ADVERTISEMENT

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ

ಏಜೆನ್ಸೀಸ್
Published 10 ಜುಲೈ 2017, 20:21 IST
Last Updated 10 ಜುಲೈ 2017, 20:21 IST
ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ
ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ   

ಶ್ರೀನಗರ: ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರು ಇದ್ದ ಬಸ್‌ನ ಮೇಲೆ ಸೋಮವಾರ ರಾತ್ರಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಗುಜರಾತ್‌ನ ಏಳು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. 32 ಜನರು ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯಲ್ಲಿ 15ಕ್ಕೂ ಹೆಚ್ಚು ಯಾತ್ರಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ದಾಳಿಯಲ್ಲಿ ಸತ್ತವರ ಹೆಸರು, ವಿಳಾಸ ಮತ್ತು ಗುರುತು ಇದುವರೆಗೂ ಪತ್ತೆಯಾಗಿಲ್ಲ.

ಪ್ರಾಥಮಿಕ ವರದಿಗಳ ಪ್ರಕಾರ ರಾತ್ರಿ 8.20ಕ್ಕೆ ಬಸ್‌ ಅನ್ನು ಅಡ್ಡಗಟ್ಟಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಗುಜರಾತ್‌ನ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಉಗ್ರರ ದಾಳಿಗೆ ಗುರಿಯಾದ ಬಸ್‌ ಅಮರನಾಥ ಯಾತ್ರಾ ಮಂಡಳಿಯಲ್ಲಿ ನೋಂದಣಿಯಾಗಿರಲಿಲ್ಲ. 

ಯೋಧರು ಮತ್ತು ಪೊಲೀಸರು ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಘಟನೆಯ ವರದಿಯಾಗುತ್ತಲೇ ಅನಂತನಾಗ್ ಜಿಲ್ಲೆಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದ್ದು, ಭಾರಿ ಬಂದೋಬಸ್ತ್ ಮಾಡಲಾಗಿದೆ. ಎಲ್ಲ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. 
ಅಮರನಾಥ ಯಾತ್ರೆ ಸಂದರ್ಭದಲ್ಲಿ  ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ವರದಿಗಳ ಕಾರಣ  ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಅನಂತನಾಗ್ ಜಿಲ್ಲೆಯ ಪಹಲ್‌ ಗಾಂವ್ ಮತ್ತು  ಬಲ್ತಾಲ್ ಮೂಲ ಶಿಬಿರದಿಂದ 40 ದಿನಗಳ ಅಮರನಾಥ ಯಾತ್ರೆ ಜೂನ್‌ 28ರಂದು ಆರಂಭವಾಗಿತ್ತು.

*

ನಿಯಮ ಉಲ್ಲಂಘಿಸಿದ ಚಾಲಕ: ಅಮರನಾಥ ಯಾತ್ರೆಯ ನಿಯಮವನ್ನು ಬಸ್‌ ಚಾಲಕ ಉಲ್ಲಂಘಿಸಿದ್ದಾನೆ ಎಂದು ಪೊಲೀಸ್‌ ಮತ್ತು  ಸರ್ಕಾರದ ಉನ್ನತ ಮೂಲಗಳು ಹೇಳಿವೆ.

ನಿಯಮಗಳ ಪ್ರಕಾರ, ಯಾತ್ರೆಯಲ್ಲಿ ಭಾಗವಹಿಸುವ ಯಾವುದೇ ವಾಹನಗಳು ಸಂಜೆ ಏಳು ಗಂಟೆಯ ನಂತರ ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ.  ಏಳು ಗಂಟೆ ನಂತರ ಭದ್ರತೆ ವ್ಯವಸ್ಥೆ ಇರುವುದಿಲ್ಲ.

ನೆರವಿನ ಭರವಸೆ: ದಾಳಿ ಸಂಬಂಧ  ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್‌.ಎನ್‌. ವೊಹ್ರಾ ಮತ್ತು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜೊತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಗತ್ಯವಾದ ಎಲ್ಲ ನೆರವನ್ನು ನೀಡುವ ಭರವಸೆ ನೀಡಿದ್ದಾರೆ.

ರಾಜ್ಯದ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಅವರೊಂದಿಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಕೂಡ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಪಹಲ್‌ ಗಾಮ್‌ ಮತ್ತು  ಬಲ್ತಾಲ್ ಶಿಬಿರಗಳಿಂದ 40 ದಿನಗಳ ಯಾತ್ರೆ ಜೂನ್‌ 29ರಂದು ಆರಂಭವಾಗಿತ್ತು.

*

ಬಿಗಿ ಭದ್ರತೆ ನಡುವೆಯೇ ಉಗ್ರರ ಅಟ್ಟಹಾಸ

ಯಾತ್ರಿಕರನ್ನು ಗುರಿಯಾಗಿಸಿಕೊಂಡು  ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಗುಪ್ತಚರ ಸಂಸ್ಥೆಗಳು ಮೊದಲೇ ಎಚ್ಚರಿಕೆ ನೀಡಿದ್ದವು.

ಹಾಗಾಗಿ ಯಾತ್ರೆ ಕೈಗೊಳ್ಳುವ ಎರಡೂ ಮಾರ್ಗಗಳಲ್ಲಿ ಅತ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಪೊಲೀಸ್‌, ಸೇನೆ, ಸಿಆರ್‌ಪಿಎಫ್‌ ಮತ್ತು ಬಿಎಸ್‌ಎಫ್‌ನ 40 ಸಾವಿರ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಗುಪ್ತಚರ ಸಂಸ್ಥೆಗಳು ನೀಡಿರುವ ಎಚ್ಚರಿಕೆ ಬಗ್ಗೆ ಕಾಶ್ಮೀರದ ಡಿಐಜಿ ಮುನೀರ್‌ ಖಾನ್‌ ಅವರು ಕಳೆದ ತಿಂಗಳು ಸೇನೆ, ಸಿಆರ್‌ಪಿಎಫ್‌ಗಳಿಗೆ ಪತ್ರ ಬರೆದು ತಿಳಿಸಿದ್ದರು.

‘100ರಿಂದ 150 ಯಾತ್ರಿಕರು, 100 ಪೊಲೀಸ್‌ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಹತ್ಯೆ ಮಾಡಲು ಉಗ್ರರಿಗೆ  ನಿರ್ದೇಶನ ನೀಡಲಾಗಿದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ’ ಎಂದು ಖಾನ್‌  ಅವರು ಬರೆದಿದ್ದ ಪತ್ರ ಸೋರಿಕೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇದು ಹರಿದಾಡಿತ್ತು.

*

17 ವರ್ಷದ ಹಿಂದೆ ನಡೆದಿತ್ತು ದಾಳಿ
2000ರ ಆಗಸ್ಟ್‌ 1ರಂದು ದಕ್ಷಿಣ ಪಹಲ್ಗಾಮ್‌ ಮೂಲ ಶಿಬಿರದ ಮೇಲೆ  ಉಗ್ರರು ನಡೆಸಿದ ದಾಳಿ \ಯಲ್ಲಿ 21 ಯಾತ್ರಿಗಳು ಸೇರಿದಂತೆ 30 ಜನರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.