ADVERTISEMENT

'ನಿರ್ಭಯಾ ಸಹಾಯವಾಣಿ' ಬಗ್ಗೆ ವೈರಲ್ ಸಂದೇಶ: ಆ ಫೋನ್ ಸಂಖ್ಯೆ ಚಾಲ್ತಿಯಲ್ಲಿಲ್ಲ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 9:53 IST
Last Updated 3 ಡಿಸೆಂಬರ್ 2019, 9:53 IST
   

ನವದೆಹಲಿ: ಇದು ನಿರ್ಭಯಾ ಸಹಾಯವಾಣಿ-9833312222. ಈ ಸಂಖ್ಯೆಯನ್ನು ನಿಮ್ಮ ಪತ್ನಿ, ಮಗಳು, ಸಹೋದರಿ, ಅಮ್ಮ, ಗೆಳತಿ ಮತ್ತು ನಿಮಗೆ ಪರಿಚಿತರಾಗಿರುವ ಮಹಿಳೆಯರಿಗೆ ಕಳುಹಿಸಿ, ಇದನ್ನು ಸೇವ್ ಮಾಡಲು ಹೇಳಿ. ಗಂಡಸರೇ, ನಿಮ್ಮ ಪರಿಚಯದ ಎಲ್ಲ ಮಹಿಳೆಯರಿಗೆ ಈ ಸಂದೇಶ ಶೇರ್ ಮಾಡಿ. ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಈ ಸಂಖ್ಯೆಗೆ ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ನೀಡಿದರೆ ಪೊಲೀಸರು ಅವರಿರುವ ಜಾಗವನ್ನು ಪತ್ತೆ ಹಚ್ಚುತ್ತಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ತೆಲಂಗಾಣದಲ್ಲಿ ಪಶು ವೈದ್ಯೆಯ ಅತ್ಯಾಚಾರ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಈ ಸಂದೇಶ ವಾಟ್ಸ್‌ಆ್ಯಪ್‌, ಫೇಸ್‌ಬುಕ್,ಟ್ವಿಟರ್‌ನಲ್ಲಿಮತ್ತೊಮ್ಮೆ ಹರಿದಾಡತೊಡಗಿದೆ. ಆದರೆ ಸಂದೇಶದಲ್ಲಿರುವ ಫೋನ್ ಸಂಖ್ಯೆ ಈಗ ಚಾಲ್ತಿಯಲ್ಲಿಲ್ಲ.

ಫ್ಯಾಕ್ಟ್‌ಚೆಕ್
ವೈರಲ್ ಸಂದೇಶದ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ. ಬೂಮ್ ವರದಿ ಪ್ರಕಾರ-9833312222 ಎಂಬ ಫೋನ್ ಸಂಖ್ಯೆ 2015ರಲ್ಲಿ ಮುಂಬೈ ರೈಲ್ವೆ ಪೊಲೀಸರು ಆರಂಭಿಸಿದ್ದು,2018ರಲ್ಲಿ ಈ ಸೇವೆ ರದ್ದಾಗಿದೆ. ಸಂದೇಶದಲ್ಲಿ ಉಲ್ಲೇಖಿಸಿದಂತೆ ಇದು ನಿರ್ಭಯಾಸಹಾಯವಾಣಿ ಸಂಖ್ಯೆಯಲ್ಲ, ಮುಂಬೈ ಸಬರ್ಬನ್ ರೈಲ್ವೆ ಸೇವೆ ಬಳಸುತ್ತಿರುವ ಮಹಿಳೆಯರಿಗಾಗಿರುವ ವಾಟ್ಸ್‌ಆ್ಯಪ್ ಸಹಾಯವಾಣಿಯಾಗಿದೆ ಇದು.

ADVERTISEMENT

9833312222 ಸಂಖ್ಯೆ ಬಗ್ಗೆ ಗೂಗಲಿಸಿದಾಗ ಮುಂಬೈ ಮಿರರ್ ಪತ್ರಿಕೆಯ ವರದಿ ಸಿಕ್ಕಿದೆ. 2015ರಲ್ಲಿ ಮುಂಬೈ ರೈಲ್ವೆ ಪೊಲೀಸರು ಮಹಿಳೆಯರಿಗಾಗಿ ಈ ಸಹಾಯವಾಣಿ ಆರಂಭಿಸಿದ್ದರು. ಮುಂಬೈ ರೈಲಿನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರು ದೂರು ದಾಖಲಿಸಲು ಮತ್ತು ಸುರಕ್ಷತೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಈ ಸಹಾಯವಾಣಿ ನೀಡಲಾಗಿತ್ತು.

