ADVERTISEMENT

ಫ್ಯಾಕ್ಟ್ ಚೆಕ್: ಟ್ರಂಪ್ ವಿರುದ್ಧ ಭಾರಿ ಪ್ರತಿಭಟನೆ ನಡೆಸಲಾಯಿತು ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
   

ಬೀದಿಯಲ್ಲಿ ಬೃಹತ್ ಸಂಖ್ಯೆಯ ಜನ ನೆರೆದಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ನ್ಯೂಯಾರ್ಕ್ ನಗರದಲ್ಲಿ ಜನರು ಭಾರಿ ಪ್ರತಿಭಟನೆ ನಡೆಸಿದರು ಎಂದು ಕೆಲವರು ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಪ್ರತಿಪಾದಿಸುತ್ತಿದ್ದಾರೆ. ಆದರೆ, ಈ ಸುದ್ದಿ ವಾಸ್ತವ ಅಲ್ಲ. 

ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ ಹಲವರು ಇದೇ ಚಿತ್ರವನ್ನು ಹಂಚಿಕೊಂಡು ಇದೇ ರೀತಿ ಪ್ರತಿಪಾದಿಸಿರುವುದು ಕಂಡಿತು. ಗೂಗಲ್‌ನಲ್ಲಿ ಈ ಬಗ್ಗೆ ಹುಡುಕಾಟ ನಡೆಸಿದಾಗ, ಬ್ರಿಟನ್‌ನ ‘ಇಂಡಿಪೆಂಡೆಂಟ್’ ಪತ್ರಿಕೆಯು 2018ರ ಏ.6ರಂದು ಇದೇ ಚಿತ್ರವನ್ನು ಪ್ರಕಟಿಸಿರುವುದು ಕಂಡಿತು. ‘2016ರಿಂದ ಅಮೆರಿಕದಲ್ಲಿ ಐವರಲ್ಲಿ ಒಬ್ಬರು ರ್‍ಯಾಲಿ ಅಥವಾ ‍ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ’ ಎಂದು ವರದಿ ಉಲ್ಲೇಖಿಸಿತ್ತು. ಅದರ ಆಧಾರದಲ್ಲಿ ನಿರ್ದಿಷ್ಟ ಪದದ ಮೂಲಕ ಹುಡುಕಾಟ ಮುಂದುವರಿಸಿದಾಗ, ಅಮೆರಿಕದ ಸಾರ್ವಜನಿಕ ಎಫ್‌ಎಂ ರೇಡಿಯೊ ವಾಹಿನಿ ಡಬ್ಲ್ಯುಎಎಂಯು 88.5ರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ಸುದ್ದಿ ಕಂಡಿತು. ವಾಷಿಂಗ್ಟನ್‌ನಲ್ಲಿ 2018 ಮಾರ್ಚ್ 24ರಂದು ಗನ್ ಸಂಸ್ಕೃತಿಯ ತಡೆಗೆ ಆಗ್ರಹಿಸಿದ ರ್‍ಯಾಲಿಯ ಸುದ್ದಿಯೊಂದಿಗೆ ಈ ಚಿತ್ರ ಪ್ರಕಟವಾಗಿತ್ತು. ಇತರ ಹಲವು ಮಾಧ್ಯಮಗಳಲ್ಲಿಯೂ ಈ ಸುದ್ದಿ ಪ್ರಕಟವಾಗಿತ್ತು. ಹಳೆಯ ಚಿತ್ರವನ್ನು ಹಂಚಿಕೊಂಡು ಟ್ರಂಪ್ ವಿರುದ್ಧದ ಪ್ರತಿಭಟನೆಯ ಚಿತ್ರ ಎಂದು ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT