ADVERTISEMENT

ಫ್ಯಾಕ್ಟ್‌ಚೆಕ್: ಮಸೀದಿ ಗೋಡೆ ಕೆಡವಿದ್ದಕ್ಕೆ ಶಿವ ದೇವಾಲಯ ಕೆಡವಿದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 19:31 IST
Last Updated 28 ಏಪ್ರಿಲ್ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಮಸೀದಿಯ ಕಾಂಪೌಂಡ್‌ ಅನ್ನು ಬುಲ್ಡೋಜರ್‌ನಿಂದ ಕೆಡವಿದ್ದಕ್ಕೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸೇಡು ತೀರಿಸಿಕೊಂಡಿದೆ. ಮಸೀದಿ ಗೋಡೆ ಕೆಡವಿದ್ದಕ್ಕೆ ಪ್ರತಿಯಾಗಿ ಅಲ್ವರ್‌ನಲ್ಲಿ ಕಾಂಗ್ರೆಸ್‌ ಸರ್ಕಾರವು, 300 ವರ್ಷದ ಹಳೆಯ ಶಿವ ದೇವಾಲಯವನ್ನು ಕೆಡವಿದೆ’ ಎಂಬ ವಿವರ ಇರುವ ಸುದ್ದಿ ಹಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಬಿಜೆಪಿ ಮುಖಂಡರಾದ ಸಂಬಿತ್ ಪಾತ್ರಾ ಮತ್ತು ಗೌರವ್ ಭಾಟಿಯಾ ಅವರು ಸುದ್ದಿವಾಹಿನಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಇದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಆಜ್‌ತಕ್, ರಿಪಬ್ಲಿಕ್ ಟಿವಿ ಮತ್ತು ನ್ಯೂಸ್‌18 ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದು, ಅವುಗಳ ವಿಡಿಯೊವನ್ನು ಟ್ವೀಟ್‌ ಮಾಡಿವೆ.

ಆದರೆ, ಇದು ಸುಳ್ಳು ಸುದ್ದಿ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಅಲ್ವರ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಅಂಗವಾಗಿ ಏಪ್ರಿಲ್‌ 17 ಮತ್ತು 18ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಶಿವ ದೇವಾಲಯವೂ ಸೇರಿ, ಹಲವು ಕಟ್ಟಡಗಳನ್ನು ಕೆಡವಲಾಗಿದೆ. ಆದರೆ ಜಹಾಂಗೀರ್‌ಪುರಿಯಲ್ಲಿ ತೆರವು ಕಾರ್ಯಾಚರಣೆ ನಡೆದದ್ದು ಏಪ್ರಿಲ್‌ 20ರಂದು.ಅಲ್ವರ್ ಜಿಲ್ಲಾಡಳಿತವು ಈ ಕಾರ್ಯಾಚರಣೆಗೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯನ್ನು ಏಪ್ರಿಲ್‌ 18ರಂದು ಟ್ವೀಟ್‌ ಮಾಡಿದೆ. ಜಹಾಂಗೀರ್‌ಪುರಿ ಕಾರ್ಯಾಚರಣೆ ನಡೆಯುವುದಕ್ಕೂ ಮುನ್ನ ಅಲ್ವರ್‌ ಕಾರ್ಯಾಚರಣೆ ನಡೆದಿದೆ. ಹಾಗಾಗಿ ಅದು ಸೇಡಿನ ಕ್ರಮ ಎಂಬುದು ಸುಳ್ಳು. ಜತೆಗೆ ಅಲ್ವರ್ ನಗರಸಭೆಯಲ್ಲಿ ಬಿಜೆಪಿ ಆಡಳಿತವಿದೆ ಎಂದು ಕಾಂಗ್ರೆಸ್‌ ಮಾಹಿತಿ ನೀಡಿದೆ. ಸುಳ್ಳು ಸುದ್ದಿ ಪ್ರಸಾರ ಮಾಡಿದ ಸಂಬಂಧನ್ಯೂಸ್‌18 ನಿರೂಪಕ ಅಮನ್ ಛೋಪ್ರಾ ವಿರುದ್ಧ ರಾಜಸ್ಥಾನ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ’ ಎಂದು ಆಲ್ಟ್‌ ನ್ಯೂಸ್‌ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT