ್ಟಾದ ದಾರಿ. ಏಳಿತದ ಹಾದಿಯಲ್ಲಿ ಕ್ರಮಿಸುವಾಗ, ಸಮತಟ್ಟಾದ ಪ್ರದೇಶ ಸಿಕ್ಕಬಿಟ್ಟರೆ, ಸೈಕಲ್‌ ಸವಾರರಿಗೆ ಒಂಥರಾ ಸ್ವರ್ಗ ಸಿಕ್ಕಂತೆ. ಹಾಗೆಯೇ 34 ಕಿ.ಮೀ. ಉದ್ದದ ಸಮತಟ್ಟಾದ ಹಾದಿಯಲ್ಲಿ ಸೈಕಲ್ ತುಳಿಯುವ ಅನುಭವ ಬಹು ಸುಂದರ. ಸುತ್ತಲೂ ಸಮತಟ್ಟಾದ ಭೂಮಿ, ಮಧ್ಯದಲ್ಲಿ ಉದ್ದಕ್ಕೆ ಮಲಗಿದ್ದ ಟಾರ್ ರಸ್ತೆ, ದೂರದಲ್ಲಿ ಕಾಣುವ ಪರ್ವತ. ಈ ದೃಶ್ಯ ಮನಮೋಹಕ.

ನಮ್ಮ ಏಳನೇ ದಿನದ ಸವಾರಿ ಲಾಟೊನಿಂದ ಲೇಹ್‌ ಪಟ್ಟಣದತ್ತ. ಈ ದಿನ ನಮ್ಮೆಲ್ಲರಿಗೂ ಒಂದು ರೀತಿಯ ಮಿಶ್ರ ಭಾವನೆಗಳು. ಒಂದು ಕಡೆ ಕಠಿಣ ಹಾದಿಯನ್ನು ಯಶಸ್ಸಿಯಾಗಿ ಪೂರೈಸಿದ ಖುಷಿ, ಇನ್ನೊಂದೆಡೆ, ಕಠಿಣ ಪಯಣದಲ್ಲೂ ಖುಷಿ ನೀಡುತ್ತಾ, ಜತೆಯಾಗಿದ್ದ ಹಿಮಾಚ್ಛಾದಿತ ಪರ್ವತಗಳು, ನದಿಗಳು ಹಾಗೂ ಕಣಿವೆಗಳನ್ನು ಬಿಟ್ಟು ಹೋಗಬೇಕಲ್ಲ ಎಂಬ ಬೇಸರ.

ಅಂತೂ ನಮ್ಮ ಸೈಕಲ್ ಸವಾರಿಯ ಕೊನೆ ದಿನ ಬಂತು. ಅದು ಆ ವರೆಗೆ ಮಣಿಸಿದ ಎಲ್ಲಾ ಪರ್ವತ ಹಾದಿಗಿಂತಲೂ ಅತ್ಯಂತ ಕಠಿಣವಾಗಿತ್ತು. ಅದುವೇ ಖಾರ್‌ದುಂಗ್ಲಾ ಪರ್ವತ. ಇದರ ಎತ್ತರ ಸುಮಾರು 18 ಸಾವಿರ ಅಡಿಗಳು. ಇದು ವಿಶ್ವದಲ್ಲೇ ಅತಿ ಎತ್ತರದ ವಾಹನ ಸಂಚಾರದ ರಸ್ತೆ ಇದು (Highest Motorable Pass in the world). ಈ ಪರ್ವತವನ್ನು ಏರುತ್ತಾ ಖಾರ್‌ದುಂಗ್ಲಾ ತುದಿ ತಲುಪಿದಾಗ ಮಧ್ಯಾಹ್ನ 12 ಗಂಟೆ. ಅಷ್ಟರಲ್ಲಾಗಲೇ ವಿಪರೀತ ಚಳಿಗಾಳಿ ಶುರುವಾಗಿತ್ತು. ಹಾಗಾಗಿ ನಾವೆಲ್ಲರೂ ಸರ ಸರನೆ ಫೋಟೊಗಳನ್ನು ಕ್ಲಿಕ್ಕಿಸಿ, ಮ್ಯಾಗಿ ನ್ಯೂಡಲ್ಸ್ ಅನ್ನು ಹೊಟ್ಟೆಗಿಳಿಸಿ ಕೆಳಗಿಳಿಯಲಾರಂಭಿಸಿದೆವು.

ಲೇಹ್‌ ಪಟ್ಟಣದ ಅತ್ಯಂತ ಸುಮಧುರ ಅನುಭವವೆಂದರೆ, ನಮ್ಮ ಜೊತೆಗಾರ ವಿನಯ್ ಅವರ ಸ್ನೇಹಿತರ ಭಾವಮೈದುನ ಮೇಜರ್‌ ಮಂಜುನಾಥ್ ಪರಿಚಯವಾದದ್ದು. ಇವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ರೈತ ಕುಟುಂಬದ ಹಿನ್ನಲೆಯವರು. ಭಾರತೀಯ ಸೇನೆಯ ಅಂಗ ಸಂಸ್ಥೆಯಾದ ಆರ್ಮಿ ಸರ್ವಿಸ್ ಕಾರ್ಪ್ಸ್‌ನ ಇಂಧನ ಶೇಖರಣಾ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ನಾವು ಇಲ್ಲಿಗೆ ಬಂದಿದ್ದು ಅವರಿಗೆ ತಿಳಿದು, ನಮ್ಮೆಲ್ಲರನ್ನೂ ಆರ್ಮಿ ಗೆಸ್ಟ್‌ಹೌಸ್‌ಗೆ ಆಹ್ವಾನಿಸಿ ಸತ್ಕರಿಸಿದರು. ಅವರೊಂದಿಗೆ ಕಳೆದ ಸಮಯ ಬಹಳ ನೆನಪಿನಲ್ಲಿ ಉಳಿಯುವಂಥದ್ದು.

