ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಬಂಧಿತರಾಗಿರುವ ಸಹಾರಾ ಮುಖ್ಯಸ್ಥ ಸುಬ್ರತೊ ರಾಯ್ ಅವರ ಜೈಲು ವಾಸಕ್ಕೆ ಈಗ ಒಂದು ವರ್ಷ ಪೂರ್ಣಗೊಂಡಿದೆ. ರಾಯ್ ಬಿಡುಗಡೆಗೆ ಸುಪ್ರೀಂಕೋರ್ಟ್ ವಿಧಿಸಿರುವ ಷರತ್ತುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಸುಬ್ರತೊ ಪರ ವಕೀಲರು ಅಸಹಾಯಕತೆ ವ್ಯಕ್ತಪಡಿಸಿರುವುದರಿಂದ, ರಾಯ್ ಅವರು ತಿಹಾರ್ ಜೈಲಿನಲ್ಲಿ ಇನ್ನಷ್ಟು ದಿನಗಳನ್ನು ಕಳೆಯುವುದು ಅನಿವಾರ್ಯವಾಗಲಿದೆ.
ಒಂದು ವೇಳೆ ಷರತ್ತುಗಳನ್ನೆಲ್ಲ ಪೂರೈಸಿ ಜೈಲಿನಿಂದ ಹೊರ ಬಂದರೆ, ಆ ದಿನದಿಂದ ಒಂದೂವರೆ ವರ್ಷದಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) 9 ಕಂತುಗಳಲ್ಲಿ ರೂ 36 ಸಾವಿರ ಕೋಟಿ ಪಾವತಿಸು ವಂತೆಯೂ ಮೂವರು ನ್ಯಾಯ ಮೂರ್ತಿಗಳು ಇರುವ ಪೀಠ ಸೂಚಿಸಿ ರುವುದು ಸಂಸ್ಥೆಯನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಸಹರಾ ಸಮೂಹದ ಎರಡು ಸಂಸ್ಥೆಗಳು ಸಾಲಪತ್ರಗಳ ಮೂಲಕ ಸಂಗ್ರಹಿಸಿದ ಹಣವನ್ನು ಹೂಡಿಕೆದಾರರಿಗೆ ಮರಳಿ ವಾಪಸ್ ಮಾಡುವುದಾಗಿ ಕೋರ್ಟ್‌ಗೆ ನೀಡಿದ್ದ ವಾಗ್ದಾನ ಈಡೇರಿಸಲು ವಿಫಲವಾಗಿರುವುದಕ್ಕೆ ಕೋರ್ಟ್ ಇವರ ಬಂಧನಕ್ಕೆ ಆದೇಶಿಸಿತ್ತು. ಹೂಡಿಕೆದಾರರಿಂದ ಕಾನೂನುಬಾಹಿರವಾಗಿ ಹಣ ಸಂಗ್ರಹಿಸಲಾಗಿದೆ ಎಂದು ‘ಸೆಬಿ’ ಆಕ್ಷೇಪಿಸಿತ್ತು.
ರಾಯ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಉದ್ದೇಶಕ್ಕೆ ಸಂಸ್ಥೆಯ ಕೆಲ ಸಂಪತ್ತನ್ನು ಮಾರಾಟ ಮಾಡಲು ಕೋರ್ಟ್ ಅನುಮತಿ ನೀಡಿತ್ತು. ಈ ಉದ್ದೇಶಕ್ಕೆ ಸಂಸ್ಥೆಯು ಫ್ಲಾರಿಡಾ ಮೂಲದ ಮಿರಚ್ ಗ್ರೂಪ್ ಜತೆ (Mirach Capital Group Llc) ಒಪ್ಪಂದ ಮಾಡಿಕೊಂಡಿತ್ತು.
ಈ ಸಂಸ್ಥೆಯು ಸಾಲದ ಹಣಕ್ಕೆ ನೀಡಿದ್ದ ಖಾತರಿ ಖೊಟ್ಟಿಯಾಗಿದೆ ಎಂಬುದು ಬಹಿರಂಗಗೊಂಡ ನಂತರ ಈ ಒಪ್ಪಂದ ಕಾರ್ಯರೂಪಕ್ಕೆ ಬರಲಿಲ್ಲ. ಹೀಗಾಗಿ ಒಂದು ವರ್ಷದ ನಂತರವೂ ವಿವಾದ ಇದ್ದಲ್ಲಿಯೇ ಇದೆ.
30 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ ಶೇ 15ರ ಬಡ್ಡಿ ದರದಲ್ಲಿ ರೂ 24 ಸಾವಿರ ಕೋಟಿಗಳನ್ನು ಮರಳಿಸುವಂತೆ ಸುಪ್ರೀಂ ಕೋರ್ಟ್, 2012ರಲ್ಲಿ ಸಹರಾ ರಿಯಲ್ ಎಸ್ಟೇಟ್ ಕಾರ್ಪ್ ಲಿಮಿಟೆಡ್ (SIRCL) ಮತ್ತು ಸಹರಾ ಹೌಸಿಂಗ್ ಕಾರ್ಪ್ ಲಿಮಿಟೆಡ್‌ಗೆ (SHICL) ಆದೇಶಿಸಿತ್ತು. ಸಹರಾ ಸಮೂಹವು ರೂ 5,120 ಕೋಟಿಗಳಷ್ಟು ಮೊತ್ತವನ್ನು ‘ಸೆಬಿ’ಯಲ್ಲಿ ಠೇವಣಿ ಇರಿಸಿದರೂ ಉಳಿದ ಮೊತ್ತವನ್ನು ಪಾವತಿಸಲು ವಿಫಲಗೊಂಡಿತ್ತು.
