ADVERTISEMENT

ಕಮೊನ್‌ ವಿಯೆಟ್ನಾಂ: ಮೆಕಾಂಗ್‌ ಡೆಲ್ಟಾ... ಅವಸರವಿಲ್ಲಿ ಉಲ್ಟಾಪಲ್ಟಾ

​ಪ್ರವೀಣ ಕುಲಕರ್ಣಿ
Published 27 ಜುಲೈ 2025, 1:30 IST
Last Updated 27 ಜುಲೈ 2025, 1:30 IST
ಮೆಕಾಂಗ್‌ ನದಿಯ ಕವಲಿನಲ್ಲಿ ಹೀಗೊಂದು ದೋಣಿ ವಿಹಾರ
ಮೆಕಾಂಗ್‌ ನದಿಯ ಕವಲಿನಲ್ಲಿ ಹೀಗೊಂದು ದೋಣಿ ವಿಹಾರ    
ವಿಯೆಟ್ನಾಂ ದೇಶದ ಮೆಕಾಂಗ್‌ ನದಿ ಪರಿಸರದಲ್ಲಿ ಬದುಕು ಸಾವಧಾನದ ಮಂತ್ರ ಪಠಿಸುತ್ತಿದೆ. ಈ ಪರಿಸರದಲ್ಲಿ ಸುತ್ತಾಡಿದ ಲೇಖಕರು ತಮ್ಮ ಅನುಭವವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ವಿಯೆಟ್ನಾಂನ ಝಗಮಗಿಸುವ ಹೋ ಚಿ ಮಿನ್‌ ಸಿಟಿಯಿಂದ ನಮ್ಮನ್ನು ಮೆಕಾಂಗ್‌ ಡೆಲ್ಟಾ ಕಡೆಗೆ ಕರೆದೊಯ್ಯುತ್ತಿದ್ದ ಬಸ್ಸು ಬಲು ನಿಧಾನವಾಗಿ ಚಲಿಸುತ್ತಿತ್ತು. ಬಸ್ಸಿನಲ್ಲಿದ್ದ ಎಲ್ಲರಿಗೂ ಚಾಲಕನ ಮೇಲೆ ವಿಪರೀತ ಸಿಟ್ಟು ಬರುತ್ತಿತ್ತು. ಅಂತೂ ನಾವು ಮೈ ಥೋ ನಗರ ತಲುಪಿ, ಥಾಯ್‌ಸನ್‌ ಎಂಬ ಪುಟ್ಟ ದ್ವೀಪದತ್ತ ದೋಣಿಯಲ್ಲಿ ಹೊರಟಾಗ ಅನ್ನಿಸಿದ್ದು: ‘ಮೆಕಾಂಗ್‌ ನದಿಯ ಪರಿಸರದಲ್ಲಿ ಬದುಕು ಸಾವಧಾನದ ಮಂತ್ರ ಪಠಿಸುತ್ತಿದೆ’ ಎಂದು. ಪ್ರಾಯಶಃ ಬಸ್ಸಿನಲ್ಲಿ ಬರುವಾಗ ನಮ್ಮ ಚಾಲಕ ಅದರ ಸಣ್ಣದೊಂದು ಝಲಕ್‌ ತೋರಿಸುತ್ತಿದ್ದ ಅಥವಾ ಸಾವಧಾನದ ದಿನಚರಿಗೆ ನಮ್ಮನ್ನು ಅಣಿಗೊಳಿಸುತ್ತಿದ್ದ!

