ADVERTISEMENT

'ಕರೆನ್ಸಿ ನೋಟು ಎಸೆದು ಕೊರೊನಾವೈರಸ್ ಹರಡುತ್ತಿದ್ದಾನೆ'- ವಿಡಿಯೊದ ಸತ್ಯಾಂಶ ಏನು?

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 16:30 IST
Last Updated 28 ಏಪ್ರಿಲ್ 2020, 16:30 IST
ಫ್ಯಾಕ್ಟ್‌ಚೆಕ್
ಫ್ಯಾಕ್ಟ್‌ಚೆಕ್   

ನವದೆಹಲಿ: ಪೆಟ್ರೋಲ್ ಪಂಪ್‌ಗೆ ಬಂದ ಮುಸ್ಲಿಂ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ತುಂಬಿಸಿ ಹಣ ನೀಡಿ ಹೊರಡುವ ಹೊತ್ತಿಗೆ ಆತ ಕೈಯಿಂದ ಏನೋ ಬೀಳುತ್ತದೆ. ಇದರ ಪರಿವೆಯೇ ಇಲ್ಲದಂತೆ ಆ ವ್ಯಕ್ತಿ ಅಲ್ಲಿಂದ ಹೋಗುತ್ತಾರೆ. ಸಿಸಿಟಿವಿಯಲ್ಲಿ ಸೆರೆಯಾದಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‍ಲೋಡ್ ಆಗಿದ್ದು ಕೊರೊನಾವೈರಸ್ ಹರಡುವುದಕ್ಕಾಗಿ ಉದ್ದೇಶಪೂರ್ವಕ ನೋಟು ಎಸೆದಿದ್ದಾನೆ ಎಂಬ ಬರಹದೊಂದಿದೆ ವೈರಲ್ ಆಗಿದೆ. ಹಣ ತೆಗೆದುಕೊಂಡು ಇನ್ನೊಂದು ಕೈಯಿಂದ ನೋಟು ಬಿಸಾಡುತ್ತಿರುವುದು ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೊ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಅಪ್‌ಲೋಡ್ ಆಗಿದೆ.

ಇತ್ತ ಎಬಿಪಿ ನ್ಯೂಸ್ ನಿರೂಪಕ ವಿಕಾಸ್ ಭದುರಿಯಾ ಇದೇ ವಿಡಿಯೊವನ್ನು ಟ್ವೀಟ್ ಮಾಡಿ, ಈತ ಉದ್ದೇಶಪೂರ್ವಕ ನೋಟು ಎಸೆದಿದ್ದಾನೆಯೇ ಅಥವಾ ಕೈಜಾರಿ ಬಿತ್ತೇ? ಆತನ ಉದ್ದೇಶವೇನಿರಬಹುದು? ಎಂದು ಕೇಳಿದ್ದಾರೆ. ಈ ಸುದ್ದಿ ಬರೆಯುವ ಹೊತ್ತಿಗೆ ವಿಕಾಸ್ ಅವರ ಟ್ವೀಟ್‌ನ್ನು 17700 ಮಂದಿ ಲೈಕ್ಮಾಡಿದ್ದಾರೆ.

