ADVERTISEMENT

ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವ ಪೋಸ್ಟ್: ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 22 ಡಿಸೆಂಬರ್ 2025, 22:30 IST
Last Updated 22 ಡಿಸೆಂಬರ್ 2025, 22:30 IST
.
.   

ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಯುವ ನಾಯಕ ಶರೀಫ್‌ ಉಸ್ಮಾನ್‌ ಹಾದಿಯ ಹತ್ಯೆ ಮಾಡಿದ ಇಬ್ಬರು ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾದೇಶದ ಗಡಿಯನ್ನು ದಾಟುತ್ತಿರುವುದು ಪತ್ತೆಯಾಗಿದೆ ಎಂದು ಪ್ರತಿಪಾದಿಸುತ್ತಾ, ಇಬ್ಬರು ಯುವಕರು ಲಗೇಜುಗಳೊಂದಿಗೆ ನಡೆಯುತ್ತಿರುವ ಫೋಟೊವನ್ನು ‘ಕಾಶ್ಮೀರ ಡಿಜಿಟಲ್‌’ ಎನ್ನುವ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇದು ಸುಳ್ಳು ಸುದ್ದಿ. 

ರಿವರ್ಸ್‌ ಸರ್ಚ್‌ ವಿಧಾನದ ಮೂಲಕ ಗೂಗಲ್‌ನಲ್ಲಿ ಹಾಕಿ ಹುಡುಕಿದಾಗ ಇನ್ನೂ ಕೆಲವರು ಈ ಪೋಸ್ಟ್‌ ಅನ್ನು ಹಂಚಿಕೊಂಡಿರುವುದು ಕಂಡು ಬಂತು. ‘ಕಾಶ್ಮೀರ ಡಿಜಿಟಲ್‌’ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟಕೊಂಡಿರುವ ವರದಿಯೂ ಸಿಕ್ಕಿತು. ‘ಹಾದಿ ಅವರಿಗೆ ಗುಂಡಿಕ್ಕಿದ ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಸುದ್ದಿಯ ತಲೆ ಬರಹದಲ್ಲೇ ಹೇಳಲಾಗಿದೆ. ಆ ವೆಬ್‌ಸೈಟ್‌ನ ‘ಅಬೌಟ್‌ ಅಸ್‌’ ಲಿಂಕ್‌ಗೆ ಹೋಗಿ ನೋಡಿದಾಗ, ಅದು ಪಾಕಿಸ್ತಾನ ಮೂಲದ ವೆಬ್‌ಸೈಟ್‌ ಎಂಬುದು ಖಚಿತವಾಯಿತು. ಮತ್ತಷ್ಟು ಹುಡುಕಾಟ ನಡೆಸಿದಾಗ 2024ರ ಆಗಸ್ಟ್‌ 7ರಂದು ಇಂಡಿಯ‌ನ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗಿದ್ದ ವರದಿ ಸಿಕ್ಕಿತು. ಅದರಲ್ಲಿ ಇದೇ ಫೋಟೊವನ್ನೇ ಹೋಲುವ ಫೋಟೊ ಪ್ರಕಟವಾಗಿತ್ತು. ಮೇಘಾಲಯದ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಬಾಂಗ್ಲಾದೇಶದ ವಿದ್ಯಾರ್ಥಿಗಳು ಚೆಕ್‌ ಪೋಸ್ಟ್‌ ಒಂದರಲ್ಲಿ ಭಾರತ–ಬಾಂಗ್ಲಾ ಗಡಿಯನ್ನು ದಾಟುತ್ತಿರುವ ಚಿತ್ರ ಅದಾಗಿತ್ತು. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊದಲ್ಲಿರುವ ಯುವಕರ ಮುಖವನ್ನು ಡಿಜಿಟಲ್‌ ತಂತ್ರಜ್ಞಾನದಲ್ಲಿ ಮಾರ್ಪಾಡು ಮಾಡಿರುವುದು ಗಮನಕ್ಕೆ ಬಂತು. ಈ ನಡುವೆ, ಬಾಂಗ್ಲಾದೇಶದ ಆಡಳಿತವು ಹಾದಿ ಹತ್ಯೆ ತನಿಖೆಯನ್ನು ತೀವ್ರಗೊಳಿಸಿದ್ದು, ಶಂಕಿತನ ಗುರುತನ್ನು ಪತ್ತೆ ಹಚ್ಚಿದೆ. ಆತನ ಬಗ್ಗೆ ದೇಶದಾದ್ಯಂತ ಲುಕ್‌ಔಟ್‌ ನೋಟಿಸ್‌ ನೀಡಿದೆ. ಹಳೆಯ ಫೋಟೊವನ್ನು ಡಿಜಿಟಲ್‌ ತಂತ್ರಜ್ಞಾನದಲ್ಲಿ ತಿರುಚಿ ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿದಾಟುತ್ತಿರುವುದು ಪತ್ತೆಯಾಗಿದೆ ಎಂದು ತಪ್ಪಾಗಿ ಪೋಸ್ಟ್‌ ಮಾಡಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT