
ಅರಬ್ ನಾವಿಕರು ಮಾರಿಷಸ್‌ಗೆ ಬಂದು ‘ದಿನಾ ಅರೋಬಿ’ ಹೆಸರಿಟ್ಟು ನೆಲೆಸಿದರು. ಪ್ರಕ್ಷುಬ್ಧ ವಾತಾವರಣಕ್ಕೆ ಹೆದರಿ ದ್ವೀಪ ತ್ಯಜಿಸಿದರು. 1507ರಲ್ಲಿ ಪೋರ್ಚುಗೀಸರು ಹಂಸಗಳ ತಾಣ ಎಂದು ಬಣ್ಣಿಸಿದರು. 1598ರಲ್ಲಿ ಡಚ್ಚರ ಹಡಗು ಚಂಡಮಾರುತಕ್ಕೆ ಸಿಕ್ಕಿ ಹೈರಾಣಾದಾಗ ಒಳಗೆ ಪ್ರವೇಶಿಸಿ, ನೆದರ್‌ಲ್ಯಾಂಡ್ಸ್ ರಾಜಕುಮಾರನ ಹೆಸರನ್ನಿಟ್ಟು ‘ಮಾರಿಷಸ್’ ಎಂದು ಕರೆದರು.
1715ರಲ್ಲಿ ಫ್ರೆಂಚರ ಆಳ್ವಿಕೆ ಆರಂಭವಾಯಿತು. 1810ರಲ್ಲಿ ಬ್ರಿಟಿಷರು ದ್ವೀಪದ ಸಮಸ್ಯೆಗಳಿಗೆ ದಾರಿ ಹುಡುಕಿದರು. ಹೀಗೆ ಅರಬರಿಂದ ಆಸ್ಟ್ರೋನೇಷಿಯನ್ ಕಾಲದವರೆಗೆ ಆಡಳಿತ ನಡೆದು ಮಾರಿಷಸ್ ಸ್ವತಂತ್ರವಾಯಿತು. ಇದಕ್ಕೆ ಭಾರತದ ಕಾರ್ಮಿಕರ ಕೊಡುಗೆಯೂ ಮಹತ್ವದ್ದು. ಮಾರಿಷಸ್‌ನ ಪ್ರಥಮ ಪ್ರಧಾನಮಂತ್ರಿ ಶಿವಸಾಗರ್ ರಾಮ್ಗೂಲಂ ಭಾರತದವರು. ಈಗ ಪ್ರಧಾನಮಂತ್ರಿಯಾಗಿರುವವರು ಅವರ ಮಗನೇ.
ಮಾರ್ಕ್ ಟ್ವೇಯನ್ ಬರೆದ ‘ಫಾಲೋಯಿಂಗ್ ದಿ ಇಕ್ವೇಟರ್’ ಓದುತ್ತಿದ್ದಾಗ, ಸೃಷ್ಟಿಕರ್ತ ಮೊದಲು ಮಾರಿಷಸ್ ಸೃಷ್ಟಿಸಿ ಆನಂತರ ಸ್ವರ್ಗವನ್ನು ಸೃಷ್ಟಿಸಿದ ಎಂಬ ಮಾತು ಬರುತ್ತದೆ. ಇಲ್ಲಿನ ಕೌತುಕದ ಇತಿಹಾಸ ಗಮನಿಸಿ ಈ ದ್ವೀಪಕ್ಕೆ ಹೊರಟೆ. ವಿಮಾನದ ಕಿಟಕಿಯ ಮೂಲಕ ಮಾರಿಷಸ್ ಹಿಂದೂ ಮಹಾಸಾಗರದಲ್ಲಿ ನೀಲಮಣಿಯಂತೆ ಕಂಗೊಳಿಸುತ್ತಿತ್ತು. ಅಂಕುಡೊಂಕು ರಸ್ತೆಯಲ್ಲಿ ಕಾರುಗಳು ಇರುವೆಯಂತೆ ಸಾಲುಗಟ್ಟಿದ್ದವು. ಕಣ್ಣು ಹಾಯಿಸಿದಷ್ಟು ದೂರ ಹಸುರಿನ ಕಬ್ಬಿನ ಗದ್ದೆ, ಆಗಸದಲ್ಲಿ ಅರಳೆ ರಾಶಿಯಂಥ ಮೋಡ, ನೆಲ ಉಳಿಸಲೆಂದೇ ಕಟ್ಟಿದ ಗಗನಚುಂಬಿ ಕಟ್ಟಡಗಳು ಕಾಣಿಸುತ್ತಿದ್ದವು.
