ADVERTISEMENT

ಕೈತೋಟ: ಅಂಗಳದ ಸೌಂದರ್ಯ

ಪೂರ್ಣಿಮ ಕಾನಹಳ್ಳಿ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಮನೆ ಅದೆಷ್ಟು ಅಂದವಾಗಿದ್ದರೂ, ಮುಂಭಾಗದಲ್ಲಿ ಪುಟ್ಟದೊಂದು ಉದ್ಯಾನವನವಿಲ್ಲದಿದ್ದರೆ ಮನೆಗೆ ಶೋಭೆ ಇರುವುದಿಲ್ಲ. ಒಂದು ಕ್ಷಣ ನಿಂತು ನೋಡುವಂತಹ, ಹೂಗಳಿಂದ ತುಂಬಿದ ಹಸಿರು ಉದ್ಯಾನ ಗೃಹಿಣಿಯ ಸೃಜನಶೀಲತೆ, ಕೈಚಳಕಕ್ಕೆ ಹಿಡಿವ ಕನ್ನಡಿಯಂತಿರುತ್ತದೆ.

ಕೈತೋಟ ಬೆಳೆಸುವುದೂ ಒಂದು ಕಲೆ. ಮನೆಯ ಮುಂಭಾಗದಲ್ಲಿ ಹೂವಿನ ತೋಟ, ಹಿತ್ತಲಲ್ಲಿ ತರಕಾರಿ ತೋಟ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಹಚ್ಚಹಸಿರಿನ ಪ್ರಶಾಂತ ವಾತಾವರಣವು, ದುಗುಡದ, ಒತ್ತಡದ ಮನಸ್ಸಿಗೆ ಮುದನೀಡುತ್ತದೆ. ಮಾನಸಿಕ ರೋಗಗಳಿಗೆ ನಿಸರ್ಗಕ್ಕಿಂತ ಉತ್ತಮವಾದ ಉಪಚಾರವಿಲ್ಲ ಎನ್ನುತ್ತಾರೆ ವ್ಯೆದ್ಯರು.

ಸ್ವಚ್ಛ ಗಾಳಿ, ಮನಸ್ಸಿಗೆ ನೆಮ್ಮದಿ ನೀಡುವ ಸುಂದರ ಪ್ರಕೃತಿಯನ್ನು ನಮ್ಮ ಅಂಗಳದಲ್ಲಿ ನಾವೇ ನಿರ್ಮಿಸಿಕೊಳ್ಳಬಹುದು. ವ್ಯಯಿಸಬೇಕಾದ್ದು ದಿನದ ಸ್ವಲ್ಪ ಸಮಯವಷ್ಟೆ.

ಕೈತೋಟ ನಿರ್ಮಾಣ ಹೇಗೆ?
ಮನೆಯ ಸುತ್ತಲಿನ ಖಾಲಿ ಜಾಗ  ಮೊದಲು ಗುರುತಿಸಿಕೊಳ್ಳಬೇಕು. ಸಿಮೆಂಟ್ ಹಾಸಿದ್ದರೆ, ಕುಂಡಗಳಲ್ಲಿ, ಮಣ್ಣಿನ ಜಾಗವಾದರೆ ನೆಲದಲ್ಲಿ ಬೆಳೆಸುವ ಸಸಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಕುಂಡಗಳ ಗಾತ್ರಕ್ಕೆ ಅನುಗುಣವಾಗಿ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬೆಳೆಸಿದ ಅಲಂಕಾರಿಕ ಎಲೆಸಸ್ಯಗಳು, ಹೂಗಿಡಗಳನ್ನು, ಆಕರ್ಷಕವಾಗಿ ಜೋಡಿಸಿಡಬಹುದು.

ಈ ರೀತಿ ಬೆಳೆಸುವುದರಿಂದ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಬಹುದು. ಸುಟ್ಟು ತಯಾರಿಸಿದ ಕುಂಡಗಳ ಬಳಕೆ ಉತ್ತಮ. ಗಿಡ ನೆಡುವಾಗ ನೀರು ಹೊರ ಹೋಗುವ ರಂಧ್ರ ಮುಚ್ಚದಂತೆ ಸಣ್ಣ ಕಲ್ಲುಗಳನ್ನಿಡಲು ಮರೆಯಬಾರದು. ಕನಿಷ್ಟ ಎರಡು ವರ್ಷಕ್ಕೊಮ್ಮೆ ಮಣ್ಣು ಬದಲಿಸಬೇಕು.

ಹಚ್ಚ ಹಸಿರಿನ ಲಾನ್
ಲಾನ್ ಬೆಳೆಸುವುದರಿಂದ ಅಂಗಳದ ಸೌಂದರ್ಯ ಇಮ್ಮಡಿಸುತ್ತದೆ. ನೆಡುವ ಮೊದಲು ಕಳೆಯಿಲ್ಲದಂತೆ ನೋಡಿಕೊಳ್ಳಬೇಕು. ಚೆನ್ನಾಗಿ ಬಿಸಿಲು ಬೀಳುವಂತಿರಬೇಕು. ಮರಳಿನಲ್ಲಿ ಬೀಜ ಬಿತ್ತಬಹುದು. ಅಥವಾ ಹುಲ್ಲನ್ನು ಅಲ್ಲಲ್ಲಿ ನಾಟಿ ಮಾಡಿ ದಿನಕ್ಕೆರಡು ಸಲ ನೀರುಣಿಸಿದರೆ     ಒಂದೆರಡು ತಿಂಗಳಲ್ಲಿ ಚಿಗುರೊಡೆಯುತ್ತದೆ ಲಭ್ಯವಿರುವ ಕಲ್ಲುಗಳು, ಇತ್ಯಾದಿಗಳಿಂದ ಆಕರ್ಷಕ ವಿನ್ಯಾಸವನ್ನು ನಿರ್ಮಿಸಬಹುದು.

ಹೂ ಬಿಡುವ ಸಸ್ಯಗಳು
ಇದರಲ್ಲಿ ಬೋಗನ್‌ವಿಲ್ಲ, ಯುಫೋಬಿಯ, ಪಿಟೋನಿಯ, ಗಜಾನಿಯ ಜಿರೇನಿಯಂ, ಬರ್ಡ್‌ಆಫ್ ಪ್ಯಾರಡೈಸ್,  ವಿಂಕರೋಸ್, ಚೆಂಡು ಹೂ ಇತ್ಯಾದಿಗಳಿಗೆ ಬಿಸಿಲು ಬೇಕು. ಕೈತೋಟದ ರಾಣಿಯರಾದ ದಾಸವಾಳ, ಗುಲಾಬಿಗಳು ಬಿಸಿಲು ಬಿದ್ದಷ್ಟೂ ಅಧಿಕ ಹೂವರಳಿಸುತ್ತವೆ. ಇಂಪೇಶಿಯ. ಆಂಥೂರಿಯಂ, ಜರ್ಬೆರಾಗಳು ಹದವಾದ ನೆರಳು ಬೇಡಿದರೂ ಉದ್ಯಾನದ ಪ್ರತಿಷ್ಠೆ ಹೆಚ್ಚಿಸುತ್ತವೆ.  

ಋತುವಿಗೆ ಅನುಗುಣವಾಗಿ ಹೂ ಬೀಜಗಳನ್ನು ಬಿತ್ತಬಹುದು. ಝೀನಿಯ, ಚೆಂಡುಹೂ ಸರ್ವಕಾಲಕ್ಕೂ ಸುಂದರ. ಸೇವಂತಿಗೆ, ಡೇಲಿಯಗಳು ಚಳಿ, ಮಳೆಗಾಲದಲ್ಲಿ ಮುದ ನೀಡುತ್ತವೆ. ರೋಗಬಾಧೆಗಳಿಗೆ ಹುಳಿಮಜ್ಜಿಗೆ, ಬೂದಿ, ಬೆಳ್ಳುಳ್ಳಿ ಕಷಾಯ ಬಳಸಬಹುದು. ತ್ಯಾಜ್ಯಗಳಿಂದ ಗೊಬ್ಬರ ಮಾಡಿ ಬಳಸಬಹುದು. ಅಲ್ಲಲ್ಲಿ ತುಳಸಿ, ಚೆಂಡುಹೂವಿನ ಗಿಡಗಳಿದ್ದರೆ ಕೀಟಭಾದೆ ಕಡಿಮೆ.

ಉಪಯೋಗಗಳು
ಪಕ್ಷಿಗಳ ಆಗಮನದಿಂದ ಕೀಟಗಳ ನಿರ್ಮೂಲನೆ, ಸಮಾರಂಭಗಳಲ್ಲಿ ಶುಭಕೋರಲು ಹೂಗುಚ್ಛಗಳನ್ನು ಮಾಡಿಕೊಳ್ಳಬಹುದು. ಮಿತವಾದ ಕೆಲಸದಿಂದ ಹಿತವಾದ ವ್ಯಾಯಾಮವೂ ಲಭಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.