ADVERTISEMENT

ಪ್ರವಾಸ: ಅಸ್ಸಾಂ ಮ್ಯೂಸಿಯಂ– 13 ಮೊಗಸಾಲೆಗಳಲ್ಲಿ ಅಸ್ಸಾಮಿಗರ ಬದುಕು ಅನಾವರಣ..!

ಗುವಾಹಟಿಯಲ್ಲಿರುವ ‘ಅಸ್ಸಾಂ ಸ್ಟೇಟ್‌ ಮ್ಯೂಸಿಯಂ’ ಆ ರಾಜ್ಯದ ಹಲವು ಶತಮಾನಗಳ ನೆನಪುಗಳ, ಘಟನೆಗಳ ಸಾಕ್ಷ್ಯಗಳನ್ನು ಹೊಂದಿದೆ.

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 22:00 IST
Last Updated 4 ಜನವರಿ 2025, 22:00 IST
ಅಸ್ಸಾಂನ ಬುಡಕಟ್ಟು ಜನರ ಹಬ್ಬದ ವಾತಾವರಣವನ್ನು ಬಿಂಬಿಸುವ ಕುಬ್ಜ ಮಾದರಿ   ಚಿತ್ರಗಳು:ಕೆ.ಎನ್.ಉರಾಳ್‌
ಅಸ್ಸಾಂನ ಬುಡಕಟ್ಟು ಜನರ ಹಬ್ಬದ ವಾತಾವರಣವನ್ನು ಬಿಂಬಿಸುವ ಕುಬ್ಜ ಮಾದರಿ   ಚಿತ್ರಗಳು:ಕೆ.ಎನ್.ಉರಾಳ್‌   

ಗುವಾಹಟಿಯಲ್ಲಿರುವ ‘ಅಸ್ಸಾಂ ಸ್ಟೇಟ್‌ ಮ್ಯೂಸಿಯಂ’ ಆ ರಾಜ್ಯದ ಹಲವು ಶತಮಾನಗಳ ನೆನಪುಗಳ, ಘಟನೆಗಳ ಸಾಕ್ಷ್ಯಗಳನ್ನು ಹೊಂದಿದೆ. ಈ ವಸ್ತುಸಂಗ್ರಹಾಲಯವನ್ನು ಪೂರ್ಣ ಪ್ರಮಾಣದಲ್ಲಿ ನೋಡಲು ಇಡೀ ದಿನ ಬೇಕು.

––––

ಈಶಾನ್ಯ ಭಾರತದ ರಾಜ್ಯಗಳ ಪ್ರವೇಶ ದ್ವಾರ ಎನಿಸಿಕೊಳ್ಳುವ ಅಸ್ಸಾಮಿನ ಪ್ರಮುಖ ನಗರ ಗುವಾಹಟಿಯು ನೀಲಾಚಲ ಪರ್ವತ ಶ್ರೇಣಿಗಳೆಡೆಯಲ್ಲಿ ಬ್ರಹ್ಮಪುತ್ರ ನದಿಯ ದಡದಲ್ಲಿರುವ ಸುಂದರ ನಗರ. ಪರ್ವತ ಶ್ರೇಣಿಯ ಹಸಿರು ಹೊದ್ದ ಗಿರಿ ಶಿಖರಗಳು ನಗರಕ್ಕೆ ಘನತೆಯ ಸೌಂದರ್ಯ ನೀಡಿವೆ. ವಿಶಾಲ ಪಾತ್ರದಲ್ಲಿ ಸಮುದ್ರದೋಪಾದಿಯಲ್ಲಿ ತುಂಬಿ ಹರಿವ ಬ್ರಹ್ಮಪುತ್ರ ನದಿ ಚೆಲುವಿಗೆ ಕುಂದಣವಿಟ್ಟಂತೆ ಇದೆ. ದಿಘಾಲಿ ಪುಖುರಿ, ಜೊರ್ ಪುಖುರಿ ಮುಂತಾದ ಕೊಳಗಳು ಗುವಾಹಟಿಯ ಸೌಂದರ್ಯಕ್ಕೆ ಸೊಬಗಿನ ಮೆರುಗು ತುಂಬಿವೆ.

