
ಪೋಲೆಂಡ್ ದೇಶದ ರಾಜಧಾನಿ ವಾರ್ಸಾ ಸಾಹಿತ್ಯ ಸಂಗೀತ ಕಲೆ ವಿಜ್ಞಾನ ಹಾಗೂ ಬೌದ್ಧಿಕ ಮತ್ತು ರಾಜಕೀಯ ಕೇಂದ್ರ. ಹಿಂದೆ ಇದನ್ನು ಪ್ಯಾರಿಸ್‌ಗೆ ಹೋಲಿಸುತ್ತಿದ್ದರು. ಇತಿಹಾಸದಲ್ಲಿ ಹಲವಾರು ಬಾರಿ ವಿನಾಶದ ಅಂಚನ್ನು ತಲುಪಿದರೂ ಪ್ರತಿಸಲವೂ ಪುನರುತ್ಥಾನಗೊಂಡಿರುವ ವಾರ್ಸಾ ನಗರ ‘ಫೀನಿಕ್ಸ್ ನಗರ’ ಎಂದೇ ಪ್ರಸಿದ್ಧವಾಗಿದೆ.
ಎರಡನೆಯ ಮಹಾಯುದ್ಧದ ಕಾಲದಲ್ಲಿ ಮುಕ್ಕಾಲು ಭಾಗ ನಗರ ನಾಶವಾಯಿತು. ಬರ್ನಾಂಡೊ ಬೆಲ್ಲೊಟ್ಟೊ ರಚಿಸಿದ್ದ ಪುರಾತನ ನಗರದ ಚಿತ್ರಗಳನ್ನು ಮುಂದಿರಿಸಿಕೊಂಡು, ಜನ ಹಳೆಯ ನಗರವನ್ನು ಪುನಃ ಕಟ್ಟಿದರು. ಈಗ ಇದು ಸುಂದರ ನಗರವಷ್ಟೇ ಅಲ್ಲ, ನೆಲಸಮಗೊಳಿಸಿದರೂ, ಪುನಃ ಮೇಲೆದ್ದ ಧೈರ್ಯವಂತ ಮತ್ತು ಕಾಯಕಜೀವಿಗಳ ನಗರ.
ವಿಸ್ತುಲಾ ನದಿಯ ದಂಡೆಯಲ್ಲಿ ನಿಂತಿದ್ದ ಬೆಸ್ತ ಯುವಕ ವಾರ್ಸ್‌ನಿಗೆ ಷಾವ ಎಂಬ ಮತ್ಸ್ಯಕನ್ಯೆಯೊಂದಿಗೆ ಪ್ರೇಮ ಮೊಳೆತು, ಇಬ್ಬರೂ ಕೂಡಿ ಕಟ್ಟಿದ ಊರು, ಅವರ ಹೆಸರಿನಿಂದಲೇ ವಾರ್ಸ್ ಷಾವ ಎಂದು ಕರೆಯಲಾಯಿತು. ಪೋಲಿಷರು ವಾರ್ಸಾವ ಎಂದೇ ಈಗಲೂ ಕರೆಯುತ್ತಾರೆ. ಆಂಗ್ಲರು ಅದನ್ನು ವಾರ್ಸಾ ಎಂದು ಕರೆದರು. ಒಂದು ಕೈಯಲ್ಲಿ ಖಡ್ಗ, ಮತ್ತೊಂದು ಕೈಯಲ್ಲಿ ಗುರಾಣಿ ಹಿಡಿದ ಸ್ಫುರದ್ರೂಪಿಣಿ ಮತ್ಸ್ಯಕನ್ಯೆ, ವಾರ್ಸಾ ನಗರದ ಲಾಂಛನ. ಅವರ ಬಾವುಟ ನಮ್ಮ ಕನ್ನಡ ಧ್ವಜದ ತದ್ರೂಪು–ಹಳದಿ ಮತ್ತು ಕೆಂಪು.
‘ಪೋಲ್’ ಎಂದರೆ ಮೈದಾನ. ದೇಶದ ಬಹುಭಾಗ ಬಯಲುಸೀಮೆ. ಅದಕ್ಕಾಗಿ ಈ ದೇಶಕ್ಕೆ ಪೋಲೆಂಡ್ ಎಂಬ ಹೆಸರು. ಹಿಟ್ಲರನ ಸೇನೆ 1939 ರ ಸೆಪ್ಟೆಂಬರ್ ಮೊದಲ ದಿನ ಪೋಲೆಂಡಿನೊಳಕ್ಕೆ ನುಗ್ಗಿದ್ದು ಎರಡನೆಯ ಮಹಾಯುದ್ಧದ ಪ್ರಾರಂಭಕ್ಕೆ ಕಾರಣವಾಯಿತು. ಪೋಲೆಂಡಿನಲ್ಲಿ ಹಿಟ್ಲರನ ಸೇನೆ ನಡೆಸಿದ ದೌರ್ಜನ್ಯ ಮತ್ತು ಹತ್ಯಾಕಾಂಡ ಭೀಕರ. ಎರಡನೇ ಮಹಾಯುದ್ಧದಲ್ಲಿ ವಧೆಯಾದ ಪೋಲಿಷರು 60 ಲಕ್ಷ, ಅಂದರೆ ಪೋಲೆಂಡಿನ ಇಡೀ ಜನಸಂಖ್ಯೆಯ ಶೇಕಡ 22 ರಷ್ಟು!
ಒಂದು ದಿಕ್ಕಿನಿಂದ ಜರ್ಮನಿ ಪೋಲೆಂಡನ್ನು ಆಕ್ರಮಣ ಮಾಡುವ ಹೊತ್ತಿಗೆ ಮತ್ತೊಂದು ದಿಕ್ಕಿನಿಂದ ರಷ್ಯಾ ಆಕ್ರಮಣ ಮಾಡಿ ಅರ್ಧ ಪೋಲೆಂಡನ್ನು ನುಂಗಿಬಿಟ್ಟಿತ್ತು. ಅತ್ತ ಜರ್ಮನಿ, ಇತ್ತ ರಷ್ಯಾ–ಎರಡೂ ದೇಶಗಳ ಆಕ್ರಮಣದಿಂದ ನಲುಗಿಹೋಯಿತು ಪೋಲೆಂಡ್. ಎರಡನೇ ಮಹಾಯುದ್ಧ ಮುಗಿದ ಮೇಲೆ ಪೋಲಿಷರು ಬೆಂಕಿಯಿಂದ ಬಾಣಲೆಗೆ ಬಿದ್ದರು. ಆ ನಂತರ 45 ವರ್ಷಗಳನ್ನು ಅವರು ‘ಡೀಪ್ ಫ್ರೀಜ್’ (ನಿಷ್ಕ್ರಿಯತೆ) ಎನ್ನುವರು. ಸೋವಿಯತ್ ಒಕ್ಕೂಟದ ವಿಘಟನೆಯ ನಂತರ ಪೋಲೆಂಡ್ ಸ್ವತಂತ್ರವಾಯಿತು.
ಈಗ ಯುರೋಪಿಯನ್ ಒಕ್ಕೂಟಕ್ಕೆ ಸೇರಿರುವ ಪೋಲೆಂಡ್ ದೇಶವನ್ನು ಸುತ್ತುವಾಗ, ಘನತೆಯಿಂದ ಹಾರಾಡುವ ಅದರ ಬಿಳಿ ಕೆಂಪು ಬಣ್ಣದ ಧ್ವಜ, ಸಾಲಿಡಾರಿಟಿ (ಐಕ್ಯಮತ್ಯ- ಕಮ್ಯುನಿಸ್ಟ್ ರಾಷ್ಟಗಳಲ್ಲಿ ಪ್ರಾರಂಭವಾದ ಮೊದಲ ಕಾರ್ಮಿಕ ಸಂಘ) ಎಂದು ಕೆಂಪಕ್ಷರದಲ್ಲಿ ಬರೆದಿರುವ ಭಿತ್ತಿಗಳು, ವಿಶ್ವಶಾಂತಿಗಾಗಿ ಕೊಡುಗೆ ಕೊಟ್ಟ ಪೋಲೆಂಡ್ ಮೂಲದ ಪೋಪ್ ಜಾನ್ ಪಾಲ್, ಖ್ಯಾತ ಖಗೋಳಶಾಸ್ತ್ರಜ್ಞ ನಿಕೋಲಸ್ ಕೋಪರ್ನಿಕಸ್, ಮೇರಿ ಕ್ಯೂರಿ ಸೇರಿದಂತೆ ನೊಬೆಲ್ ಪುರಸ್ಕಾರ ಸಂದಿರುವ 18 ಮಂದಿ ಪೋಲಿಷರು, ಕ್ಲಿಷ್ಟಕರ ಭಾಷೆ, ವಿಶಿಷ್ಟ ಆಹಾರ, ರುಚಿಕರ ಸೇಬು, ಸ್ಟಾರ್ಟ್ ಹಕ್ಕಿಗಳ ಗೂಡುಗಳು… ಕಂಡಾಗ ಇವರ ಬಗ್ಗೆ ಗೌರವ ಭಾವ ಮೂಡುತ್ತದೆ.
