ADVERTISEMENT

ಬೇಸಿಗೆ ರಜೆಯಲ್ಲಿ ವಿಭಿನ್ನ ಪ್ರವಾಸ!

ಕೋಡಿಬೆಟ್ಟು ರಾಜಲಕ್ಷ್ಮಿ
Published 8 ಏಪ್ರಿಲ್ 2022, 19:30 IST
Last Updated 8 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದೆರಡು ವರ್ಷಗಳಲ್ಲಿ ಕೋವಿಡ್‍ – ಲಾಕ್‌ಡೌನ್‌ ದೆಸೆಯಿಂದ ಬೇಸಿಗೆ ರಜೆಯಲ್ಲಿ ಪ್ರವಾಸ, ಪ್ರಯಾಣ, ಭೇಟಿ.. ಸಾಧ್ಯವೇ ಆಗಿಲ್ಲ. ಈ ಬಾರಿ ಶಾಲೆ-ಕಾಲೇಜುಗಳ ವೇಳಾಪಟ್ಟಿಯೇ ವಿಭಿನ್ನವಾಗಿದ್ದರೂ, ಈಗ ಬೇಸಿಗೆ ರಜೆ ಮರಳಿ ಬಂದಿದೆ. ‘ಮತ್ತೆ ನಾವೆಲ್ಲ ಹಳೆಯ ಹಳಿಗೆ ಮರಳಿದೆವು’ ಎಂಬ ಖುಷಿ ಪೋಷಕರದ್ದೂ ಹೌದು, ಮಕ್ಕಳದ್ದೂ ಹೌದು. ಆದರೆ ರಜೆಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳುವುದು ಎಂಬುದೇ ಪ್ರಶ್ನೆ.

ಕೋವಿಡ್ ಕರಿನೆರಳಿನ ನಂತರ ಈಗ ಎಲ್ಲ ಪ್ರವಾಸಿ ತಾಣಗಳೂ ಕಿಕ್ಕಿರಿದು ತುಂಬಿವೆ. ಬಿಸಿಲಿನ ತಾಪದಿಂದ ಬಚಾವ್‍ ಆಗಲು, ಮಕ್ಕಳು ದೊಡ್ಡವರೆನ್ನದೇ ಎಲ್ಲರೂ ಜಲಪಾತಗಳ ಬಳಿಗೆ ಧಾವಿಸಲು ಆಶಿಸುತ್ತಿದ್ದಾರೆ. ಸಮುದ್ರ ಕಿನಾರೆಯಲ್ಲಿ ಸಂಜೆ ಕಳೆಯಲು ನಿರ್ಧರಿಸಿದ್ದಾರೆ. ನದಿ ವಿಹಾರ, ಬೋಟಿಂಗ್‍, ವಾಟರ್‌ ಸ್ಪೋರ್ಟ್ಸ್‌ ತಾಣಗಳಿಗೆ ತೆರಳಲು ಹೆಚ್ಚು ಉತ್ಸುಕರಾಗಿದ್ದಾರೆ.

ಆದರೆ ಒಮ್ಮೆ ಹಿಂತಿರುಗಿ ನೋಡಿದರೆ, ಎರಡು ವರ್ಷಗಳಲ್ಲಿ ಮನಸ್ಸಿನಲ್ಲಿ ಹೆಪ್ಪುಗಟ್ಟಿ ಉಳಿದ ಆತಂಕಗಳು ಎಷ್ಟೊಂದು ದಟ್ಟವಾಗಿವೆ! ನಮ್ಮ ಸ್ನೇಹಿತರು, ಬಂಧುಗಳು, ವೃತ್ತಿ ಕ್ಷೇತ್ರದ ಪರಿಚಿತರ ಕುಟುಂಬಗಳಲ್ಲೂ ಕೋವಿಡ್‍ ಅನಾಹುತಗಳನ್ನು ಮಾಡಿದೆ. ಲಾಕ್‌ಡೌನ್‍ ಸಂದರ್ಭದಲ್ಲಿ ನಮ್ಮ ಆಪ್ತರ ನೋವುಗಳನ್ನು ಫೋನಿನಲ್ಲಿಯೇ ಆಲಿಸಿ, ಏನೂ ಮಾಡಲಾಗದೇ ಕೈ ಚೆಲ್ಲಿ ಕುಳಿತಿದ್ದೆವು. ಅವನ್ನೆಲ್ಲ ನೆನಪಿಸಿಕೊಂಡಾಗ, ಈ ಬಾರಿಯ ಬೇಸಿಗೆ ರಜೆಯನ್ನು, ಮಕ್ಕಳೊಡನೆ ವಿಭಿನ್ನವಾಗಿ ಕಳೆಯಬಹುದು ಎನಿಸುತ್ತದೆ.

ADVERTISEMENT

ವೃತ್ತಿಯಲ್ಲಿ ವೈದ್ಯೆಯಾಗಿರುವ ಮಂಗಳೂರಿನ ಅಶ್ವಿನಿ ಶೆಟ್ಟಿ, ಐದು ದಿನಗಳ ಕಾಲ ಬಿಡುವು ಪಡೆದುಕೊಂಡು ಕುಟುಂಬದವರೊಡನೆ ಒಂದು ಪ್ರವಾಸ ಆಯೋಜಿಸಿದ್ದಾರೆ. ಅವರ ಪ್ರವಾಸದ ವಿಶೇಷತೆ ಹೀಗಿದೆ; ಅದು ಕೋವಿಡ್‌ನಿಂದ ಭಾರೀ ಆಘಾತಕ್ಕೊಳಗಾದ ಆಪ್ತರನ್ನು ಭೇಟಿಯಾಗುವ ದೀರ್ಘ ಪ್ರಯಾಣ. ‘ಶಿರಸಿಯಲ್ಲಿರುವ ಚಿಕ್ಕಮ್ಮನ ಮನೆಗೆ ಮೊದಲು ಭೇಟಿ ನೀಡುತ್ತೇವೆ. ಚಿಕ್ಕಮ್ಮನ ಅಣ್ಣ ಕೋವಿಡ್‌ನಿಂದ ತೀರಿಕೊಂಡಿದ್ದರು. ಅವರ ಮನೆಯಲ್ಲಿ ಒಂದಿಷ್ಟು ಹೊತ್ತು ಕಳೆದು ಸಂಜೆ ವೇಳೆಗೆ ಅಲ್ಲೇ ಪಕ್ಕದೂರಿನಲ್ಲಿರುವ ಇರುವ ಸ್ನೇಹಿತೆಯನ್ನು ಭೇಟಿಯಾಗಿ ಊಟ ಮಾಡುವ ಯೋಜನೆಯಿದೆ. ಮರುದಿವಸ, ಹುಬ್ಬಳ್ಳಿಗೆ ತೆರಳಿ, ಮತ್ತೊಬ್ಬರು ಬಂಧುವಿನ ಮನೆಗೆ ಭೇಟಿ ನೀಡುತ್ತೇವೆ. ಅವರೊಡನೆ ಸಂಜೆಯವರೆಗೆ ಇದ್ದು ಅಲ್ಲಿಂದ ಕೊಡಗಿಗೆ ಹೋಗಬೇಕಾಗಿದೆ. ಕೊಡಗಿನಲ್ಲಿ ಸ್ನೇಹಿತೆಯೊಬ್ಬಳು ಕೋವಿಡ್‍ ವಾರಿಯರ್ ‍ಆಗಿದ್ದಳು. ಆಸ್ಪತ್ರೆಗಳಲ್ಲಿ ಬಿಕ್ಕಟ್ಟುಗಳು ಎದುರಾದಾಗ, ಅವಳು ಮಾಡಿದ ಕೆಲಸ, ಮನೆಯಲ್ಲಿಯೇ ಸೋಂಕಿತರಿದ್ದಾಗ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಫೋನಿನಲ್ಲಿಯೇ ಹೇಳುತ್ತಿದ್ದಳು. ಅವಳನ್ನು ಭೇಟಿಯಾಗಿ ಸುಮಾರು ಏಳೆಂಟು ವರ್ಷವಾಗಿದೆ. ಆದರೆ ಈ ವರ್ಷವೇಕೋ ಆಕೆಯನ್ನು ಭೇಟಿಯಾಗಬೇಕೆಂದು ತೀವ್ರವಾಗಿ ಅನಿಸುತ್ತಿದೆ. ಕೊಡಗಿನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಮರಳಿ ಬರುತ್ತೇವೆ’ ಎಂದು ತಮ್ಮ ಪ್ಲಾನ್ ‍ಮುಂದಿಟ್ಟರು.

ಅವರ ಪ್ರಕಾರ, ‘ಈ ರೀತಿಯ ಪ್ರವಾಸಗಳು ಮಕ್ಕಳಲ್ಲಿ ಮಾನವೀಯ ಭಾವವನ್ನು ಮೂಡಿಸಬಲ್ಲವು. ಸಂಕಷ್ಟದಲ್ಲಿದ್ದವರ ಮನೆಗೆ ಭೇಟಿ ನೀಡಿ ಕುಶಲ ವಿಚಾರಿಸುವುದು ಒಂದು ಹೊಣೆಗಾರಿಕೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಂತಾಗುತ್ತದೆ. ಬೇಸಿಗೆಯ ರಜೆಯಲ್ಲಿ ವಿವಿಧ ಸ್ಥಳಗಳಿಗೆ ತೆರಳಿದಂತೆಯೂ ಆಗುತ್ತದೆ. ಜೊತೆಗೆ ಕುಟುಂಬಗಳ ನಡುವಿನ ಪರಸ್ಪರ ಸಂಬಂಧಗಳೂ ಬಿಗಿಯಾಗುವುದು ಇದೇ ರೀತಿಯಲ್ಲಿ’.