ಗಂಟೆಗೆ 400 ಕಿ.ಮೀ. ವೇಗದಲ್ಲಿ ಓಡುವ ಫೆರಾರಿಯನ್ನು ತಂದುಬಿಟ್ಟರೂ ಥಾಯ್‌ಸನ್‌ ದ್ವೀಪವು ಆ ಕಾರಿಗೆ ತಾಳ್ಮೆಯ ಪಾಠವನ್ನು ಹೇಳಿಕೊಡುತ್ತದೆ. ಗಡಿಯಾರದ ಮುಳ್ಳು ಸಹ ಇಲ್ಲಿ ನಿಧಾನಗತಿಯಲ್ಲಿ ತಿರುಗುತ್ತದೆ. ಮರದ ಪುಟ್ಟ ದೋಣಿಗೆ ಹುಟ್ಟು ಹಾಕುತ್ತಾ, ಪುಳಕ್‌ ಎಂಬ ನೀರಿನ ಸದ್ದಿಗೆ ಕಿವಿಗೊಡುತ್ತಾ, ತಾಳೆಮರಗಳಿಂದ ಸುತ್ತುವರಿದ ಇಲ್ಲಿನ ಇಕ್ಕಟ್ಟಾದ ಕಾಲುವೆಗಳಲ್ಲಿ ಸಂಚರಿಸುವಾಗ, ‘ಸಾವಧಾನದ ಬದುಕು ಎಷ್ಟು ಚಂದ, ಅಲ್ಲವೇ’ ಎಂದು ಇಲ್ಲಿನ ಗಾಳಿ ಕಿವಿಯಲ್ಲಿ ಉಸುರಿದಂತಾಗುತ್ತದೆ. ಹೇಳಿ ಕೇಳಿ ಥಾಯ್‌ಸನ್‌ ದ್ವೀಪ ಮೆಕಾಂಗ್‌ ನದಿಯ ಕಂದನಲ್ಲವೇ ಮತ್ತೆ? ಟಿಬೆಟನ್‌ ಪ್ರಸ್ಥಭೂಮಿಯಲ್ಲಿ ಹುಟ್ಟಿ ಚೀನಾ, ಮ್ಯಾನ್ಮಾರ್‌, ಲಾವೋಸ್‌, ಥಾಯ್ಲೆಂಡ್‌, ಕಾಂಬೋಡಿಯಾ ದೇಶಗಳನ್ನು ಹಾದು, ವಿಯೆಟ್ನಾಂ ತಲುಪುವ ಹೊತ್ತಿಗೆ 4,500 ಕಿ.ಮೀ.ನಷ್ಟು ದೂರ ಕ್ರಮಿಸುವ ಮೆಕಾಂಗ್‌ಗೆ ಒಂದಿನಿತೂ ದಣಿವಿಲ್ಲ. ಸಾಗರವನ್ನು ಬೇಗ ತಲುಪಬೇಕೆಂಬ ಆತುರವೂ ಇಲ್ಲ. ಬದಲಿಗೆ, ಮುಖಜಭೂಮಿಗೆ ಹೊಂದಿಕೊಂಡ ತನ್ನ ಒಡಲಿನಲ್ಲಿ ಸ್ವರ್ಗದ ತುಣುಕುಗಳನ್ನು ಸೃಷ್ಟಿಸುವಲ್ಲಿ ಅದು ಸದಾ ಮಗ್ನ!

ಓಡಾಡಿ ದಣಿವಾಯಿತೇ? ಎಳನೀರು ಕುಡಿಯಬನ್ನಿ...