ADVERTISEMENT

ಗುವಾಹಟಿಯಲ್ಲಿ ಪ್ರಸಿದ್ಧವಾದ ದಿಘಾಲಿ ಪುಖುರಿ ಕೊಳ, ಅದನ್ನು ಸುತ್ತುವರಿದ ಉದ್ಯಾನ ಹಾಗೂ ಅದರ ಮುಂಭಾಗದ ಯುದ್ಧ ಸ್ಮಾರಕವನ್ನು ಹಾದು ಹೋಗುತ್ತಲೇ ಈ ಕೊಳದ ಮುಂಭಾಗದಲ್ಲಿ ಸಿಗುತ್ತದೆ ಅಸ್ಸಾಮಿನ ಹೈಕೋರ್ಟ್. ಈ ಹೈಕೋರ್ಟ್ ಕಟ್ಟಡದ ಅತಿ ಸಮೀಪದಲ್ಲೇ ಅಸ್ಸಾಂ ಸ್ಟೇಟ್ ಮ್ಯೂಸಿಯಂ ಇದೆ. 1940 ರಲ್ಲಿ ‘ಕಾಮರೂಪ (ಅಸ್ಸಾಮಿನ ಹಿಂದಿನ ಹೆಸರು) ಅನುಸಂಧಾನ ಸಮಿತಿ’ ಇದನ್ನು ಸ್ಥಾಪಿಸಿತು. ಮುಂದೆ ಸಾರ್ವಜನಿಕರ, ಶ್ರೀಮಂತರ ದೇಣಿಗೆಯಿಂದ ಅಭಿವೃದ್ಧಿ ಹೊಂದಿದ ಇದು, 1953 ರಲ್ಲಿ ರಾಜ್ಯ ಸರ್ಕಾರದ ಸುಪರ್ದಿಗೆ ಒಳಗಾಯಿತು. ಈಗ ಇದು ಅಸ್ಸಾಮಿನ ನೋಡಲೇಬೇಕಾದ ತಾಣ ಎನ್ನುವಂತಾಗಿದೆ. ಹದಿಮೂರು ಮೊಗಸಾಲೆಗಳಲ್ಲಿ ಹರಡಿಕೊಂಡಿರುವ ಇದರ ಸಂಪೂರ್ಣ ವೀಕ್ಷಣೆಗೆ ಇಡೀ ದಿನವೇ ಬೇಕಾಗುತ್ತದೆ.

ಕೆಳಭಾಗದ ಮೊದಲ ಗ್ಯಾಲರಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ್ದು. ಮಹಾತ್ಮಾ ಗಾಂಧಿ ಮತ್ತು ಅವರ ಅನುಯಾಯಿಗಳ ಜೀವನ, ಹೋರಾಟಕ್ಕೆ ಸಂಬಂಧಿಸಿದ ಫೋಟೊಗಳು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಹುತಾತ್ಮರಾದ ಅಸ್ಸಾಮಿನ ಹೋರಾಟಗಾರರ ಫೋಟೊಗಳು ಇಲ್ಲಿವೆ. ಮುಂದಿನದು ಆಧುನಿಕ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೊಗಸಾಲೆ.

ಮೂರನೇ ವಿಭಾಗದಲ್ಲಿ ಅಸ್ಸಾಮಿನ ಬುಡಕಟ್ಟು ಜನರಾದ ಬೋಡೋ ಮಿಷಿಂಗ್ ಕುಕಿ ಕರ್ಬಿ ರಭ಼ ತಿವ ಮುಂತಾದ ಜನರ ದೈನಂದಿನ ಜೀವನದ ಉಪಕರಣಗಳು, ಅವರ ಉಡುಗೆಗಳು, ಮಣ್ಣಿನಿಂದ ತಯಾರಿಸಿದ ಕೊಳಲಿನಂತಹ ಸಂಗೀತ ವಾದ್ಯಗಳು, ಆಭರಣಗಳು, ಇತ್ಯಾದಿಗಳು ಪ್ರದರ್ಶಿಸಲಾಗಿದೆ. ಅಸ್ಸಾಮಿನ ಗ್ರಾಮೀಣ ಜನರ ಜೀವನ ಪ್ರದರ್ಶಿಸುವ ವಿಭಾಗದಲ್ಲಿ ಅಸ್ಸಾಮಿನ ದೈನಂದಿನ ಗೃಹಬಳಕೆಯ ಜೀವನದ ಮಾದರಿಗಳನ್ನು ನೈಜ ಪ್ರತಿಕೃತಿಯಂತೆ ನಿರ್ದಿಷ್ಟ ಪ್ರಮಾಣದಲ್ಲಿ ಕುಗ್ಗಿಸಿ ಪ್ರದರ್ಶಿಸಲಾಗಿದೆ. ಇದು ಅಸ್ಸಾಂ ಗ್ರಾಮೀಣರ ಸಹಜ ಜೀವನವನ್ನು ನೋಡುತ್ತಿರುವ ಭಾವವನ್ನು ಸಂದರ್ಶಕರಲ್ಲಿ ಉಂಟುಮಾಡುತ್ತದೆ. ಹಳ್ಳಿಗರ ಗುಡಿ ಕೈಗಾರಿಕೆ, ಮೀನುಗಾರಿಕೆ, ಕೃಷಿ, ಕೃಷಿ ಉಪಕರಣಗಳೊಂದಿಗೆ ಬೀಸುವ ಕುಟ್ಟುವ ಬೇಯಿಸುವ ಅವರ ಜನಜೀವನದ ದೃಶ್ಯಗಳು ಅತ್ಯಾಕರ್ಷಕವಾಗಿ ನೋಡುಗರನ್ನು ಸೆರೆಹಿಡಿದಿಡುವಂತೆ ಬಿಂಬಿತವಾಗಿವೆ.

ಮರದ ಕರಕುಶಲತೆಯ ಗ್ಯಾಲರಿಯಲ್ಲಿ ಅಸ್ಸಾಮಿನ ಸಾಂಪ್ರದಾಯಿಕ ‘ವೈಷ್ಣವ ಸತ್ರ’ ಸಂಸ್ಕೃತಿಯನ್ನು ಕಾಣಬಹುದು. ಶಿಲ್ಪಕಲಾ ಗ್ಯಾಲರಿಯಲ್ಲಿ ಅಸ್ಸಾಮನ್ನು ಆಳಿದ್ದ ಅಹೋಂ ವಂಶದವರಿಗಿಂತ ಪೂರ್ವಕಾಲದ ಅಂದರೆ ಆರರಿಂದ ಹದಿಮೂರನೇ ಶತಮಾನದವರೆಗಿನ ರಾಜರುಗಳ ಕಾಲದ ಶಿಲ್ಪಗಳು ಪ್ರದರ್ಶಿಸಲಾಗಿದೆ. ಹಸ್ತಪ್ರತಿ ವಿಭಾಗದಲ್ಲಿ ಮಧ್ಯಯುಗದ ಅರಸರ ಕಾಲದ ತಾಳೆಗರಿ, ಅಗರ್ ಮರದ ತೊಗಟೆಗಳ ಮೇಲೆ ಬರೆದ ಹಸ್ತಪ್ರತಿಗಳನ್ನು ಸಂರಕ್ಷಿಸಿ ಪ್ರದರ್ಶಿಸಲಾಗಿದೆ.

ಮಹಿಷಮರ್ದಿನಿ, ವಿಷ್ಣು ಬುದ್ಧ ರಾವಣ ನಟರಾಜ ಮುಂತಾದವರ ಲೋಹದ ವಿಗ್ರಹಗಳ ಪ್ರದರ್ಶನ ಗ್ಯಾಲರಿ ಇದೆ. ಅಹೋಮರಿಂದ ಮೊಘಲರ ಕಾಲದವರೆಗಿನ ಸಾವಿರಾರು ನಾಣ್ಯಗಳ ಪ್ರದರ್ಶನ ನೋಡಬಹುದು. ಅಸ್ಸಾಮಿನ ಪ್ರಾಚೀನ ವಸ್ತ್ರ ವಿನ್ಯಾಸದ ಕೀರ್ತಿ ಚೀನಾದವರೆಗೂ ಹಬ್ಬಿತ್ತು. ಅಂತಹ ಮಧ್ಯಯುಗದ ಉಡುಗೆಗಳ ಪ್ರದರ್ಶನ ಇದೆ.

