ADVERTISEMENT

ಕೇರಳ | ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ

ಪಿಟಿಐ
Published 30 ಜನವರಿ 2024, 8:28 IST
Last Updated 30 ಜನವರಿ 2024, 8:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಲಪ್ಪುಳ (ಕೇರಳ): 2021ರಲ್ಲಿ ನಡೆದಿದ್ದ ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಹತ್ಯೆ ಸಂಬಂಧ ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) 15 ಕಾರ್ಯಕರ್ತರಿಗೆ ಕೇರಳ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. 

ಮಾವೆಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿ.ಜಿ.ಶ್ರೀದೇವಿ ಮರಣ ದಂಡನೆಯ ತೀರ್ಪು ನೀಡಿದ್ದಾರೆ ಎಂದು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ನ್ಯಾಯಾಲಯವು ಜನವರಿ 20ರಂದು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು.

ADVERTISEMENT

ದೋಷಿಗಳ ಪೈಕಿ ನ್ಯಾಯಾಲಯದಲ್ಲಿ 14 ಮಂದಿ ಹಾಜರಿದ್ದರು. ಆದರೂ ಮರಣ ದಂಡನೆಯ ತೀರ್ಪು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ‍ಪಡೆಯುತ್ತಿರುವ ದೋಷಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಧೀಶರು ಮೌಖಿಕವಾಗಿ ತಿಳಿಸಿರುವುದಾಗಿ ವಿಶೇಷ ಪ್ರಾಸಿಕ್ಯೂಟರ್ ಪ್ರತಾಪ್ ಜಿ. ಪಡಿಕ್ಕಲ್ ತಿಳಿಸಿದ್ದಾರೆ.

ಹಂತಕರು ತರಬೇತಿ ಪಡೆದ ಕೊಲೆಗಡುಕರ ತಂಡಕ್ಕೆ ಸೇರಿದ್ದು, ಶ್ರೀನಿವಾಸನ್ ಅವರನ್ನು ಅವರ ತಾಯಿ, ಹೆಂಡತಿ ಮತ್ತು ಹಸುಗೂಸಿನ ಮುಂದೆ ಪೈಶಾಚಿಕವಾಗಿ ಕೊಂದಿದ್ದರಿಂದ ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.

ಹತ್ಯೆಗೊಳಗಾಗಿದ್ದ ಶ್ರೀನಿವಾಸನ್ ಅವರ ಕುಟುಂಬಸ್ಥರು ಮತ್ತು ಬಿಜೆಪಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದು, ಶ್ರೀನಿವಾಸನ್ ‘ಶ್ರೇಷ್ಠ ಹುತಾತ್ಮ. ಅವರಿಗೆ ನ್ಯಾಯ ಸಿಕ್ಕಿದೆ‘ ಎಂದು ಬಿಜೆಪಿ ಕೇರಳ ಅಧ್ಯಕ್ಷ ಸುರೇಂದ್ರನ್ ಹೇಳಿದ್ದಾರೆ. 

ಪಿಎಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು 2021ರ ಡಿಸೆಂಬರ್ 19ರಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್ ಅವರ ಮೇಲೆ ಅವರ ಮನೆಯಲ್ಲೇ ದಾಳಿ ನಡೆಸಿ, ಕುಟುಂಬದ ಸದಸ್ಯರ ಕಣ್ಣೆದುರಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.