ತಿಳಿ ಕಂದುಬಣ್ಣದ ನೀರನ್ನು ಎರಡೂ ತೀರಗಳ ಜೀವಜಗತ್ತಿಗೆ ಮೊಗೆ ಮೊಗೆದು ಕೊಡುವ ಮೆಕಾಂಗ್‌ಗೆ ರಸವತ್ತಾದ ಹಣ್ಣು–ಹಂಪಲಗಳು, ತೆಂಗು–ತಾಳೆಯ ಮರಗಳು, ತರಹೇವಾರಿ ಭತ್ತದ ಪೈರುಗಳು, ಅಪರೂಪದ ಔಷಧಿ ಸಸ್ಯಗಳು, ಹತ್ತಾರು ವಿಧಗಳ ಪುಷ್ಪಗಳು ಎಲ್ಲವನ್ನೂ ತನ್ನ ದಂಡೆಯಲ್ಲೇ ಬೆಳೆಯಬೇಕು ಎನ್ನುವ ಉಮೇದಿ. ಮೀನುಪ್ರಿಯರ ಮೇಲೂ ಈ ನದಿಗೆ ವಿಶೇಷ ಕಕ್ಕುಲಾತಿ. ಮೆಕಾಂಗ್‌ನ ಮೀನುಗಳಿಗೆ ಬಲೆ ಹಾಕಲು ನದಿಯಲ್ಲೇ ಒಂದು ಪುಟ್ಟ ತೇಲುವ ಗ್ರಾಮ ನಿರ್ಮಾಣವಾಗಿದೆ. ಇಲ್ಲಿ ತಾಜಾ ಮೀನುಗಳು ಬಲೆಗೆ ಬೀಳುವಾಗ ಪಕ್ಕದ ದ್ವೀಪದಲ್ಲಿ ಮಸಾಲೆ ಸಿದ್ಧವಾಗುತ್ತಿರುತ್ತದೆ. ‘ಮೀನು ಗ್ರಾಮ’ವನ್ನು ದೂರದಿಂದಲೇ ತೋರಿಸಿದ ನಮ್ಮ ಗೈಡ್‌ ಆ್ಯಂಡ್ರ್ಯೂ ನಮ್ಮನ್ನು ನದಿ ದಂಡೆಯಲ್ಲಿದ್ದ ಒಂದು ತೋಟಕ್ಕೆ ಕರೆದೊಯ್ದರು. ಅಲ್ಲಿ ‘ಹನಿ ಟೀ’ (ಜೇನು ಚಹಾ!) ಆಸ್ವಾದಿಸಿದ ನಾವು, ಬಾಳೆ ಮತ್ತು ಶುಂಠಿಯಿಂದ ತಯಾರಿಸಿದ ಸಿಹಿಯಾದ ಕುರುಕುಲು ತಿನಿಸುಗಳನ್ನು ಸ್ವಾಹಾ ಮಾಡಿದೆವು. ದ್ವೀಪದ ಹಳ್ಳಿಗಳಲ್ಲಿ ನಮ್ಮ ಸಂಚಾರ ಶುರುವಾಯಿತು.

ADVERTISEMENT

ನಮ್ಮನ್ನು ಕರೆದೊಯ್ಯಲು ಇ–ರಿಕ್ಷಾ ಇದ್ದುವಾದರೂ ನಡಿಗೆಯೇ ದ್ವೀಪದ ಮುಖ್ಯ ಸಾರಿಗೆ ಸಾಧನವಾಗಿದೆ. ಇಲ್ಲಿ ಸೈಕಲ್‌ಗಳ ಬಳಕೆ ಕೂಡ ಹೆಚ್ಚು. ನಿಧಾನಗತಿಯಲ್ಲಿ ಹೆಜ್ಜೆ ಹಾಕಿದಾಗ, ಇಲ್ಲಿನ ಜಗತ್ತು ವಿವರವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ದಾರಿ ಪಕ್ಕದಲ್ಲಿ ಬೆಳೆದು ನಿಂತ ತರಹೇವಾರಿ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಹಾಗೆ ಹಸಿರು–ಹಣ್ಣು ಕಣ್ತುಂಬಿಕೊಳ್ಳುತ್ತಾ ಸಭಾಂಗಣದಂತಿದ್ದ ಅಂಗಡಿಯೊಂದನ್ನು ನಾವು ಹೊಕ್ಕೆವು. ದಾರಿಯ ತೋಟಗಳಲ್ಲಿ ಕಂಡಿದ್ದ ಹಣ್ಣುಗಳು ಸ್ಲೈಸ್‌ ರೂಪದಲ್ಲಿ ನಮ್ಮ ಟೇಬಲ್‌ ಮೇಲಿದ್ದವು. ರಸವತ್ತಾದ ಹಣ್ಣುಗಳು ಹೊಟ್ಟೆಗೆ ಇಳಿಯುವಾಗ ‘ಡಾನ್‌ ಕಾ ತಯ್‌ ತು’ ಜನಪದ ಹಾಡುಗಳು ಸ್ಥಳೀಯ ಕಲಾವಿದರಿಂದ ಅಲೆ ಅಲೆಯಾಗಿ ತೇಲಿಬಂದವು.