ಕಣಿವೆ ದಾರಿಯಲ್ಲಿ ಸಾಹಸದ ಸೈಕಲ್ ಸವಾರಿ ಮುಗಿಸಿದ ನಾವು ಎಂಟನೇ ದಿನ ಸುಮಧುರ ನೆನಪುಗಳ ಮೂಟೆ ಹೊತ್ತು, ಸೈಕಲ್‌ಗಳ ಸಮೇತ ಲೇಹ್‌ ಪಟ್ಟಣದಿಂದ ದೆಹಲಿಯ ಮೂಲಕ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದೆವು.

ಸೈಕಲ್ ಜೋಡಣೆ ಸುಲಭ

ಬೆಂಗಳೂರಿನಿಂದ ಹೊರಟಾಗ, ಎಲ್ಲ ಸೈಕಲ್ ಬಿಡಿ ಭಾಗಗಳನ್ನು ಒಂದು ಕಡೆ ಸೇರಿಸಿಟ್ಟುಕೊಳ್ಳುತ್ತೇವೆ. ಇವುಗಳನ್ನು ಒಯ್ಯಲೆಂದೇ ಸೈಕಲ್‌ ಬ್ಯಾಂಗ್‌ಗಳಿರುತ್ತವೆ. ಅದರಲ್ಲಿ ನಮ್ಮ ಸೈಕಲ್‍ಗಳ ಚಕ್ರ, ಪೆಡಲ್ ಮತ್ತು ಹ್ಯಾಂಡಲ್ ಬಾರ್ ಅನ್ನು ಕಳಚಿ ಸೇರಿಸುತ್ತೇವೆ. ಇದನ್ನು ಇಡಲು ಕಪಾಟುಗಳಿರುತ್ತವೆ.

ಸವಾರಿಗೆ ಮುಂಚೆ ನಾವುಗಳೇ ಅಲೆನ್ ಕೀ ಸಹಾಯದಿಂದ 30 ನಿಮಿಷದಲ್ಲಿ ಮರು ಜೋಡಿಸಿ ಪ್ರಯಾಣಕ್ಕೆ ಸಿದ್ಧ ಮಾಡುತ್ತೇವೆ. ಮರು ಜೋಡಣೆ ತುಂಬ ಕಷ್ಟವೇನಲ್ಲ, ಸ್ವಲ್ಪ ಅನುಭವ ಬೇಕಷ್ಟೆ.

ಮೂರು ತಿಂಗಳ ತಯಾರಿ

ಕಣಿವೆ ದಾರಿಯಲ್ಲಿ ಸೈಕಲ್‌ ಸವಾರಿ ಮಾಡಲು ನಾವು ಮೂರು ತಿಂಗಳು ತಾಲೀಮು ನಡೆಸಿದ್ದೆವು. ಪ್ರತಿ ನಿತ್ಯ ಸುಮಾರು 50 ಕಿ.ಮೀವರೆಗೆ ಸೈಕಲ್ ತುಳಿಯುತ್ತಿದ್ದೆವು. ನಿತ್ಯ ಯೋಗ, ಪ್ರಾಣಾಯಾಮ ಮಾಡುತ್ತಿದ್ದೆವು. ಆಮ್ಲಜನಕ ಕಡಿಮೆ ಇರುವ ಹಿಮ ಪ್ರದೇಶಗಳಿಗೆ ಹೊಂದಿಕೊಳ್ಳುವುದಕ್ಕಾಗಿ ಕೋರ್ ಹಾಗೂ ಕ್ವಾಡ್ರಿಸೆಪ್ಸ್ ವ್ಯಾಯಾಮಗಳನ್ನು ಕಡ್ಡಾಯವಾಗಿ ಮಾಡುತ್ತಿದ್ದವು.

ಈ ದಾರಿಗೆ 5 ತಿಂಗಳು ರಜೆ..

ನಮ್ಮ ಸೈಕಲ್ ಸವಾರಿಯ ಒಟ್ಟು ದೂರ 520 ಕಿ.ಮೀ(ಮನಾಲಿ – ಲೇಹ್‌ – ಖಾರ್‌ದುಂಗ್ಲಾವರೆಗೆ). ಈ ರಸ್ತೆ ವರ್ಷದಲ್ಲಿ ಐದು ತಿಂಗಳು ಮಾತ್ರ (ಮೇ – ಸೆಪ್ಟೆಂಬರ್‌) ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಇದು ಮಂಜುಮುಸುಕಿದ ದಾರಿ. ಹಾಗಾಗಿ ಬಂದ್‌ ಆಗುತ್ತದೆ. ನಾವು ಸವಾರಿ ಶುರುಮಾಡಿದಾಗ, ಶುಭ ಕೋರುವಂತೆ ಮಳೆ ಬರುತ್ತಿತ್ತು. ಅಲ್ಲಿನ ಹವಾಮಾನದ ವಿಶೇಷವೆಂದರೆ, ಮುಂಜಾನೆ ಐದೂವರೆಗೆ ಬೆಳಕಾಗುತ್ತದೆ. ರಾತ್ರಿ 7.30 ಯಾದರೂ ಬೆಳಕು ಇರುತ್ತದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.