ಲೀಆ್ಯಕ್ಸ್‌ಸರ್ಫ್ ಲಗೂನು ನೀಲಿಕಡಲ ಕಿನಾರೆ ನೋಡಲು ಪ್ರಶಾಂತವಾಗಿತ್ತು. ಬಿಸಿಲೇರುತ್ತಿದ್ದಂತೆ ಮಳೆ ಸುರಿದು ಸ್ತಬ್ಧವಾಯಿತು. ಸುತ್ತ ಸ್ನಾರ್ ಕೆಲಿಂಗ್, ಸ್ಕೂಬಾ ಡೈವಿಂಗ್, ಯಾಚಿಂಗ್ ಹಾಗೂ ಸರ್ಫ್ ಬೋಟಿಂಗ್ ಮಾಡುವ ಸಾಹಸಿಗರ ಗುಂಪೇ ಕಾಣುತ್ತಿತ್ತು. ಮಕ್ಕಳು, ಮುದುಕರು, ಮಹಿಳೆಯರು ಗಾಜಿನ ತಳವಿರುವ ಬೋಟಲ್ಲಿ ಕುಳಿತು ಬಣ್ಣಬಣ್ಣದ ಮೀನು, ಹವಳದ ಗುಚ್ಛಗಳನ್ನು ನೋಡುವುದರಲ್ಲಿ ತಲ್ಲೀನರಾಗಿದ್ದರು. ಗಾಲ್ಫ್ ಕೋರ್ಟ್, ತಿಂಡಿ ಅಂಗಡಿ, ಚಾರಣಿಗರ ಟೆಂಟ್ ಗಮನ ಸೆಳೆಯುತ್ತಿದ್ದವು. ಹೈಸ್ಪೀಡ್ ಬೋಟಲ್ಲಿ ಗ್ರ್ಯಾಂಡ್ ರಿವರ್ ಸೌತ್ ಈಸ್ಟ್ ಜಲಪಾತಕ್ಕೆ ಹೊರಟಾಗ ಹಸಿರು ಕೋವಿ ರೋಮಾಂಚನಗೊಳಿಸಿತ್ತು. ಅದು ಮಾರಿಷಸ್ ದ್ವೀಪದ ಅತಿ ಉದ್ದವಾದ ನದಿ. ಡಚ್ಚರು ದಟ್ಟವಾದ ಎಬೋನಿ ಮರಗಳನ್ನು ಕಡಿದು ಸ್ವದೇಶಕ್ಕೆ ಸಾಗಿಸಿದ್ದು ಈ ನದಿಯ ಮೂಲಕವೇ.
ಲಗೂನಿನ ಮತ್ತೊಂದು ಪಾರ್ಶ್ವದಿಂದ 6,574 ಹೆಕ್ಟೆರ್ ವಿಶಾಲವಾದ ಬ್ಲ್ಯಾಂಕ್ ರಿವರ್ ಗಾರ್ಜ್ ಹರಡಿಕೊಂಡಿತ್ತು. ಶಿಲಾ ಪರ್ವತ, ಬಣ್ಣದ ಮರಳುಗಲ್ಲು, ಹುಲ್ಲುಗಾವಲು, ಹೈಕಿಂಗ್ ಸಮಿಟ್, ಗುಹೆ, ಸಸ್ಯರಾಶಿ, ಪ್ರಾಣಿ, ಪಕ್ಷಿಗಳು ಪ್ರವಾಸಿಗರಿಗೆ ಮನತಣಿಸುತ್ತಿದ್ದವು. ದ್ವೀಪದ ಅಳಿದುಳಿದ ಜೀವಿಗಳ ಸಂರಕ್ಷಣೆಗೆ ಅಲ್ಲಿ ಯೋಜನೆ ರೂಪಿಸಿದ್ದರು. ಹತ್ತಿರದ ಬೆಟ್ಟದ ನೆತ್ತಿಯಲ್ಲಿ ಗಂಗಾ ತಾಲೋ ಎಂಬ ಮತ್ತೊಂದು ಜಾಗಕ್ಕೆ ಹೆಜ್ಜೆ ಇರಿಸಿದೆವು. 108 ಅಡಿ ಎತ್ತರದ ಶಿವನ ಪ್ರತಿಮೆ ಹಾಗೂ ದುರ್ಗಾ ಪ್ರತಿಮೆ ಎದ್ದು ಕಾಣುತ್ತಿದ್ದವು. ಗ್ರ್ಯಾಂಡ್‌ಬೇಸಿನ್ ಎಂಬ ಅಗ್ನಿಪರ್ವತದ ಕ್ರೇಟರ್ ಸರೋವರ, ಸುತ್ತ ದಟ್ಟಕಾಡಿನಿಂದ ಕೂಡಿದ್ದು ಆಕರ್ಷಕವಾಗಿದೆ. ಗಂಗಾ ನದಿ ಗುಪ್ತಗಾಮಿನಿಯಾಗಿ ಬಂದು ಗಂಗಾತಾಲೋಗೆ ಬಂದು ಸೇರುತ್ತದೆಂಬುದು ಅಲ್ಲಿಯ ನಂಬಿಕೆ.
ಗಂಗಾತಾಲೋದಿಂದ ಬರೋಬ್ಬರಿ 30 ಕಿ.ಮೀ. ದೂರದ ಆ ತಾಣ ತಲುಪುತ್ತಲೇ ದಟ್ಟಕಾಡಿನ ಗರ್ಭದಿಂದ ಡುಕಸಾನೋ ನದಿ ಬಸಾಲ್ಟ್ ಕ್ಲಿಫ್‌ನ ಆಳ ಬಾವಿಯೊಳಗೆ 300 ಅಡಿ ಜಲಪಾತ ಧುಮುಕಿ ಇಡೀ ಕಣಿವೆಯೇ ಮಾರ್ದನಿಸುತ್ತಿತ್ತು. 1800ರಲ್ಲಿ ಚಾರ್ಲಸ್ ಚಾಮರೆಲ್ ಜಲಪಾತವನ್ನು ಪತ್ತೆ ಮಾಡಿದ್ದಲ್ಲದೇ, ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ. ಇಂದಿಗೂ ಜಲಪಾತಕ್ಕೆ ಮಾತ್ರವಲ್ಲ, ಹತ್ತಿರದ ಊರಿಗೂ ಚಾಮರೆಲ್ ಎನ್ನುತ್ತಾರೆ.
ಪಕ್ಕದಲ್ಲಿಯೇ ಏಳು ಬಣ್ಣದ ದಿಣ್ಣೆ (Seven Color hill) ಎಂಬ ವಿಸ್ಮಯವಿತ್ತು. ಎಳೆಬಿಸಿಲಿಗೆ ದಿಣ್ಣೆ, ಕಲ್ಲಂಗಡಿ ಹೋಳಿನಂತೆ ಪದರ ಪದರವಾಗಿ ಕೆಂಪು, ಹಳದಿ, ಕಂದು, ನೇರಳೆ ಹಾಗೂ ಕಪ್ಪು ಬಣ್ಣದಲ್ಲಿ ಕಾಣಿಸುತ್ತಿತ್ತು. ‘ಲೆಸ್ ಕೋಟ್ಸ್ ಡಿ ಮೆಲಾನ್’ ಎಂದು ಮಾರಿಷಸ್ ಭಾಷೆಯಲ್ಲಿ ಅವುಗಳನ್ನು ಕರೆಯಲಾಗಿದೆ. ಐದು ಮಿಲಿಯನ್ ವರ್ಷಗಳ ಹಿಂದೆ ಅಗ್ನಿಪರ್ವತದ ಲಾವಾ ಉಕ್ಕಿ ಹರಿದು ಸುಣ್ಣ, ಪೊಟ್ಯಾಷ್, ಕಬ್ಬಿಣಾಂಶ ಪಾಸ್ಫೋರಿಕ್ ಆಮ್ಲದಂಥ ರಾಸಾಯನಿಕಗಳು ಘನೀರ್ಭವಿಸಿ ದಿಣ್ಣೆ ಸೃಷ್ಟಿಯಾದವೆಂದು ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.