ಶಸ್ತ್ರಾಸ್ತ್ರಗಳ ವಿಭಾಗದಲ್ಲಿ ಅಹೋಂ ಅರಸರ ಕಾಲದಿಂದ ತೊಡಗಿ ಎರಡನೇ ಮಹಾಯುದ್ಧದಲ್ಲಿ ಮಣಿಪುರ ನಾಗಾಲ್ಯಾಂಡ್‌ಗಳ ಮೇಲಿನ ಜಪಾನ್‌ ದಾಳಿಯ ಸಂದರ್ಭದ ಯುದ್ಧೋಪಕರಣಗಳ ಪ್ರದರ್ಶನವಿದೆ.
ಶಿಲಾ ಮತ್ತು ತಾಮ್ರ ಶಾಸನಗಳ ಇನ್ನೊಂದು ವಿಭಾಗದಲ್ಲಿ ಐದರಿಂದ ಹದಿನೆಂಟನೇ ಶತಮಾನದವರೆಗಿನ ರಾಜರುಗಳ ಯುದ್ಧ ವಿಜಯಗಳ ಶಾಸನಗಳು, ದೇವಾಲಯಗಳಿಗೆ ದತ್ತಿ ಭೂಮಿ ನೀಡಿದ ಶಾಸನಗಳು ಮುಂತಾದವನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಿರುವುದು ಗಮನ ಸೆಳೆಯುತ್ತದೆ.

ಈ ವಸ್ತುಸಂಗ್ರಹಾಲಯ ಹೊರಗಿನಿಂದ ನೋಡುವಾಗ ಸಾಧಾರಣ ಗಾತ್ರದ್ದಾಗಿ ಚಿಕ್ಕದೆಂಬಂತೆ ಕಾಣುತ್ತದೆ. ಆದರೆ ಒಳಹೊಕ್ಕಾಗ ಹಲವು ಅಂತಸ್ತುಗಳಲ್ಲಿ ಹರಡಿಕೊಂಡು ಗಾತ್ರದಲ್ಲಿ ವಿಶಾಲವಾಗಿಯೇ ಇದೆ.
‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎಂಬ ಅಲ್ಲಮನ ಮಾತಿನಂತೆ ಅಸ್ಸಾಮಿನ ಇತಿಹಾಸದ ದಾಖಲೆಗಳನ್ನು ಮುಂದಿನ ಪೀಳಿಗೆಗಾಗಿ ಸಂಗ್ರಹಿಸಿ ಸಂರಕ್ಷಿಸಿ ಶಿಸ್ತುಬದ್ಧವಾಗಿ ಪ್ರದರ್ಶಿಸಿರುವುದು ಅಸ್ಸಾಮಿ ಜನರ ಜೀವನಶ್ರದ್ಧೆಯ ದ್ಯೋತಕದಂತೆ ಭಾಸವಾಗುತ್ತದೆ. ನಮ್ಮ ಪ್ರವಾಸಿ ತಂಡದ ಯೋಜನೆಯಲ್ಲಿ ಇದರ ವೀಕ್ಷಣೆಗೆ ಅವಕಾಶ ಇರಲಿಲ್ಲ. ಆದರೂ ಇಪ್ಪತ್ಮೂರು ದಿನಗಳ ಈಶಾನ್ಯ ಪ್ರವಾಸದ ಕೊನೆಯ ದಿನ ಊರಿಗೆ ಹೊರಡುವ ವಿಮಾನಯಾನಕ್ಕಿದ್ದ ಸಾಕಷ್ಟೇ ಸಮಯವನ್ನು ಬಳಸಿಕೊಂಡು ನಾವು ದಂಪತಿ ಇಲ್ಲಿಗೆ ಧಾವಿಸಿ ಹೋಗಿ ವೀಕ್ಷಿಸಿ ಸಾರ್ಥಕತೆಯ ಸಂತೃಪ್ತ ಭಾವ ಮನ ತುಂಬಿಕೊಂಡೆವು.

ಶಿಲ್ಪಕಲಾಕೃತಿಗಳು 
ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯ
ಹಾರುವ ವನದೇವತೆಯ ಶಿಲ್ಪಕಲಾಕೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.