ADVERTISEMENT

ರಂಗಶಂಕರ ಯುಗಾದಿ ‘ಪದ್ಯಕಾಲ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 8:50 IST
Last Updated 4 ಏಪ್ರಿಲ್ 2019, 8:50 IST
ಯುಗಾದಿ ಆಚರಣೆ
ಯುಗಾದಿ ಆಚರಣೆ   

ರಂಗಶಂಕರ ಪ್ರತಿವರ್ಷ ಯುಗಾದಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದೆ. ಈ ವರ್ಷವೂ ಯುಗಾದಿಯನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತಿದೆ.

‘ಆರಂಭದಲ್ಲಿ ಪದವಿತ್ತು’ ಎನ್ನುವ ಮಾತನ್ನು ರಂಗಶಂಕರ ಸ್ವಲ್ಪ ತಿದ್ದಿ, ‘ಯುಗದ ಆದಿಯಲ್ಲೊಂದು ಪದ್ಯವಿರಲಿ’ ಎಂದು ಯುಗಾದಿಯ ಸಂಭ್ರಮವನ್ನು ಕಾವ್ಯದ ಜೊತೆಗೆ ಆಚರಿಸುತ್ತಿದೆ. ಹೊಸ ಚಿಗುರು–ಹಳೆ ಬೇರು ಮಿಳಿತಗೊಂಡ, ಕವಿಗಳೂ, ಕಾವ್ಯಪ್ರೇಮಿಗಳೂ ಸೇರಿಕೊಂಡ, ಅಂದಿನ ಪದ್ಯವೂ ಇಂದಿನ ಪದವೂ ಬೆಸೆದುಕೊಂಡ ಒಂದಿಡೀ ದಿನದ ಸಂಭ್ರಮವಿದು. ಕಾವ್ಯವನ್ನು ಕೇಳುತ್ತಾ ನಾವೇ ಪದ್ಯಗಳಾವು ದಿನವಿದು ಎಂಬ ಆಶಯ ರಂಗಶಂಕರದ್ದು.

ಏಪ್ರಿಲ್ 6ರಂದು (ಯುಗಾದಿ ದಿನ) ಬೆಳಿಗ್ಗೆ 11ಕ್ಕೆ ಆದಿ ಕಾವ್ಯದಲ್ಲಿ ಕುಮಾರವ್ಯಾಸ ಭಾರತದ ‘ಅರ್ಜುನ ಮತ್ತು ಊರ್ವಶಿ ಮುಖಾಮುಖಿ’ ಕುರಿತು ಲಕ್ಷ್ಮೀಶ ತೋಳ್ಪಾಡಿ ಪ್ರಸ್ತಾವಿಕ ಮಾತುಗಳನ್ನಾಡುವರು. ಎಂ. ಗಣೇಶ್ ಕುಮಾರವ್ಯಾಸ ಭಾರತ ವಾಚಿಸುವರು. ನಂತರ ಪಂಪ ಭಾರತದ ‘ಕರ್ಣಾವಸಾನ’ವನ್ನು ತಮಿಳ್ ಸೆಲ್ವಿ ವಾಚಿಸುವರು. ಲಕ್ಷ್ಮೀಶ ತೋಳ್ಪಾಡಿ ಮುಕ್ತಾಯಗೊಳಿಸುವರು.

ADVERTISEMENT

ಮಧ್ಯಾಹ್ನ 3.30ಕ್ಕೆ ಜಾನಪದ ಕಾವ್ಯದಲ್ಲಿ ಮಂಟೆಸ್ವಾಮಿ ಪ್ರಸಂಗ (ಕಲ್ಯಾಣ ಪಟ್ಟಣ ಸಾಲು) ಅರ್ಜುನ ಜೋಗಿಯ ಒಂದು ಭಾಗವನ್ನು ಮೈಸೂರು ಗುರುರಾಜ್ ಪ್ರಸ್ತುತಪಡಿಸುವರು. ಸಿಎನ್ನಾರ್ ಈ ಕುರಿತು ಪ್ರಾಸ್ತಾವಿಕ ನುಡಿಗಳ್ನಾಡುವರು. ಕೃಷ್ಣಮೂರ್ತಿ ಹನೂರು ವಿವರಣೆ ನೀಡುವರು.

ರಾತ್ರಿ 7.30ಕ್ಕೆ ಇಂದಿನ ಕಾವ್ಯ ವಿಭಾಗದಲ್ಲಿ ಪದ್ಯ ಓದು ಕಾರ್ಯಕ್ರಮ ನಡೆಯಲಿದೆ. ಕವಿಗಳಾದ ಸುಬ್ರಾಯ ಚೊಕ್ಕಾಡಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಎಸ್. ದಿವಾಕರ್, ಜಯಂತ ಕಾಯ್ಕಿಣಿ, ಪ್ರತಿಭಾ ನಂದಕುಮಾರ್, ಬಿ.ಸುರೇಶ, ಟಿ.ಎನ್. ಸೀತಾರಾಂ, ಹೇಮಾ ಪಟ್ಟಣಶೆಟ್ಟಿ, ಯೋಗರಾಜ ಭಟ್, ಧನಂಜಯ, ವಸಿಷ್ಠ ಸಿಂಹ, ಚಿದಂಬರ ನರೇಂದ್ರ, ಭಾರತಿ ಬಿ.ವಿ., ಸಂಯುಕ್ತಾ ಪುಲಿಗಲ್, ಹೇಮಲತಾ ಮೂರ್ತಿ, ವಿದ್ಯಾರಶ್ಮಿ, ವಿಕಾಸ್ ನೇಗಿಲೋಣಿ, ವಿ.ಎಂ. ಮಂಜುನಾಥ್, ಚೇತನಾ ತೀರ್ಥಹಳ್ಳಿ, ರಾಜಶೇಖರ ಬಂಡೆ, ಮೌಲ್ಯಾ ಸ್ವಾಮಿ ಕವನ ವಾಚಿಸುವರು ಎಂದು ರಂಗಶಂಕರ ಬಳಗದ ಎಸ್. ಸುರೇಂದ್ರನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.