
ಅಗಸ್ತ್ಯಕೂಡಂ, ದಕ್ಷಿಣ ಭಾರತದಲ್ಲೇ ಅತಿ ಕಠಿಣ ಚಾರಣಗಳಲ್ಲಿ ಒಂದು. ಕೇರಳದ ರಾಜಧಾನಿ ತಿರುವನಂತಪುರಂಗೆ ಸಮೀಪವಿರುವ ಈ ಗಿರಿಶಿಖರ 1,868 ಮೀಟರ್ ಎತ್ತರವಿದ್ದು, ಇದನ್ನು ಏರಲು ಮೂರು ದಿನ ಬೇಕು!
48 ಕಿ.ಮೀ ಹಾದಿಯ ಚಾರಣದಲ್ಲಿ ಪ್ರತಿ ಕಿಲೊಮೀಟರ್‌ಗೂ ಜಲಪಾತ, ನದಿ ಕಣಿವೆ, ಹುಲ್ಲುಗಾವಲು, ಸೂರ್ಯನ ಕಿರಣ ಬೀಳದಷ್ಟು ಹಬ್ಬಿದ ಮಳೆಕಾಡುಗಳನ್ನು ಹೊಕ್ಕು ಸಾಗಬೇಕಾಗುತ್ತದೆ. ಕೊನೆಯ 600 ಮೀಟರ್ ಅನ್ನು ಹಗ್ಗ ಹಿಡಿದುಕೊಂಡೇ ಹತ್ತುವಾಗ ಎದೆ ನಡುಗುತ್ತದೆ.
ಪಶ್ಚಿಮಘಟ್ಟಗಳ ಸಾಲಿನ ಕೊನೆಯ ಎತ್ತರದ ಈ ಗಿರಿಯು ಕೇರಳ–ತಮಿಳುನಾಡಿನ ಗಡಿಯಾಗಿದೆ. ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರ ಗಿರಿಯ ನೆತ್ತಿಯಿಂದ ಕಾಣುತ್ತವೆ. ಇಲ್ಲಿ ಅಗಸ್ತ್ಯ ಮುನಿ ಮೂರ್ತಿಯಿದ್ದು, ತಮಿಳಿಗರಿಗೆ ಪುಣ್ಯಭೂಮಿಯಾಗಿದೆ. ಕಾವೇರಿಯನ್ನು ಬ್ರಹ್ಮಗಿರಿಯಿಂದ ತಮಿಳುನಾಡಿಗೆ ಹರಿಸಿದ ಅಗಸ್ತ್ಯ ಮುನಿ ಇಲ್ಲಿಯೇ ನೆಲೆಗೊಂಡರೆಂಬ ಐತಿಹ್ಯವೂ ಇದೆ. ಹೀಗಾಗಿಯೇ ಅಗಸ್ತ್ಯಮಲೈ, ಪೊದಿಗೈಮಲೈ ಎಂಬ ಹೆಸರಿನಿಂದಲೂ, ತ್ರಿಭುಜಾಕಾರದಲ್ಲಿರುವ ಗಿರಿಶಿಖರವು ಕೈಲಾಸ ಶಿಖರ ಹೋಲುವುದರಿಂದ ದಕ್ಷಿಣ ಕೈಲಾಸವೆಂದೂ ಖ್ಯಾತಿ ಪಡೆದಿದೆ.