ಎಲ್ಲ ಬಾಂಡ್‌ಗಳಿಗೆ ಹಣ ಮರು ಪಾವತಿ ಮಾಡಲಾಗಿದೆ. ತಾನು ಪಾವತಿಸಬೇಕಾದ ಬಾಕಿ ಹಣ ಕೇವಲ ರೂ 2,610 ಕೋಟಿ ಎಂದು ಸಹಾರಾ ಸಂಸ್ಥೆಯು ಈ ಹಂತದಲ್ಲಿ ಹೇಳಿಕೆ ನೀಡಿ ಅಚ್ಚರಿಯನ್ನೂ ಮೂಡಿಸಿತ್ತು.
ನಕಲಿ ಹೂಡಿಕೆದಾರರು?: ಹಣ ಸಂಗ್ರಹಿಸುವಲ್ಲಿ ಸಂಸ್ಥೆಯು ನಕಲಿ ಹೂಡಿಕೆದಾರರನ್ನು ಸೃಷ್ಟಿಸಿದೆಯೇ ಎನ್ನುವ ಅನುಮಾನವನ್ನೂ ಮೂಡಿಸಿದೆ. ಸಂಸ್ಥೆಯು ‘ಸೆಬಿ’ಗೆ ಸಲ್ಲಿಸಿದ್ದ ಮಾಹಿತಿ ಯಲ್ಲಿ ಹೂಡಿಕೆದಾರರ ಹೆಸರನ್ನು ಹೊರತುಪಡಿಸಿ ಅವರ ಅಧಿಕೃತ ವಿಳಾಸ, ಬ್ಯಾಂಕ್ ಖಾತೆ ಮತ್ತಿತರ ವಿವರಗಳೇ ಇಲ್ಲ. ಈ ಕಾರಣಕ್ಕೆ ಹೂಡಿಕೆದಾರರನ್ನು ಗುರುತಿಸುವುದು ಕಷ್ಟವಾಗುತ್ತಿದೆ ಎಂದು ‘ಸೆಬಿ’ ಕೂಡ ಅಭಿಪ್ರಾಯಪಟ್ಟಿತ್ತು.
ಹಣ ವಾಪಸಾತಿಗೆ ಕೋರಿ ‘ಸೆಬಿ’ಗೆ 4,900 ಅರ್ಜಿಗಳು ಮಾತ್ರ ಬಂದಿವೆ. ವಿಚಾರಣೆ ವೇಳೆಯಲ್ಲಿ ನ್ಯಾಯಮೂರ್ತಿ ಕೆ. ಎಸ್. ರಾಧಾಕೃಷ್ಣನ್ ಅವರೂ, ಬಾಂಡ್‌ಗಳಲ್ಲಿ ಹಣ ತೊಡಗಿಸಿರುವ ಹೂಡಿಕೆದಾರರ ನೈಜತೆ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು.
ರೋಷನ್ ಲಾಲ್ ಕಾರಣ: ರಾಯ್, ಈಗ ಬಂಧನಕ್ಕೆ ಒಳಗಾಗಲು, ನಾಲ್ಕು ವರ್ಷಗಳ ಹಿಂದೆ ರೋಷನ್ ಲಾಲ್ ಎನ್ನುವವರು, ಷೇರುಪೇಟೆಯ ಕಾವಲು ಸಂಸ್ಥೆಯಾಗಿರುವ ‘ಸೆಬಿ’ ದೂರು ನೀಡಿದ್ದೇ ಕಾರಣ. ಹೂಡಿಕೆದಾರರಿಂದ ರೂ 24 ಸಾವಿರ ಕೋಟಿ ಸಂಗ್ರಹಿಸಲು ಸಹಾರಾ ಸಮೂಹವು ಹಲವಾರು ಅಕ್ರಮಗಳನ್ನು ಎಸಗಿದೆ ಎಂದು ಲಾಲ್ ದೂರಿದ್ದರು.
ಸಹಾರಾ ಸಮೂಹದ ರಿಯಲ್ ಎಸ್ಟೇಟ್ ಅಂಗಸಂಸ್ಥೆಯಾಗಿರುವ ಸಹಾರಾ ಪ್ರೈಮ್ ಸಿಟಿಯು, ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ 2009ರ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾಗಿತ್ತು. ಇದೇ ಇಂದಿನ ವಿವಾದಕ್ಕೆ ಮೂಲ ಕಾರಣ.
ಈ ಎರಡೂ ಸಂಸ್ಥೆಗಳು ‘ಐಚ್ಛಿಕ ಸಂಪೂರ್ಣ ಪರಿವರ್ತಿಸಬಹುದಾದ ಬಾಂಡ್’ ಹೆಸರಿನಲ್ಲಿ ಹಣ ಸಂಗ್ರಹಿಸಲೂ ಮುಂದಾಗಿದ್ದವು. ಇದು ಕಾನೂನುಬಾಹಿರ ಕ್ರಮ ಎನ್ನುವ ದೂರುಗಳು ‘ಸೆಬಿ'ಗೆ 2010ರ ಜನವರಿ ತಿಂಗಳಲ್ಲಿ ಸಲ್ಲಿಕೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.