ಪ್ರವಾಸಗಳ ಉದ್ದೇಶ ಹೊಸ ಸ್ಥಳಗಳನ್ನು ನೋಡುವುದಷ್ಟೇ ಅಲ್ಲ. ಅದು ಜೊತೆಗಿರುವವರನ್ನು ಬೆಸೆಯುತ್ತದೆ. ಮನೆಮಂದಿಯೆಲ್ಲ ದೇವಸ್ಥಾನಕ್ಕೆ ಯಾತ್ರೆ ಹೋಗುವಾಗ ಮನಸ್ಸಿನಲ್ಲಿರುವ ಕಹಿಯನ್ನೆಲ್ಲ ಮರೆತು ಒಂದಾಗುವುದಿಲ್ಲವೇ. ಹಾಗೆಯೇ, ಒಟ್ಟಾಗಿ ಪಯಣಿಸುತ್ತಿದ್ದೇವೆ ಎಂಬ ಭಾವವೇ ಮನಸ್ಸಿನಲ್ಲಿ ಸಂಬಂಧಗಳ ಭದ್ರತೆಯನ್ನು ಮೂಡಿಸುತ್ತದೆ.

ಹಿಂದೆಲ್ಲ ಬೇಸಿಗೆ ರಜೆಯಲ್ಲಿ ಮಕ್ಕಳೆಲ್ಲ ಅಜ್ಜಿ ಮನೆಗೆ ಧಾವಿಸುವುದಿತ್ತು. ಎಲ್ಲರೂ ಒಟ್ಟಾಗಿ ಸಮಯ ಕಳೆಯುವುದಕ್ಕೊಂದು ಕೇಂದ್ರಬಿಂದು ಅಜ್ಜಿಮನೆಯಾಗಿತ್ತು. ಆದರೆ ಇಂದು ಬೇರೆ ಬೇರೆ ಕಾರಣಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಆದರೆ ಒಟ್ಟಾಗಿ ಸಮಯ ಕಳೆಯುವುದಕ್ಕೆ ನೂರಾರು ಅವಕಾಶಗಳು ಸೃಷ್ಟಿಯಾಗಿವೆ ಕೂಡ. ಅಂತಹ ಅವಕಾಶಗಳ ಪೈಕಿ ಬೇಸಿಗೆಯ ಪ್ರವಾಸ ಕೂಡ ಒಂದು. ಕೋವಿಡ್‍ ಒಂದೇ ನೆಪವೆಂದೇನೂ ಅಲ್ಲ.

ಸಾಮಾನ್ಯವಾಗಿ ಒಂದು ಸ್ಥಳಕ್ಕೆ ಭೇಟಿ ನೀಡುವ ಮುನ್ನ ಮಕ್ಕಳು ಆ ಸ್ಥಳದ ಬಗ್ಗೆ ಮುಂಚಿತವಾಗಿಯೇ ಗೂಗಲ್ ‍ಮಾಡಿ ವಿಷಯ ಸಂಗ್ರಹಿಸಿರುತ್ತಾರೆ. ಅವರ ಆ ಆಸಕ್ತಿಯನ್ನು ಪೋಷಿಸುವುದು ಉತ್ತಮ. ಉದಾಹರಣೆಗೆ ಬೇಲೂರಿಗೆ ತೆರಳಿದಾಗ, ಆ ದೇವಸ್ಥಾನದ ಬಗ್ಗೆ ಗೂಗಲ್‍ ಸಾಕಷ್ಟು ಮಾಹಿತಿ ಕೊಡುತ್ತದೆ. ಆದರೆ ಅಲ್ಲಿ ಗೈಡ್ ಹೇಳುವ ಮಾಹಿತಿಗಳು ಗೂಗಲ್‍ ಕೊಡುವ ಮಾಹಿತಿಗಿಂತ ಭಿನ್ನವಾಗಿರಬಹುದು. ಬೇಲೂರಿನ ಪ್ರಾಂಗಣದಲ್ಲಿಯೇ ಎಲ್ಲರೂ ಕುಳಿತು ಮಾತನಾಡುತ್ತ, ಇತಿಹಾಸದ ಪುಟ್ಟ ಚರ್ಚೆಯೇ ಶುರುವಾಗಬಹುದು. ಇಂತಹ ಬೆಳವಣಿಗೆಗಳು ಪ್ರವಾಸವನ್ನು ಇನ್ನಷ್ಟು ಫಲದಾಯಕವಾಗುವಂತೆ ಮಾಡುತ್ತವೆ. ತಮಾಷೆ, ಪುಟ್ಟದೊಂದು ಆಟಕೂಟ, ಕುರುಕಲು ತಿನಿಸುಗಳು, ಸ್ಥಳೀಯ ಆಹಾರವನ್ನು ಸವಿಯುತ್ತ, ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸಬಹುದು.

ವರ್ಷವಿಡೀ ಮಕ್ಕಳು, ಶಾಲೆ, ಟ್ಯೂಷನ್ನು ಎಂದು ಮನೆಯಿಂದ ಹೊರಗಿರುತ್ತಾರೆ. ಮನೆಗೆ ಬಂದ ಕೂಡಲೇ ನಾಳಿನ ತಯಾರಿಯಲ್ಲಿ ಮುಳುತ್ತಾರೆ. ಆಫೀಸಿಗೆ ಹೋಗುವ ಅಮ್ಮನಿಗೂ ಮಕ್ಕಳೊಡನೆ ಹೆಚ್ಚು ಮಾತನಾಡಲು ಪುರುಸೊತ್ತಿಲ್ಲ. ಮನೆಯಲ್ಲಿಯೇ ಇರುವ ಅಮ್ಮನಾದರೂ, ಆಕೆಗೆ ನಾಳಿನದ್ದೇ ಚಿಂತೆ. ಆದರೆ ಇಂತಹ ಒತ್ತಡವು ಹಗುರಾಗುವುದಕ್ಕೆ ಪುಟ್ಟ ಪ್ರವಾಸ ನೆರವಾಗುತ್ತದೆ.

ಧುಮ್ಮಿಕ್ಕುವ ಜಲಪಾತದಡಿಯಲ್ಲಿ ಅಮ್ಮನೊಡನೆ ನೀರಾಟವಾಡಲು ಮಕ್ಕಳಿಗಿಷ್ಟ. ಮಕ್ಕಳೊಡನೆ ನೀರಿಗೆ ತಲೆಯೊಡ್ಡಲು ಅಮ್ಮನಿಗಿಷ್ಟ. ಜೊತೆಗೆ ಸೋದರ ಸಂಬಂಧಿಗಳು, ಸ್ನೇಹಿತರಿದ್ದರೆ ಇನ್ನೂ ಗಮ್ಮತ್ತು. ಬೇಸಿಗೆಯಲ್ಲಿ ಬಿಸಿಲಿಗೆ ಬೈಯ್ಯುತ್ತ ಕೂರದೇ, ಸಂಬಂಧಗಳ ಖುಷಿಯನ್ನೂ ಪ್ರವಾಸದ ಸೊಗಸನ್ನೂ ಸವಿಯಬಹುದಲ್ವಾ.

ಪ್ರವಾಸದಲ್ಲಿ ಗ್ಯಾಜೆಟ್‌ಗಳೇ ಮುಖ್ಯವಾಗದಿರಲಿ

ಮಕ್ಕಳೊಂದಿಗೆ ಪ್ರವಾಸಕ್ಕೆ ಹೋದಾಗ ಮೊಬೈಲ್‌, ಟ್ಯಾಬ್‌ನಂತಹ ಗ್ಯಾಜೆಟ್‌ಗಳನ್ನು ಅತಿಯಾಗಿ ಬಳಸದಿರಿ. ಫೋಟೊ ತೆಗೆಯುವುದು, ಸೆಲ್ಫಿ ಕ್ಲಿಕ್ಕಿಸುವುದು, ರೀಲ್ಸ್‌ ಮಾಡುವುದು ಇಷ್ಟರಲ್ಲೇ ಪ್ರವಾಸ ಮುಗಿದುಹೋಗದಿರಲಿ. ಪ್ರವಾಸದ ನೆನಪಿಗಾಗಿ ಒಂದಿಷ್ಟು ಫೋಟೊ, ಸೆಲ್ಫಿಗಳಿರಬೇಕು. ಹಾಗೆಯೇ, ಗ್ಯಾಜೆಟ್‌ಗಳು ಪ್ರವಾಸದ ಭಾಗವಾಗಬೇಕೇ ಹೊರತು ಪ್ರವಾಸದ ಖುಷಿಯನ್ನು ಕಸಿಯಬಾರದು.

ಪ್ರವಾಸ ಎಂದಿಗೂ ಮನದಲ್ಲಿ ಹಸಿರಾಗಿರಬೇಕು. ಆ ಕಾರಣಕ್ಕೆ ಸ್ಥಳದ ಸೌಂದರ್ಯವನ್ನು ಆಸ್ವಾದಿಸಿ. ಸವಿ ನೆನಪನ್ನು ಕಟ್ಟಿಕೊಡುವಂತೆ ಎಲ್ಲರೂ ಒಂದಾಗಿ ಸಂತಸದಿಂದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.