ADVERTISEMENT

ನೀಗದ ಆತಂಕ: ಗುಜರಾತ್‌ಗೆ ಮರಳಿ ಅಪ್ಪಳಿಸಲಿದೆಯೇ ವಾಯು?

ಏಜೆನ್ಸೀಸ್
Published 15 ಜೂನ್ 2019, 2:04 IST
Last Updated 15 ಜೂನ್ 2019, 2:04 IST
   

ನವದೆಹಲಿ: ವಾಯು ಚಂಡಮಾರುತವು ಪಥ ಬದಲಿಸಿದ್ದು, ಗುಜರಾತ್‌ಗೆ ಯಾವುದೇ ಸಮಸ್ಯೆಗಳಿಲ್ಲಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಘೋಷಿಸಿದ ಬೆನ್ನಿಗೇ ಕೇಂದ್ರ ಭೂವಿಜ್ಞಾನ ಇಲಾಖೆಯು ಇದಕ್ಕೆ ವ್ಯತಿರಿಕ್ತವಾದ ಮಾಹಿತಿ ನೀಡಿವೆ. ವಾಯು ಚಂಡಮಾರುತವು ಮರುಕಳಿಸಲಿದ್ದು, ಇದೇ 17–18ರಂದು ಗುಜರಾತ್‌ನ ಕಚ್‌ಗೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.

ವಾಯು ತನ್ನ ಪಥ ಬದಲಿಸಿದ್ದರೂ ಗುರುವಾರದಿಂದಲೂ ಅದರ ಪರಿಣಾಮವಾಗಿ ಗುಜರಾತ್‌ನ ಕೆಲವೆಡೆ ಗಾಳಿ ಸಹಿತಿ ಮಳೆಯಾಗುತ್ತಿದೆ. ಕರಾವಳಿ ಪ್ರದೇಶ, ಗಿರ್‌, ಸೋಮ್‌ನಾಥ್‌, ಡಿಯು, ಜುನಾಗಢ, ಪೋರ್‌ಬಂದರ್‌ಗಳಲ್ಲಿ ಭಾರಿ ಮಳೆಯಾಗುತ್ತಿದೆ. ಆದರೆ, ಗುರುವಾರ ಚಂಡಮಾರುತವು ಅದರ ಪಥ ಬದಲಿಸಿದ ಕಾರಣ ಇನ್ನು ಹೆಚ್ಚಿನ ಪರಿಣಾಮಗಳೇನೂ ಉಂಟಾಗದು,’ ಎಂದು ಹವಾಮಾನ ಇಲಾಖೆಯೂ ತಿಳಿಸಿತ್ತು.

ಈ ಮಧ್ಯೆ, ಚಂಡಮಾರುತ ಬಗ್ಗೆ ಶುಕ್ರವಾರವಷ್ಟೆ ಮಾತನಾಡಿದ್ದ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ, ‘ವಾಯು ಚಂಡಮಾರುತದಿಂದ ಗುಜರಾತ್‌ಗೆ ಯಾವುದೇ ಅಪಾಯಗಳಿಲ್ಲ. ಅದು ಪಥ ಬದಲಿಸಿ ಪಶ್ಚಿಮಾಭಿಮುಖವಾಗಿ ಸಾಗಿದೆ,‘ ಎಂದು ಹೇಳಿದ್ದರು.

ADVERTISEMENT

ಸದ್ಯ ಹವಾಮಾನ ಇಲಾಖೆಯೂ ಗುಜರಾತ್‌ಗೆ ಹೊಸದಾದ ಮಾಹಿತಿ ರವಾನಿಸಿದ್ದು, ‘ವಾಯು ಚಂಡಮಾರುತವು ಇದೇ 17–18ರಂದು ಮರಳಿ ಬರುವ ಸಾಧ್ಯತೆಗಳಿವೆ,'ಎಂದು ಎಚ್ಚರಿಸಿದೆ. ಈ ಕುರಿತು ಕೇಂದ್ರ ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ. ರಾಜೀವನ್‌ ಅವರು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಚಂಡಮಾರುತದ ತೀವ್ರತೆ ಕಡಿಮೆಯಾಗುವ ಸಾಧ್ಯತೆಗಳಿವೆಯಾದರೂ, ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದೂ ಇಲಾಖೆ ಎಚ್ಚರಿಸಿದೆ.

ಆದರೆ, ಚಂಡಮಾರುತ ಮರಳಿ ಅಪ್ಪಳಿಸುವ ಸಾಧ್ಯತೆಗಳ ಬಗ್ಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಹವಾಮಾನ ಇಲಾಖೆಯೂ ಅನುಮಾನ ವ್ಯಕ್ತಪಡಿಸಿದೆ. ‘ಇನ್ನು 48 ಗಂಟೆಗಳಲ್ಲಿ ಚಂಡಮಾರುತ ಮರಳಿ ಬರುವ ಸಾಧ್ಯತೆಗಳಿವೆ ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಹೀಗೆ ಆಗುವ ಸಾಧ್ಯತೆಗಳಿರುಬಹುದು. ಜತೆಗೇ ಅದರ ತೀವ್ರತೆಯೂ ಕಡಿಮೆಯಾಗಬಹುದು. ಚಂಡಮಾರುತ ಸಮುದ್ರದಲ್ಲೇ ಹರಡಿಕೊಳ್ಳಲೂಬಹುದು.ಅದು ಮರಳಿ ಬಂದು, ಕಚ್‌ ಅಥವಾ ಸೌರಾಷ್ಟ್ರ ಪ್ರಾಂತ್ಯವನ್ನು ಅಪ್ಪಳಿಸಲಿದೆ ಎಂದು ಈಗಲೇ ಹೇಳಲಾಗದು,’ ಎಂದು ಹವಾಮಾನ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಮನೋರಮಾ ಮೊಹಾಂತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.