ಹಗ್ಗ ಹಿಡಿದು ಹತ್ತುವ ಸಾಹಸ
ನಮ್ಮ ಕುದುರೆಮುಖ ಗಿರಿಶಿಖರಕ್ಕಿಂತ ತುಸು ಕಡಿಮೆ ಎತ್ತರವಿದ್ದರೂ, ಅಗಸ್ತ್ಯಕೂಡಂ ತುತ್ತತುದಿ ತಲುಪಲು ಸುಮಾರು 24 ಕಿ.ಮೀ ಕ್ರಮಿಸಬೇಕು. ಕುದುರೆಮುಖ ಮತ್ತು ಕುಮಾರ ಪರ್ವತದ ಚಾರಣ ಸುಖದ ಮಿಳಿತ ಈ ಚಾರಣದಲ್ಲಿ ಸಿಗುವುದು ಖಚಿತ. ಕುದುರೆಮುಖದಂತೆ ಶೋಲಾ ಕಾಡುಗಳು, ಹುಲ್ಲುಗಾವಲು, ಕುಮಾರಪರ್ವತದಂತೆ ದಟ್ಟ ಕಾನನ, ಕಲ್ಲುಹಾಸಿನ ಮೇಲಿನ ಚಾರಣದ ಸುಖವು ಅಗಸ್ತ್ಯಮಲೈನಲ್ಲಿ ಸಂಧಿಸುವಂತೆ ಭಾಸವಾಗುತ್ತದೆ.
ವರ್ಷದಲ್ಲಿ ಜನವರಿಯಿಂದ ಮೇ ವರೆಗೆ ಚಾರಣಕ್ಕೆ ಅವಕಾಶವಿದ್ದು, ಬುಕ್ಕಿಂಗ್ ಮಾಡುವುದೇ ಸಾಹಸ. ಮುಂಗಾರು ಮತ್ತು ಹಿಂಗಾರಿನಲ್ಲಿ ಹೆಚ್ಚು ಪ್ರಮಾಣದ ಮಳೆಯನ್ನು ಕಾಣುವ ಪಶ್ಚಿಮಘಟ್ಟದ ಈ ಭಾಗದಲ್ಲಿ ನದಿ–ಝರಿಗಳು ಡಿಸೆಂಬರ್‌ವರೆಗೂ ಉಕ್ಕಿ ಹರಿಯುತ್ತವೆ. ಹೀಗಾಗಿಯೇ ಕೇರಳ ಅರಣ್ಯ ಇಲಾಖೆಯು ಚಾರಣಕ್ಕೆ ಅವಕಾಶವನ್ನು ವರ್ಷದ ಮೊದಲ ಐದು ತಿಂಗಳು ನೀಡಿದೆ. ಈ ಅವಧಿಯಲ್ಲಿ ಚಾರಣ ಪ್ರಿಯರು ಕೇರಳ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಟಿಕೆಟ್ ಪಡೆಯಲು ಕಾಯುತ್ತಿರುತ್ತಾರೆ. ಎರಡು ದಿನಕ್ಕೊಮ್ಮೆ 100 ಜನರಿಗೆ ಪ್ರವೇಶಾವಕಾಶ ನೀಡುವುದರಿಂದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್ ಟಿಕೆಟ್ ಬಿಕರಿಯಾಗುತ್ತದೆ. ಟಿಕೆಟ್ ಪಡೆದರೂ ಚಾರಣ ಮಾಡಲು ಏಳು ದಿನವಿರುವಂತೆ ವೈದ್ಯಕೀಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಅದಿದ್ದರೆ ಮಾತ್ರ ಪ್ರವೇಶ.
ಚಾರಣಕ್ಕೆ ಬರುವ ನೂರು ಮಂದಿಯಲ್ಲಿ ಹತ್ತುವವರು ಅರ್ಧದಷ್ಟು ಮಾತ್ರ! ನಾನು, ಸ್ನೇಹಿತರಾದ ಅಜಿತ್ ಮತ್ತು ರವಿ ಶಫೀ ಮೂವರು ಅಗಸ್ತ್ಯಕೂಡಂ ಚಾರಣ ಕೈಗೊಂಡಿದ್ದೆವು. ನಮ್ಮಲ್ಲಿ ಗಿರಿಶಿಖರ ತಲುಪಿದ್ದು ನಾನೊಬ್ಬನೇ.
ತಿರುವನಂತಪುರದ ಸಮುದ್ರದ ತೀರದಲ್ಲಿದ್ದ ನಾವು ಸುಮಾರು 500 ಮೀಟರ್ ಎತ್ತರದ 61 ಕಿ.ಮೀ ದೂರದ ಪಶ್ಚಿಮಘಟ್ಟಗಳ ಟ್ರೆಕ್ಕಿಂಗ್ ಆರಂಭದ ಜಾಗವಾದ ಬೋನಾಕಾಡ್ ತಲುಪಿದಾಗ ಬೆಳಿಗ್ಗೆ 7.30. ಅಲ್ಲಿ ಆಗಲೇ ಹತ್ತಾರು ಮಂದಿ ಸೇರಿದ್ದರು. ದಾಖಲೆಗಳ ಪರಿಶೀಲನೆಯೂ ನಡೆದಿತ್ತು. ಅರಣ್ಯ ಸಿಬ್ಬಂದಿ ನಮ್ಮ ಬ್ಯಾಗ್‌ನಲ್ಲಿದ್ದ ಬ್ರಷ್, ಪೇಸ್ಟ್ ಹೊರತು ಪಡಿಸಿ ಉಳಿದೆಲ್ಲವನ್ನೂ ಕಸದಬುಟ್ಟಿಗೆ ಎಸೆದರು. ಜೀವವೈವಿಧ್ಯದ
ಸೂಕ್ಷ್ಮತಾಣವಾದ ಈ ಪ್ರದೇಶಕ್ಕೆ ಪ್ಲಾಸ್ಟಿಕ್ ಒಯ್ಯುವಂತಿಲ್ಲ.
ಮುಂಜಾನೆಯ ಚಾರಣ
ಮೊದಲ ದಿನ 16 ಕಿ.ಮೀ ದೂರದ ಅಗಸ್ತ್ಯಕೂಡಂ ಅಥಿರುಮಲೆ ಬೇಸ್‌ಕ್ಯಾಂಪ್‌ಗೆ ತಲುಪಬೇಕಿತ್ತು. ಅಲ್ಲಿಂದ ಚಾರಣ ಶುರುವಾಯಿತು. ದಟ್ಟ ಕಾನನದ ಹಾದಿಯಲ್ಲಿ ಮುಗಿಲಿನೆತ್ತರಕ್ಕೆ ಬೆಳೆದಿದ್ದ ಮರಗಳ ಅಡಿಯಲ್ಲಿ ಸಾಗಿದ ನಾವು, ಜಲಪಾತ, ಹುಲ್ಲುಗಾವಲು ಕಂಡೆವು. ದೊಡ್ಡ ಝರಿಯಲ್ಲಿ ಸ್ನಾನ ಮಾಡಿ, ಊಟ ಮುಗಿಸಿ ಅಥಿರುಮಲೆ ತಲುಪಿದಾಗ ಮಧ್ಯಾಹ್ನ 3.30. ಕಾಲುಗಳು ಪದ ಹಾಡುತ್ತಿದ್ದವು.
ಬೇಸ್ ಕ್ಯಾಂಪ್ ಸಮೀಪದ ಹುಲ್ಲುಗಾವಲಿನ ಹಿನ್ನೆಲೆಯಲ್ಲಿ ಪಿರಮಿಡ್‌ನಂತೆ ಕಾಣುತ್ತಿದ್ದ ಅಗಸ್ತ್ಯಮಲೈ ಅನ್ನು ಸಂಜೆ ಸೂರ್ಯನ ಹೊಂಬಣ್ಣದ ಬೆಳಕಿನಲ್ಲಿ ಕಣ್ತುಂಬಿಕೊಂಡವು. ಮಲೆಯಲ್ಲಿ ಹುಟ್ಟುವ ನೆಯ್ಯಾರ್ ನದಿ ಅಲ್ಲಿ ತಣ್ಣನೆ ಕೊರೆಯುವಂತೆ ಹರಿಯುತ್ತಿತ್ತು. ಜಳಕವ ಮಾಡಿ ಕ್ಯಾಂಪ್‌ನಲ್ಲಿ ಸಿಕ್ಕ ಅನ್ನ ಉಪ್ಪುಗಂಜಿ ಊಟ ಮಾಡಿದೆವು. ಪಶ್ಚಿಮ ಘಟ್ಟದ ಗಿರಿ ಶಿಖರಗಳ ಹಿನ್ನೆಲೆಯಲ್ಲಿ ಹೊಳೆಯುತ್ತಿದ್ದ ತಾರೆ– ನಕ್ಷತ್ರಪುಂಜಗಳನ್ನು ಕಣ್ತುಂಬಿಕೊಂಡು ಮಲಗಿದೆವು. ಎಲ್ಲೆಲ್ಲಿಂದಲೊ ಬಂದವರು ಒಂದೇ ಸೂರಿನಡಿಯಲ್ಲಿದ್ದೆವು. ಮಲಯಾಳ, ತಮಿಳು, ಕನ್ನಡ, ತೆಲುಗು, ಹಿಂದಿಯಲ್ಲಿ ಆಡುತ್ತಿದ್ದ ಮಾತುಗಳು ಪ್ರಕೃತಿಯನ್ನೇ ಧೇನಿಸುತ್ತಿದ್ದವು.
