ADVERTISEMENT

ಉತ್ತರ ಪ್ರದೇಶದಲ್ಲಿ ನಕಲಿ ಪ್ಲೇಟ್‌ಲೆಟ್ ಪೂರೈಕೆ ಪ್ರಕರಣ: 10 ಮಂದಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2022, 1:31 IST
Last Updated 22 ಅಕ್ಟೋಬರ್ 2022, 1:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಯಾಗರಾಜ್‌: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ (ಅಲಹಾಬಾದ್) ನಡೆಯುತ್ತಿದ್ದ ನಕಲಿ ಪ್ಲೇಟ್‌ಲೆಟ್‌ ಪೂರೈಕೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಡೆಂಗಿ ರೋಗಿಗಳಿಗೆ ಪ್ಲಾಸ್ಮಾವನ್ನು ನಕಲಿ ಪ್ಲೇಟ್‌ಲೆಟ್‌ಗಳಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಡೆಂಗಿ ಪ್ರಕರಣಗಳ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ಲಾಸ್ಮಾಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಗುರಿಯಾಗಿ‌ಸಿಕೊಂಡಿದ್ದ ಆರೋಪಿಗಳು ಬ್ಲಡ್ ಬ್ಯಾಂಕ್‌ಗಳಿಂದ ತರಲಾದ ಪ್ಲಾಸ್ಮಾವನ್ನು ನಕಲಿ ಮಾಡಿ ಮರು ಪ್ಯಾಕ್ ಮಾಡುತ್ತಿದ್ದರು. ಹೀಗೆ ನಕಲಿ ಮಾಡಿದ ಪ್ಯಾಕೆಟ್‌ಗಳಲ್ಲಿ ಪ್ಲೇಟ್‌ಲೆಟ್‌ ಬದಲಿಗೆ ಮೂಸಂಬಿ ರಸವನ್ನು ತುಂಬಿ ಮಾರಾಟ ಮಾಡುವ ಮೂಲಕ ಬಡವರನ್ನು ವಂಚಿಸುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ಹೇಳಿದ್ದಾರೆ.

ADVERTISEMENT

‘ಖಚಿತ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳ ಬಳಿ ನಕಲಿ ಪ್ಲಾಸ್ಮಾ ಪ್ಯಾಕೆಟ್‌ಗಳು ಸೇರಿದಂತೆ ನಗದು, ಮೊಬೈಲ್‌, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಶೈಲೇಶ್ ತಿಳಿಸಿದ್ದಾರೆ.

ಜಾಲ್ವಾ ಎಂಬಲ್ಲಿ ಡೆಂಗಿ ರೋಗಿಯೊಬ್ಬರ ದೇಹಕ್ಕೆ ಪ್ಲಾಸ್ಮಾ ನೀಡುವುದಕ್ಕೆ ಬದಲಾಗಿ ಮೂಸಂಬಿ ರಸ ನೀಡಲಾಗಿದ್ದು, ರೋಗಿ ಮೃತಪಟ್ಟಿರುವುದಾಗಿ ವರದಿಯಾಗಿತ್ತು.

ದೇಹಕ್ಕೆ ಮೂಸಂಬಿ ರಸ ಸೇರಿದ ಕಾರಣಕ್ಕೆ ರೋಗಿ ಪ್ರದೀಪ್‌ ಪಾಂಡೆ ಮೃತಪಟ್ಟಿದ್ದಾರೆ. ಘಟನೆಯಿಂದಾಗಿ ನಕಲಿ ರಕ್ತನಿಧಿಗಳ ಅಕ್ರಮ ಬಯಲಾಗಿತ್ತು.

ಪ್ಲಾಸ್ಮಾ ಪೊಟ್ಟಣದಲ್ಲಿ ಮೂಸಂಬಿ ರಸ ಇರುವುದನ್ನು ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.