ಟಿವಿ9 ಗುಜರಾತಿ ವಾಹಿನಿಯೂ ಇದೇ ವಿಡಿಯೊವನ್ನು ಪ್ರಸಾರ ಮಾಡಿ ಗುಜರಾತಿನ ನವ್‌ಸರಿಯಲ್ಲಿ ವ್ಯಕ್ತಿಯೊಬ್ಬ ₹20 ನೋಟು ಎಸೆದು ಕೊರೊನಾವೈರಸ್ ಭೀತಿ ಹುಟ್ಟಿಸಿದ್ದಾನೆ ಎಂದು ಸುದ್ದಿ ಮಾಡಿತ್ತು.ಈ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ನಡೆಸಿದ ಆಲ್ಟ್ ನ್ಯೂಸ್ ವಿಡಿಯೊದ ಸತ್ಯಾಸತ್ಯತೆಯನ್ನು ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್
ಸಿಸಿಟಿವಿ ದೃಶ್ಯಗಳನ್ನು ನೋಡಿದ ನಂತರಪೆಟ್ರೋಲ್ ಪಂಪ್‌ನ ಮಾಲೀಕ ಮತ್ತುವಿಡಿಯೊದಲ್ಲಿ ಕಾಣಿಸಿದ ವ್ಯಕ್ತಿಯನ್ನು ವಿಚಾರಣೆಗೆ ಕರೆಸಿದ್ದೆವು ಎಂದು ನವ್‌ಸರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿಪಿ ಬ್ರಹ್ಮಬಟ್ ಆಲ್ಟ್ ನ್ಯೂಸ್‌ಗೆಹೇಳಿದ್ದಾರೆ. ಅಲ್ಲಿರುವ ವ್ಯಕ್ತಿಯ ಹೆಸರು ಮೊಹಮ್ಮದ್ ಯೂಸಫ್ ಇಲ್ಯಾಸ್ಶೇಖ್, ವಲ್ಸದ್ ನಿವಾಸಿ.ವಿಚಾರಣೆಗೊಳಪಡಿಸಿದಾಗ ತಿಳಿದುಬಂದ ವಿಷಯ ಏನೆಂದರೆ ಅವರ ಬಲಕೈಗೆ ಶಕ್ತಿ ಇಲ್ಲ, ಅಪಘಾತದಿಂದ ಅವರ ಕೈಗೆ ಏಟಾಗಿದ್ದು ಆ ಕೈಗೆ ಬಲ ಇಲ್ಲ.ಆದ್ದರಿಂದಲೇ ಅವರ ಕೈಯಿಂದ ನೋಟು ಜಾರಿತ್ತು.ಅದೇ ವೇಳೆ ಲಾಕ್‌ಡೌನ್ ಹೊತ್ತಲ್ಲಿ ವಲ್ಸದ್‌ನಿಂದ ನವ್‌ಸರಿಗೆ ಪ್ರಯಾಣ ಮಾಡಿದ್ದಕ್ಕಾಗಿ ಅವರ ಮೇಲೆ ಕೇಸು ದಾಖಲಿಸಲಾಗಿದೆ ಎಂದಿದ್ದಾರೆ.

ADVERTISEMENT

ಇಲ್ಯಾಸ್‌ಗೆಕೊರೊನಾಸೋಂಕು ಇತ್ತೇ ಅಥವಾ ಅವರಲ್ಲಿ ರೋಗ ಲಕ್ಷಣಗಳು ಇತ್ತೇಎಂದು ಕೇಳಿದಾಗ ನಾವು ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಅವರಲ್ಲಿ ಯಾವುದೇ ರೋಗ ಲಕ್ಷಣಗಳಿರಲಿಲ್ಲ.ಅವರಿಗೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವಂತೆ ನಾವು ಸೂಚಿಸಿದ್ದೇವೆ ಎಂದು ಇನ್‌ಸ್ಪೆಕ್ಟರ್ ಹೇಳಿದ್ದಾರೆ.

ಆಲ್ಟ್ ನ್ಯೂಸ್ ತಂಡ ಇಲ್ಯಾಸ್‌ನ್ನು ಕೂಡಾ ಸಂಪರ್ಕಿಸಿ ಏಪ್ರಿಲ್ 22ರಂದು ನಡೆದ ಘಟನೆಯ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ-ನಾನು ಬೆಳಗ್ಗೆ ದಭೇಲ್‌ಗೆ ಹೊರಟಿದ್ದು ಪೆಟ್ರೋಲ್ ತುಂಬಿಸಲು ಹೋದೆ. ನಾನು ಹೈವೇಯಲ್ಲಿ ಗಾಡಿ ಓಡಿಸುತ್ತಿದ್ದುದರಿಂದ ಕನ್ನಡಕ ಮತ್ತು ಮಾಸ್ಕ್ ಧರಿಸಿದ್ದೆ. 2009ರಲ್ಲಿ ನಾನು ಅಪಘಾತಕ್ಕೀಡಾಗಿದ್ದೆ. ನನಗೆ ಬಲಕೈಯಲ್ಲಿ ಯಾವುದೇ ವಸ್ತುವನ್ನು ಹಿಡಿಯಲು ಸಾಧ್ಯವಿಲ್ಲ.ಆ ಕೈಯಲ್ಲಿ ಚಲನೆ ಇದೆ ಆದರೆ ಅದನ್ನು ಸಮರ್ಪಕವಾಗಿ ಬಳಸಲು ಸಾಧ್ಯವಿಲ್ಲ. ನನ್ನ ಕೈಯಿಂದ ನೋಟು ಜಾರಿದ್ದು ಕೂಡಾ ನನಗೆ ತಿಳಿಯಲಿಲ್ಲ. ನೀವು ಆ ವಿಡಿಯೊವನ್ನು ಗಮನವಿಟ್ಟು ನೋಡಿದರೆ ತಿಳಿಯಬಹುದು. ನಾನು ಎಡಗೈಯಲ್ಲಿಯೇ ಜೇಬಿಗೆ ಕೈ ಹಾಕಿ ಹಣ ಪಾವತಿ ಮಾಡಿದ್ದೆ. ಆ ಹೊತ್ತಲ್ಲಿ ನನ್ನ ಬಲಗೈಯ ಬೆರಳುಗಳ ಮಧ್ಯೆ ನೋಟು ಸಿಕ್ಕಿ ಅದು ನೆಲಕ್ಕೆ ಬಿದ್ದದ್ದು ಗೊತ್ತಾಗಿಲ್ಲ ಎಂದಿದ್ದಾರೆ.