ಮಾರನೆಯ ದಿನ ಶಿಖರವೇರುವ 7–8 ಕಿ.ಮೀ ಹಾದಿ, ಜೊತೆಯಲ್ಲಿ ಅರಣ್ಯ ಸಿಬ್ಬಂದಿಯೂ ರಕ್ಷಣೆಗೆ ಜೊತೆಯಲ್ಲಿದ್ದರು. ಅಲ್ಲಲ್ಲಿ ಆನೆ ಲದ್ದಿಯನ್ನು ಕಂಡೆವು. ದಾರಿಯಲ್ಲಿ ಸಿಕ್ಕ ಝರಿಯಲ್ಲಿ ಪ್ರಾಣಿಗಳಂತೆ ತುಟಿ ಸೋಕಿಸಿ ನೀರನ್ನು ಹೀರಿದೆವು. ನನ್ನ ಗೆಳೆಯರಿಬ್ಬರು ಮುಂದೆ ಸಾಗಲು ಅಸಾಧ್ಯವೆಂದು ಕುಳಿತುಬಿಟ್ಟರು. ಚಾರಣದಲ್ಲಿ ನಡೆಯಲಾಗದೆಂದು ಕುಳಿತವರನ್ನು ಬಲವಂತ ಮಾಡಬಾರದೆಂಬುದು ಅಲ್ಲಿಯೇ ಗೊತ್ತಾಗುತ್ತದೆ. ಜೀವವೇ ಹೋದಂತೆ ಸಿಟ್ಟಾಗಿ ಬೈಗುಳ ಕೇಳುವುದಕ್ಕಿಂತ ಸಾವಧಾನವಾಗಿ ಕುಳಿತುಕೊಳ್ಳಿರೆಂದು, ಬರುವವರೆಗೂ ಕಾಯಿರೆಂದು ನಾನು ಶಿಖರದ ಹಾದಿಯನ್ನು ಹಿಡಿದೆ.
ಅವರಿಗೂ ನನ್ನ ಕುರಿತು ಆತಂಕ. ಏಕೆಂದರೆ, ದಶಕದ ಹಿಂದೆ ಇದೇ ಕಲ್ಲುಹಾಸಿನಿಂದ ಜಾರಿ, ಕಣಿವೆಯ ಬಿದಿರ ಮೆಳೆಗೆ ವಿಜ್ಞಾನಿಯೊಬ್ಬರು ಬಿದ್ದಿದ್ದರು. ಎಡಗಣ್ಣಿಗೆ ಬಿದಿರು ಹೊಕ್ಕು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಈ ಘಟನೆಯನ್ನು ನಮ್ಮ ಜೊತೆಗೆ ಬಂದಿದ್ದ ಅರಣ್ಯ ಸಿಬ್ಬಂದಿ ಹೇಳಿದ್ದರು. ಅಲ್ಲದೇ ಹೃದಯಾಘಾತದಿಂದ ಹಲವರು ಮೃತಪಟ್ಟಿದ್ದಾರೆ ಎಂಬ ಮಾತುಗಳು ಇನ್ನೇನು ಶಿಖರ ಹತ್ತಿರವಿದೆ ಎಂದಾಗ ಕಾಡಲು ಶುರುವಾಗಿತ್ತು.
