
ಕರ್ನಾಟಕದ ಆಧ್ಯಾತ್ಮಿಕ ಪರಂಪರೆ ಬಹು ದೊಡ್ಡದು. ಕದಂಬರಿಂದ ಆರಂಭವಾಗಿ ಮೈಸೂರು ಒಡೆಯರವರೆಗೆ ನೂರಾರು ದೇವಾಲಯಗಳು, ಆಧ್ಯಾತ್ಮಿಕ ತಾಣಗಳನ್ನು ನಿರ್ಮಾಣ ಮಾಡಲಾಗಿದೆ. ಇಂದಿಗೂ ಇವು ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯನ್ನು ಬಿಚ್ಚಿಡುತ್ತವೆ.
ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ದಿ ಪಡೆದಿರುವ ಮೈಸೂರು ದೇವಸ್ಥಾನ, ಅರಮನೆ, ಮೃಗಾಲಯಕ್ಕೆ ಹೆಸರುವಾಸಿಯಾಗಿದೆ. ಬಹುತೇಕ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಮೈಸೂರು ಆರಮನೆಯಾಗಿದೆ. ಆದರೆ ಮೈಸೂರಿನಲ್ಲಿ ಸುಂದರವಾದ ಹಾಗೂ ಮಹತ್ವವುಳ್ಳ ಧಾರ್ಮಿಕ ಕ್ಷೇತ್ರಗಳು ಸಾಕಷ್ಟಿವೆ. ಹಾಗಾದರೆ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳು ಯಾವುವು ಎಂಬುದನ್ನು ತಿಳಿಯೋಣ.
ಸೋಮನಾಥಪುರದ ದೇವಾಲಯ
ಸೋಮನಾಥಪುರದ ದೇವಾಲಯ:
ಮೈಸೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಈ ದೇವಾಲಯ ಹೊಯ್ಸಳರ ವಾಸ್ತುಶಿಲ್ಪದ ಕೊಡುಗೆಯಾಗಿದೆ. ಈ ದೇವಲಾಯವು ಸುಂದರವಾದ ಹಾಗೂ ಸಂಕೀರ್ಣವಾದ ಕೆತ್ತನೆಗಳನ್ನು ಒಳಗೊಂಡಿದೆ. ದೇವಾಲಯದಲ್ಲಿ ದೇವತೆಗಳ ಪ್ರತಿಮೆ, ಮಹಾಭಾರತ, ರಾಮಾಯಾಣದಲ್ಲಿ ಬರುವ ಸನ್ನಿವೇಶಗಳ ಕೆತ್ತನೆಯನ್ನು ಕಾಣಬಹುದು.
ದೇವಾಲಯವನ್ನು ‘ಪ್ರಸನ್ನ ಚೆನ್ನಕೇಶವ ದೇವಾಲಯ’ ಮತ್ತು ‘ಕೇಶವ ದೇವಾಲಯ’ ಎಂತಲೂ ಕರೆಯಲಾಗುತ್ತದೆ. ಈ ದೇವಾಲಯ ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ 1,500 ದೇವಾಲಯಗಳ ಪೈಕಿ ಈ ದೇವಾಸ್ಥಾನ ಒಂದಾಗಿದೆ.
ಮಲ್ಲಿಕಾರ್ಜುನ ದೇವಾಲಯ
ಮಲ್ಲಿಕಾರ್ಜುನ ದೇವಾಲಯ:
ತಲಕಾಡು ಮೈಸೂರಿನಿಂದ 45 ಕಿ.ಮೀ ದೂರದಲ್ಲಿದೆ. ಮೈಸೂರಿನ ಪ್ರಾಚೀನ ದೇವಾಸ್ಥಾನಗಳ ಪೈಕಿ ಒಂದಾಗಿರುವ ಈ ದೇವಾಲಯ ಗಂಗರು ಮತ್ತು ವಿಜಯನಗರ ಕಾಲದ ವಾಸ್ತುಶಿಲ್ಪದ ಕೊಡುಗೆಯಾಗಿದೆ. ಬ್ರಹ್ಮರಾಂಬಿಗೈ ದೇವಿ ಅಥವಾ ಶಿವನಿಗೆ ಸಮರ್ಪಿತವಾದ ದೇವಾಲಯ ಎಂದು ಹೇಳಲಾಗುತ್ತದೆ. ಇಲ್ಲಿನ ಧಾರ್ಮಿಕ ವಾತಾವರಣ ಮನಸ್ಸಿಗೆ ಶಾಂತಿ ನೀಡುತ್ತದೆ.
ವೈದ್ಯನಾಥೇಶ್ವರ ದೇವಸ್ಥಾನ:
ಗಂಗರ ಕಾಲದಲ್ಲಿ ನಿರ್ಮಾಣವಾದಂತಹ ದೇವಾಲಯವಾಗಿದೆ. ಇಲ್ಲಿ ಪಂಚಲಿಂಗಳಿದ್ದು, ಶಿವನ ಐದು ಮುಖಗಳನ್ನು ಪ್ರತಿನಿಧಿಸುತ್ತವೆ. ಇಲ್ಲಿನ ಗೋಕರ್ಣ ಸರೋವರ ಸ್ನಾನ ಪವಿತ್ರವೆನಿಸಿದೆ. ಈ ಶಿವಾಲಯದಲ್ಲಿ ಸುಬ್ರಹ್ಮಣ್ಯ ಸ್ವಾಮಿ, ಗಣೇಶ ಸೇರಿದಂತೆ ವಿವಿಧ ದೇವತೆಗಳ ಕೆತ್ತನೆ ನೋಡಬಹುದು.
ಚಾಮುಂಡೇಶ್ವರಿ ದೇವಸ್ಥಾನ
ಚಾಮುಂಡೇಶ್ವರಿ ದೇವಸ್ಥಾನ
ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನ 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಮೈಸೂರಿನ ಪ್ರಮುಖ ದೇವಾಲಯಗಳಲ್ಲಿ ಒಂದೆನಿಸಿರುವ ಚಾಮುಂಡೇಶ್ವರಿ ದೇವಸ್ಥಾನ ಕರ್ನಾಟಕದ ಸೂಚಕವೂ ಹೌದು. ದುರ್ಗಾದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಇಲ್ಲಿ ನಂದಿ ಹಾಗೂ ಮಹಿಷಾಸುರನ ಪ್ರತಿಮೆಗಳಿವೆ. ಅಲ್ಲದೆ ವಿಶ್ವವಿಖ್ಯಾತ ದಸರಾ ನೋಡಲು ಲಕ್ಷಾಂತರ ಮಂದಿ ಪ್ರತಿ ವರ್ಷ ಇಲ್ಲಿಗೆ ಆಗಮಿಸುತ್ತಾರೆ.
ನಂಜುಂಡೇಶ್ವರ ದೇವಸ್ಥಾನ
ನಂಜುಂಡೇಶ್ವರ ದೇವಸ್ಥಾನ
ಮೈಸೂರಿನಿಂದ 24 ಕಿ.ಮೀ ದೂರದಲ್ಲಿರುವ ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನವಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯ ಶಿವನ ದೇವಾಲಯವಾಗಿದೆ. ಪುರಾಣ ಕಥೆಗಳ ಪ್ರಕಾರ ಸಮುದ್ರ ಮಂಥನದಲ್ಲಿ ವಿಷ ಸೇವಿಸಿದ ಬಳಿಕ ಈ ಸ್ಥಳದಲ್ಲಿ ಶಿವ ವಿಶ್ರಾಂತಿ ಪಡೆದ ಕಾರಣಕ್ಕೆ ಈ ಸ್ಥಳಕ್ಕೆ ನಂಜನಗೂಡು, ನಂಜುಂಡೇಶ್ವರ ಎಂಬ ಹೆಸರು ಬಂದಿತು. ಗಂಗರು ಈ ದೇವಾಲಯವನ್ನು ನಿರ್ಮಾಣ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.