
ಭಾರತೀಯ ಸೇನೆಯು ಆರ್‌ಎಸ್‌ಎಸ್‌ಗೆ ಸೇರಿದೆ. ಸೇನೆಯು ಹಿಂದೂ ರಾಷ್ಟ್ರದ ಸಶಸ್ತ್ರ ಪಡೆಯಾಗಿದ್ದು, ಮುಸ್ಲಿಂ, ಕ್ರೈಸ್ತರು ಅಥವಾ ದಲಿತರಂತಹ ಇತರ ಸಮುದಾಯಗಳಿಗೆ ಸೇರಿದ್ದಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಅಮಿತ್ ಶಾ ಅವರು ಬಹಿರಂಗವಾಗಿ ಲೆ.ಜ. ವಿನಯ್ ಘಾಯ್ ಅವರಿಗೆ ಎದಿರೇಟು ನೀಡಿದ್ದು, ಭಾರತೀಯ ಸೇನೆಯನ್ನು ಕೇಸರೀಕರಣಗೊಳಿಸುವುದಕ್ಕೆ ಬಹಿರಂಗ ಕರೆ ನೀಡಿದ್ದಾರೆ. ಸೇನಾ ಪಡೆಯನ್ನು ರಾಜಕೀಯಕರಣಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಭಾರತೀಯ ಸೇನೆಯು ‘ಹಿಂದುತ್ವ ಸೇನೆ’ಯಾಗಿದೆ ಮತ್ತು ಹಾಗೆಯೇ ಉಳಿಯಲಿದೆ’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ, ‘ಎಕ್ಸ್’ನಲ್ಲಿ ಎಎನ್‌ಐ ಸುದ್ದಿ ಸಂಸ್ಥೆ ಮಾಡಿದ್ದ ವಿಡಿಯೊ ಪೋಸ್ಟ್ ಸಿಕ್ಕಿತು. ಅದು ಇದೇ 25ರಂದು ಬಿಹಾರದ ಮುಂಗೆರ್‌ನಲ್ಲಿ ಅಮಿತ್ ಶಾ ಅವರು ಮಾಡಿದ ಭಾಷಣದ ವಿಡಿಯೊ. ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಅದು ಪ್ರಸಾರವಾಗಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತುಣುಕಿಗೂ ಈ ವಿಡಿಯೊಗೂ ಸಾಮ್ಯತೆ ಇತ್ತು. ಆದರೆ, ಶಾ ಅವರು ತಮ್ಮ ಭಾಷಣದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿರುವ ಸಂಗತಿಗಳನ್ನು ಎಲ್ಲೂ ಪ್ರಸ್ತಾಪಿಸಿಲ್ಲ. ಅನುಮಾನ ಬಂದು, ಎಐ ಪತ್ತೆ ಟೂಲ್ ಆಗಿರುವ ಡೀಪ್‌ಫೇಕ್ ಒ –ಮೀಟರ್ ಬಳಸಿ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ, ವಿಡಿಯೊವನ್ನು ಎಐ ತಂತ್ರಜ್ಞಾನದ ಮೂಲಕ ತಿರುಚಿರುವುದು ದೃಢಪಟ್ಟಿತು ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಇದಕ್ಕೂ ಮೊದಲು, ‘ಸೇನೆಯನ್ನು ಕೇಸರೀಕರಣಗೊಳಿಸಲಾಗುತ್ತಿದೆ’ ಎಂದು ಲೆ.ಜ.ವಿನಯ್ ಘಾಯ್ ಅವರು, ಹೇಳಿದ್ದಾರೆ ಎನ್ನಲಾದ ಡೀಪ್‌ಫೇಕ್ ವಿಡಿಯೊ ಕೂಡ ಹರಿದಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.