ನವದೆಹಲಿ(ಪಿಟಿಐ): ಲೋಕಸಭಾ ಚುನಾವಣೆಯ ದಿಕ್ಕನ್ನೇ ಬದಲಿಸುವ ಶಕ್ತಿ `ಆಹಾರ ಭದ್ರತೆ' ಯೋಜನೆ ಜಾರಿಯಲ್ಲಿ ಅಡಗಿದೆ ಎಂದು ಭರವಸೆ ಇಟ್ಟಿರುವ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಯೋಜನೆಯನ್ನು ರಾಜ್ಯಗಳಲ್ಲಿ 'ಅತ್ಯುತ್ಸಾಹ'ದಿಂದ ಜಾರಿಗೊಳಿಸಿ ಎಂದು ಪಕ್ಷದ ಮುಖಂಡರಿಗೆ ಕರೆ ನೀಡಿದರು.
ಆಹಾರ ಭದ್ರತೆ ಯೋಜನೆ ಜಾರಿಗೊಳಿಸುವ ಸಂಬಂಧ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋನಿಯಾ ಅವರು ಶನಿವಾರ ಸಭೆ ನಡೆಸಿದ್ದಾರೆ.
ಯೋಜನೆ ಅಡಿ ಅತ್ಯಂತ ಕಡಿಮೆ ದರದಲ್ಲಿ ಆಹಾರ ಧಾನ್ಯಗಳ ಪ್ರಯೋಜನವನ್ನು 82 ಕೋಟಿ ಜನ ಪಡೆಯಲಿದ್ದು, ಯೋಜನೆ ಜಾರಿಗೆ ವಾರದ ಹಿಂದೆಯಷ್ಟೇ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.
ಪ್ರಸಕ್ತ ವರ್ಷಾಂತ್ಯದ ವೇಳೆಗೆ ದೆಹಲಿಯಲ್ಲಿ ಚುನಾವಣೆ ನಡೆಯಲಿದ್ದು, ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹುಟ್ಟು ಹಬ್ಬದ ದಿನ ಆಗಸ್ಟ್ 20ರಂದು ಯೋಜನೆಗೆ ಚಾಲನೆ ನೀಡಲಾಗುವುದು. ಇದರೊಂದಿಗೆ ದೆಹಲಿ ಆಹಾರ ಭದ್ರತೆ ಯೋಜನೆ ಜಾರಿಗೊಳಿಸಿದ ಪ್ರಥಮ ರಾಜ್ಯವಾಗಲಿದೆ. ಯೋಜನೆಯನ್ನು ಉತ್ಸಾಹದಿಂದ ಜಾರಿಗೊಳಿಸುವಲ್ಲಿ ಪಕ್ಷದ ಮುಖ್ಯಮಂತ್ರಿಗಳು ಮುಂದಾಗಬೇಕು. ಜತೆಗೆ, ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಇತರ ರಾಜ್ಯಗಳಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿ ಮನಮೋಹನ ಸಿಂಗ್, ಪಕ್ಷದ ಉಪಾಧ್ಯಕ್ಷ ರಾಹುಲ್‌ಗಾಂಧಿ, ಆಹಾರ ಖಾತೆ ಸಚಿವ ಕೆ.ವಿ. ಥಾಮಸ್ ಹಾಗೂ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.