ADVERTISEMENT

ವಿಧಾನ ಸೌಧದೊಳಗೆ ಹೇಗಿದೆ ಎಂದು ನೋಡಬೇಕಾ? ಹೀಗೆ ಬುಕ್‌ ಮಾಡಿ ಪ್ರವಾಸ ಕೈಗೊಳ್ಳಿ

ಪವಿತ್ರಾ ಭಟ್
Published 17 ಜನವರಿ 2026, 6:26 IST
Last Updated 17 ಜನವರಿ 2026, 6:26 IST
<div class="paragraphs"><p>ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ಕ್ಕೆ ಸಾರ್ವಜನಿಕರು ಭಾನುವಾರ ಬಂದಿದ್ದರು</p></div>

ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ಕ್ಕೆ ಸಾರ್ವಜನಿಕರು ಭಾನುವಾರ ಬಂದಿದ್ದರು

   

ಪ್ರಜಾವಾಣಿ ಚಿತ್ರ: ರಂಜು ಪಿ

ಸರ್ಕಾರದ ಆಡಳಿತ ಯಂತ್ರದ ಕೇಂದ್ರ ಸ್ಥಾನ ವಿಧಾನಸೌಧದ ಒಳಗೆ ಹೇಗಿದೆ ಎಂದು ನೋಡುವ ಕುತೂಹಲ ಜನಸಾಮಾನ್ಯರಿಗೆ ಇದ್ದೇ ಇರುತ್ತದೆ. ಕಲಾಪ ಎಲ್ಲಿ ನಡೆಯುತ್ತದೆ, ಮುಖ್ಯಮಂತ್ರಿಗಳು ಕಚೇರಿ ಹೇಗಿರುತ್ತದೆ, ಸಚಿವರುಗಳು ಎಲ್ಲಿ ಕೂರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಅನೇಕರು ಅಂದುಕೊಳ್ಳುತ್ತಾರೆ.

ADVERTISEMENT

ಸರ್ಕಾರ ಆರಂಭಿಸಿರುವ ‘ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ’ದ ಯೋಜನೆಯಿಂದಾಗಿ ಮಾರ್ಗದರ್ಶಕರ ವಿವರಣೆಯೊಂದಿಗೆ ವಿಧಾನ ಸೌಧ ನೋಡಬಹುದು.

ಅದಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC–https://kstdc.co/activities/) ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್‌ ಮಾಡಬೇಕಾಗುತ್ತದೆ. ಹೇಗೆ ಬುಕ್‌ ಮಾಡಬಹುದು, ಸಮಯ ಏನು, ಏನೆಲ್ಲಾ ನೋಡಬಹುದು ಎನ್ನುವ ಮಾಹಿತಿ ಇಲ್ಲಿದೆ. 

ವಿಧಾನ ಸೌಧ

ಯಾವಾಗೆಲ್ಲ ಅವಕಾಶ?

ವಿಧಾನ ಸೌಧದ ಭವ್ಯತೆ, ವಾಸ್ತುಶಿಲ್ಪ ಮತ್ತು ಇತಿಹಾಸವನ್ನು ತಿಳಿಯಲು ವಿಶೇಷ ಮಾರ್ಗದರ್ಶಿತ ಪ್ರವಾಸ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರಗಳು ಮತ್ತು ಪ್ರತಿ ಭಾನುವಾರ ನಡೆಯುತ್ತದೆ. ಕನ್ನಡ–ಇಂಗ್ಲಿಷ್ ಮಾರ್ಗದರ್ಶನಗಳು ಇರುತ್ತವೆ. 

ವಿಧಾನಸೌಧ

ಬುಕ್‌ ಹೇಗೆ ಮಾಡುವುದು?

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ಗೆ ಹೋಗಿ ಯಾವ ಬಾಷೆಯಲ್ಲಿ ಮಾರ್ಗದರ್ಶನ ಬೇಕು ಎನ್ನುವುದನ್ನು ಆಯ್ಕೆ ಮಾಡಿ, ನಂತರ ಯಾವ ಸಮಯಕ್ಕೆ ಹೋಗುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ. ಪ್ರತಿ ವ್ಯಕ್ತಿಗೆ ₹50 ಟಿಕೆಟ್‌ ದರವಿದೆ. ಅದನ್ನು  ಪಾವತಿಸಿ ಟಿಕೆಟ್‌ ಪಡೆಯಬಹುದು.

ಅಧಿವೇಶನ ನಡೆಯುತ್ತಿರುವಾಗ ಅಥವಾ ಭದ್ರತಾ ಕಾರಣಗಳಿಗಾಗಿ ಕೆಲವೊಮ್ಮೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಇರುವುದಿಲ್ಲ.

ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ದಿನಕ್ಕೆ 8 ತಂಡಗಳನ್ನು, ಒಂದು ತಂಡದಲ್ಲಿ 30 ಜನರಂತೆ ಕರೆದೊಯ್ಯಲಾಗುತ್ತದೆ. ಟಿಕೆಟ್‌ ಕಾಯ್ದಿರಿಸಿದವರು, ಖರೀದಿಸಿದವರು ಆಧಾರ್‌ ಕಾರ್ಡ್‌ ತೋರಿಸುವುದು ಕಡ್ಡಾಯವಾಗಿರುತ್ತದೆ.

ಕನ್ನಡ ಮಾರ್ಗದರ್ಶಕರೊಂದಿಗೆ ವಿಧಾನ ಸೌಧ ನೋಡಲು ಮತ್ತು ಇಂಗ್ಲಿಷ್‌ ಮಾರ್ಗದರ್ಶಕರೊಂದಿಗೆ ಹೋಗಲು ಸಮಯದ ವ್ಯತ್ಯಾಸವಿದೆ.

ಕನ್ನಡ ಮಾರ್ಗದರ್ಶನ ಬೇಕೆಂದರೆ ಬೆಳಿಗ್ಗೆ 10 ಹಾಗೂ 11 ಗಂಟೆ, ಮಧ್ಯಾಹ್ನ 12 ಮತ್ತು 1 ಗಂಟೆಗೆ ಬುಕ್‌ ಮಾಡಿಕೊಳ್ಳಬಹುದು. 

ಇಂಗ್ಲಿಷನ್‌ನಲ್ಲಿ ವಿವರಣೆ ಬೇಕೆಂದರೆ ಬೆಳಿಗ್ಗೆ 10.30 ಹಾಗೂ 11.30ಕ್ಕೆ, ಮಧ್ಯಾಹ್ನ 12.30 ಮತ್ತು 1.30ಕ್ಕೆ ಬುಕ್‌ ಮಾಡಿಕೊಳ್ಳಬಹುದು.

ವಿಧಾನಸೌಧ ಪ್ರವಾಸಿ ಮಾರ್ಗದರ್ಶಿ ನಕ್ಷೆ

ಏನೆಲ್ಲಾ ನೋಡಬಹುದು?

ವಿಧಾನಸೌಧ ಬಲ ಭಾಗದಲ್ಲಿರುವ ಗಾಂಧೀಜಿ ಪ್ರತಿಮೆಯ ಸಮೀಪದಿಂದ ಪ್ರವಾಸ ಆರಂಭ
ಆಗಲಿದೆ. ಅಲ್ಲಿಂದ ವಿಧಾನಸೌಧ ನಿರ್ಮಾಣದ ಶಂಕು ಸ್ಥಾಪನೆಯ ಶಿಲಾಫಲಕ, ವಿಧಾನಸೌಧದ ಶ್ರೀಗಂಧದ ಮಾದರಿ ವೀಕ್ಷಣೆಗೆ ಅವಕಾಶವಿದೆ. ಬ್ಯಾಂಕ್ವೆಟ್‌ ಸಭಾಂಗಣ ನೋಡಬಹುದು. ವಿಧಾನಸಭೆ ಅಧ್ಯಕ್ಷರ ಗ್ಯಾಲರಿಗೆ ಪ್ರವೇಶ ಹಾಗೂ ಸಭೆಯ ನಡಾವಳಿಗಳ ಬಗ್ಗೆ ಮಾರ್ಷಲ್‌ಗಳು ವಿವರಣೆ ನೀಡುತ್ತಾರೆ.

ವಿಧಾನ ಪರಿಷತ್‌ ಪ್ರವೇಶ ದ್ವಾರದ ಬಳಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ 1890ರ ದಶಕದಿಂದ ವಿವಿಧ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಿ, ವಿಧಾನಸೌಧದವರೆಗೆ ನಡೆದು ಬಂದ ಹಾದಿಯನ್ನು ವಿವರಿಸುವ ಚಿತ್ರಗಳ ಬಗ್ಗೆ ವಿವರಣೆ ನೀಡಲಾಗುತ್ತದೆ. ಅಲ್ಲಿಂದ ಸೆಂಟ್ರಲ್‌ ಹಾಲ್‌, ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ, ಗುಲಾಬಿ ಉದ್ಯಾನ, ವಿಧಾನಸೌಧದ ಭವ್ಯಮೆಟ್ಟಿಲುಗಳಲ್ಲಿ ಪ್ರವಾಸ ಕೊನೆಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.