ಡಾನ್‌ ತಾನ್‌, ಡಾನ್‌ ತಾ ಬಾ, ಡಾನ್‌ ಕಿಮ್‌, ಡಾನ್‌ ಕೊ, ಡಾನ್‌ ಟಾಮ್‌ ಎಂಬ ಜನಪದ ವಾದ್ಯಗಳ ಜತೆಗೆ ಕೊಳಲಿನ ಹಿಮ್ಮೇಳವೂ ಈ ಸಂಗೀತ ಕಛೇರಿಗಿತ್ತು. ತೆಂಗಿನ ಫ್ಯಾಕ್ಟರಿಗೂ ಭೇಟಿ ಕೊಟ್ಟೆವು. ಅಲ್ಲಿಯೇ ತಯಾರಾಗಿದ್ದ ಕೊಬ್ಬರಿ ಮಿಠಾಯಿ, ಚಾಕೊಲೇಟ್‌ ಸವಿದೆವು. ಕೊಬ್ಬರಿ ಐಸ್‌ಕ್ರೀಂ ಇಲ್ಲಿನ ಮತ್ತೊಂದು ವಿಶೇಷ. ಆಮೇಲೆ ಮರದ ದೋಣಿಯಲ್ಲಿ ರೈತ ಯುವತಿಯೊಬ್ಬಳು ನಮ್ಮನ್ನು ವಿಹಾರಕ್ಕೆ ಕರೆದೊಯ್ದಳು. ಸಮಯದ ಅಭಾವದಿಂದ ನಮ್ಮ ಮೆಕಾಂಗ್‌ ಡೆಲ್ಟಾ ಯಾನ ಆತುರವಾಗಿಯೇ ಮುಗಿದುಹೋಯಿತು. ವಾಪಸ್‌ ಬಂದ ಬಳಿಕ ಕೃಪಾಲ್‌ ಅಮನ್ನಾ ಅವರಿಂದ ಗೊತ್ತಾಗಿದ್ದು, ಈ ನದಿಯಲ್ಲಿ ನಮ್ಮ ಕಾಶ್ಮೀರದ ಡಲ್‌ ಸರೋವರದಂತೆ ತೇಲುವ ಮಾರುಕಟ್ಟೆಯೂ ಇದೆ ಎಂದು.

ಮೆಕಾಂಗ್‌ ನದಿಯ ತೇಲುವ ಮಾರುಕಟ್ಟೆ

ಡಲ್‌ ಸರೋವರಕ್ಕಿಂತಲೂ ದೊಡ್ಡ ತೇಲುವ ಮಾರುಕಟ್ಟೆ ಇಲ್ಲಿಯದು. ನಮ್ಮ ದೋಣಿಗಳು ಮಾರುಕಟ್ಟೆ ಯಲ್ಲಿರುವ ದೋಣಿಗಳ ಹತ್ತಿರಕ್ಕೆ ಹೋದರೆ ಅಲ್ಲಿ ವಿಯೆಟ್ನಾಂ ಬುಡಕಟ್ಟು ಜನಾಂಗಗಳ ತರಹೇವಾರಿ ಖಾದ್ಯಗಳೂ ಸವಿಯಲು ಸಿಗುತ್ತವೆ. ಅಂದದ ವಿಂಗ್‌ ಟ್ರಾಂಗ್‌ ಪಗೋಡಾ ಕೂಡ ಇಲ್ಲಿದೆ. ಇಲ್ಲಿನ ಹತ್ತಾರು ಜಲಮಾರ್ಗಗಳಲ್ಲಿ ಸಂಚರಿಸುತ್ತಾ ಹೋದರೆ ಹೊಸ ಹೊಸ ಜಗತ್ತುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ವಿಯೆಟ್ನಾಂನ ಪ್ರವಾಸಿ ತಾಣಗಳ ಪೈಕಿ ಮೆಕಾಂಗ್‌ ಡೆಲ್ಟಾ ಒಂದು ಧ್ರುವತಾರೆ.

ಸುತ್ತಲಿನ ಪರಿಸರ ಹೆಕ್ಕಿ ಕೊಟ್ಟಿದ್ದನ್ನು ತೃಪ್ತಿಯಿಂದ ಉಣ್ಣು, ಮೈಮುರಿದು ದುಡಿ, ಪ್ರಕೃತಿಗೆ ಹೊಂದಿಕೊಂಡು ಬಾಳು – ಇದು ವಿಯೆಟ್ನಾಂ ಜನರ ಫಿಲಾಸಫಿ. ಇಲ್ಲಿನ ಹೆಣ್ಣು–ಗಂಡುಗಳೆಲ್ಲರದ್ದೂ ಏಕೆ ಜೀರೊ ಸೈಜ್‌ ಅರ್ಥಾತ್‌ ಸಪೂರ ದೇಹ ಎಂಬ ಪ್ರಶ್ನೆಗೆ ಅವರ ಊಟದ ಬೌಲ್‌ನಲ್ಲಿ ಉತ್ತರ ಸಿಕ್ಕಿತು. ಒಂದಿಷ್ಟು ಅಕ್ಕಿ ಪದಾರ್ಥ (ಗಂಜಿ, ನೂಡಲ್ಸ್‌, ಅನ್ನ), ಹೇರಳವಾದ ಹಣ್ಣು–ತರಕಾರಿ, ಸೊಪ್ಪು, ಮೇಲೊಂದಿಷ್ಟು ಮೀನು, ಇನ್ನೂ ಬೇಕಾದರೆ ಮಾಂಸ – ಈ ಆದ್ಯತೆಯಲ್ಲೇ ಅವರ ಊಟ. ಅಂದಹಾಗೆ, ಬೊನ್‌ ಬೊ ಥಾಟ್‌ ನಾಟ್‌ (ಅಕ್ಕಿಹಿಟ್ಟು, ತಾಳೆಬೆಲ್ಲದ ಕೇಕ್‌), ಬೊನ್‌ ಮಾಮ್‌ (ಮೀನು ನೂಡಲ್ಸ್‌ ಸೂಪು), ಕಾ ಖೊ ತೊ (ಹುರಿದು, ಬೇಯಿಸಿದ ಮೀನು) ಮೊದಲಾದ ಖಾದ್ಯಗಳ ಆತಿಥ್ಯ ನಿಮಗಿಲ್ಲಿ ಸಿಕ್ಕುತ್ತದೆ.

ನದಿತೀರದ ಬಿಂಬಗಳು ನೆನಪಿನ ಭಿತ್ತಿಯ ಆಲ್ಬಂನಲ್ಲಿ ಭದ್ರವಾಗುತ್ತಿರುವಾಗ ನಮ್ಮ ಬಸ್‌ ಮತ್ತೆ ನಿಧಾನವಾಗಿ ಹೋ ಚಿ ಮಿನ್‌ ಸಿಟಿಯತ್ತ ಹೊರಟಿತು. ರಸ್ತೆಯ ಅಕ್ಕಪಕ್ಕದ ಭತ್ತದ ಗದ್ದೆಗಳನ್ನು ಕಂಡಾಗ ನಾವು ಕರ್ನಾಟಕದ ವಿಜಯನಗರ ಜಿಲ್ಲೆಯ ಕಂಪ್ಲಿ ಪರಿಸರದಲ್ಲಿ ಸಾಗುತ್ತಿರುವಂತೆ ಭಾಸವಾಯಿತು. ಒಂದೇ ವ್ಯತ್ಯಾಸವೆಂದರೆ ಮೆಕಾಂಗ್‌ ಡೆಲ್ಟಾದ ಹಸಿರು ಮುಕ್ಕಳಿಸುವ ಗದ್ದೆಗಳ ನಡುವೆ ರೈತರ ಪೂರ್ವಜರ ಗೋರಿಗಳೂ ಇದ್ದವು!

