ADVERTISEMENT

ಶಿವಸೇನಾ ಹಿಂದುತ್ವ ಬಿಜೆಪಿಗಿಂತ ಭಿನ್ನ: ಆದಿತ್ಯ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:36 IST
Last Updated 19 ಮೇ 2019, 19:36 IST
ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ   

ನವದೆಹಲಿ: ‘ಹಿಂದುತ್ವವು ಶಿವಸೇನಾದ ಸಿದ್ಧಾಂತಗಳಲ್ಲೊಂದು. ಆದರೆ ಅದು ಬಿಜೆಪಿಯ ಹಿಂದುತ್ವಕ್ಕಿಂತ ಭಿನ್ನವಾದುದು’ ಎಂದು ಶಿವಸೇನಾದ ಯುವ ವಿಭಾಗವಾದ ‘ಯುವ ಸೇನಾ’ದ ಮುಖ್ಯಸ್ಥ ಆದಿತ್ಯ ಠಾಕ್ರೆ ವಾದಿಸಿದ್ದಾರೆ.

ಗುರ್‌ಮೆಹರ್‌ ಕೌರ್‌ ಅವರು ಪ್ರಕಟಿಸಿರುವ, ಯುವ ರಾಜಕಾರಣಿಗಳ ಸಂದರ್ಶನವನ್ನು ಒಳಗೊಂಡ ‘ದಿ ಯಂಗ್‌ ಅಂಡ್‌ ರೆಸ್ಟ್‌ಲೆಸ್‌’ ಕೃತಿಯಲ್ಲಿ ಆದಿತ್ಯ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃತಿಯಲ್ಲಿ ಒಮರ್‌ ಅಬ್ದುಲ್ಲಾ, ಸಚಿನ್‌ ಪೈಲಟ್‌, ಆದಿತ್ಯ ಠಾಕ್ರೆ, ಶೆಹ್ಲಾ ರಶೀದ್‌ ಮುಂತಾದ ಯುವ ನಾಯಕರ ಸಂದರ್ಶನಗಳಿವೆ.

‘ಶಿವಸೇನಾದಂಥ ಪಕ್ಷವನ್ನು ಪಲಪಂಥೀಯ ಪಕ್ಷಗಳ ಸಾಲಿನಲ್ಲಿ ಸೇರಿಸುವುದು ಸಹಜ. ನಮ್ಮದು ‘ಮಧ್ಯಮ’ ಹಾದಿ. ಹಿಂದುತ್ವ ನಮ್ಮ ಸಿದ್ಧಾಂತಗಳಲ್ಲೊಂದು. ಆದರೆ ‘ಬಲಮಧ್ಯಮ’ ಹಾದಿಯಲ್ಲಿ ನಾವಿದ್ದೇವೆ. ಯಾಕೆಂದರೆ ನಾವು ಪ್ರಾಯೋಗಿಕವಾಗಿ ಮಾತನಾಡುತ್ತೇವೆ. ನೈಟ್‌ಲೈಫ್‌, ವಿದ್ಯುತ್‌ ಚಾಲಿತ ಬಸ್ಸುಗಳು ಮುಂತಾಗಿ ಸಂಪೂರ್ಣವಾಗಿ ಭಿನ್ನವಾದ ವಿಚಾರಗಳ ಬಗ್ಗೆ ನಾವು ಮಾತನಾಡುತ್ತೇವೆ’ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸುವ ಹೋರಾಟದಲ್ಲಿ ಆದಿತ್ಯ ಅವರು ಮುಂಚೂಣಿಯಲ್ಲಿದ್ದಾರೆ. ಅಷ್ಟೇ ಅಲ್ಲ ವಾರದ ಏಳು ದಿನವೂ ನೈಟ್‌ಲೈಫ್‌ಗೆ ಅವಕಾಶ ಕಲ್ಪಿಸಬೇಕು ಎನ್ನುವವರ ಪರವಾಗಿದ್ದಾರೆ.

‘ನಾವು ಅನೇಕ ವಿಚಾರಗಳಲ್ಲಿ ಬಿಜೆಪಿಗಿಂತ ಭಿನ್ನವಾಗಿದ್ದೇವೆ’ ಎಂದಿರುವ ಠಾಕ್ರೆ, ಗುಂಪುದಾಳಿ, ಜನರನ್ನು ದೇಶದ್ರೋಹಿಗಳೆಂದು ಕರೆಯುವುದೇ ಮುಂತಾದವುಗಳನ್ನು ಅದಕ್ಕೆ ಉದಾಹರಣೆಯಾಗಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.