ADVERTISEMENT

100 ವರ್ಷಗಳ ಹಿಂದೆ ನನ್ನ ತಂದೆಗೆ ನೀರು ಕೊಡಲಿಲ್ಲ, ಇಂದೂ ಅದೇ ಪರಿಸ್ಥಿತಿ: ಮೀರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2022, 7:48 IST
Last Updated 16 ಆಗಸ್ಟ್ 2022, 7:48 IST
ಮೀರಾ ಕುಮಾರ್‌
ಮೀರಾ ಕುಮಾರ್‌   

ನವದೆಹಲಿ: ನೂರು ವರ್ಷಗಳ ಹಿಂದೆ ನನ್ನ ತಂದೆ ಬಾಬು ಜಗಜೀವನ್‌ ರಾಮ್‌ ಅವರಿಗೆ ಶಾಲೆಯಲ್ಲಿ ಕುಡಿಯಲು ನೀರು ನಿರಾಕರಿಸಲಾಗಿತ್ತು. ಇಂದು ಅದೇ ಕಾರಣಕ್ಕೆ ದಲಿತ ಬಾಲಕನ ಹತ್ಯೆಯಾಗಿದೆ ಎಂದು ಲೋಕಸಭೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಜಾಲೋರ್‌ ಜಿಲ್ಲೆಯ ಸುರಾನಾ ಎಂಬ ಹಳ್ಳಿಯೊಂದರ ಖಾಸಗಿ ಶಾಲೆಯಲ್ಲಿ ಇಂದ್ರ ಮೇಘವಾಲ್‌ ಎಂಬ ವಿದ್ಯಾರ್ಥಿಯು ಕುಡಿಯುವ ನೀರಿನ ಮಡಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಾಯಿಲ್‌ ಸಿಂಗ್‌ ತೀವ್ರವಾಗಿ ತಳಿಸಿದ್ದರು. ಜುಲೈ 20ರಂದು ಈ ಘಟನೆ ನಡೆದಿತ್ತು. ತೀವ್ರವಾಗಿ ಗಾಯಗೊಂಡು, ಸಾವು ಬದುಕಿನ ಹೋರಾಟ ನಡೆಸಿದ್ದ ವಿದ್ಯಾರ್ಥಿ ಕಳೆದ ಶನಿವಾರ ಮೃತಪಟ್ಟಿದ್ದ. ಈ ವಿಷಯ ರಾಷ್ಟ್ರಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಇದೇ ಹಿನ್ನೆಲೆಯಲ್ಲಿ ಇಂದು ಟ್ವೀಟ್‌ ಮಾಡಿರುವ ಮೀರಾ ಕುಮಾರ್‌, ‘100 ವರ್ಷಗಳ ಹಿಂದೆ ಶಾಲೆಯಲ್ಲಿ ಸವರ್ಣೀಯ ಹಿಂದೂಗಳಿಗೆ ಮೀಸಲಿಟ್ಟಿದ್ದ ಮಡಿಕೆಯಲ್ಲಿ ನೀರು ಕುಡಿಯಲು ನನ್ನ ತಂದೆ ಬಾಬು ಜಗಜೀವನ್‌ ರಾಮ್ ಅವರನ್ನು ನಿರ್ಬಂಧಿಸಲಾಗಿತ್ತು. ಅಂದು ಅವರ ಪ್ರಾಣ ಉಳಿದಿದ್ದು ಒಂದು ಪವಾಡ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಇಂದು ಅದೇ ಕಾರಣಕ್ಕೆ ಒಂಬತ್ತು ವರ್ಷದ ದಲಿತ ಬಾಲಕನನ್ನು ಹತ್ಯೆ ಮಾಡಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜಾತಿ ವ್ಯವಸ್ಥೆ ನಮ್ಮ ದೊಡ್ಡ ಶತ್ರುವಾಗಿಯೇ ಉಳಿದುಕೊಂಡಿದೆ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

2009–14ರ ವರೆಗೂ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ್ದ ಮೀರಾ ಕುಮಾರ್‌ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಐದು ಬಾರಿ ಸಂಸತ್‌ ಸದಸ್ಯರಾಗಿ, ಕೇಂದ್ರ ಸಚಿವರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.

2017ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ವಿರುದ್ಧ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.