ವಾರ್ಸಾ ನಗರದಲ್ಲಿ ಭಾರತದ ನಂಟು, ತಂತು ಹಲವು ಇವೆ. ಪೋಲೆಂಡಿನ ವಾರ್ಸಾ ಯೂನಿವರ್ಸಿಟಿಯ ಗ್ರಂಥಾಲಯದ ಗೋಡೆಯ ಮೇಲೆ ಸಂಸ್ಕೃತದ ಶ್ಲೋಕಗಳನ್ನು ಕಂಡಾಗ ಖುಷಿಯಾಗುತ್ತದೆ. ಒಂದು ಇಡೀ ಗೋಡೆಯ ಮೇಲೆ ಗಾಯತ್ರಿ ಮಂತ್ರ, ಮುಂಡಕೋಪನಿಷತ್ತಿನ ಮತ್ತು ಗೀತೆಯ ಸಾಲುಗಳನ್ನು ಕೆತ್ತಲಾಗಿದೆ.
ಜಾಮ್ ಸಾಹೇಬ್ ಎಂದೇ ಕರೆಸಿಕೊಳ್ಳುತ್ತಿದ್ದ ಗುಜರಾತಿನ ನವನಗರದ ಮಹಾರಾಜ, ದಿಗ್ವಿಜಯ್ ಸಿಂಗ್ ಜಿ ರಣಜಿತ್ ಸಿಂಗ್ ಜಿ ಜಡೇಜ (1895-1966) ಅವರನ್ನು ಪೋಲೆಂಡಿನಲ್ಲಿ ಡೋಬ್ರಿ (ಒಳ್ಳೆಯ) ಮಹಾರಾಜ ಎಂದು ಕರೆಯುತ್ತಾರೆ. ಅವರ ಹೆಸರಿನ ಶಾಲೆ, ಅವರ ನೆನಪಿಗಾಗಿ ನಿರ್ಮಿಸಿದ ಸ್ಮಾರಕ ಮತ್ತು ಅವರ ಹೆಸರಿನ ಒಂದು ಚೌಕ ಕೂಡ ವಾರ್ಸಾದಲ್ಲಿದೆ. ಹಾಗೆಯೇ ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ್ ಅವರ ಗೌರವಾರ್ಥ ಕೊಲ್ಹಾಪುರ್ ಸ್ಮಾರಕವೂ ಇದೆ.
1942ರಲ್ಲಿ ದೇಶಭ್ರಷ್ಟವಾಗಿದ್ದ ಪೋಲಿಷ್ ಮಕ್ಕಳಿಗೆ, ‘ನಾವು ಆಶ್ರಯ ಕೊಡುತ್ತೇವೆ’ ಎಂದು ನವನಗರದ ಮಹಾರಾಜ ದಿಗ್ವಿಜಯ ಸಿಂಹಜಿ (ಜಾಮ್ ಸಾಹೇಬ್) ಘೋಷಿಸಿದರು. ಈ ತೀರ್ಮಾನ ಆಗಿನ ಬ್ರಿಟಿಷ್ ಸರ್ಕಾರಕ್ಕೆ ಸಮ್ಮತವಿರಲಿಲ್ಲ. ರಾಜ್ಯದ ಬೊಕ್ಕಸದಿಂದ ಇದಕ್ಕಾಗಿ ಹಣ ಖರ್ಚು ಮಾಡುವಂತಿಲ್ಲ ಎಂದು ಷರತ್ತು ಒಡ್ಡಿದರು. ಅವರು ನಮ್ಮ ಅತಿಥಿಗಳು ಎಂದು ಹೇಳಿ ಸ್ವಂತ ಹಣದಿಂದ ಜಾಮ್ ಸಾಹೇಬ್, ನಿರಾಶ್ರಿತರಿಗೆ ನೆರವಾಗಿದ್ದು ಇತಿಹಾಸ. ಆ ಸಮಯದಲ್ಲಿ ಭಾರತಕ್ಕೇ ಇನ್ನೂ ಸ್ವಾತಂತ್ರ‍್ಯ ಬಂದಿರಲಿಲ್ಲ. ಸಾಕಷ್ಟು ಸಮಸ್ಯೆಗಳು, ಬಡತನ ಇಲ್ಲಿ ತಾಂಡವವಾಡುತ್ತಿತ್ತು. ಆದರೂ ಪೋಲಿಷ್ ನಿರಾಶ್ರಿತರನ್ನು ಸ್ವೀಕರಿಸಿದ ಮೊದಲ ದೇಶ ಭಾರತವಾಗಿತ್ತು.
ವಾರ್ಸಾ ಯೂನಿವರ್ಸಿಟಿ ಲೈಬ್ರರಿಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಇದೆ. ಮಹಾತ್ಮ ಗಾಂಧಿ 150ನೇ ಜಯಂತಿಯ ಸವಿನೆನಪಿನಲ್ಲಿ ಪೋಲೆಂಡ್ 2019ರಲ್ಲಿ ಗಾಂಧಿ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು.
ವಾರ್ಸಾದ ಒಂದು ಬೀದಿಗೆ ‘ಮಹಾತ್ಮ ಗಾಂಧಿಯಗೋ’ (Mahatmy Gandhiego) ಎಂದು ಹೆಸರಿಸಲಾಗಿದೆ. ಅಷ್ಟೇ ಅಲ್ಲ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರವೀಂದ್ರನಾಥ್ ಟ್ಯಾಗೋರ್ ಅವರ ಹೆಸರಿನ ಬೀದಿಗಳೂ ಇಲ್ಲಿವೆ.
ಭೌತ ಮತ್ತು ರಸಾಯನ ಶಾಸ್ತ್ರ ಎರಡರಲ್ಲೂ ನೊಬೆಲ್ ಪಾರಿತೋಷಕ ಗಳಿಸಿದ ಮೊದಲ ಮಹಿಳೆ ಮೇರಿ ಕ್ಯೂರಿ. 1867 ರಲ್ಲಿ ವಾರ್ಸಾದಲ್ಲಿ ಹುಟ್ಟಿದ ಈಕೆ ತನ್ನ 24 ನೇ ವಯಸ್ಸಿನಲ್ಲಿ ಪ್ಯಾರಿಸ್‌ಗೆ ವಲಸೆ ಹೋದರು. 1903 ರಲ್ಲಿ ಭೌತಶಾಸ್ತ್ರದಲ್ಲಿ, 1911 ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದರು. ತನ್ನ ಮಾತೃಭೂಮಿಯ ಸವಿನೆನಪಿಗಾಗಿ ತಾನು ಕಂಡು ಹಿಡಿದ ಮೂಲಧಾತುವಿನ ಹೆಸರನ್ನು ಪೊಲೋನಿಯಮ್ ಎಂದು ಕರೆದರು. ವಾರ್ಸಾದ ನಂಬರ್ 16 ಫ್ರೆಟ್ಟಾ ಬೀದಿಯಲ್ಲಿರುವ ಮೇರಿ ಕ್ಯೂರಿ ಹುಟ್ಟಿದ ಮನೆಯನ್ನು ಈಗ ಮ್ಯೂಸಿಯಂ ಮಾಡಿದ್ದಾರೆ. ವಿಸ್ತುಲಾ ನದಿಯ ದಡದಲ್ಲಿ ಮೇರಿ ಕ್ಯೂರಿಯ ಸುಂದರವಾದ ಕಂಚಿನ ಪ್ರತಿಮೆಯಿದೆ.
