ADVERTISEMENT

ಬೆಂಗಳೂರು ಐಟಿಪಿಎಲ್‌ ಮುಖ್ಯರಸ್ತೆ ಸಂಚಾರವೇ ಕಷ್ಟ!

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 19:45 IST
Last Updated 3 ನವೆಂಬರ್ 2019, 19:45 IST
ಗರುಡಾಚಾರ್‌ ಪಾಳ್ಯ ಮತ್ತು ಫೀನಿಕ್ಸ್‌ ಮಾರ್ಕೆಟ್‌ ನಡುವಿನ ಬಹುತೇಕ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಮೆಟ್ರೊ ಕಾಮಗಾರಿ
ಗರುಡಾಚಾರ್‌ ಪಾಳ್ಯ ಮತ್ತು ಫೀನಿಕ್ಸ್‌ ಮಾರ್ಕೆಟ್‌ ನಡುವಿನ ಬಹುತೇಕ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಮೆಟ್ರೊ ಕಾಮಗಾರಿ   

ಟೆಕಿಗಳು ಮತ್ತು ಮಹದೇವಪುರ, ಗರುಡಾಚಾರ್‌ ಪಾಳ್ಯದ ಸುತ್ತಮುತ್ತಲಿನ ನಾಗರಿಕರು ಹೆಚ್ಚಾಗಿ ಬಳಸುವ ವೈಟ್‌ಫೀಲ್ಡ್‌ ಮತ್ತು ಐಟಿಪಿಎಲ್‌ ಮುಖ್ಯರಸ್ತೆ ವರ್ಷಗಳಿಂದ ಕಾಮಗಾರಿಗಳಿಂದಲೇ ತುಂಬಿದೆ. ಇದೀಗ ಮೆಟ್ರೊ ಕಾಮಗಾರಿಯಿಂದ ಈ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ.

ಟಿನ್‌ಫ್ಯಾಕ್ಟರಿ ಜಂಕ್ಷನ್‌ ದಾಟಿ, ಕೆ.ಆರ್‌. ಪುರ ರೈಲ್ವೆ ಸ್ಟೇಷನ್‌ ಮುಂದಿನ ಮೇಲ್ಸೇತುವೆ ಕೆಳಗಿನ ರಸ್ತೆ ಬಳಸಿಕೊಂಡು ಐಟಿಪಿಎಲ್‌ ಮುಖ್ಯ ರಸ್ತೆ ಹಿಡಿದರೆ ಹೆಜ್ಜೆ ಹೆಜ್ಜೆಗೂ ಸಂಚಾರಕ್ಕೆ ಅಡ್ಡಿ. ಮಹಾದೇವಪುರ ಮುಖ್ಯರಸ್ತೆಯಿಂದ ವಿಆರ್‌ ಮಾಲ್‌ ಮತ್ತು ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌ ತಲುಪಲು ಇರುವ ಪುಟ್ಟ ಅಂತರವನ್ನು ಕ್ರಮಿಸಲು ಹರಸಾಹಸ ಮಾಡಬೇಕಾಗುತ್ತದೆ.

ಫೀನಿಕ್ಸ್‌ ಮಾಲ್‌ ಮತ್ತು ವಿಆರ್‌ ಮಾಲ್‌ ಬಳಿ ವೀಕೆಂಡ್‌ನಲ್ಲಿ ಸಂಚಾರ ದಟ್ಟಣೆ ಹೇಳತೀರದು. ಟೆಕಿಗಳು ಮತ್ತು ಸಾರ್ವಜನಿಕರು ಈ ಜೋಡಿ ಮಾಲ್‌ಗಳಿಗೆ ದಾಂಗುಡಿ ಇಡುತ್ತಾರೆ. ಇದರಿಂದ ಇಲ್ಲಿ ಟ್ರಾಫಿಕ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ಮುಖ್ಯವಾಗಿ ಮೆಟ್ರೊ ಕಾಮಗಾರಿಯಿಂದ ರಸ್ತೆ ಅತ್ಯಂತ ಕಿರಿದಾಗಿದ್ದರಿಂದ ಅಕ್ಕಪಕ್ಕ ಹಾಕಿರುವ ಬ್ಯಾರಿಕೇಡ್‌ಗಳ ನಡುವೆ ತೂರಿಕೊಂಡು ವಾಹನ ಓಡಿಸುವುದು ಅತ್ಯಂತ ತ್ರಾಸದಾಯಕ.

ADVERTISEMENT

ಇದು ಗರುಡಾಚಾರ್‌ ಪಾಳ್ಯದ ಸಮೀಪಕ್ಕೆ ಹೋಗುತ್ತಿದ್ದಂತೆ ಇನ್ನೂ ಅಧ್ವಾನವಾಗುತ್ತದೆ. ಬೃಹತ್‌ ಆದ ನಲಪಾಡ್‌ ‌ ಬ್ರಿಗೇಡ್ಸ್‌ ಕಮರ್ಷಿಯಲ್‌ ಬಿಲ್ಡಿಂಗ್‌, ಬ್ರಿಗೇಡ್‌ ಮೆಟ್ರೊಪೊಲಿಸ್‌ ಬೃಹತ್‌ ವಸತಿ ಸಮುಚ್ಛಯ ಮತ್ತು ಅಲ್ಲಿನ ಕೆಲವು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಈ ಇಕ್ಕಟ್ಟು ಪ್ರದೇಶ ತುಂಬ ಕಿರಿ ಕಿರಿಯನ್ನುಂಟು ಮಾಡಿದೆ.

ಅಲ್ಲಿಂದ ಮುಂದಕ್ಕೆ ಕುಂದಲಹಳ್ಳಿ ಮುಖ್ಯ ರಸ್ತೆ, ಹೂಡಿ ಮತ್ತು ಐಟಿಪಿಎಲ್‌ ಕಡೆಗೆ ಸಾಗುವ ವಾಹನಗಳ ಸಂಚಾರದ ಸ್ಥಿತಿ ಅಯೋಮಯ. ಇಲ್ಲಿ ಉದ್ದಕ್ಕೂ ಸಾಗುತ್ತಿರುವ ಮೆಟ್ರೊ ಕಾಮಗಾರಿಯಿಂದ ರಸ್ತೆ ಸಂಚಾರಕ್ಕೆ ತುಂಬ ಕಷ್ಟವಾಗುತ್ತಿದೆ. ಮೆಟ್ರೊ ಕಾಮಗಾರಿ ನಡೆಯುವ ಅಕ್ಕಪಕ್ಕ ಕಿರಿದಾದ ರಸ್ತೆಗಳನ್ನು ಸಂಚಾರಕ್ಕೆ ಸೂಕ್ತವಾಗಿಸಬಹುದಾಗಿತ್ತು. ಇದಕ್ಕೆ ಹೊಂದಿಕೊಂಡಿರುವ ಚರಂಡಿಗಳು ಕೂಡ ಬಹುತೇಕ ತೆರೆದ ಸ್ಥಿತಿಯಲ್ಲಿಯೇ ಇವೆ. ಅಲ್ಲಲ್ಲಿ ಬೇಕಾಬಿಟ್ಟಿ ಬಿಸಾಕಿದ ಪೈಪ್‌ಗಳು ಹಲವೆಡೆ ಕಾಣಿಸಿಕೊಳ್ಳುತ್ತವೆ. ಮೆಟ್ರೊ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಅಂಥ ಹೇಳಿಕೊಳ್ಳುವ ಸುರಕ್ಷಾ ಕ್ರಮಗಳೂ ಕಾಣಿಸುವುದಿಲ್ಲ.

ಮೆಟ್ರೊ ಪಿಲ್ಲರ್‌ಗಳ ಕೆಲಸ ಕೆಲವೆಡೆ ಮುಗಿದಿದೆ. ಅದರ ಮೇಲೆ ಹಳಿ ಅಳವಡಿಕೆ ಮತ್ತು ಸ್ಟೇಷನ್‌ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿಯ ಕೆಲಸಗಳು ಒಂದಷ್ಟು ಭರದಿಂದ ಸಾಗುತ್ತಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಇರುವ ಸ್ಥಿತಿಯಲ್ಲಿ ತುಂಬ ಸಮಯದಿಂದ ಹಾಗೇ ಇದೆ ಎನ್ನುವ ಭಾವನೆ ಮೂಡುತ್ತದೆ. ಸುತ್ತ ಕಟ್ಟಿರುವ ತಾತ್ಕಾಲಿಕ ತಗಡಿನ ಶೀಟ್‌ಗಳನ್ನು ಬಳಸಿ ಮಾಡಿಕೊಂಡ ರಕ್ಷಣಾ ಗೋಡೆಗಳು ಅಲ್ಲಲ್ಲಿ ತೆರೆಕೊಂಡಿವೆ. ಅವುಗಳ ನಡುವಿನಿಂದಲೇ ತೂರಿಕೊಂಡು ಸಾಗುವ ಬೈಕ್‌ ಸವಾರರೂ ಆಗಾಗ ಕಾಣಿಸುತ್ತಾರೆ. ಕಾಮಗಾರಿಗಾಗಿ ಹಾಕಿಕೊಂಡ ಕಬ್ಬಿಣದ ಕಮಾನುಗಳ ನಡುವಿನಿಂದ, ಸ್ಕೂಟರ್‌, ಕಾರು ಮತ್ತು ಇತರ ಪುಟ್ಟ ವಾಹನಗಳು ಸಂಚರಿಸುವುದನ್ನು ಕಂಡರೆ ಭಯವೆನಿಸುತ್ತದೆ.

ಮೆಟ್ರೊ ಕಾಮಗಾರಿ ಈ ಪ್ರದೇಶದ ಅಗತ್ಯಗಳಲ್ಲಿ ಒಂದು. ಆದರೆ, ಅದನ್ನು ಸಮರ್ಪಕವಾಗಿ ಮತ್ತು ಸದ್ಯದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನಿರ್ವಹಿಸುವುದು ತುಂಬ ಮುಖ್ಯ. ಕಿರಿದಾದ ರಸ್ತೆಗಳನ್ನು ಆಗಾಗ ಕೊಂಚ ರಿಪೇರಿ ಮಾಡಿ ವಾಹನಗಳ ಓಡಾಟಕ್ಕೆ, ಪಾದಚಾರಿಗಳು ಸಾಗಿ ಹೋಗುವುದಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಗರುಡಾಚಾರ್‌ ಪಾಳ್ಯದ ನಿವಾಸಿಗಳು ವ್ಯಕ್ತಪಡಿಸುವ ಕಾಳಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.