ಹಗ್ಗ ಹಿಡಿದು ಹತ್ತಿದ ನಂತರ ಸುಧಾರಿಸಿಕೊಳ್ಳುತ್ತಿರುವ ಚಾರಣಿಗ
50ರಿಂದ 150 ಅಡಿ ಎತ್ತರವಿರುವ ಮೂರು ಜಾರು ಬಂಡೆಗಳನ್ನು ಹಗ್ಗ ಹಿಡಿದು ಹಿಂದಿನ ಸಾವಿರ ಮೀಟರ್‌ನ ಆಳದ ಕಣಿವೆಯನ್ನು ನೋಡದೇ ಹತ್ತಲು ಆರಂಭಿಸಿದೆ. ಈಗಾಗಲೇ ಎರಡ್ಮೂರು ಬಾರಿ ಹತ್ತಿದವರು ಮೇಲೆ ಕುಳಿತು ನೀಡುತ್ತಿದ್ದ ಸಲಹೆಗಳು ಧೈರ್ಯ ತುಂಬಿದವು. ಕೊನೆಗೂ ಶಿಖರದ ಮೇಲೆ ನಿಂತು ಕಣ್ಣು ಹಾಯಿಸಿದಾಗ ಒಂದೆಡೆ ಬಿಳಿಹಾಸಿಗೆಯ ಮೋಡಗಳು, ಅಜಾನುಬಾಹುವಿನಂತೆ ನಿಂತಿರುವ ಪಶ್ಚಿಮ ಘಟ್ಟದ ಸಾಲು. ಎದುರು ಸುಂದರವಾಗಿ, ಭೂಮಿ ಹುಟ್ಟಿದಾಗಿಂದಲೂ ನಿಂತಿದ್ದ ‘ಐಂತಲೈ ಪೊದಿಗೈ’ ಶಿಖರಗಳು. ಅವನ್ನು ನೋಡುತ್ತಿದ್ದಂತೆ ‘ಇಳಾ’ ಎಂದು ಪ್ರಕೃತಿಯೇ ಬರೆದಂತೆ ಅನ್ನಿಸಿತ್ತು. ಇಳೆಯ ಸೌಂದರ್ಯವು ಅಗಸ್ತ್ಯನ ಮುಡಿಯಲ್ಲಿ ನಿಂತು ಕಂಡದ್ದು ಅನಿವರ್ಚನೀಯ!
ಕೊನೆಯಲ್ಲಿ ಹತ್ತಲಾರದವರು ಮತ್ತೆ ಹೋಗುವ ಶಪಥ ಮಾಡಿಯೇ ಮಲೆಯನು ಇಳಿಯಲು ಜೊತೆಯಾದರು. ಚಾರಣ ಮುಗಿಸಿದಾಗ ಕಾಲು ನಡುಗುತ್ತಿದ್ದವು. ಮೂರು ದಿನದ ಚಾರಣ ಎರಡೇ ದಿನಕ್ಕೆ ಪೂರ್ಣಗೊಳಿಸಲು ನಿರ್ಧರಿಸಿದ್ದೆವು. ಅಗಸ್ತ್ಯಕೂಡಂ ಚಾರಣ ಅಸಾಧ್ಯವನ್ನು ಸಾಧ್ಯವಾಗಿಸಿದ ಸಾರ್ಥಕವನ್ನು ತಂದುಕೊಟ್ಟಿತು.
ಅಗಸ್ತ್ಯಮಲೆಯಿಂದ ಹುಲಿಯ ಪಂಜದಂತೆ ಕಾಣುವ ‘ಐಂತಲೈ ಪೊದಿಗೈ’ ಪರ್ವತಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.