ವಾರ್ಸಾ ನಗರದ ಮಧ್ಯದಲ್ಲಿ ಹರಿಯುವ ವಿಸ್ತುಲಾ ನದಿ ನಗರದ ಸೌಂದರ್ಯವನ್ನು ಹೆಚ್ಚಿಸಿದೆ. ನದಿಯ ದಂಡೆಯಲ್ಲಿ ವಾಯುವಿಹಾರಕ್ಕೆ ಮತ್ತು ಸೈಕ್ಲಿಂಗ್‌ಗೆ ರಸ್ತೆಗಳನ್ನು ಮಾಡಲಾಗಿದೆ. ಇಲ್ಲಿ ಅನೇಕ ಸಂಗ್ರಹಾಲಯಗಳು, ಚಾರಿತ್ರಿಕ ಅರಮನೆಗಳು, ಉದ್ಯಾನಗಳು ಮತ್ತು ಸಾಂಸ್ಕೃತಿಕ ಸ್ಥಳಗಳಿವೆ. ವಾರ್ಸಾ ಪ್ರಖ್ಯಾತ ಸಂಗೀತಗಾರ ಫ್ರೆಡರಿಕ್ ಚೋಪಿನ್ ನ ಹುಟ್ಟೂರಾಗಿದೆ.
ವಾರ್ಸಾದ ಅತಿ ಎತ್ತರದ ಮತ್ತು ಭವ್ಯವಾದ ಕಟ್ಟಡಗಳಲ್ಲಿ ಒಂದಾದ ಪ್ಯಾಲೇಸ್ ಆಫ್ ಕಲ್ಚರ್ ಆ್ಯಂಡ್ ಸೈನ್ಸ್ ನಗರದ ಲಾಂಛನದಂತಿದ್ದು, ಇದರ ಗೋಪುರ ನಗರದ ಬಹುತೇಕ ಎಲ್ಲ ಸ್ಥಳಗಳಿಂದಲೂ ಕಾಣಿಸುತ್ತದೆ. ರಷ್ಯಾಗೆ ಪೋಲೆಂಡ್ ರಾಜಕೀಯ ಮತ್ತು ಭೌಗೋಳಿಕವಾಗಿ ಬಹಳ ಮುಖ್ಯ ಎಂದು ವಿಶ್ವಕ್ಕೆ ಪ್ರದರ್ಶಿಸಲು 1952 ರಲ್ಲಿ ಸ್ಟಾಲಿನ್ ಕೊಟ್ಟ ಕೊಡುಗೆ ಇದು.
ಯುನೆಸ್ಕೋ ವಿಶ್ವ ಪರಂಪರೆಯ ತಾಣವಿದು. ಇಲ್ಲಿ ಸುಂದರವಾದ ಮಾರುಕಟ್ಟೆ ಸ್ಥಳ, ಪ್ರಾಚೀನ ಕಟ್ಟಡಗಳು, ಬಣ್ಣಬಣ್ಣದ ಮನೆಗಳು, ಮತ್ತು ರಾಜಮನೆತನದ ಅರಮನೆಗಳಿವೆ. ವಾರ್ಸಾದ ಹೃದಯಭಾಗದಲ್ಲಿರುವ ಈ ‘ಓಲ್ಡ್ ಟೌನ್’ ನ ಚೌಕವು ಬಣ್ಣ-ಬಣ್ಣದ ಮನೆಗಳು, ಕೆಫೆಗಳು, ಮತ್ತು ರೆಸ್ಟೋರೆಂಟ್‌ಗಳಿಂದ ಸುತ್ತುವರಿದಿದೆ.
16ನೇ ಶತಮಾನದಿಂದ 18ನೇ ಶತಮಾನದವರೆಗೆ ಪೋಲಿಷ್ ರಾಜರ ನಿವಾಸವಾಗಿದ್ದ ರಾಯಲ್ ಕ್ಯಾಸಲ್ ಈಗ ಮ್ಯೂಸಿಯಂ ಆಗಿದೆ. ಪೋಲೆಂಡಿನ ಬಾರೋಕ್ ಶೈಲಿಯ ಪ್ರಸಿದ್ಧ ರಾಜಮಹಲ್ ವಿಲನೌ ಅರಮನೆ, ತನ್ನ ಐತಿಹಾಸಿಕ, ಕಲಾತ್ಮಕ ಹಾಗೂ ಸಾಂಸ್ಕೃತಿಕ ಮಹತ್ವದಿಂದ ಆಕರ್ಷಣೆಯ ಕೇಂದ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.