ಹೌದು, ವಾಪಸ್‌ ವಿಮಾನ ಏರುವಾಗ ಮನಸ್ಸು ‘ಕಮೊನ್‌ (ಧನ್ಯವಾದ) ವಿಯೆಟ್ನಾಂ’ ಎಂದು ಹೇಳುತ್ತಿತ್ತು.

ಹೋ ಚಿ ಮಿನ್‌ ಸಿಟಿಯ ರಾತ್ರಿಯ ಮನಮೋಹಕ ನೋಟ
ಸ್ನೇಕ್‌ ವೈನ್‌!
ನೀವು ಬಗೆಬಗೆಯ ವೈನ್‌ ಕುಡಿದಿರಬಹುದು. ಆದರೆ, ಸ್ನೇಕ್‌ ವೈನ್‌ ಕುಡಿದಿದ್ದೀರಾ? ಅದೂ ಹಾವಿರುವ ಬಾಟಲಿಯಿಂದಲೇ ಬಾಗಿಸಿಕೊಂಡ ವೈನ್‌ ಅನ್ನು? ಹೌದು, ಮೆಕಾಂಗ್‌ ಡೆಲ್ಟಾದ ಅತ್ಯಂತ ಜನಪ್ರಿಯ ಪೇಯ ಸ್ನೇಕ್‌ ವೈನ್‌. ಹಾವು, ಚೇಳನ್ನು ಮುಳುಗಿಸಿಟ್ಟಿದ್ದ ವೈನ್‌ನ ಬಾಟಲಿಗಳನ್ನು ಕಂಡು ನಮಗೆಲ್ಲ ಗಾಬರಿಯಾಯಿತು. ಭತ್ತದಿಂದ ತಯಾರಿಸಿದ ವೈನ್‌ನಲ್ಲಿ ವಿಷಕಾರಿಯಾದ ಜೀವಂತ ಹಾವು ಹಾಕಿ, ಹುದುಗು ಬರಿಸುತ್ತಾರೆ. ವಿಶೇಷ ಗಿಡಮೂಲಿಕೆಗಳನ್ನೂ ಅದಕ್ಕೆ ಹಾಕುತ್ತಾರೆ. ಆಗ ಹಾವಿನ ವಿಷ ನಿಷ್ಕ್ರಿಯವಾಗುವುದಂತೆ. ಹಾಗೆ ತಯಾರಾದ ವೈನ್‌ ಆರೋಗ್ಯವನ್ನು ವೃದ್ಧಿಸುತ್ತದೆ ಎಂಬ ಪ್ರತೀತಿ ಇಲ್ಲಿನ ಜನರಲ್ಲಿದೆ. ಆದರೆ, ಇಂತಹ ವೈನ್‌ ಯಾವಾಗಲೂ ಸುರಕ್ಷಿತವಲ್ಲ ಎಂದು ವೈದ್ಯಲೋಕ ಎಚ್ಚರಿಸುತ್ತದೆ.
ವುಂಗ್‌ ತಾವ್‌ನ ಸಮುದ್ರದ ದಂಡೆಯಲ್ಲಿರವ ಬೆಟ್ಟದ ಮೇಲೆ ನಿಂತಿರುವ ಕ್ರಿಸ್ತ

