ADVERTISEMENT

ನ.5ಕ್ಕೆ ಮತ್ತೆ ಬಾಗಿಲು ತೆರೆಯಲಿದೆ ಶಬರಿಮಲೆ ದೇಗುಲ: ಕೇರಳದಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 6:03 IST
Last Updated 3 ನವೆಂಬರ್ 2018, 6:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ:ಒಂದು ದಿನದ ಪೂಜೆಗಾಗಿ ಸೋಮವಾರ (ನ.5) ಶಬರಿಮಲೆ ದೇಗುಲದ ಬಾಗಿಲು ತೆರೆಯಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅಯ್ಯಪ್ಪ ದೇಗುಲಸಮೀಪದ ಪಂಪಾ ಮತ್ತು ಇತರ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಮಂಗಳವಾರದವರೆಗೆ ನಿಷೇಧಾಜ್ಞೆ ಹೇರಲಾಗಿದೆ.

‘ಎಲ್ಲ ವಯಸ್ಸಿನ ಮಹಿಳೆಯರೂ ಶಬರಿಮಲೆ ಪ್ರವೇಶಿಸಬಹುದು’ ಎಂದುಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರ ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಹೆಚ್ಚಾಗಿತ್ತು.ಸನ್ನಿಧಾನಂ, ಪಂಪಾ, ನಿಲಕ್ಕಲ್, ಇಳುವಂಗಲ್ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಅ.17ರ ನಂತರ ಒಟ್ಟು ಐದು ದಿನ ದೇಗುಲದ ಬಾಗಿಲು ತೆರೆದಿತ್ತು. ಈ ಸಂದರ್ಭ ಸುಮಾರು 12 ಯುವತಿಯರು ಪೊಲೀಸ್ ರಕ್ಷಣೆಯಲ್ಲಿ ದೇಗುಲ ಪ್ರವೇಶಿಸಲು ವಿಫಲಯತ್ನ ನಡೆಸಿದ್ದರು.ಹಿಂಸಾಚಾರ ನಡೆಸಿದವರ ವಿರುದ್ಧ ಈವರೆಗೆ ಒಟ್ಟು 543 ಪ್ರಕರಣಗಳನ್ನು ದಾಖಲಿಸಲಾಗಿದ್ದು, 3701 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ನಿಲಕ್ಕಲ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಹಿಂಸಾಚಾರದಿಂದ ಭಕ್ತರೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶುಕ್ರವಾರ ಪತನಂತಿಟ್ಟದಲ್ಲಿಬಂದ್‌ಗೆ ಕರೆ ನೀಡಿತ್ತು. ಶಿವದಾಸನ್ (60) ಮೃತರು. ಕಾಲಿಗೆ ಆಗಿದ್ದ ಗಾಯಗಳು ಇವರಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಪೊಲೀಸರ ಹೊಡೆತವೇ ಸಾವಿಗೆ ಕಾರಣ ಎಂದು ಅರೋಪಿಸಿತ್ತು.

ಸುಪ್ರೀಂಕೋರ್ಟ್‌ ತೀರ್ಪು ವಿರೋಧಿಸುತ್ತಿರುವ ನಾಯರ್ ಸರ್ವೀಸ್ ಸೊಸೈಟಿ (ಎನ್‌ಎಸ್‌ಎಸ್‌) ಕಚೇರಿಯ ಮೇಲೆಯೂ ದುಷ್ಕರ್ಮಿಗಳು ಶುಕ್ರವಾರ ದಾಳಿ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೇರಳ ಪೊಲೀಸ್‌ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಕೆಲವರು ಅಸಭ್ಯವಾಗಿ ಮಾತನಾಡುತ್ತಿರುವುದನ್ನು ಐಪಿಎಸ್‌ ಅಧಿಕಾರಿಗಳ ಸಂಘದ ಕೇರಳ ಘಟಕ ಖಂಡಿಸಿದೆ. ಅಧಿಕಾರಿಗಳನ್ನು ಅವಹೇಳನ ಮಾಡುವ ಮೂಲಕ ಅವರಲ್ಲಿ ಭೀತಿ ಹುಟ್ಟಿಸಲು ಮತ್ತು ತಮಗೆಬೇಕಾದಂತೆ ವರ್ತಿಸುವಂತೆ ಮಾಡಲು ಒತ್ತಡ ಹೇರಲಾಗುತ್ತಿದೆ ಎಂದು ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.