
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್, ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿ ದಾಳಿ ನಡೆಸಿದೆ. ಈ ದಾಳಿಗೆ ಸಂಬಂಧಿಸಿದ ಹಲವು ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
‘ಎಕ್ಸ್’ ಬಳಕೆದಾರರೊಬ್ಬರು ‘ಇಡೀ ಸೌದಿ ಅರೇಬಿಯಾ ಹೊತ್ತಿ ಉರಿಯುತ್ತಿದೆ. ನಾವು ಯಾವುದೇ ತಪ್ಪುಮಾಡಿಲ್ಲ. ಆದರೆ, ಅವರವರೇ ತಪ್ಪು ಮಾಡುತ್ತಿದ್ದಾರೆ. ಇರಾಕಿನ ಡ್ರೋನ್‌ಗಳು ಕೊಲ್ಲಿಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುತ್ತಿವೆ’ ಎಂದು ಪ್ರತಿಪಾದಿಸುತ್ತಾ ಭಾರಿ ಪ್ರಮಾಣದಲ್ಲಿ ಬೆಂಕಿ ಉರಿಯುತ್ತಿರುವ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಸುಳ್ಳು ಮಾಹಿತಿ.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಹಲವರು ಇದೇ ಪೋಸ್ಟ್ ಹಂಚಿಕೊಂಡಿರುವುದು ಕಂಡು ಬಂತು. ಇನ್ನಷ್ಟು ಹುಡುಕಿದಾಗ ‘ಯುನೈಟೆಡ್ ಯೆಮನಿ ಕಮ್ಯುನಿಟಿ ಇನ್ ಸ್ಕಾಟ್ಲೆಂಡ್’ ಎಂಬ ‘ಎಕ್ಸ್’ ಖಾತೆಯಲ್ಲಿ 2024ರ ಜುಲೈ 20ರಂದು ಪೋಸ್ಟ್ ಮಾಡಿದ ಇದೇ ವಿಡಿಯೊ ಸಿಕ್ಕಿತು.
ಯೆಮನ್‌ನ ಹುದಾಯ್ದಾಹ್ ಬಂದರಿನ ಮೇಲೆ ನಡೆದ ದಾಳಿಯ ವಿಡಿಯೊ ಎಂದು ಅದರಲ್ಲಿ ಹೇಳಲಾಗಿತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಸ್ವತಂತ್ರವಾದ ಆ್ಯಡೆನ್ ಚಾನೆಲ್, ಎಐಸಿ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲೂ 2024ರ ಜುಲೈ 20ರಂದು ಇದೇ ವಿಡಿಯೊ ಅಪ್‌ಲೋಡ್ ಮಾಡಿರುವುದು ಸಿಕ್ಕಿತು.
‘ಹೊಡೈಡಾ ಬಂದರಿನ ಮೇಲೆ ಇಸ್ರೇಲ್ ದಾಳಿ ನಡೆಸಿರುವ ಹೊಸ ವಿಡಿಯೊ’ ಎಂದು ಅದರಲ್ಲಿ ಹೇಳಲಾಗಿತ್ತು. ಹಳೆಯ ವಿಡಿಯೊವನ್ನು ಸೌದಿ ಅರೇಬಿಯಾದ ಮೇಲೆ ಈಗ ನಡೆದಿರುವ ದಾಳಿಯ ವಿಡಿಯೊ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.