ವಿಕಾಸ್ ಭದುರಿಯಾ ಮತ್ತು ಟಿವಿ9 ಗುಜರಾತಿ ಶೇರ್ ಮಾಡಿರುವ ಈ ವಿಡಿಯೊ 20 ಸೆಕೆಂಡ್ ಅವಧಿಯದ್ದು. ಆದಾಗ್ಯೂ 2.13 ನಿಮಿಷ ಅವಧಿಯ ಸಿಸಿಟಿವಿ ದೃಶ್ಯದಲ್ಲಿ 46ನೇ ಸೆಕೆಂಡ್‌ನಲ್ಲಿ ನೋಡಿದರೆ ಇಲ್ಯಾಸ್ ಜೇಬಿನೊಳಗೆ ಎಡಗೈ ಹಾಕಿ ನೋಟನ್ನು ತೆಗೆಯುವುದು ಮತ್ತು ಎರಡು ಕೈಗಳಿಂದ ನೋಟು ಹಿಡಿದುಕೊಂಡಿರುವುದುಕಾಣಿಸುತ್ತದೆ.ಆಮೇಲೆ ಆತ ಎಡಗೈಯಿಂದಲೇ ಹಣ ಪಾವತಿಸುತ್ತಾನೆ.

ಪೊಲೀಸರು ಎಫ್ಐಆರ್ ದಾಖಲಿಸಿರುವ ಬಗ್ಗೆ ಕೇಳಿದಾಗ ವಿಚಾರಣೆಗಾಗಿ ವಲ್ಸದ್ ಪೊಲೀಸ್ ಠಾಣೆಗೆ ಕರೆದಿದ್ದರು. ನಾನು ನವ್‌ಸರಿಗೆ ಹೋಗಿರಲಿಲ್ಲ. ಧಬೇಲ್ ಹೈವೇಯಲ್ಲಿ ಬರುತ್ತದೆ. ಆ ದಾರಿಯಾಗಿ ಹೋಗಿದ್ದೆ. ನನ್ನ ಬೆನ್ನೆಲುಬಿನಲ್ಲಿ ಇಂಪ್ಲಾಂಟ್ ಮಾಡಿದ್ದು ಅಲ್ಲಿ ಕೆಲವೊಮ್ಮೆ ನೋವು ಕಾಣಿಸುತ್ತದೆ. 2-3 ತಿಂಗಳಿಗೊಮ್ಮೆ ನಾವು ದಭೇಲ್‌ನಲ್ಲಿರುವ ಆಸ್ಪತ್ರೆಗೆ ಹೋಗಲೇ ಬೇಕು.ನವ್‌ಸರಿ ಪೊಲೀಸ್ ಠಾಣೆಯಿಂದ ಬಂದ ಪೊಲೀಸರು ನನ್ನನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿಂದ ನವ್‌ಸರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದರು. ನಾನು ಆರಾಮವಾಗಿದ್ದೇನೆ. ನನ್ನಲ್ಲಿ ಕೊರೊನಾ ಸೋಂಕು ಲಕ್ಷಣಗಳೇನೂ ಇಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ನನಗೇ ಗೊತ್ತಿಲ್ಲ ಎಂದಿದ್ದಾರೆ.
ನನ್ನ ಬಲಗೈಯಲ್ಲಿ ಶಕ್ತಿ ಇಲ್ಲದಿರುವುದರಿಂದ ಕೈಯಿಂದ ನೋಟು ಜಾರಿ ಬಿತ್ತು ಎಂದು ನಾನು ಪೊಲೀಸರಲ್ಲಿ ಹೇಳಿದಾಗ ಅವರು ಒಪ್ಪಿಕೊಂಡರು. ಪೆಟ್ರೋಲ್ ಪಂಪ್‌ನಲ್ಲಿದ್ದ ವ್ಯಕ್ತಿಗಳೂ ಅಲ್ಲಿಗೆ ಬಂದಿದ್ದರು. ನನ್ನ ಕೈ ನೋಡಿದಾಗ ಅವರಿಗೂ ಗೊತ್ತಾಯ್ತು. ನನಗೀಗ ಜಾಮೀನು ಸಿಕ್ಕಿದ್ದು, ವೈದ್ಯರ ಸಲಹೆಯಂತೆ ನಾನು ಮನೆಯಲ್ಲೇ ಇದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.