ದಕ್ಷಿಣ ಗೋಳಾರ್ಧದ 300 ವರ್ಷ ಇತಿಹಾಸದ ರಾಮ್ಗೂಲಂ ಸಸ್ಯೋದ್ಯಾನಕ್ಕೆ ಭೇಟಿ ನೀಡಿದೆವು. 85 ಜಾತಿಯ ತಾಳೆಮರ, 650 ಬಗೆಯ ದೇಸಿ ಹಾಗೂ ವಿವಿಧ ದೇಶದ ಸಸ್ಯತಳಿಗಳನ್ನು ನೋಡಿ ಬೆರಗಾದೆವು. ಅತಿ ದೊಡ್ಡ ವಾಟರ್ ಲಿಲ್ಲಿ ಹಾಗೂ ಕಮಲದ ಹೂವಿನ ಕೊಳವಂತೂ ಮನಮೋಹಕ. ಅಂಚಿನಲ್ಲಿ ಮಡಿಸಿಕೊಂಡ ಹಣತೆಯಂಥ ಗಂಗಾಳದ ಎಲೆಗಳಂತೂ ಲಿಲ್ಲಿ ಕೊಳದಲ್ಲಿ ರಾರಾಜಿಸುತ್ತಿದ್ದವು. ಕೆಂಪು ಪೋಡಿ, ಅರಿಸಿನ ಗುಬ್ಬಿ, ಜೀಬ್ರಾ ಪಾರಿವಾಳ, ಹಸಿರು ಹಾವ್ರಾಣಿ, ಬಾತುಕೋಳಿ, ಜಿಂಕೆ, ಕಡವೆ, ಆಮೆ ಇವು ಕುತೂಹಲವನ್ನು ತಣಿಸುತ್ತಿದ್ದವು.
ಲಂಡನ್ನಿನ ಕೀವ್ ಗಾರ್ಡನ್ ಬಿಟ್ಟರೆ ಜಗತ್ತಿನಲ್ಲಿ ಇದೇ ದೊಡ್ಡ ಸಸ್ಯೋದ್ಯಾನ ಎಂದು ಗೈಡ್ ಹೆಮ್ಮೆಯಿಂದ ಹೇಳುತ್ತಿದ್ದರು.
ಮಧ್ಯಾಹ್ನ ಕಸೇಲಾ ನೇಚರ್ ಪಾರ್ಕಿಗೆ ಕಾಲಿರಿಸಿದೆವು. ಕ್ವಾಡ್ ಬೈಕಿಂಗ್, ಜಿಪ್ ಲೈನಿಂಗ್, ಹೈಕಿಂಗ್‌ನಂಥ ಸಾಹಸ ಕ್ರೀಡೆ ಒಂದು ಕಡೆಯಾದರೆ, ಮತ್ತೊಂದು ಕಡೆ ಹುಲಿ, ಸಿಂಹ, ಚಿರತೆಯಂಥ ತರಬೇತಿ ಪಡೆದ ಪ್ರಾಣಿಗಳ ಜೊತೆ ನಡೆಯುವ ಪ್ರವಾಸಿಗರ ಧೈರ್ಯ ಮೆಚ್ಚುವಂತಿತ್ತು. ಜಿರಾಫೆ, ಜೀಬ್ರಾ, ಘೇಂಡಾಮೃಗದಂಥ ವೈವಿಧ್ಯಮಯ ಪ್ರಾಣಿಲೋಕದ ತೆರೆದ ಬಯಲು ಕಸೇಲಾ ಪಾರ್ಕ್ ಎಂದರೆ ತಪ್ಪಲ್ಲ.
ಮಾರಿಷಸ್ ವಿಕಾಸವಾದದ್ದು ಎಂಟು ಮಿಲಿಯನ್ ವರ್ಷಗಳ ಹಿಂದೆ. 200 ಮಿಲಿಯನ್ ವರ್ಷಗಳ ಹಿಂದೆ ಗೊಂಡ್ವಾನಾ ಎಂಬ ಸೂಪರ್ ಕಾಂಟಿನೆಂಟ್ ಸಾಗರದಲ್ಲಿ ಮುಳುಗಿದಾಗ ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ ಹಾಗೂ ಆಂಟಾರ್ಕ್ಟಿಕಾ ಭೂಖಂಡಗಳು ಒಡೆದು ದೂರ ಸರಿದವು. ಹಿಂದೂ ಮಹಾಸಾಗರ ಉದ್ಭವಿಸಿತು. ಅಗ್ನಿಪರ್ವತ ವೊಂದು ಸ್ಫೋಟವಾಗಿ ಮಡಗಾಸ್ಕರ್ ದ್ವೀಪ ಮುರಿದುಹೋಗಿ ಚಿಕ್ಕ ಚಿಕ್ಕ ಚೂರು ಸವಕಳಿಗೊಂಡು ಮುಳುಗಿ ಮಾರಿಷಸ್ ಮಾತ್ರ ಉಳಿದುಕೊಂಡಿತು.
ಮಾರಿಷಸ್ ದ್ವೀಪ ಎನ್ನಲು ಕ್ರೇಟರ್ ಸರೋವರ, ಏಳು ಬಣ್ಣದ ದಿಣ್ಣೆ, ಕಪ್ಪು ಬಣ್ಣದ ಬೀಚು, ಸಿಂಹ ಶಿಖರ, ಸ್ಲೀಪಿಂಗ್ ಲೇಡಿಯಂಥ ಸಾಕ್ಷಾಧಾರಗಳು ಇಂದಿಗೂ ಜೀವಂತವಾಗಿವೆ. ಕೇವಲ 500 ವರ್ಷಗಳ ಹಿಂದೆ ನಿರ್ಜನವಾಗಿದ್ದ ಈ ದ್ವೀಪ ಫ್ರೆಂಚರ ಮತ್ತು ಬ್ರಿಟಿಷರ ಆಡಳಿತಾವಧಿಯಲ್ಲಿ ಬದಲಾವಣೆ ಕಂಡಿತು.
ಡಚ್ಚರೇ ಮಾರಿಷಸ್‌ನಲ್ಲಿ ಜಾವಾದಿಂದ ಕಬ್ಬು ತಂದು ಬೆಳೆದರೂ, ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿದ್ದು ಫ್ರೆಂಚರು. ಸಾವಿರಾರು ಕಾರ್ಮಿಕರು ಭಾರತ, ಚೀನಾ, ಆಫ್ರಿಕಾಗಳಿಂದ ಬಂದರು. ಮತಾಂತರಕ್ಕೆ ಒಪ್ಪದ, ಹೇಳಿದ ಕೆಲಸ ಮಾಡದವರಿಗೆ ಮರಣದಂಡನೆಯಂಥ ಕ್ರೌರ್ಯ ಅಟ್ಟಹಾಸವನ್ನು ಮೆರೆಯಲಾಯಿತು. ಗುಲಾಮಗಿರಿಯ ವಿರುದ್ಧ ಕಾರ್ಮಿಕರು ದಂಗೆ ಎದ್ದರು. ಸಾವಿರರು ಅಮಾಯಕರು ತಲೆಮರೆಸಿಕೊಂಡು ‘ಲೇಮೋರ್ನ್ ಬ್ರಾಬಂಟ್’ ಗುಹೆಗಳಲ್ಲಿ ಅಡಗಿ ಕುಳಿತರು.
1835ರಲ್ಲಿ ಬ್ರಿಟಿಷರು ಕಾರ್ಮಿಕರಿಗೆ ಸ್ವಾತಂತ್ರ್ಯ ಘೋಷಣೆ ಮಾಡಿದರು. ಸುದ್ದಿ ತಿಳಿಸಲು ಪೊಲೀಸರು ಲೇಮೋರ್ನ್ ಬೆಟ್ಟಕ್ಕೆ ಬಂದಾಗ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಹಾರಿ ಆತ್ಮಹತ್ಯೆ ಮಾಡಿಕೊಂಡರು. ಲೇಮೋರ್ನ್ ಬೆಟ್ಟ ಇಂದಿಗೂ ಗುಲಾಮಗಿರಿಯ ವಿರುದ್ಧ ಹೋರಾಡಿದ ಜಾಗತಿಕ ಯುನೆಸ್ಕೊ ತಾಣವಾಗಿದೆ.
ಪೋರ್ಟ್‌ಲೂಯಿಸ್‌ನ ಅಪ್ರವಾಸಿ ಘಾಟ್ ನೆಲ-ಕಡಲುಗಳ ಸಂಗಮ. ಪುರಾತನ ಮ್ಯೂಸಿಯಂ ಕೂಡಾ ಅಲ್ಲಿದೆ. ಆ ಜಾಗದಲ್ಲಿ ಗುಲಾಮಗಿರಿ ಅಂತ್ಯಗೊಂಡ ನಾಮಫಲಕ, ಹೊಸ ಇತಿಹಾಸದ ಬಾವುಟ ಮಾರಿಷಸ್‌ಗೆ ಬರುವ ಕಾರ್ಮಿಕರಿಗೆ ಹೊಸ ಹುರುಪು ನೀಡುವಂತಿದ್ದವು. ಬ್ರಿಟಿಷರು ಹೊಸ ಪ್ರಯೋಗ ಜಾರಿಗೆ ತಂದರು. ಅದುವೇ ವಲಸೆ ಇಲಾಖೆ ಅಪ್ರವಾಸಿ ಘಾಟ್ ಯುನೆಸ್ಕೋ ಪರಂಪರೆಯ ತಾಣ. ಸ್ವರ್ಗಸಮಾನವಾದ ಒಂದು ದ್ವೀಪದಲ್ಲಿ ನರಕಯಾತನೆಗಳೂ ಇವೆ ಎಂಬ ಸತ್ಯ ಅವತ್ತೇ ತಿಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.