ಹಿಮಾಲಯ ಚಾರಣ ಹಲವರ ಜೀವಮಾನದ ಕನಸಾಗಿರುತ್ತದೆ. ಇದಕ್ಕಾಗಿ ಪ್ರತಿ ಕ್ಷಣವೂ ಹಂಬಲಿಸುತ್ತಲೇ ಇರುತ್ತಾರೆ. ಆದರೆ, ಈ ಲೇಖಕರು ಅನಿರೀಕ್ಷಿತವಾಗಿ ಚಾರಣಕ್ಕೆ ಹೊರಡುತ್ತಾರೆ. ಅಲ್ಲಿ ತಮಗಾದ ಅನುಭವವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ನಾನೇನು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಚಾರಣ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿರಲಿಲ್ಲ. ‘ಹಿಮಾಲಯದ ಪರ್ವತ ಸಾಲುಗಳಲ್ಲಿ ಚಾರಣ ಮಾಡುವುದು ಅಪಾಯಕಾರಿ. ಅಲ್ಲಿಗೆ ಹೋಗುವುದು ಬೇಡ. ನಿಮ್ಮ ತಂದೆಯ ಮಾತು ಕೇಳಿ’ ಎಂದು ಹಲವಾರು ವರ್ಷಗಳಿಂದ ಚಾರಣವನ್ನೆ ಹವ್ಯಾಸ ಮಾಡಿಕೊಂಡಿರುವ ಮಿತ್ರರೊಬ್ಬರಿಗೆ ಸಲಹೆ ನೀಡಲು ಹೋಗಿದ್ದೆ. ಆದರೆ, ಅವರು ನನ್ನ ಮನಸ್ಸನ್ನೇ ಪರಿವರ್ತನೆ ಮಾಡಿ ಹಿಮಾಲಯ ಚಾರಣಕ್ಕೆ ಹೊರಡುವಂತೆ ಮಾಡಿಯೇಬಿಟ್ಟರು! ಅವರ ಜೊತೆ ಚಾರಣ ಮಾಡಿ ಬಂದ ನಂತರ ನನಗೆ ಅನಿಸಿದ್ದು, ಚಾರಣ ಬೇಡ ಎಂದು ಸ್ನೇಹಿತನ ಮನವೊಲಿಸುವ ಪ್ರಯತ್ನ ಮಾಡದೇ ಹೋಗಿದ್ದರೆ ಬದುಕಿನಲ್ಲಿ ಅಪೂರ್ವ ಅನುಭವವೊಂದನ್ನು ಕಳೆದುಕೊಂಡುಬಿಡುತ್ತಿದ್ದೆ ಎಂದು...
ಕರ್ನಾಟಕ ಪರ್ವತಾರೋಹಣ ಸಂಸ್ಥೆಯ ನೆರವಿನೊಂದಿಗೆ 20 ಸದಸ್ಯರ ತಂಡ ಚಾರಣ ಏರ್ಪಡಿಸಿತ್ತು. ಆ ತಂಡದಲ್ಲಿ ನಾನು, ನನ್ನ ಮಗ ಸೇರಿದಂತೆ ಏಳು ಹೊಸ ಸದಸ್ಯರು ಕುಲು ಕಣಿವೆಯ ದಿಯೋ ತಿಬ್ಬ ಶಿಖರದ ಬೇಸ್ ಕ್ಯಾಂಪ್ ಚಂದ್ರತಾಲ್‌ವರೆಗೆ ಚಾರಣ ಮಾಡಲು ಹೊರಟೆವು. ಉಳಿದ 13 ಸದಸ್ಯರ ತಂಡ ‘ದಿಯೋ ತಿಬ್ಬ’ ಶಿಖರಕ್ಕೆ ಹೊರಟಿತು. ಇದರ ನಾಯಕತ್ವ ವಹಿಸಿದ್ದು ಕರ್ನಾಟಕ ಪರ್ವತಾರೋಹಣ ಸಂಸ್ಥೆಯ ಸದಸ್ಯ, ನನ್ನ ಸ್ನೇಹಿತ ಸಂತೋಷ್ ದೇವರಾಜಪ್ಪ. ಮನಾಲಿಯಿಂದ ಕನೂಲ್‌ವರೆಗೆ ವಾಹನಗಳಲ್ಲಿ ತೆರಳಿ ಅಲ್ಲಿಂದ ನಮ್ಮ ಚಾರಣ ಪ್ರಾರಂಭಿಸಿದೆವು. ಕನೂಲ್ ಬಳಿ ಜಲ ವಿದ್ಯುತ್ ಘಟಕ ಇದ್ದು, ಅಲ್ಲಿವರೆಗೆ ವಾಹನಗಳಲ್ಲಿ ತೆರಳಬಹುದು. ಅದು ದುರ್ಗಮ ಹಾದಿ. ಚಿಕ್ಕಪುಟ್ಟ ವಾಹನಗಳು ಮಾತ್ರ ಈ ರಸ್ತೆಯಲ್ಲಿ ಸಾಗಲು ಸಾಧ್ಯ.
