ಬಂಧನ
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ನಾಲ್ವರು ಅಪ್ರಾಪ್ತ ವಯಸ್ಕರು ಸೇರಿದಂತೆ ಎಂಟು ಜನರ ಗುಂಪೊಂದು 14 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ ಇರಿದು ಕೊಂದು, ದೇಹವನ್ನು ಕಾಲುವೆಗೆ ಎಸೆದ ಭೀಕರ ಘಟನೆ ಉತ್ತರ ದೆಹಲಿಯ ಹೈದರ್ಪುರ್ ಪ್ರದೇಶದ ಹೊರವಲಯದಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೀಡಾದ ಬಾಲಕ ಸಿರಸ್‌ಪುರದ ಜೀವನ್ ಪಾರ್ಕ್ ನಿವಾಸಿಯಾಗಿದ್ದು, ಪ್ರತೀಕಾರಕ್ಕಾಗಿ ಆತನನ್ನು ಅಪಹರಿಸಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಜುಲೈ 1ರಂದು ಮುನಾಕ್ ಕಾಲುವೆಯ ಬಳಿ ಬಾಲಕನ ಮೃತದೇಹ ಹಲವು ಇರಿತದ ಗಾಯಗಳು ಮತ್ತು ಕುತ್ತಿಗೆಗೆ ಸ್ಕಾರ್ಫ್ ಕಟ್ಟಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದು, ಹರಿದ್ವಾರಕ್ಕೆ ಪರಾರಿಯಾಗಿದ್ದಾರೆ ಎನ್ನಲಾದ ಇನ್ನಿಬ್ಬರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಹಳೆಯ ದ್ವೇಷದ ಕಾರಣದಿಂದ ಪ್ರತೀಕಾರಕ್ಕಾಗಿ, ಆರೋಪಿಗಳು ಬಾಲಕನನ್ನು ಜೂನ್ 29 ಮತ್ತು 30ರ ಮಧ್ಯರಾತ್ರಿ ವೀರ್ ಚೌಕ್ ಬಜಾರ್ ಬಳಿ ತಡೆದು ಸ್ನೇಹಿತರ ಮುಂದೆ ಅಪಹರಿಸಿದ್ದರು.
ನಂತರ ಬಾಲಕನನ್ನು ಕಾಲುವೆಗೆ ಕರೆದೊಯ್ದು, ಬಾಯಿಗೆ ಸ್ಕಾರ್ಫ್ ಕಟ್ಟಿ, ವಿವಸ್ತ್ರಗೊಳಿಸಿ, ಬಟ್ಟೆಗಳನ್ನು ಎಸೆದು, ಸರದಿಯಂತೆ ಇರಿದು, ಶವವನ್ನು ನೀರಿಗೆ ಎಸೆದಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.