ಪ್ರತಿಮೆಯಿಂದ ಟನಲ್‌ವರೆಗೆ

ಒಂದೊಮ್ಮೆ ಫ್ರೆಂಚ್‌ ವಸಾಹತು ಆಗಿದ್ದ ವಿಯೆಟ್ನಾಂನಲ್ಲಿ ಹೆಜ್ಜೆ–ಹೆಜ್ಜೆಗೂ ಫ್ರೆಂಚರ ಕುರುಹುಗಳು ಸಿಗುತ್ತವೆ. ಹೋ ಚಿ ಮಿನ್‌ ಸಿಟಿಯಲ್ಲಿರುವ ಸೈಗಾನ್‌ ಒಪೇರಾ ಹೌಸ್‌ ಅವುಗಳಲ್ಲೊಂದು. ಇಲ್ಲಿ ನಡೆಯುವ ಎ.ಒ ಬಿದಿರಿನ ಷೋ ಜಗತ್ಪ್ರಸಿದ್ಧ. ಯುದ್ಧ ಅವಶೇಷಗಳ ಮ್ಯೂಸಿಯಂ, ಇಂಡಿಪೆಂಡೆನ್ಸ್‌ ಪ್ಯಾಲೆಸ್‌, ಸೆಂಟ್ರಲ್‌ ಪೋಸ್ಟ್‌ ಆಫೀಸ್‌, ಸಿಟಿ ಹಾಲ್‌ – ಹೋ ಚಿ ಮಿನ್‌ ಸಿಟಿಯಲ್ಲಿ ನೋಡಲೇಬೇಕಾದ ಪ್ರಮುಖ ಕೇಂದ್ರಗಳು. ಈ ಊರಿನ ‘ಕಾ ಪೇ ಮ್ಯೂವ್‌’ (ಉಪ್ಪುಮಿಶ್ರಿತ ಕಾಫಿ) ಕುಡಿಯದಿದ್ದರೆ ವಿಯೆಟ್ನಾಂ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಕು ಚಿ ಟನಲ್‌ಗಳು ವಿಯೆಟ್ನಾಂ ಯುದ್ಧದ ಕಥೆ ಹೇಳುವುದಕ್ಕೆ ನಿಮಗಾಗಿ ಕಾದಿರುತ್ತವೆ. ಬ್ರೆಜಿಲ್‌ನ ರಿಯೊ ಡಿ ಜೆನೈರೊ ಬಿಟ್ಟರೆ ಪ್ರಪಂಚದಲ್ಲಿ ತುಂಬಾ ಎತ್ತರವಾದ ಕ್ರಿಸ್ತನ ಪ್ರತಿಮೆ ಇರುವ ವುಂಗ್‌ ತಾವ್‌ ಸಹ ಹೋ ಚಿ ಮಿನ್‌ ಸಿಟಿಗೆ ಹತ್ತಿರದಲ್ಲಿದೆ.

ತಲುಪುವುದು ಹೇಗೆ?
ಬೆಂಗಳೂರಿನಿಂದ ಈಗ ಹೋ ಚಿ ಮಿನ್‌ ಸಿಟಿಗೆ ‘ವಿಯೆಟ್‌ಜೆಟ್‌ ಏರ್‌’ ವಾರಕ್ಕೆ ನಾಲ್ಕು ದಿನ (ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ) ಅಗ್ಗದ ದರದಲ್ಲಿ ನೇರ ವಿಮಾನಯಾನ ಸೌಲಭ್ಯ ಕಲ್ಪಿಸಿದೆ. ಈ ನಗರದ ಸುತ್ತಲಿನಲ್ಲೇ ಅನೇಕ ಪ್ರವಾಸಿ ತಾಣಗಳಿದ್ದು, 4–5 ದಿನಗಳ ಪ್ರವಾಸ ಯೋಜಿಸಬಹುದು.
ಹೋ ಚಿ ಮಿನ್‌ ಸಿಟಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.