ಮೊದಲ ದಿನ ಕನೂಲ್‌ನಿಂದ ಚಾರಣ ಪ್ರಾರಂಭಿಸಿದ ನಮಗೆ ಇದ್ದ ಗುರಿ 10,370 ಅಡಿ ಎತ್ತರದಲ್ಲಿದ್ದ ‘ಚಿಕ್ಕ’ ಕ್ಯಾಂಪ್ ತಲುಪುವುದು. ಮೊದಲ ದಿನವಾದ ಕಾರಣ, ಆ ದಿನ ಎರಡೂವರೆ ಗಂಟೆಯ ಚಾರಣ ಮಾತ್ರ ನಿಗದಿಯಾಗಿತ್ತು. ಅದನ್ನು ಚಾರಣದ ಭಾಷೆಯಲ್ಲಿ ‘ಬೇಬಿ ಸ್ಟೆಪ್’ ಅನ್ನುತ್ತಾರೆ. ಬೆಳಿಗ್ಗೆ 10 ಗಂಟೆಗೆ ಪ್ರಾರಂಭಿಸಿ 12.30ರ ಹೊತ್ತಿಗೆ ‘ಚಿಕ್ಕ’ ಕ್ಯಾಂಪ್ ಅನ್ನು ಆರಾಮದಲ್ಲಿ ತಲುಪಿದೆವು.
ಕುಲು, ಮನಾಲಿ, ಕನೂಲ್ ಎಲ್ಲ ಕಡೆಗಳಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಪರ್ವತಶ್ರೇಣಿ. ಎಲ್ಲಿಂದ ಎಲ್ಲಿಯವರೆಗೆ ಕಣ್ಣು ಹಾಯಿಸಿದರೂ ಆಕಾಶದೆತ್ತರಕ್ಕೆ ಬೆಳೆದಿರುವ ಪೈನ್ ಮರಗಳು ಕಂಡು ಬರುತ್ತವೆ. ಅವುಗಳನ್ನು ನೋಡುವುದೇ ಚೆಂದ. ಪರ್ವತ ಶಿಖರಗಳಿಗೆ ಮುತ್ತಿಕ್ಕಿಕೊಂಡು ನಭೋಮುಖವಾಗಿ ಹೋಗುವ ಮಂಜು ಮತ್ತು ಮೋಡ ಪರ್ವತಗಳಿಗೆ ಬೆಳ್ಳಿ ಹೊದಿಕೆಯನ್ನು ಹೊದಿಸಿದಂತೆ ಭಾಸವಾಗುತ್ತದೆ. ಕಡಿದಾದ ಹಾದಿಯಲ್ಲಿ ದಟ್ಟಕಾಡಿನ ಮಧ್ಯೆ ಜಗತ್ ಸುಖ್ ಹಳ್ಳದ ಜೊತೆ ಜೊತೆಯಲ್ಲಿ ಮೊದಲ ದಿನದ ಚಾರಣವನ್ನು ಆಯಾಸವಿಲ್ಲದೆ ಮುಗಿಸಿದೆವು.
ಎರಡನೆಯ ದಿನದ ಚಾರಣ ‘ಚಿಕ್ಕ ಕ್ಯಾಂಪ್’ನಿಂದ ‘ಸೆರಿ ಕ್ಯಾಂಪ್’ವರೆಗೆ ಇತ್ತು. ಅದು ಸುಮಾರು ಆರು ಗಂಟೆಗಳ ಪಯಣ. ಬೆಳಿಗ್ಗೆ 8 ಗಂಟೆಗೆ ಪ್ರಾರಂಭಿಸಿ ಮಧ್ಯಾಹ್ನ 2 ಗಂಟೆಗೆ ತಲುಪುವ ಗುರಿಯಿರುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಎಂಬಂತೆ ಎಲ್ಲರೂ ನಿಗದಿತ ಅವಧಿಯಲ್ಲಿ ತಲುಪಿದೆವು. ಮೊದಲ ಬಾರಿಗೆ ಚಾರಣ ಕೈಗೊಂಡಿದ್ದ ನಮಗೆ ಈಗಾಗಲೇ ಪರ್ವತಾರೋಹಣವನ್ನು ಕೈಗೊಂಡ ಅನುಭವ ಹೊಂದಿದ್ದವರು ಹಿಂದೆ ಇದ್ದು ಪ್ರೋತ್ಸಾಹ, ಮಾರ್ಗದರ್ಶನ ಮಾಡುತ್ತಾ ಬರುತ್ತಿದ್ದರು. ಎರಡನೆಯ ದಿನ ಸ್ವಲ್ಪ ಆಯಾಸ, ಸುಸ್ತು ಕಾಡಿತ್ತು. ಆದರೆ ಪ್ರಕೃತಿಯ ರಮಣೀಯತೆ, ಸ್ವಚ್ಚ ಗಾಳಿ, ಸುತ್ತಲೂ ಹರಿಯುತ್ತಿದ್ದ ಝರಿಗಳು ಆಯಾಸವನ್ನು ಮರೆಸಿಬಿಡುತ್ತಿದ್ದವು. ಎರಡೂ ಕಡೆ ಕಡಿದಾದ ಬೆಟ್ಟಗಳ ಸಾಲು, ನಡುವೆ ಜಗತ್ ಸುಖ್ ಹಳ್ಳದ ದಂಡೆಯಲ್ಲಿ ಸಣ್ಣದಾದ ಕಂಡೂ ಕಾಣದಂತಿದ್ದ ಕಾಲುಹಾದಿಯಲ್ಲಿ ಗೈಡ್‌ಗಳೊಂದಿಗೆ ಎಲ್ಲರೂ ಚಾರಣ ಮಾಡುತ್ತ ಎದುರಿಗೆ ಆಕಾಶದೆತ್ತರಕ್ಕೆ ಕಾಣುತ್ತಿದ್ದ ಬೆಟ್ಟವನ್ನು ದಿಟ್ಟಿಸಿ ನೋಡುತ್ತಾ, ಅದರ ತುದಿಯಲ್ಲಿ ಅಲ್ಲಲ್ಲಿ ಹಿಮದ ರಾಶಿಯನ್ನು ನೋಡುತ್ತಾ, ಮಧ್ಯಾಹ್ನ 2 ಗಂಟೆಯ ಹೊತ್ತಿಗೆ 12,140 ಅಡಿ ಎತ್ತರದ ‘ಸೆರಿ’ ಕ್ಯಾಂಪ್ ತಲುಪಿದೆವು.
ಎರಡನೆಯ ದಿನ ಕ್ಯಾಂಪ್ ತಲುಪುವ ಹೊತ್ತಿಗೆ ಕೆಲವರು ಬಳಲಿದ್ದರು. ಎಲ್ಲರೂ ನಿಗದಿಯಾಗಿದ್ದ ಟೆಂಟ್‌ಗಳಿಗೆ ತಲುಪಿದ ಸ್ವಲ್ಪ ಹೊತ್ತಿನಲ್ಲೇ ಜೋರು ಮಳೆ ಪ್ರಾರಂಭವಾಯಿತು. ವಾತಾವರಣ ತುಂಬಾ ಹದಗೆಟ್ಟ ಕಾರಣ ಆ ದಿನ ಯಾರೂ ಟೆಂಟ್‌ಗಳಿಂದ ಆಚೆ ಬರಲು ಸಾಧ್ಯವಾಗಲಿಲ್ಲ. ಪ್ರತಿ ರಾತ್ರಿ 7 ಗಂಟೆಗೆ ಪರ್ವತಾರೋಹಣದ ಗುಂಪಿನ ನಾಯಕತ್ವ ವಹಿಸಿದ್ದ ಸಂತೋಷ್ ದೇವರಾಜಪ್ಪ ಮಾರನೆ ದಿನ ಕೈಗೊಳ್ಳಬೇಕಾದ ಚಾರಣದ ಮಾಹಿತಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಬರಬಹುದಾದ ತೊಂದರೆಗಳು ಇತ್ಯಾದಿಗಳ ಮಾಹಿತಿ ನೀಡುತ್ತಿದ್ದರು. ಅದೇ ರೀತಿ ನಮ್ಮೊಂದಿಗಿದ್ದ ಕರ್ನಾಟಕ ಪರ್ವತಾರೋಹಣ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀವತ್ಸ ಅವರ ನಲವತ್ತು ವರ್ಷಗಳ ಅನುಭವದ ಸಾರವನ್ನು ನಮಗೆ ಧಾರೆ ಎರೆಯುತ್ತಿದ್ದರು. ಅಲ್ಲದೆ ಮನಾಲಿಯ ‘ಮೌಂಟೇನ್ ಎಕ್ಸ್‌ಪಿಡೇಷನ್’ ಸಂಸ್ಥೆಯಿಂದ ನೇಮಕಗೊಂಡಿದ್ದ ಗೈಡ್‌ಗಳು ಪ್ರತಿದಿನ ಚಾರಣದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.
ಮೂರನೆಯ ದಿನ ಬೆಳಿಗ್ಗೆ 8 ಗಂಟೆಗೆ ‘ಸೆರಿ’ಯಿಂದ ಚಾರಣ ಪ್ರಾರಂಭಿಸಿ, ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ‘ದಿಯೋ ತಿಬ್ಬ’ ಶಿಖರದ ‘ಬೇಸ್ ಕ್ಯಾಂಪ್’ 14,690 ಅಡಿ ಎತ್ತರದ ‘ಛೋಟಾ ಚಂದ್ರತಾಲ್’ ತಲುಪಿದೆವು. ಸೆರಿಯಿಂದ ಹೊರಟ ತಕ್ಷಣ ನಮಗೆ ಅತ್ಯಂತ ಕಡಿದಾದ ಬೆಟ್ಟ ಎದುರಾಗುತ್ತದೆ. ಅದನ್ನು ದಾಟಿದರೆ ಎದುರಾಗುವುದು ಟೆಂಟಾವ್ಯಾಲಿ. ಟೆಂಟಾ ಸುಂದರವಾದ ಹಚ್ಚಹಸುರಿನ ಹುಲ್ಲುಹಾಸು ಮತ್ತು ಅಪರೂಪದ ಹೂವುಗಳಿಂದ ಕಂಗೊಳಿಸುತ್ತಿತ್ತು. ಅದರ ಸುತ್ತಲೂ ಇದ್ದ ಕಡಿದಾದ ಪರ್ವತ ಶ್ರೇಣಿಗಳು ನಮಗೆ ಹೊಸಲೋಕವನ್ನು ಪ್ರವೇಶಿಸಿದ ಅನುಭವ ನೀಡುತ್ತವೆ. ಅಲ್ಲಿನ ಸೊಬಗನ್ನು ನೋಡುತ್ತಿದ್ದಂತೆ ಕಡಿದಾದ ಬೆಟ್ಟವನ್ನು ಹತ್ತಿ ಬಂದಾಗ ಆದ ಆಯಾಸವೆಲ್ಲ ಮಾಯವಾಗಿಬಿಡುತ್ತದೆ.
ಮುಂದೆ ನಮಗೆ ‘ದುಹಂಗನ್ ವ್ಯಾಲಿ’ ಸಿಕ್ಕಿತು. ಅಲ್ಲಿ ರಭಸವಾಗಿ ಹರಿಯುವ ದುಹಂಗನ್ ನಲ್ಲಾವನ್ನು ಎರಡ್ಮೂರು ಕಡೆ ದಾಟಿ ಸಾಗಬೇಕು. ಪರಸ್ಪರ ಕೈ ಹಿಡಿದುಕೊಂಡು ನದಿಯನ್ನು ದಾಟಿದರೆ ಮುಂದೆ ಬರೀ ಬಂಡೆ ಕಲ್ಲುಗಳೇ ಎದುರುಗೊಳ್ಳುತ್ತವೆ. ಚಿಕ್ಕ ಮತ್ತು ದೊಡ್ಡ, ದೊಡ್ಡ ಕಲ್ಲುಗಳನ್ನು ದಾಟಿಕೊಂಡು ಬೇಸ್ ಕ್ಯಾಂಪ್ ‘ಛೋಟಾ ಚಂದ್ರತಾಲ್’ಗೆ ತಲುಪಿದಾಗ ಮಧ್ಯಾಹ್ನ 2.30 ಗಂಟೆ. ಆ ದಿನ ಮಂಜು ಮುಸುಕಿದ ಮೋಡದ ವಾತಾವರಣವಿದ್ದರೂ ಆಗಾಗ ಬಹಳ ಬಿಸಿಲು ಸಹ ಇತ್ತು. ಆದರೆ ಎದುರಿಗೆ ಆಕಾಶಕ್ಕೆ ಮುತ್ತಿಡುತ್ತಿದ್ದ ಬೆಟ್ಟಗಳ ಮೇಲೆ ಇದ್ದ ಹಿಮದ ರಾಶಿಯನ್ನು ದಿಟ್ಟಿಸಿ ನೋಡುತ್ತ, ಯಾವಾಗ ಅಲ್ಲಿಗೆ ತಲುಪುತ್ತೇವೆ ಎಂಬ ಕುತೂಹಲ ಹೆಚ್ಚಾಯಿತು.
ನಾವು 12,000 ಅಡಿ ಎತ್ತರವನ್ನು ದಾಟಿದ ನಂತರ ದೊಡ್ಡ ಮರಗಳೆಲ್ಲ ಮರೆಯಾಗಿ ಕೇವಲ ಕಲ್ಲು ಬಂಡೆಗಳು, ಕಡಿದಾದ ಕಪ್ಪುಬಣ್ಣದ ಬೆಟ್ಟ, ಅದರ ತುದಿಯಲ್ಲಿ ಹಿಮ ಮಾತ್ರ ಕಾಣಿಸುತ್ತದೆ. ಅಲ್ಲಿಂದ ಮೇಲೆ ಬಂದಂತೆಲ್ಲ ಯಾವುದೇ ಗಿಡಮರಗಳು ಕಾಣಸಿಗುವುದಿಲ್ಲ. ಯಾವ ಜನವಸತಿಯೂ, ಜನರೂ ದಾರಿಯಲ್ಲಿ ಸಿಗುವುದಿಲ್ಲ. ನಾವು ಮತ್ತು ಪ್ರಕೃತಿ ಮಾತ್ರ ಮುಖಾಮುಖಿಯಾಗುತ್ತೇವೆ. ಪರ್ವತದಲ್ಲಿ ಎತ್ತರಕ್ಕೆ ಏರಿದಂತೆಲ್ಲ ಉಸಿರಾಟ ಸಮಸ್ಯೆ, ತಲೆನೋವು, ಸುಸ್ತು ಇವು ಸಹಜವಾಗಿ ಬರುವ ಸಮಸ್ಯೆಗಳು.
ಈ ಮೊದಲೇ ಹೇಳಿದಂತೆ ‘ಛೋಟಾ ಚಂದ್ರತಾಲ್’ ದಿಯೋ ತಿಬ್ಬ ಶಿಖರದ ಬುಡದಲ್ಲಿದೆ. ಅಲ್ಲಿ ಒಂದು ದಿನ ನಾವೆಲ್ಲರೂ ತಂಗಿದ್ದೆವು. ಅಲ್ಲಿಂದ ನಮ್ಮ ತಂಡ ಎರಡು ಭಾಗ ಆಯ್ತು. ಪ್ರಥಮ ಬಾರಿಗೆ ಚಾರಣ ಕೈಗೊಂಡಿದ್ದ ಏಳು ಜನರು ಮಾರನೆ ದಿನ ಅಲ್ಲಿಂದ ಸುಮಾರು 200 ಮೀಟರ್ ಎತ್ತರದಲ್ಲಿದ್ದ ‘ಚಂದ್ರತಾಲ್’ಗೆ ಹೊರಟೆವು. ಪರ್ವತಾರೋಹಣ ಕೈಗೊಂಡಿದ್ದ ಹದಿಮೂರು ಜನರ ಪೈಕಿ ಒಂಬತ್ತು ಜನ ದುಹಂಗನ್ ಕೂಲ್ ಮುಖಾಂತರ ದಿಯೋ ತಿಬ್ಬಾ ಕಡೆಗೆ ಹೊರಟರು. ಉಳಿದವರು ಆರೋಗ್ಯ ಸಮಸ್ಯೆಯಿಂದಾಗಿ ಕ್ಯಾಂಪ್‌ನಲ್ಲಿಯೇ ಉಳಿದರು.
ನಾವು 15,150 ಅಡಿ ಎತ್ತರದಲ್ಲಿರುವ ಚಂದ್ರತಾಲ್ ತಲುಪಿದಾಗ ನಮ್ಮ ತಂಡದ ಸಂಭ್ರಮ ಮೇರೆ ಮೀರಿತ್ತು. ಚಂದ್ರತಾಲ್ ಅತ್ಯಂತ ರಮಣೀಯ ಸ್ಥಳ. ಅಲ್ಲಿ ಒಂದು ಚಿಕ್ಕ ಸರೋವರವಿದೆ. ಮಂಜು ಕರಗಿ ನೀರಾಗಿ ಕೆಳಗೆ ಧುಮುಕುವುದನ್ನು ಅಲ್ಲಿ ಕೂತು ಸವಿದೆವು. ಶೀತಗಾಳಿಗೆ ಮೈಯೊಡ್ಡಿ ಆನಂದಿಸಿದೆವು. ಆ ರಮಣೀಯ ತಾಣ ತಲುಪಿದ ನಂತರ ಮರಳಿ ಬರುವ ಮನಸ್ಸೇ ಬರುವುದಿಲ್ಲ. ಆದರೆ ಅಲ್ಲಿಂದ ಕೆಳಗಿಳಿದು ಬರುವುದು ಅನಿವಾರ್ಯ.
ಹಸಿರ ಸಿರಿಯ ಸಂಪತ್ತು. ಅಲ್ಲಲ್ಲಿ ಹಿಮದ ರಾಶಿ. ಜುಳುಜುಳು ಹರಿಯುವ ಜಗತ್‌ಸುಖ್ ಹಳ್ಳ ಹಾಗೂ ದುಹಂಗನ್ ಹಳ್ಳ. ಇವೆಲ್ಲವನ್ನೂ ನೋಡಿಯೇ ಅನುಭವಿಸಬೇಕು. ಚಾರಣದಿಂದ ಮರಳಿ ಬಂದರೂ ಆ ದೃಶ್ಯಗಳು ಇನ್ನೂ ಕಣ್ಮುಂದೆ ಬರುತ್ತಿವೆ. ಹಿಮಾಲಯ ಚಾರಣ ಬದುಕಿನಲ್ಲಿ ಸ್ಮರಣೀಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.