2017ರಲ್ಲಿ ಈ ಸಂಖ್ಯೆ ಚಾಲ್ತಿಯಲ್ಲಿದೆ ಎಂದು ಮುಂಬೈ ಪೊಲೀಸರು ಟ್ವೀಟಿಸಿದ್ದರು. 2018ರಲ್ಲಿ ಈ ಸಂಖ್ಯೆ ನಿಷ್ಕ್ರಿಯವಾಗಿದೆ ಎಂದು ಮುಂಬೈ ರೈಲ್ವೆ ಪೊಲೀಸ್ ಇಲಾಖೆ ಹೇಳಿದೆ . ಸಂಖ್ಯೆ ನಿಷ್ಕ್ರಿಯವಾಗಿರುವ ಬಗ್ಗೆ ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆ ಬೂಮ್‌ಗೆ ಲಭ್ಯವಾಗಿಲ್ಲ. ಆದರೆ ' ನಿರ್ಭಯಾ ಸಹಾಯವಾಣಿ ಸಂಖ್ಯೆ -9833312222 ಫೆಬ್ರುವರಿ1, 2018ರಿಂದ ಅಧಿಕೃತವಾಗಿ ರದ್ದಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿರುವುದಾಗಿ ಉಲ್ಲೇಖಿಸಿವೆ.

ಈ ಬಗ್ಗೆ ಬೂಮ್ ತಂಡ ಹಿರಿಯ ಪೊಲೀಸ್ ಅಧಿಕಾರಿ ಜತೆ ಮಾತನಾಡಿದಾಗ 9833312222 ಎಂಬ ಸಂಖ್ಯೆ ನಿಷ್ಕ್ರಿಯವಾಗಿದೆ ಎಂದಿದ್ದಾರೆ. ತುರ್ತು ಸಂದರ್ಭಗಳಲ್ಲಿ100 ಡಯಲ್ ಮಾಡಿದರೆ ಕಂಟ್ರೋಲ್ ರೂಂಗೆ ಕನೆಕ್ಟ್ ಆಗುತ್ತದೆ. ಇದಲ್ಲದೆ ಪ್ರತೀ ನಗರ ಮತ್ತು ರಾಜ್ಯಕ್ಕೆ ಅದರದ್ದೇ ಆದ ಸಹಾಯವಾಣಿ ಇವೆ.ತುರ್ತು ಸಂದರ್ಭಗಳಲ್ಲಿ ಅದನ್ನು ಬಳಸಬಹುದು ಎಂದಿದ್ದಾರೆ.

2013ರಲ್ಲಿ ದೆಹಲಿಯಲ್ಲಿ ನಿರ್ಭಯಾ ಪ್ರಕರಣ ನಡೆದ ಕೂಡಲೇ 181 ಎಂಬ ಟೋಲ್ ಫ್ರೀ ಸಂಖ್ಯೆ ಆರಂಭಿಸಲಾಗಿತ್ತು. ದೆಹಲಿಯಲ್ಲಿ ಇದನ್ನು ಆರಂಭಿಸಿದ್ದರೂ ಹಲವಾರು ರಾಜ್ಯಗಳು 181 ಎಂಬ ಸಂಖ್ಯೆಯನ್ನು ಮಹಿಳಾ ಸಹಾಯವಾಣಿಯನ್ನಾಗಿಸಿವೆ.

ತುರ್ತು ಸಂದರ್ಭದಲ್ಲಿ ಮಹಿಳೆಯರು 1091 ಎಂಬ ಸಂಖ್ಯೆಗೆ ಕರೆ ಮಾಡಬಹುದು. ಇದಲ್ಲದೆ ತುರ್ತು ಸೇವೆಗಳಿಗೆ 112 ಕರೆ ಮಾಡುವ ವ್ಯವಸ್ಥೆ ಇತ್ತೀಚೆಗೆ ಜಾರಿಗೆ ಬಂದಿದೆ. ದೂರವಾಣಿ ಸಂಖ್ಯೆ ‘112’ ಡಯಲ್ ಮಾಡುವ ಮೂಲಕ ಪೊಲೀಸ್‌ (100), ಅಗ್ನಿಶಾಮಕ ದಳ (101), ಆರೋಗ್ಯ (108) ಮತ್ತಿತರ ತುರ್ತುಸೇವೆಗಳನ್ನು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.