ADVERTISEMENT

Fact check: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ದೆಹಲಿ ಸ್ಫೋಟದ್ದಲ್ಲ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 18:55 IST
Last Updated 13 ನವೆಂಬರ್ 2025, 18:55 IST
.
.   

ದೇಶದ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿಯ ಮೆಟ್ರೊ ನಿಲ್ದಾಣದ ಗೇಟ್‌ ನಂ. 1ರಲ್ಲಿ ಇತ್ತೀಚೆಗೆ ಕಾರು ಸ್ಫೋಟಗೊಂಡ ನಂತರದಲ್ಲಿ ಭಾರಿ ಬೆಂಕಿಯಿಂದಾಗಿ ಉಂಟಾದ ಹೊಗೆ ಆಗಸಕ್ಕೆ ಆವರಿಸುತ್ತಿರುವ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ದೆಹಲಿ ಬಾಂಬ್‌ ಸ್ಫೋಟದ ದೃಶ್ಯ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು.

ರಿವರ್ಸ್‌ ಇಮೇಜ್‌ ವಿಧಾನದಲ್ಲಿ ಚಿತ್ರವನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ 2024ರ ಸೆಪ್ಟೆಂಬರ್‌ 27ರಂದು ಆಸ್ಟ್ರೇಲಿಯಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ ಪ್ರಕಟಿಸಿರುವ ವರದಿಯೊಂದು ಸಿಕ್ಕಿತು. ಆ ವರದಿಯಲ್ಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿರುವ ಫೋಟೊ ಇತ್ತು. ವರದಿಯ ಪ್ರಕಾರ, ಆ ಫೋಟೊವು ಇಸ್ರೇಲ್‌–ಲೆಬನಾನ್‌ ಸಂಘರ್ಷಕ್ಕೆ ಸಂಬಂಧಿಸಿದ್ದು. ‘ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಸ್ಥಳೀಯ ಕಾಲಮಾನ 6.20ರ ಸುಮಾರಿಗೆ ಭಾರಿ ಸ್ಫೋಟದ ಸದ್ದು ಕೇಳಿಸಿತು. ದಟ್ಟ ಹೊಗೆಯು ಆಕಾಶವನ್ನು ಆವರಿಸಿತ್ತು. ಐಡಿಎಫ್‌ನ ಈ ಹಿಂದಿನ ದಾಳಿಗಳು ಹಿಜ್ಬುಲ್‌ ಬಂಡುಕೋರ ಸಂಘಟನೆಯ ನಾಯಕರನ್ನು ಹತ್ಯೆ ಮಾಡುವ ಯತ್ನಗಳಾಗಿದ್ದವು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೂ ಮಿಗಿಲಾಗಿ, ಚಿತ್ರದ ಶೀರ್ಷಿಕೆಯಲ್ಲಿ ‘ಬೈರೂತ್‌ನ ದಕ್ಷಿಣ ಹೊರವಲಯದಲ್ಲಿ ದಟ್ಟ ಹೊಗೆ ಆವರಿಸಿರುವುದು’ ಎಂದು ಬರೆಯಲಾಗಿದೆ.

ಮುಂದುವರಿದ ಭಾಗವಾಗಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಡಿದಾಗ ಇದೇ ಘಟನೆಗೆ ಸಂಬಂಧಿಸಿದ ಹಲವು ವರದಿಗಳು ಸಿಕ್ಕವು. ಬೈರೂತ್‌ನ ಮೇಲೆ ಕಳೆದ ವರ್ಷ ನಡೆದ ದಾಳಿಯ ಚಿತ್ರವನ್ನು ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿದ ಚಿತ್ರ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂಬುದಾಗಿ ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.